

ಬೆಂಗಳೂರು: ಲೋಕಸಭೆ ಚುನಾವಣೆ ಪ್ರಚಾರಕ್ಕೆ ರಾಜ್ಯಕ್ಕೆ ಆಗಮಿಸಿದ ಪ್ರಧಾನಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಲವು ಪ್ರಶ್ನೆ ಹಾಕಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು ಹಲವು ವಿಚಾರ ಪ್ರಸ್ತಾಪಿಸಿ ಕುಟುಕಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ನಿರ್ಮಿಸಿರುವುದು ನಿಮ್ಮ ಸಾಧನೆ ಎಂದು ಹೇಳಿಕೊಳ್ಳುತ್ತಿರಲ್ಲಾ ಮೋದಿಯವರೇ, ಇದರಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಪಾಲೆಷ್ಟು? ರಸ್ತೆ ನಿರ್ಮಾಣ ಗುತ್ತಿಗೆದಾರರ ಸಾಲ ಎಷ್ಟು ಎಂದು ಲೆಕ್ಕ ಯಾಕೆ ಹೇಳುವುದಿಲ್ಲ ಎಂದಿದ್ದಾರೆ.
ಈ ಹೆದ್ದಾರಿ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಪಾಲು ನೀಡಿದರೂ ಹೆದ್ದಾರಿ ಟೋಲ್ ಗಳಲ್ಲಿ ಸಂಗ್ರಹಿಸುವ ದುಡ್ಡ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ಯಾಕೆ ಹೋಗಬೇಕು? ಕಳೆದ ವರ್ಷ ಟೋಲ್ ಗಳಿಂದ ಸಂಗ್ರಹವಾಗಿರುವ ಹಣದ ಮೊತ್ತ 64,810 ಕೋಟಿ ರೂಪಾಯಿ. ಕರ್ನಾಟಕ ರಾಜ್ಯವೊಂದರಿಂದಲೇ ಸಂಗ್ರಹವಾಗಿರುವ ಟೋ ಲ್ ಹಣ 3,600 ಕೋಟಿ ರೂಪಾಯಿ. ಇದು ಸುಳ್ಳೇ? ಇದರಲ್ಲಿ ನಿಮ್ಮ ಸಾಧನೆ ಏನು? ಎಂದು ಪ್ರಶ್ನಿಸಿದ್ದಾರೆ.
ಮಾತುಮಾತಿಗೆ ಕರ್ನಾಟಕಕ್ಕೆ ಯುಪಿಎ ಸರ್ಕಾರ ಕೊಟ್ಟಿದ್ದು ಕಡಿಮೆ, ಎನ್‌ಡಿ ಎ ಸರ್ಕಾರ ಎಷ್ಟೊಂದು ಕೊಟ್ಟಿದೆ ಎಂದು ಲೆಕ್ಕ ಹೇಳುತ್ತಿರಲ್ಲಾ? ನಮ್ಮ ಲೆಕ್ಕವನ್ನೂ ಕೇಳಿ. ಐದು ವರ್ಷಗಳಲ್ಲಿ ಬಜೆಟ್ ಗಾತ್ರ ಹೆಚ್ಚು ಕಡಿಮೆ ದುಪ್ಪಟ್ಟಾದರೂ ಕರ್ನಾಟಕಕ್ಕೆ ನೀಡುವ ಹಣವೂ ದುಪ್ಪಟ್ಟಾಗಬೇಕಿತ್ತು ಅಲ್ಲವೇ? ಅಂದರೆ ಕನಿಷ್ಠ ಒಂದು ಲಕ್ಷ ಕೋಟಿಯನ್ನಾದರೂ ನೀವು ನೀಡಬೇಕಾಗಿತ್ತಲ್ಲವೇ? ಎಂದಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆಗಾಗಿ 5300 ಕೋಟಿ ರೂಪಾಯಿ ಕೊಡುವ ಭರವಸೆಯನ್ನು 2023-24ರ ಬಜೆಟ್‌ನಲ್ಲಿಯೇ ಘೋಷಿಸಿದ್ದು ಸುಳ್ಳೇ? ಮಹದಾಯಿ ಯೋಜನೆಗೆ ಪರಿಸರ ಸಚಿವಾಲಯ ಅನುಮತಿ ನೀಡದೆ ಸತಾಯಿಸುತ್ತಿರುವುದು ಸುಳ್ಳೇ? ಕೃಷ್ಣಾ,ಕಾವೇರಿ, ಮೇಕೆದಾಟು ಯೋಜನೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗುತ್ತಿದೆ ಇದು ಸುಳ್ಳೇ? ಎಂದಿದ್ದಾರೆ.
ಹದಿನೆಂಟು ಸಾವಿರ ಕೋಟಿ ರೂಪಾಯಿ ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಗೆ ಅನುದಾನ ನೀಡದೆ ನಿರ್ಲಕ್ಷಿಸಿರುವುದು ಸುಳ್ಳೇ? ರಾಜ್ಯದ ಪ್ರಮುಖ ರೈಲ್ವೇ ಯೋಜನೆಗಳಿಗೆ ಅನುದಾನ ನೀಡದೆ ಮೂಲೆಗೆ ತಳ್ಳಿರುವುದು ಸುಳ್ಳೇ? ರಾಜ್ಯಕ್ಕೊಂದು ಏಮ್ಸ್ ಮಾದರಿ ಆಸ್ಪತ್ರೆ ಎಂದು ಘೋಷಿಸಿದ್ದನ್ನೇ ನಂಬಿ ರಾಯಚೂರಿನಲ್ಲಿಯಾದರೂ ಅಂತಹದ್ದೊಂದು ಆಸ್ಪತ್ರೆ ಮಾಡಿ ಕೇಳಿದರೂ ಕೊಡದೆ ಇರುವುದು ಸುಳ್ಳೇ? ಎಂದು ಕುಟುಕಿದ್ದಾರೆ.