

ಭದ್ರಾವತಿ: ನಗರಸಭಾ ವ್ಯಾಪ್ತಿಯಲ್ಲಿ ಹಲವಾರು ಸಮಸ್ಯೆಗಳಿವೆ. ಸಮಸ್ಯೆಗೆ ಉತ್ತರಿಸಬೇಕಾದ ಇಲಾಖೆ ಅಧಿಕಾರಿಗಳೇ ಸಭೆಯಲ್ಲಿ ಇಲ್ಲದಿರುವಾಗ ಸಭೆ ಮಾಡಿ ಏನು ಪ್ರಯೋಜನ? ಏತಕ್ಕಾಗಿ ಸಭೆ ನಡೆಸಬೇಕು ನಗರಸಭಾ ಸದಸ್ಯರು ಗುರುವಾರ ಸಾಮಾನ್ಯ ಸಭೆಯನ್ನು ಡಳಿತ, ವಿಪಕ್ಷ ಸದಸ್ಯರು ಒಕ್ಕೊರಲಿನಿಂದ ಬಹಿಷ್ಕರಿಸಿ ಹೊರನಡೆದರು.
ಬೈಪಾಸ್ ರಸ್ತೆಯಲ್ಲಿರುವ ಹಿಂದು ರುದ್ರಭೂಮಿಯ ಗೇಟ್, ಕಾಂಪೌಂಡ್‌ಗಳನ್ನು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸುವ ಸಲುವಾಗಿ ತೆರವುಗೊಳಿಸಿದ್ದಾರೆ. ಇದರಿಂದ ಸ್ಮಶಾನದಲ್ಲಿ ರಾತ್ರಿಯಾದರೆ ಕೆಲವರು ಇಸ್ಪೀಟ್ ಆಡಲು ಸೇರುತ್ತಾರೆ. ಶವ ದಹನಕ್ಕೆ ಅಳವಡಿಸಿರುವ ಕಬ್ಬಿಣದ ವಸ್ತುಗಳೂ ಕೂಡ ಕಳ್ಳತನ ಮಾಡುತ್ತಿದ್ದಾರೆ. ಸ್ಮಶಾನಕ್ಕೆ ಗೇಟ್ ಅಳವಡಿಸಿಕೊಡಿ ಎಂದು ನಗರಸಭೆ ಅಧಿಕಾರಿಗಳಲ್ಲಿ ಕೇಳಿಕೊಂಡರೂ ಇನ್ನೂ ಅಳವಡಿಸಿಲ್ಲ ಎಂದು ಉದಯಕುಮಾರ್ ದೂರಿದರು.
ಬಿ.ಕೆ.ಮೋಹನ್ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಪರಿಹಾರ ಕೊಟ್ಟಿದ್ದಾರೆಯೇ, ಇಲ್ಲವೋ ಕೇಳಿ. ಎಲ್ಲಿದ್ದಾರೆ ಹೈವೇ ಇಂಜಿನಿಯರ್ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತ ಪ್ರಕಾಶ್ ಚನ್ನಪ್ಪನವರ್, ಹೈವೇ ಇಂಜಿನಿಯರ್ ಫೋನ್ ಎತ್ತುವುದಿಲ್ಲ. ಹಲವು ಬಾರಿ ಕರೆ ಮಾಡಿ ನೋಟಿಸ್ ಸಹ ನೀಡಿದ್ದೇವೆ. ಡಿಸಿ ಅವರಿಗೆ ರಿಪೋರ್ಟ್ ಕೂಡ ಮಾಡಿದ್ದೇವೆ ಎಂದರು.
ಮೋಹನ್ ಮಾತನಾಡಿ, ಮಳೆಗಾಲದಲ್ಲಿ ಸಾಮಾನ್ಯ ಸಭೆ ಕರೆದಿದ್ದೀರಾ. ಮಳೆಗಾಲದಲ್ಲಿ ಸಮಸ್ಯೆಗಳು ಹೆಚ್ಚಾಗಿರುತ್ತವೆ. ಇಲ್ಲಿ ಪಿಡಬ್ಲುೃಡಿ, ಹೈವೆ, ತಾಲೂಕು ಆಡಳಿತದ ಅಧಿಕಾರಿಗಳು ಇರಲೇಬೇಕು. ಆ ಇಲಾಖೆಯಿಂದಲೇ ಯಾರೂ ಬಂದಿಲ್ಲ ಎನ್ನುವುದಾದರೆ ಇದಕ್ಕೆ ನಗರಸಭೆ ಅಧಿಕಾರಿಗಳ ವೈಫಲ್ಯವೇ ಕಾರಣ. ಈ ರೀತಿಯ ತಪ್ಪುಗಳು ಪದೇಪದೆ ನಡೆಯುತ್ತಲೇ ಇರುತ್ತವೆ. ಸಭೆಯಲ್ಲಿ ಶಿಸ್ತು ಇರಬೇಕು. ಎಲ್ಲ ಇಲಾಖೆ ಅಧಿಕಾರಿಗಳು ಬಾರದೆ ಸಾಮಾನ್ಯ ಸಭೆ ನಡೆಸುವ ಅಗತ್ಯವಿಲ್ಲ. ಇಂದಿನ ಸಭೆಯನ್ನು ಬಹಿಷ್ಕರಿಸುತ್ತೇವೆ ಎಂದು ಸಭೆ ಬಹಿಷ್ಕರಿಸಿ ಹೊರನಡೆದರು.
ವೇದಿಕೆಯಲ್ಲಿದ್ದ ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್, ಅಧ್ಯಕ್ಷೆ ಗೀತಾ ರಾಜ್‌ಕುಮಾರ್ ಸದಸ್ಯರಲ್ಲಿ ಮನವಿ ಮಾಡಿದರೂ ಎಲ್ಲ ಸದಸ್ಯರು ಹೊರ ನಡೆದರು.
ಉಪಾಧ್ಯಕ್ಷ ಮಣಿ, ಸ್ಥಾಯಿ ಸಮಿತಿ ಅಧ್ಯಕ್ಷ ಸಯ್ಯದ್ ರಿಯಾಜ್, ನಗರವೃತ್ತ ನಿರೀಕ್ಷಕ ಶ್ರೀಶೈಲಕುಮಾರ್ ವೇದಿಕೆಯಲ್ಲಿದ್ದರು.