

ಬೆಂಗಳೂರು: ಸಿಇಟಿ ಮೂರನೇ ಸುತ್ತಿನಲ್ಲಿ ಸೀಟು ಪಡೆದು ಕೌನ್ಸೆಲಿಂಗ್ ನಿಯಮ ಉಲ್ಲಂಸಿದ 351 ವಿದ್ಯಾರ್ಥಿಗಳಿಗೆ ಬೇರಾವ ಕಾಲೇಜಿನಲ್ಲಿಯೂ ಪ್ರವೇಶ ಪಡೆಯಲು ಬೇಕಾದ ಯುಎಸ್‌ಎನ್ ಸಂಖ್ಯೆಯನ್ನು ನೀಡದಂತೆ ಕೋರಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಸರ್ಕಾರಕ್ಕೆ ಪತ್ರ ಬರೆದಿದೆ.
ಮೂರನೇ ಸುತ್ತಿನಲ್ಲಿ ನಿಯಮ ಉಲ್ಲಂಸಿದ ವಿದ್ಯಾರ್ಥಿಗಳ ಪ್ರವೇಶ ಅನುಮೋದನೆಯು ಯಾವುದಾದರೂ ಕಾಲೇಜಿನಿಂದ ಬಂದಲ್ಲಿ ಪ್ರವೇಶಕ್ಕೆ ಅನುಮೋದನೆ ನೀಡಬಾರದು ಎಂದು ಒತ್ತಾಯಿಸಿ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಹಾಗೂ ರಾಜ್ಯದ ಉನ್ನತ ಶಿಕ್ಷಣ ಪರಿಷತ್ತಿನ ಕಾರ್ಯ ನಿರ್ವಾಹಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.
ಸರ್ಕಾರದ ಆದೇಶದಂತೆ ಕೆಇಎ ರಾಜ್ಯದ ಇಂಜಿನಿಯರಿಂಗ್ ಕಾಲೇಜುಗಳ ವಿವಿಧ ಕೋರ್ಸುಗಳ ಪ್ರವೇಶಕ್ಕೆ ಸಿಇಟಿ ನಡೆಸಿ ಮೂರು ಸುತ್ತುಗಳ ಕೌನ್ಸೆಲಿಂಗ್ ನಡೆಸಿ ಅರ್ಹ ವಿದ್ಯಾರ್ಥಿಗಳಿಗೆ ಸೀಟು ಹಂಚಿಕೆ ಮಾಡಿದೆ.
ಮೊದಲ ಮತ್ತು ಎರಡನೇ ಸುತ್ತುಗಳಲ್ಲಿ ಸೀಟು ಪಡೆದವರಿಗೆ ಕಾಲೇಜು ಇಷ್ಟವಾಗದಿದ್ದಲ್ಲಿ ಕೌನ್ಸೆಲಿಂಗ್ ಪ್ರಕ್ರಿಯೆಯಿಂದ ಹೊರ ಹೋಗಲು ಅವಕಾಶ ಕಲ್ಪಿಸಲಾಗಿತ್ತು. ಮೂರನೇ ಸುತ್ತಿನಲ್ಲಿ ಭಾಗವಹಿಸಿದ್ದಲ್ಲಿ ಎಂಟ್ರಿ ಮಾಡುವ ಕಾಲೇಜಿನಲ್ಲಿ ಸೀಟು ಸಿಕ್ಕರೆ ಕಡ್ಡಾಯವಾಗಿ ಕಾಲೇಜಿನಲ್ಲಿ ಪ್ರವೇಶ ಪಡೆಯಬೇಕೆಂದು ಸ್ಪಷ್ಟವಾಗಿ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಲಾಗಿತ್ತು.
ಸೀಟು ಸಿಕ್ಕಿದ್ದಲ್ಲಿ ಕಾಲೇಜಿಗೆ ಸೇರಲು ಸಿದ್ಧವಿರುವ ಕಾಲೇಜುಗಳನ್ನು ಮಾತ್ರ ಆಪ್ಷನ್ ಎಂಟ್ರಿ ಮಾಡಲು ತಿಳಿಸಲಾಗಿತ್ತು. ಮೂರನೇ ಸುತ್ತು ಕೊನೆಯ ಸುತ್ತಾಗಿದ್ದರಿಂದ ಈ ಸುತ್ತಿನಲ್ಲಿ ಸೀಟು ಪಡೆದು ಕಾಲೇಜು ಸೇರಿದ್ದಲ್ಲಿ ಆದೇಶದಂತೆ ಸೀಟು ಕಾಲೇಜಿನ ಆಡಳಿತ ಮಂಡಳಿ ಪಾಲಾಗುತ್ತದೆ. ಇದರಿಂದ ಈ ವಿದ್ಯಾರ್ಥಿಗಳಿಗಿಂತ ಸ್ವಲ್ಪ ಕೆಳಗಿದ್ದು ಅವಕಾಶಕ್ಕೆ ಕಾಯುತ್ತಿದ್ದವರಿಗೆ ಅನ್ಯಾಯವಾಗಿದೆ.
ಎಲ್ಲ ಮಾಹಿತಿ ನೀಡಿದ್ದರೂ ಮೂರನೇ ಸುತ್ತಿನಲ್ಲಿ ಸರ್ಕಾರಿ ಕೋಟಾ ಸೀಟುಗಳನ್ನು ಪಡೆದ 351 ವಿದ್ಯಾರ್ಥಿಗಳು ಕಾಲೇಜಿಗೆ ದಾಖಲಾಗದೆ, ಸೀಟು ಕಾಲೇಜಿನ ಪಾಲಾಗುವುದಕ್ಕೆ ಕಾರಣವಾಗಿದ್ದಾರೆ.
ಇದರಲ್ಲಿ ಕೆಲವರು ಕಾಮೆಡ್-ಕೆ ಮತ್ತು ಆಡಳಿತ ಮಂಡಳಿ ಕೋಟಾದಡಿ ಸೀಟು ಪಡೆದಿರುವ ಬಗ್ಗೆ ಮಾಹಿತಿ ಇದೆ ಎಂದು ತಿಳಿಸಿದ್ದಾರೆ.
ಸೀಟ್ ಬ್ಲಾಕಿಂಗ್ ಶಂಕೆ
ಬೆಂಗಳೂರಿನ ಪ್ರತಿಷ್ಠಿತ ಕಾಲೇಜುಗಳು ಸೇರಿ ರಾಜ್ಯದ ಹಲವು ಜಿಲ್ಲೆಗಳ ಖಾಸಗಿ ಕಾಲೇಜುಗಳಲ್ಲಿ ಸೀಟು ನಿರಾಕರಿಸಿರುವುದು ತಿಳಿದುಬಂದಿದೆ. ಹೀಗಾಗಿ, ಈ ವಿದ್ಯಾರ್ಥಿಗಳು ಸೀಟು ಬ್ಲಾಕ್ ಮಾಡಿರಬಹುದೇ ಎಂಬ ಅನುಮಾನ ವ್ಯಕ್ತವಾಗಿದೆ.
ಈ ಹಿನ್ಮೆಲಯಲ್ಲಿ ರಾಜ್ಯದ ಬೇರೆ ಕಾಲೇಜುಗಳಲ್ಲಿ ಪ್ರವೇಶ ಪಡೆದಲ್ಲಿ ಅನುಮತಿ ನೀಡಬಾರದು ಎಂದು ಒತ್ತಾಯ ಮಾಡಲಾಗಿದೆ, ಒಂದು ವೇಳೆ ಬೇರೆ ಕಾಲೇಜಿನಲ್ಲಿ ಸೇರುವುದಾದರೆ ಯಾವ ಕಾರಣದಿಂದ ಇಂಜಿನಿಯರಿಂಗ್ ಸೀಟು ಪಡೆಯಲಿಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕಾಗುತ್ತದೆ ಎಂದು ಪ್ರಾಧಿಕಾರದ ಅಧಿಕಾರಗಳು ತಿಳಿಸಿದ್ದಾರೆ.
ಪ್ರವೇಶಾತಿ ಸಂಬಂಧ ವಿದ್ಯಾರ್ಥಿಗಳಿಗೆ ಪ್ರತಿ ಹಂತದಲ್ಲಿ ಮಾಹಿತಿಗಳನ್ನು ಒದಗಿಸಿರುವ ಹೊರತಾಗಿಯೂ ಯಾವ ಕಾರಣದಿಂದ ಪ್ರವೇಶ ಪಡೆಯಲಿಲ್ಲ ಎಂಬುದು ತಿಳಿದುಬಂದಿಲ್ಲ. ಈ ಕಾರಣದಿಂದ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. - ಎಚ್. ಪ್ರಸನ್ನ, ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ