

ತೀರ್ಥಹಳ್ಳಿ: ತಾಲೂಕು ಕಚೇರಿಯಲ್ಲಿ ಮಧ್ಯವರ್ತಿಗಳ ಕೆಲಸಕ್ಕೆ ಯಾವುದೇ ಸಮಸ್ಯೆ ಇಲ್ಲ. ಆದರೆ ಜನಸಾಮಾನ್ಯರ ಸಮಸ್ಯೆಗಳನ್ನು ಕೇಳುವ ತಾಳ್ಮೆಯೇ ಇಲ್ಲ. ಇದೇನಾ ನೀವು ಕಾರ್ಯನಿರ್ವಹಿಸುವ ರೀತಿ ಎಂದು ಶಾಸಕ ಆರಗ ಜ್ಞಾನೇಂದ್ರ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಜನರಿಂದ ಹೆಚ್ಚು ಆರೋಪ ಕೇಳಿಬರುತ್ತಿದ್ದ ಹಿನ್ನೆಲೆಯಲ್ಲಿ ಬುಧವಾರ ತಾಲೂಕು ಕಚೇರಿಗೆ ದೂರುದಾರರೊಂದಿಗೆ ಭೇಟಿ ನೀಡಿ ಕಚೇರಿ ಬಾಗಿಲಲ್ಲೇ ಕುಳಿತು ದಾಖಲೆಗಳನ್ನು ಪರಿಶೀಲಿಸಿದರು. ಸಾರ್ವಜನಿಕರ ಕೆಲಸಗಳನ್ನು ಸಕಾಲದಲ್ಲಿ ಮಾಡಿಕೊಡದೆ ವಿನಾಕಾರಣ ಕಚೇರಿಗೆ ಅಲೆಸುವುದೇಕೆ? ಜನರ ಸಮಸ್ಯೆಗಳಿಗೆ ಸ್ಪಂದಿಸದಿದ್ದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಮಗನ ಶಿಕ್ಷಣದ ಸಲುವಾಗಿ ಅಗತ್ಯವಿದ್ದ ಇಂಗ್ಲಿಷ್ ಭಾಷೆಗೆ ತರ್ಜುಮೆಗೊಳಿಸಿದ ಅಫಿಡವಿಟ್ ವಿಳಂಬವಾದ ಬಗ್ಗೆ ಆಶಾ ಕಾರ್ಯಕರ್ತೆ ತಮಗಾದ ತೊಂದರೆ ಬಗ್ಗೆ ಕಣ್ಣೀರು ಹಾಕಿದರು. ಇದರಿಂದ ಸಿಟ್ಟಾದ ಶಾಸಕರು ಸಂಬಂಧಿಸಿದ ನೌಕರನ್ನು ತರಾಟೆಗೆ ತೆಗೆದುಕೊಂಡರು. ಕಂಪ್ಯೂಟರೀಕೃತ ದಾಖಲೆಗಳನ್ನು ಕೊಡುವುದಕ್ಕೆ ಏನು ಕಷ್ಟ? ನೀವು ಮಾಡುವ ಬೇಜವಾಬ್ದಾರಿಯಿಂದ ನಾನು ಮಾತು ಕೇಳುವಂತಾಗಿದೆ ಎಂದು ಸಿಟ್ಟಿಗೆದ್ದರು.
ತಾಲೂಕು ಕಚೇರಿಯಲ್ಲಿ ಮಧ್ಯವರ್ತಿಗಳ ಕೆಲಸ ಸರಾಗವಾಗಿ ನಡೆಯುತ್ತಿದೆ. ಹೀಗಾಗಿ ಅವರೆಲ್ಲರೂ ಇಲ್ಲಿಯೇ ಸುತ್ತಾಡಿಕೊಂಡು ಇರುತ್ತಾರೆ. ಕಚೇರಿಯ ಅನೇಕ ಮೂಲ ದಾಖಲೆಗಳನ್ನೇ ಅಪಹರಿಸಲಾಗಿದೆ. ನೀವು ದಾಖಲೆ ನೆಪದಲ್ಲಿ ಮುಗ್ಧ ಜನರನ್ನು ಅಲೆಸುತ್ತೀರಿ, ಸರ್ಕಾರದ ಸಂಬಳ ತೆಗೆದುಕೊಳ್ಳುವ ನಿಮಗೆ ಬಡವರ ಸಂಕಷ್ಟದ ಅರಿವೇ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಕೃತಿ ವಿಕೋಪದ ಹಾನಿಗೆ ಸಂಬಂಧಿಸಿ ಪೂರಕವಾದ ದಾಖಲೆಗಳನ್ನು ಒದಗಿಸದೆ ವಿನಾಕಾರಣ ಸಿಬ್ಬಂದಿ ಕಾರ್ಯವೈಖರಿಯನ್ನು ಪ್ರಶ್ನಿಸಿದ ಘಟನೆಯು ಶಾಸಕರ ಸಮ್ಮುಖದಲ್ಲೇ ನಡೆಯಿತು. ಇದರಿಂದ ಶಾಸಕರು ಕೊಂಚ ಮುಜುಗರಕ್ಕೆ ಒಳಗಾದರು. ಸಾರ್ವಜನಿಕರ ಕೆಲಸಗಳ ಬಗ್ಗೆ ಬೇಜವಾಬ್ದಾರಿ ತೋರುತ್ತಿರುವ ಅಧಿಕಾರಿಗಳ ವಿರುದ್ಧ ಶಾಸಕ ಆರಗ ಜ್ಞಾನೇಂದ್ರ ಕಿಡಿಕಾರಿದರು.
ಪಪಂ ಸದಸ್ಯ ಸೊಪ್ಪುಗುಡ್ಡೆ ರಾಘವೆಂದ್ರ, ತಳಲೆ ಪ್ರಸಾದ್ ಶೆಟ್ಟಿ, ಶಿರಸ್ತೇದಾರ ಸತ್ಯಮೂರ್ತಿ, ಗ್ರಾಮಲೆಕ್ಕಿಗ ಸುಧೀರ್ ಇದ್ದರು.