

ಕನಸಿನಲ್ಲಿ ಬಂದ ದೇವದೂತ ತನ್ನೊಡನೆ ಹೊರಡು ನಿನ್ನ ಸಮಯ ಮುಗಿಯಿತು ಎಂದು ಮಾನವನಿಗೆ ಹೇಳಿದಾಗ ಅವರಿಗೆ ಅವರ ನಡುವೆ ಒಂದು ಸಂಭಾಷಣೆ ನಡೆಯಿತು. ಮಾನವ: ‘ಸ್ವಾಮೀ, ನಿಮ್ಮ ಕೈಯಲ್ಲಿರುವ ಸೂಟ್ಕೇಸ್ನಲ್ಲಿ ಏನಿದೆ?’ ದೇವದೂತ: ಅದರಲ್ಲಿ ನಿನ್ನ ಆಸ್ತಿ ಇದೆ?
‘ನನ್ನ ಆಸ್ತಿ? ಅಂದರೆ ನನ್ನ ಹಣ, ಒಡವೆ, ಬಂಗಾರ, ಬಟ್ಟೆಬರೆ, ಸಾಮಾನು ಸರಂಜಾಮು ಇತ್ಯಾದಿ?’ ‘ಅವು ನಿನ್ನವು ಎಂದು ಯಾರು ಹೇಳಿದ್ದಾರೆ? ಅವು ಈ ಜಗತ್ತಿಗೆ ಸೇರಿದ ಆಸ್ತಿ.’ ‘ಹಾಗಾದರೆ ಅದರಲ್ಲಿರುವುದು ನನ್ನ ಯೋಚನೆ, ಯೋಜನೆ, ಅಲೋಚನೆ ಹಾಗೂ ಸವಿ ನೆನಪುಗಳಾ?’ ‘ಅವು ನಿನ್ನವು ಅಂತ ಯಾರು ಹೇಳಿದರು? ಅವು ಕಾಲ ಕಾಲಕ್ಕೆ ಸಂಬಂಧಪಟ್ಟ ವಿಷಯಗಳು.’
‘ಹಾಗಾದರೆ ನನ್ನ ಪ್ರತಿಭೆ, ಬುದ್ಧಿವಂತಿಕೆ ಹಾಗೂ ಜ್ಞಾನ?’ ‘ಅವು ವಿವಿಧ ಸಂದರ್ಭಗಳಿಗೆ ಸಮರ್ಪಕವಾದುವುಗಳು.’ ‘ಹಾಗಾದರೆ ಅದರಲ್ಲಿರುವುದು ನನ್ನ ಕುಟುಂಬ, ನೆಂಟರು ಹಾಗೂ ಮಿತ್ರರೊ?’ ‘ಕ್ಷಮಿಸು ಮಾನವ. ಅವು ನಿನ್ನದಂತೂ ಖಂಡಿತ ಅಲ್ಲ. ಅವು ನಿನ್ನ ಜೀವನದ ಹಾದಿಯಲ್ಲಿ ಬಂದಂತಹ ದೇವರ ಕಾಣಿಕೆಗಳು.’ ‘ಹಾಗಾದರೆ, ನನ್ನ ಆತ್ಮವೊ?’ ‘ನಿನ್ನ ಆತ್ಮ ನನ್ನ ಆಸ್ತಿ.’ ಇಷ್ಟರಲ್ಲಿ ಕಂಗಾಲಾದ ಮಾನವ ಯಮದೂತನ ಕೈಯಿಂದ ಸೂಟ್ಕೇಸ್ ಎಳೆದುಕೊಂಡು ಅದನ್ನು ತೆರೆದು ನೋಡಿದಾಗ, ಅದು ಖಾಲಿಯಾಗಿಯೇ ಇತ್ತು. ಆಗ ಅಳುತ್ತಾ ಈ ಜೀವನದಲ್ಲಿ ನಾನು ಸಾಧಿಸಿದ್ದು ಏನೂ ಇಲ್ಲವೇ? ಎಂದು ಕೇಳಿದ. ‘ಸರಿಯಾಗಿ ಹೇಳಿದೆ. ನಿನ್ನ ಆಸ್ತಿ ಶೂನ್ಯ. ನಿನ್ನ ಜೀವನದಲ್ಲಿ ಪ್ರತಿ ಗಳಿಗೆ ನಿನಗಾಗಿಯೇ ಬದುಕಿದೆ. ಆದುದರಿಂದ ನಿನ್ನ ಸಾಧನೆ, ಆಸ್ತಿ ಶೂನ್ಯ. ಬಾ. ಹೊರಡು’.
ಅಗ ಆ ಮಾನವ ‘ಬದುಕಲು ಇನ್ನೊಂದು ಅವಕಾಶ ನೀಡುವಿರಾ?’ ಎಂದ. ಸರಿ ಎಂದ ದೇವದೂತ, ಇಂದಿನ ದಿನ, ಬದುಕಲು ಕಲಿ. ಎಷ್ಟು ಒಳಿತನ್ನು ಮಾಡಲು ಸಾಧ್ಯವಿದೆಯೋ ಅದನ್ನು ಇಂದೇ ಮಾಡು, ಏಕೆಂದರೆ, ನಾಳಿನ ಗ್ಯಾರಂಟಿ ಯಾರಿಗೂ ಇಲ್ಲ’ ಎಂದ.