'ಆಪರೇಷನ್​ ಸಿಂಧೂರ'ದಿಂದ ಸಿಕ್ಕಿದ್ದೇನು? ಇಲ್ಲಿದೆ ಸಂಪೂರ್ಣ ವಿವರ

ವಿಜಯವಾಣಿ (1)
Published on

ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿದ ‘ಆಪರೇಷನ್ ಸಿಂಧೂರ’ ಪಾಕಿಸ್ತಾನದಲ್ಲಿನ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದ್ದಲ್ಲದೆ, ಭಯೋತ್ಪಾದಕರಿಗೆ ದಿಟ್ಟ ಉತ್ತರ ನೀಡಿದೆ. ಮೇ 7ರಂದು ಆರಂಭವಾದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯಿಂದ ಭಾರತ ಏನು ಸಾಧಿಸಿತು ಎಂಬ ಸಂಕ್ಷಿಪ್ತ ವಿವರ ಇಲ್ಲಿದೆ.

ಜಂಟಿ ಯುದ್ಧ ಸಾಮರ್ಥ್ಯ ಪ್ರದರ್ಶನ

ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಗಳ ಸಂಯೋಜಿತ ಕಾರ್ಯಾಚರಣೆ ಮೂಲಕ ‘ಆಪರೇಷನ್ ಸಿಂಧೂರ’ ನಡೆಸಿದ್ದರಿಂದ, ಭಾರತದ ಬೆಳೆಯುತ್ತಿರುವ ಜಂಟಿ ಯುದ್ಧಸಾಮರ್ಥ್ಯ ಜಗತ್ತಿಗೆ ತಿಳಿಯುವಂತಾಯಿತು.

ಉಗ್ರರ 9 ಶಿಬಿರ ಧ್ವಂಸ

ಪಾಕ್ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ 9 ಶಿಬಿರಗಳನ್ನು ‘ಆಪರೇಷನ್ ಸಿಂಧೂರ’ ಧ್ವಂಸಗೊಳಿಸಿದೆ. ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆ ಗಳಿಗೆ ಕಾರಣವಾಗಿರುವ ಉಗ್ರ ಸಂಘಟನೆ ಗಳಾದ ಲಷ್ಕರ್ ಇ ತೋಯ್ಬಾ (ಎಲ್​ಇಟಿ), ಜೈಷ್ ಇ ಮೊಹಮ್ಮದ್ (ಜೆಇಎಂ) ಮತ್ತು ಹಿಜ್ಬುಲ್ ಮುಜಾಹಿದೀನ್​ಗಳಿಗೆ ಖಡಕ್ ಎಚ್ಚರಿಕೆ ನೀಡಿದೆ.

ಪಾಕಿಸ್ತಾನದ ಪ್ರಮುಖ ಉಗ್ರರ ನೆಲೆಗಳ ಮೇಲೆ ದಾಳಿ

ಪಾಕ್ ಮಿಲಿಟರಿ ಭದ್ರಕೋಟೆ ಪಾಕ್​ನ ಪಂಜಾಬ್ ಪ್ರಾಂತ್ಯವನ್ನೂ ಗುರಿಯಾಗಿ ಭಾರತ ದಾಳಿ ಮಾಡಿದೆ. ಪಾಕಿಸ್ತಾನದಲ್ಲಿ ಕಿಲೋಮೀಟರ್​ಗಟ್ಟಲೆ ಒಳಕ್ಕೆ ದಾಳಿಗೈದಿರುವ ಭಾರತ, ಅಮೆರಿಕ ಕೂಡ ಡ್ರೋನ್ ಕಳಿಸಲು ಹಿಂಜರಿಯುವಂಥ ಬಹಾವಲ್ಪುರದಲ್ಲಿನ ಉಗ್ರರ ನೆಲೆಯನ್ನು ಭೀಕರವಾಗಿ ಧ್ವಂಸಗೊಳಿಸಿದೆ. ಪಾಕ್​ನಿಂದ ಭಯೋತ್ಪಾದನೆ ಹೊರಹೊಮ್ಮಿದರೆ ಪಾಕ್​ನ ಪ್ರತಿ ಇಂಚನ್ನೂ ತಲುಪಬಲ್ಲೆವು ಎಂದು ಭಾರತ ಜಗತ್ತಿಗೇ ತೋರಿಸಿದೆ.

ಜಾಗತಿಕ ಸಂದೇಶ ರವಾನೆ

ಭಾರತ ತನ್ನ ಜನರನ್ನು ರಕ್ಷಿಸಲು ಅನುಮತಿಗಾಗಿ ಕಾಯುವುದಿಲ್ಲ. ಯಾವಾಗ, ಎಲ್ಲಿ ಬೇಕಾದರೂ ಭಯೋತ್ಪಾದನೆಯನ್ನು ಸದೆಬಡಿಯಲು ಸಿದ್ಧ, ಭಯೋತ್ಪಾದಕರು ಮತ್ತವರ ಮಾಸ್ಟರ್ ಮೈಂಡ್​ಗಳಿಗೆ ಆಶ್ರಯವಿಲ್ಲ ಎಂಬ ಜಾಗತಿಕ ಸಂದೇಶ ರವಾನಿಸಿದೆ. ಪಾಕ್ ಪ್ರತೀಕಾರಕ್ಕೆ ಮುಂದಾದರೆ ಭಾರತ ಅದನ್ನು ನಿಭಾಯಿಸುವುದಷ್ಟೇ ಅಲ್ಲದೆ, ತಕ್ಕ ಉತ್ತರ ನೀಡಬಲ್ಲದು ಎಂಬುದನ್ನೂ ಭಾರತ ಈ ಮೂಲಕ ತೋರಿದೆ.ಈ ಬಾರಿ ಇದಕ್ಕೆ ವಿಶ್ವದ ಹಲವು ರಾಷ್ಟ್ರಗಳೂ ಬೆಂಬಲ ಸೂಚಿಸಿದವು. ಅಲ್ಲದೆ ಇದು ಭಾರತದಲ್ಲಿನ ಕಾಶ್ಮೀರದ ಚಿತ್ರಣಕ್ಕೆ ಬೇರೆ ದೃಷ್ಟಿಕೋನ ನೀಡಿದ್ದಲ್ಲದೆ, ಭಾರತ-ಪಾಕ್ ಸಂಬಂಧದ ಜಾಗತಿಕ ಗ್ರಹಿಕೆಯನ್ನು ಬದಲಿಸಿತು.

ಎಚ್ಚರಿಕೆಯ ಕೆಂಪು ಗೆರೆ

ರಾಜ್ಯ ನೀತಿಯಾಗಿ ಭಯೋತ್ಪಾದನೆ ನಡೆದರೆ ಅದು ಗುರಿಯಿಟ್ಟ ಹಾಗೂ ಗೋಚರ ಪರಿಣಾಮಗಳನ್ನು ಉಂಟಾಗಿಸಬಲ್ಲದು ಎಂಬುದನ್ನು ಪಾಕ್ ನಿರ್ಲಕ್ಷಿಸುವಂತಿಲ್ಲ ಎಂಬ ಕುರಿತು ಭಾರತ ಎಚ್ಚರಿಕೆಯ ಕೆಂಪು ಗೆರೆಯನ್ನೂ ಎಳೆದಿದೆ.

ಭಯೋತ್ಪಾದನೆ ವಿರುದ್ಧ ಹೊಸ ಮಾದರಿ

ಈ ಬಾರಿ ಭಾರತವು ಭಯೋತ್ಪಾದಕರು ಹಾಗೂ ಅವರ ಪ್ರಾಯೋಜಕರು ಎಂಬ ವ್ಯತ್ಯಾಸ ನೋಡದೆ ಇಬ್ಬರ ವಿರುದ್ಧವೂ ಕ್ರಮಕೈಗೊಂಡಿತು. ಅಲ್ಲದೆ, ಪಾಕ್​ನ ಕೆಲವು ರಕ್ಕಸ ಶಕ್ತಿಗಳು ಭಯೋತ್ಪಾದಕ ಚಟುವಟಿಕೆ ನಡೆಸಿ ಶಿಕ್ಷೆಯಿಂದ ತಪ್ಪಿಸಿ ಕೊಳ್ಳಬಹುದು ಎಂಬ ಲೆಕ್ಕಾಚಾರವನ್ನೂ ಭಾರತ ತಲೆಕೆಳಗಾಗಿಸಿದೆ.

ನಿಖರ ಕಾರ್ಯಾಚರಣೆ

ಆರಂಭದಲ್ಲಿ ಯಾವುದೇ ಸೈನಿಕ ಅಥವಾ ನಾಗರಿಕ ಮೂಲಸೌಕರ್ಯ ಗುರಿಯಾಗಿಸದೆ, ಕೇವಲ ಭಯೋತ್ಪಾದಕ ಆಸ್ತಿಗಳನ್ನು ಗುರಿ ಇಟ್ಟು ನಿಖರವಾಗಿ ಹೊಡೆದ ಭಾರತವು ವ್ಯಾಪಕ ಉಲ್ಬಣವನ್ನು ತಪ್ಪಿಸಿತು. ಅದರಲ್ಲೂ ಭಾರತದ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದ ಹಲವಾರು ಭಯೋತ್ಪಾದಕರನ್ನು ಒಂದೇ ರಾತ್ರಿಯಲ್ಲಿ ಹೊಡೆದುರುಳಿಸಲಾಯಿತು.

ಪಾಕ್ ವಾಯುರಕ್ಷಣೆ ದೌರ್ಬಲ್ಯ

ಪಾಕ್​ನ ವಾಯುರಕ್ಷಣಾ ಗ್ರಿಡ್ ಭೇದಿಸಿ ಇಲ್ಲವೇ ಜಾಮ್​ಗೊಳಿಸಿದ ಭಾರತ 25 ನಿಮಿಷಗಳ ಕಾಲ ನಡೆಸಿದ ದಾಳಿ ಪಾಕ್ ವಾಯುರಕ್ಷಣಾ ವ್ಯವಸ್ಥೆಯಲ್ಲಿನ ದೌರ್ಬಲ್ಯವನ್ನು ಬಹಿರಂಗಪಡಿಸಿದೆ.

ಕಾರ್ಯತಂತ್ರದ ಉತ್ಕೃಷ್ಟತೆ

ಸ್ಕಾಲ್ಪ್ ಮಿಸೈಲ್ಸ್ ಮತ್ತು ಹ್ಯಾಮರ್ ಬಾಂಬ್​ಗಳನ್ನು ಹೊಂದಿದ್ದ ಭಾರತದ ರಫೇಲ್ ಜೆಟ್​ಗಳು ನಡೆಸಿದ ದಾಳಿಯಲ್ಲಿ ಯಾವುದೇ ನಷ್ಟಗಳು ವರದಿಯಾಗಿಲ್ಲ. ಈ ಮೂಲಕ ತಂತ್ರಜ್ಞಾನ ಹಾಗೂ ಕಾರ್ಯತಂತ್ರದಲ್ಲಿನ ಉತ್ಕೃಷ್ಟತೆ ಕೂಡ ಸಾಬೀತಾಗಿದೆ.

ಅತ್ಯಾಧುನಿಕ ವ್ಯವಸ್ಥೆ, ವಿಕಸಿತ ರೂಪ

ಪಾಕ್​ನ ಚೀನಾ ನಿರ್ವಿುತ ಅಸ್ತ್ರಗಳನ್ನು ಹೊಡೆದು ರುಳಿಸಿದ ಭಾರತ, ‘ರಕ್ಷಣೆ ಎಂದರೆ ಏನನ್ನು ಖರೀದಿಸುತ್ತೀರಿ ಎಂದಲ್ಲ, ಏನನ್ನು ಸಂಯೋಜಿಸುತ್ತೀರಿ’ ಎಂಬುದನ್ನೂ ಒಳಗೊಂಡಿರುತ್ತದೆಂದು ತೋರಿಸಿತು. ಭಾರತ ಅತ್ಯಾಧುನಿಕ ವಾಯುರಕ್ಷಣೆ ವ್ಯವಸ್ಥೆಯ ವಿಕಸಿತ ರೂಪ ಪ್ರದರ್ಶಿಸಿತು. ಪಾಕ್​ನ ನೂರಾರು ಡ್ರೋನ್​ಗಳನ್ನು ಹೊಡೆದುರುಳಿಸಿದ ಆಕಾಶ್​ತೀರ್ ಏರ್​ಡಿಫೆನ್ಸ್ ಸಿಸ್ಟಂ ಮಹತ್ವ ಪಡೆದುಕೊಂಡಿದೆ.

ಆಪರೇಷನ್ ಸಿಂಧೂರ ಮೂಲಕ ಮೇ 9-10ರ ರಾತ್ರಿಯ ಕಾರ್ಯåಚರಣೆ ಅಣ್ವಸ್ತ್ರ ಸಜ್ಜಿತ ಪಾಕ್​ನ ವಾಯುಪಡೆ ಶಿಬಿರಗಳಿಗೆ ಹಾನಿಗೈದ ಮೊದಲ ಘಟನೆಯಾಯಿತು. ಮೂರು ಗಂಟೆಗಳಲ್ಲಿ ನೂರ್ ಖಾನ್, ರಫೀಕಿ, ಮುರಿದ್, ಸುಕ್ಕೂರ್, ಸಿಯಾಲ್ಕೋಟ್, ಪಾಸ್ರೂರ್, ಚುನಿಯಾನ್, ಸಗೋಧಾ, ಸ್ಕಾರು, ಭೋಲಾರಿ ಮತ್ತು ಜಾಕೋಬಾಬಾದ್ ಸೇರಿದಂತೆ 11 ತಾಣಗಳ ಮೇಲೆ ದಾಳಿ ನಡೆಯಿತು. ಇದರಿಂದ ಪಾಕ್ ವಾಯುಪಡೆಯ ಶೇ.20 ಮೂಲಸೌಕರ್ಯ ನಾಶವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net