

ನವದೆಹಲಿ: ಪೂರ್ವ ಲಡಾಖ್ನ ಪ್ಯಾಂಗಾಂಗ್ ತ್ಸೊ ಸರೋವರದ ದಕ್ಷಿಣ ದಂಡೆ ಬಳಿ ಕಳೆದ ಶನಿವಾರ ರಾತ್ರಿ ಅತಿಕ್ರಮಣಕ್ಕೆ ಮುಂದಾಗಿದ್ದ ಚೀನಿ ಸೈನಿಕರನ್ನು ಹಿಮ್ಮೆಟ್ಟಿಸಿ, ವಿವಾದಿತ ಪ್ರದೇಶಗಳ ಮೇಲೆ ಭಾರತ ಹಿಡಿತ ಸಾಧಿಸುವಲ್ಲಿ ‘ಗೌಪ್ಯ ಸೇನಾ ದಳ’ ಪ್ರಮುಖ ಪಾತ್ರ ವಹಿಸಿರುವ ಸಾಧ್ಯತೆ ಇದೆ ಎಂಬ ಅಂಶ ಬೆಳಕಿಗೆ ಬಂದಿದೆ.
ಗುಪ್ತವಾಗಿ ಕಾರ್ಯನಿರ್ವಹಿಸುತ್ತಿರುವ ಸ್ಪೆಷಲ್ ಫ್ರಂಟಿಯರ್ ಫೋರ್ಸ್ (ಎಸ್ಎಫ್ಎಫ್) ಎಲ್ಎಸಿ ಬಳಿ ಚೀನಾ ಸೈನಿಕರ ಕುತಂತ್ರಗಳಿಗೆ ತೀಕ್ಷ ಪ್ರತಿಕ್ರಿಯೆ ನೀಡಿ, ಹಲವು ಪ್ರದೇಶಗಳನ್ನು ವಶಪಡಿಸಿಕೊಳ್ಳುವಲ್ಲಿ ನೆರವಾಗಿದೆ. ಎಸ್ಎಫ್ಎಫ್ ಅನ್ನು ಎಷ್ಟಾಬ್ಲಿಷ್ವೆುಂಟ್-22 ಎಂದೂ ಕರೆಯಲಾಗುತ್ತದೆ. ಈ ಗೌಪ್ಯ ದಳ ಸಂಪುಟ ಕಾರ್ಯದರ್ಶಿ ಮತ್ತು ಪ್ರಧಾನಮಂತ್ರಿ ಕಚೇರಿಯ ಅಡಿಯಲ್ಲಿ ಕೆಲಸ ಮಾಡುತ್ತದೆ. ಪೂರ್ವ ಲಡಾಖ್ನಲ್ಲಿ ಎಸ್ಎಫ್ಎಫ್ ನಿಯೋಜನೆಗೊಂಡಿರುವ ಬಗ್ಗೆ ಸೇನೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
1962ರ ಭಾರತ-ಚೀನಾ ಯುದ್ಧದ ಬಳಿಕ ಎಸ್ಎಫ್ಎಫ್ ರಚನೆಯಾಗಿತ್ತು. ಇದು ರಹಸ್ಯ ಪಡೆಯಾಗಿ ಕಾರ್ಯನಿರ್ವಹಿಸುತ್ತ ಬಂದಿದೆ. ಪರ್ವತ ಪ್ರದೇಶಗಳಲ್ಲಿ ಯುದ್ಧ ಸೇರಿ ಹಲವು ಚಟುವಟಿಕೆಗಳನ್ನು ನಡೆಸಲು ತರಬೇತಿ ಪಡೆದ ಉನ್ನತ ಪ್ಯಾರಾಟ್ರೂಪರ್ಗಳನ್ನು ಒಳಗೊಂಡ ಕನಿಷ್ಠ 5,000 ಕಮಾಂಡೋಗಳನ್ನು ಎಸ್ಎಫ್ಎಫ್ ಹೊಂದಿದೆ.
ಎಸ್ಎಫ್ಎಫ್ ಸೇನೆಯ ಭಾಗ ಅಲ್ಲ. ಅವು ತಮ್ಮದೇ ಆದ ಶ್ರೇಣಿ ರಚನೆಗಳನ್ನು ಹೊಂದಿದ್ದು, ಸೇನೆಯ ಶ್ರೇಣಿಯೊಂದಿಗೆ ಸಮಾನ ಸ್ಥಾನಮಾನ ಹೊಂದಿವೆ. ಎಸ್ಎಫ್ಎಫ್ ತನ್ನದೇ ತರಬೇತಿ ಕೇಂದ್ರ ಹೊಂದಿದ್ದು, ಇದರಲ್ಲಿ ಮಹಿಳಾ ಕಮಾಂಡೋಗಳ ಒಂದು ಘಟಕವಿದೆ ಎನ್ನಲಾಗಿದೆ.
ಕಾರ್ಯಾಚರಣೆ: ದೇಶದ ಹಲವಾರು ರಹಸ್ಯ ಕಾರ್ಯಾಚರಣೆಗಳಲ್ಲಿ ಎಸ್ಎಫ್ಎಫ್ ಕಮಾಂಡೋಗಳು ಭಾಗವಹಿಸುತ್ತಾರಾದರೂ ಈ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗವಾಗಿರುವುದಿಲ್ಲ. 1971ರ ಯುದ್ಧ, ಆಪರೇಷನ್ ಬ್ಲೂಸ್ಟಾರ್, ಕಾರ್ಗಿಲ್ ಯುದ್ಧ ಸೇರಿ ಹಲವು ಕಾರ್ಯಾಚರಣೆಯಲ್ಲಿ ಎಸ್ಎಫ್ಎಫ್ ಕಾರ್ಯನಿರ್ವಹಿಸಿದೆ.
ಬ್ಯಾನ್ಗೆ ಚೀನಾ ವಿರೋಧ
ಆಪ್ ನಿಷೇಧಿಸಿರುವ ಭಾರತದ ನಿರ್ಧಾರಕ್ಕೆ ಚೀನಾ ತೀವ್ರ ವಿರೋಧ ವ್ಯಕ್ತಪಡಿಸಿದೆ. ಚೀನಾ ಹೂಡಿಕೆದಾರರು ಮತ್ತು ಸೇವಾ ಪೂರೈಕೆದಾರರ ಕಾನೂನು ಹಿತಾಸಕ್ತಿಗಳನ್ನು ಇದು ಉಲ್ಲಂಘಿಸುತ್ತವೆ. ಭಾರತ ತನ್ನ ತಪ್ಪುಗಳನ್ನು ಸರಿಪಡಿಸಿಕೊಳ್ಳುವಂತೆ ನಾವು ಕೇಳುತ್ತೇವೆ ಎಂದು ಚೀನಾದ ವಾಣಿಜ್ಯ ಸಚಿವಾಲಯದ ವಕ್ತಾರ ಗಾವೊ ಫೆಂಗ್ ಹೇಳಿದ್ದಾರೆ.
ವಾಯುಪಡೆ ಮುಖ್ಯಸ್ಥರ ಭೇಟಿ
ಗಡಿ ಬಿಕ್ಕಟ್ಟಿನ ನಡುವೆಯೇ ಭಾರತೀಯ ವಾಯುಪಡೆ ಮುಖ್ಯಸ್ಥ ಆರ್.ಕೆ.ಎಸ್. ಬಧೌರಿಯಾ ಪೂರ್ವ ವಲಯದ ಪ್ರಮುಖ ವಾಯುನೆಲೆಗಳಿಗೆ ಭೇಟಿ ನೀಡಿದರು. ಕಾರ್ಯಾಚರಣೆ ಸನ್ನದ್ಧತೆ ಹಾಗೂ ಸಾಮರ್ಥ್ಯ ಸುಧಾರಣೆ ಕ್ರಮಗಳನ್ನು ಪರಿಶೀಲಿಸಿದರು. ಈ ನೆಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಯೋಧರ ಜೊತೆಗೆ ಚರ್ಚೆ ನಡೆಸಿದರು. ಈ ನಡುವೆ, ಭೂ ಸೇನೆ ಮುಖ್ಯಸ್ಥ ಜನರಲ್ ಎಂ.ಎಂ. ನರವಾಣೆ ಲಡಾಖ್ಗೆ ಎರಡು ದಿನಗಳ ಭೇಟಿ ಆರಂಭಿಸಿದ್ದಾರೆ. ಭಾರತದ ಭಾಗದಲ್ಲಿರುವ ಚಶುಲ್ನಲ್ಲಿ ನಡೆಯುತ್ತಿರುವ ಉಭಯ ದೇಶಗಳ ಬ್ರಿಗೇಡಿಯರ್ ಮಟ್ಟದ ಸಭೆ ಗುರುವಾರವೂ ಮುಂದುವರಿಯಿತು.