ಬೆಂಗಳೂರು: ಎಲ್ಲವೂ ಅಂದುಕೊಂಡಂತಾಗಿದ್ದರೆ, ಇಷ್ಟೊತ್ತಿಗೆ ಯಶ್ ನಟನೆಯ ಪ್ಯಾನ್ ವರ್ಲ್ಡ್ ಸಿನಿಮಾ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನಪ್ಸ್’ ರಿಲೀಸ್ ಆಗಿರಬೇಕಿತ್ತು. ಕೆಲ ಕಾರಣಗಳಿಂದಾಗಿ ಚಿತ್ರತಂಡ ಎರಡು ಬಾರಿ ರಿಲೀಸ್ ಡೇಟ್ ಮುಂದೂಡಿತ್ತು. ಮೊದಲು ಘೋಷಿಸಿದಂತೆ ಮಾರ್ಚ್ 19ಕ್ಕೆ ‘ಟಾಕ್ಸಿಕ್’ ತೆರೆ ಮೇಲೆ ಬರಬೇಕಿತ್ತು. ಆದರೆ, ಹಿಂದಿಯ ‘ಧುರಂಧರ್ 2’ ಕ್ಲ್ಯಾಶ್ ಜತೆಗೆ ಮಧ್ಯಪ್ರಾಚ್ಯ ದೇಶಗಳಲ್ಲಿನ ಯುದ್ಧದ ಭೀತಿಯಿಂದಾಗಿ ಸಿನಿಮಾವನ್ನು ಜೂ. 4ಕ್ಕೆ ಪೋಸ್ಟ್ ಪೋನ್ ಮಾಡಲಾಗಿತ್ತು. ಆದರೂ, ಜೂ. 4ಕ್ಕೆ ಸಿನಿಮಾ ರಿಲೀಸ್ ಆಗಲಿಲ್ಲ. ಜಾಗತಿಕ ಮಾರುಕಟ್ಟೆಯ ವಿಸ್ತರಣೆಗಾಗಿ ಚಿತ್ರತಂಡ ಎರಡನೇ ಬಾರಿಗೆ ರಿಲೀಸ್ ಡೇಟ್ ಮುಂದೂಡಿತ್ತು. ಇದೀಗ ಅಂತಿಮವಾಗಿ ‘ಟಾಕ್ಸಿಕ್’ ಚಿತ್ರತಂಡವು ಭಾನುವಾರದ ‘ಫಾದರ್ಸ್ ಡೇ’ಯಂದು ಸಿನಿಮಾ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದು, ಅದರಂತೆ ಆಗಸ್ಟ್ 26ಕ್ಕೆ ‘ಟಾಕ್ಸಿಕ್’ ವಿಶ್ವಾದ್ಯಂತ ತೆರೆಗೆ ಬರಲಿದೆ. ಚಿತ್ರದಲ್ಲಿನ ಯಶ್‌ರ ‘ರಾಯ’ ಮತ್ತು ‘ಟಿಕೆಟ್’ ಅವತಾರಗಳನ್ನು ಹೈಲೈಟ್ ಮಾಡುವ ಹೊಸ ಪೋಸ್ಟರ್ ಮೂಲಕ ರಿಲೀಸ್ ಡೇಟ್ ಖಚಿತಪಡಿಸಲಾಗಿದೆ. ಗೀತುಮೋಹನ್ ದಾಸ್ ನಿರ್ದೇಶನದ ‘ಟಾಕ್ಸಿಕ್’ ಚಿತ್ರದಲ್ಲಿ ಯಶ್ ದ್ವಿಪಾತ್ರದಲ್ಲಿದ್ದಾರೆ. ಅವರಿಗೆ ಬಾಲಿವುಡ್‌ನ ಕಿಯಾರಾ ಅಡ್ವಾಣಿ ಜೋಡಿಯಾಗಿದ್ದಾರೆ. ನಯನತಾರಾ, ರುಕ್ಮಿಣಿ ವಸಂತ್, ಹುಮಾ ಖುರೇಷಿ, ತಾರಾ ಸುತಾರಿಯಾ, ಅಕ್ಷಯ್ ಒಬೇರಾಯ್, ಸುದೇವ್ ನಾಯರ್, ಬಾಲಾಜಿ ಮನೋಹರ್ ತಾರಾಗಣದಲ್ಲಿದ್ದಾರೆ. ಕನ್ನಡ, ಇಂಗ್ಲೀಷ್, ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲಿ ಸಿನಿಮಾ ಮೂಡಿಬರಲಿದೆ.