ದಲಿತ ಸಮುದಾಯಕ್ಕೆ ಕಾಂಗ್ರೆಸ್ ಯಾವ ನ್ಯಾಯ ಕೊಟ್ಟಿದೆ?; ಬಿ.ವೈ ವಿಜಯೇಂದ್ರ ವಾಗ್ದಾಳಿ

B Y Vijayendra 2
Published on

ಬೆಂಗಳೂರು: 50-55 ವರ್ಷ ನಿರಂತರವಾಗಿ ದೇಶದ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷವು ದಲಿತ ಸಮುದಾಯಕ್ಕೆ ಯಾವ ನ್ಯಾಯ ಕೊಟ್ಟಿದೆ? ದಲಿತ ಸಮುದಾಯವನ್ನು ಮೇಲೆತ್ತಲು 50- 60 ವರ್ಷಗಳು ಬೇಕೇ? ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಶ್ನಿಸಿದರು.

ಬಿಜೆಪಿ ರಾಜ್ಯ ಕಚೇರಿ ಜಗನ್ನಾಥ ಭವನದಲ್ಲಿ ರಾಜ್ಯ ಎಸ್‌ಸಿ ಮೋರ್ಚಾದ ವಿಶೇಷ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸ್ವಾತಂತ್ರ್ಯಾನಂತರ ಚುನಾವಣೆ ವೇಳೆ ಡಾ. ಅಂಬೇಡ್ಕರ್ ಅವರ ಹೆಸರಿನೊಂದಿಗೆ ಮತ ಕೇಳಿ ಆಡಳಿತ ನಡೆಸಿದ ಕಾಂಗ್ರೆಸ್, ದಲಿತ ಸಮುದಾಯವನ್ನು ಕೇವಲ ಮತಬ್ಯಾಂಕಾಗಿ ನೋಡಿತ್ತು. ಆ ಸಮುದಾಯಕ್ಕೆ ನ್ಯಾಯ ಕೊಡುವಲ್ಲಿ ಎಡವಿದೆ ಎಂದು ಟೀಕಿಸಿದರು.

ದಲಿತ ಸಮುದಾಯಕ್ಕೆ ನ್ಯಾಯ ಕೊಡುವ ಕಳಕಳಿ, ಬದ್ಧತೆ ಯಾವತ್ತೂ ಕಾಂಗ್ರೆಸ್ ಪಕ್ಷಕ್ಕೆ ಇರಲಿಲ್ಲ. ಈ ವಿಷಯವನ್ನು ಜನರಿಗೆ ತಲುಪಿಸಬೇಕು. ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಕೊಡುವ ಅಂತ್ಯೋದಯ ಪರಿಕಲ್ಪನೆಯನ್ನು ಬಿಜೆಪಿ ಹೊಂದಿದೆ ಎಂದು ತಿಳಿಸಿದರು.

ದಲಿತ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಗೆ ಬೆಂಕಿ ಹಾಕಿದ್ದರೂ ಅವರಿಗೆ ನ್ಯಾಯ ಕೊಡಲಿಲ್ಲ. ಬದಲಾಗಿ ಅಲ್ಪಸಂಖ್ಯಾತರ ಮತಕ್ಕಾಗಿ ಅಖಂಡ ಅವರಿಗೆ ಟಿಕೆಟ್ ಅನ್ನೂ ನಿರಾಕರಿಸಿದರು. ಕಾಂಗ್ರೆಸ್ ನಡವಳಿಕೆ ಹೀಗಿದ್ದರೂ ಅವರನ್ನು ಯಾಕೆ ಕ್ಷಮಿಸಬೇಕು? ಎಂದು ಪ್ರಶ್ನಿಸಿದರು.

ನಾವು ಇಷ್ಟು ಜನ ಸಚಿವರಿದ್ದೇವೆ. ಸ್ಪೀಕರ್ ಸ್ಥಾನದಲ್ಲಿ ನಮ್ಮ ಕೋಮಿನವರೇ ಕೂತಿದ್ದಾರೆ ಎಂದು ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ. ಇದು ಉದ್ಧಟತನದ ಮಾತಲ್ಲವೇ? ಇದು ಪ್ರಜಾಪ್ರಭುತ್ವ ವಿರೋಧಿ, ಸಂವಿಧಾನವಿರೋಧಿ, ದಲಿತ ವಿರೋಧಿಯಲ್ಲವೇ ಎಂದು ಕೇಳಿದರು.

ಕೇವಲ ಸಾಮಾಜಿಕ ಜಾಲತಾಣ, ಪತ್ರಿಕೆಗಳಲ್ಲಿ ಫೋಟೋ ಬಂದರೆ ನಾವು ಯಶ ಪಡೆಯಲು ಅಸಾಧ್ಯ. ದಲಿತ ಸಮುದಾಯದವರ ಮಧ್ಯೆ ಕಟ್ಟೆ ಮೇಲೆ ಕುಳಿತು ಪ್ರಚಲಿತ ರಾಜ್ಯ ರಾಜಕಾರಣದ ಕುರಿತು ಚರ್ಚೆ ಮಾಡಬೇಕು. ರಾಜ್ಯ ಸರಕಾರದ ವೈಫಲ್ಯ, ನರೇಂದ್ರ ಮೋದಿಯವರು ಕಳೆದ 9.5 ವರ್ಷಗಳಲ್ಲಿ ಮಾಡಿದ ಕಾರ್ಯಗಳು, ದೇಶದ ಅಭಿವೃದ್ಧಿ, ವಿಶ್ರಾಂತಿ ರಹಿತವಾಗಿ ದೇಶದ ಅಭಿವೃದ್ಧಿಗಾಗಿ ಮಾಡಿದ ಪ್ರಯತ್ನವನ್ನು ತಿಳಿಸಬೇಕು ಎಂದು ಕರೆ ನೀಡಿದರು.

ಕಿಸಾನ್ ಸಮ್ಮಾನ್ ಯೋಜನೆ, ಪ್ರತಿ ಹಳ್ಳಿಗೂ, ಪ್ರತಿ ಮನೆಗೂ ವಿದ್ಯುತ್ ಸಂಪರ್ಕ, ಪ್ರತಿ ಮನೆಗೂ ಶೌಚಾಲಯ ಇರಬೇಕೆಂಬ ಅವರ ಕಾರ್ಯವೈಖರಿಯನ್ನು ತಿಳಿಸುವ ಕಾರ್ಯ ಆಗಬೇಕಿದ ಎಂದು ಸಲಹೆ ನೀಡಿದರು.

ಎಸ್‌ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ದಲಿತರಿಗಾಗಿ ಅನೇಕ ಕಾರ್ಯಕ್ರಮಗಳನ್ನು ನಮ್ಮ ಸರ್ಕಾರ ಕೊಟ್ಟಿದೆ. ಡಾ.ಅಂಬೇಡ್ಕರರು ಪಾದಸ್ಪರ್ಶ ಮಾಡಿದ 10 ಜಿಲ್ಲೆಗಳಲ್ಲಿ ಸ್ಮಾರಕ ಮಾಡುವ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ. ಮೋದಿ ಸರ್ಕಾರ ಡಾ. ಅಂಬೇಡ್ಕರರ ಪಂಚಕ್ಷೇತ್ರಗಳ ಅಭಿವೃದ್ಧಿ ಮಾಡಿದೆ. 11 ಸಾವಿರ ಪೌರಕಾರ್ಮಿಕರನ್ನು ನಮ್ಮ ಸರ್ಕಾರ ಖಾಯಂ ಮಾಡಿದೆ ಎಂದು ತಿಳಿಸಿದರು.

ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಮೋರ್ಚಾದ ಆಹ್ವಾನಿತ ಪದಾಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net