

ಸದೇಶ್ ಕಾರ್ಮಾಡ್ ಮೈಸೂರು
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ದೇವನೂರು ಮೂರನೇ ಹಂತದ ಬಡಾವಣೆ ನಿರ್ಮಾಣಕ್ಕೆ ವಶಕ್ಕೆ ಪಡೆದುಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿಗೆ ಸೇರಿದ ಜಮೀನಿಗೆ 62 ಕೋಟಿ ರೂ. ಭೂ ಪರಿಹಾರ ನೀಡುವಂತೆ ಸಿದ್ದರಾಮಯ್ಯ ಒತ್ತಾಯಿಸಿರುವುದು ಇದೀಗ ಚರ್ಚೆಯ ವಿಷಯವಾಗಿದೆ.
ದೇವನೂರು ಬಡಾವಣೆ ನಿರ್ಮಾಣಕ್ಕೆ ಪಾರ್ವತಿಗೆ ಸೇರಿದ ಕೆಸರೆ ಗ್ರಾಮದಲ್ಲಿದ್ದ 3.16 ಎಕರೆ ಕೃಷಿ ಭೂಮಿಯನ್ನು ಮುಡಾ ವಶಕ್ಕೆ ಪಡೆದುಕೊಂಡು ಬಡಾವಣೆ ನಿರ್ಮಾಣ ಮಾಡಿತ್ತು. ಶೇ.50:50ರ ಅನುಪಾತದಲ್ಲಿ ಪಾರ್ವತಿಗೆ ದೇವನೂರು ಬಡಾವಣೆಯಲ್ಲಿ ಪರಿಹಾರ ರೂಪದಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಬೇಕಾಗಿತ್ತು. ಆದರೆ, ಅತ್ಯಂತ ಬೆಲೆ ಬಾಳುವ ವಿಜಯನಗರ 4ನೇ ಹಂತದಲ್ಲಿ ಪಾರ್ವತಿಗೆ ಒಟ್ಟು 14 ನಿವೇಶನಗಳನ್ನು (ಒಟ್ಟು 37,190.09 ಚದರ ಅಡಿ) ಹಂಚಿಕೆ ಮಾಡಲಾಗಿದೆ.
ಮುಡಾದಲ್ಲಿ ಬದಲಿ ನಿವೇಶನ ಹಂಚಿಕೆಯಲ್ಲಿ ಸಾವಿರಾರು ಕೋಟಿ ರೂ.ಮೊತ್ತದ ಅವ್ಯವಹಾರ ನಡೆದಿರುವ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಬದಲಿ ನಿವೇಶನ ಹಂಚಿಕೆಯನ್ನು ಸರ್ಕಾರ ರದ್ದು ಪಡಿಸಿದೆ. ಹೀಗಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಬದಲಿ ನಿವೇಶನ ನೀಡಲು ಸಾಧ್ಯವಾಗದೆ ಇದ್ದರೆ 3.16 ಎಕರೆಗೆ ಪರಿಹಾರ ರೂಪವಾಗಿ 62 ಕೋಟಿ ರೂ. ಪರಿಹಾರ ನೀಡುವಂತೆ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
25 ಲಕ್ಷ ರೂ.ಮೌಲ್ಯದ ಆಸ್ತಿ: ಸಿದ್ದರಾಮಯ್ಯ 2018ರಲ್ಲಿ ಚಾಮುಂಡೇಶ್ವರಿ ಹಾಗೂ ಬಾದಾಮಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಂದರ್ಭ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಕೆಸರೆಯಲ್ಲಿ ಪತ್ನಿ ಹೆಸರಿನಲ್ಲಿದ್ದ 3.16 ಎಕರೆ ಕೃಷಿ ಭೂಮಿಯನ್ನು ಉಲ್ಲೇಖಿಸಿದ್ದು, ಅದರ ಮಾರುಕಟ್ಟೆ ಮೌಲ್ಯ 25 ಲಕ್ಷ ರೂ. ಎಂದು ಉಲ್ಲೇಖಿಸಿದ್ದಾರೆ. ಇದೀಗ ಅದೇ ಜಾಗ 62 ಕೋಟಿ ರೂ. ಬೆಲೆ ಬಾಳುತ್ತದೆ. ಹಾಗಾಗಿ 62 ಕೋಟಿ ರೂ. ಪರಿಹಾರ ನೀಡಿ ಎಂಬುದು ಸಿದ್ದರಾಮಯ್ಯ ಅವರ ಒತ್ತಾಯವಾಗಿದೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ವರುಣ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಸಂದರ್ಭ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಹೊಂದಿರುವ ಚರ ಮತ್ತು ಸ್ಥಿರ ಆಸ್ತಿಗಳ ವಿವರವನ್ನು ನೀಡಿದ್ದು. ಅದರಲ್ಲಿ ಮುಡಾದಿಂದ ಪರಿಹಾರ ರೂಪದಲ್ಲಿ ದೊರೆತ ನಿವೇಶನಗಳ ವಿವರವನ್ನು ಸಹ ದಾಖಲಿಸಿದ್ದು, ಈ ಆಸ್ತಿಗಳ ಒಟ್ಟು ಮಾರುಕಟ್ಟೆ ಮೌಲ್ಯ 8.33 ಕೋಟಿ ರೂ.ಗಳೆಂದು ಉಲ್ಲೇಖಿಸಿದ್ದಾರೆ.
ಒಟ್ಟು 62 ಕೋಟಿ ರೂ.ಬೆಲೆ ಬಾಳುವ 3.16 ಎಕರೆ ಆಸ್ತಿಗೆ ಪರ್ಯಾಯವಾಗಿ ಪಾರ್ವತಿ ಅವರು ಕೇವಲ 8.33 ಕೋಟಿ ರೂ. ಮೌಲ್ಯದ 37,190.09 ಚದರ ಅಡಿ ವಿಸ್ತೀರ್ಣದ 14 ನಿವೇಶನಗಳನ್ನು ಪಡೆಯಲು ಏತಕ್ಕೆ ಆಸಕ್ತಿ ತೋರಿದರು ಎಂಬುದು ಯಕ್ಷ ಪ್ರಶ್ನೆಯಾಗಿದೆ. ಸಿದ್ದರಾಮಯ್ಯ ಅವರ ಹೇಳಿಕೆ ಪ್ರಕಾರ ನೋಡುವುದಾದರೆ ದೇವನೂರು ಬಡಾವಣೆ ಭೂಮಿ ಅತ್ಯಂತ ಬೆಲೆ ಬಾಳುವ ಭೂಮಿಯಾಗಿದೆ. ಹಾಗಿದ್ದಲ್ಲಿ ದೇವನೂರು ಬಡಾವಣೆಯಲ್ಲಿ ಪಾರ್ವತಿ ಶೇ.50:50 ಅನುಪಾತದಲ್ಲಿ ಪರಿಹಾರ ರೂಪದಲ್ಲಿ ನಿವೇಶನಗಳನ್ನು ಪಡೆಯಲು ಏತಕ್ಕೆ ಆಸಕ್ತಿ ತೋರಲಿಲ್ಲ? ಮುಡಾ ಅಧಿಕಾರಿಗಳು ಪಾರ್ವತಿ ಅವರಿಗೆ ವಿಜಯನಗರ 4ನೇ ಹಂತದಲ್ಲಿ ನಿವೇಶನಗಳನ್ನು ನೀಡಲು ಏತಕ್ಕೆ ಆಸಕ್ತಿ ತೋರಿದರು ಎಂಬ ಪ್ರಶ್ನೆಗಳಿಗೆ ಉತ್ತರ ದೊರೆಯಬೇಕಾಗಿದೆ. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿರುವವರ ಮಾಹಿತಿ ಪ್ರಕಾರ ವಿಜಯನಗರ 4ನೇ ಹಂತದಲ್ಲಿ ಪ್ರತಿ ಚದರ ಅಡಿಗೆ 5 ರಿಂದ 8 ಸಾವಿರ ರೂ. ಇದ್ದು, ದೇವನೂರು ಬಡಾವಣೆಯಲ್ಲಿ ಪ್ರತಿ ಚದರ ಅಡಿಗೆ 3 ರಿಂದ 6 ರೂ.ಗಳು ಇವೆ. ಅಲ್ಲದೆ, ವಿಜಯನಗರ 4ನೇ ಹಂತ ಮೈಸೂರಿನ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾಗಿದೆ.
ನಗರದ ಕೆಸರೆಯ ಸರ್ವೇ ನಂ.464ರಲ್ಲಿ 3.14 ಎಕರೆ ಜಮೀನು ಮಲ್ಲಿಕಾರ್ಜುನ ಸ್ವಾಮಿ ಎಂಬ ವ್ಯಕ್ತಿಗೆ ಸೇರಿತ್ತು. ಮಲ್ಲಿಕಾರ್ಜುನ ಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ಸಹೋದರ. ಈ 3.14 ಎಕರೆ ಜಮೀನನ್ನು 1997ರಲ್ಲಿ ಮುಡಾ ದೇವನೂರು ಮೂರನೇ ಹಂತದ ಬಡಾವಣೆ ಅಭಿವೃದ್ಧಿಗೆ ಅಧಿಸೂಚನೆ ಹೊರಡಿಸಿತ್ತು. ನಂತರ ಅಧಿಸೂಚನೆಯನ್ನು ಕೈಬಿಟ್ಟು ಆದೇಶ ಹೊರಡಿಸಿತ್ತು. ಡಿನೋಟಿಫೈ ಆದ ನಂತರ ಮಲ್ಲಿಕಾರ್ಜುನ ಸ್ವಾಮಿ ಹೆಸರಿಗೆ 2005ರಲ್ಲಿ ಆ ಜಾಗ ನೋಂದಣಿಯಾಗಿದೆ. ಆ ನಂತರ ಮಲ್ಲಿಕಾರ್ಜುನ ಸ್ವಾಮಿ ತಂಗಿ ಪಾರ್ವತಿಗೆ 2020ರಲ್ಲಿ ಜಾಗವನ್ನು ದಾನವಾಗಿ ನೀಡಿದರು. ಆದರೆ, ನಂತರ ದಿಢೀರಾಗಿ ಮುಡಾ ಆ ಜಾಗದಲ್ಲಿ ದೇವನೂರು 3ನೇ ಹಂತದ ಬಡಾವಣೆ ನಿರ್ಮಾಣ ಮಾಡಿತ್ತು.
ದೇವನೂರು ಬಡಾವಣೆ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿಗೆ ಸೇರಿದ 3.16 ಎಕರೆ ಜಾಗವನ್ನು ಬಳಕೆ ಮಾಡಿಕೊಳ್ಳಲಾಗಿದೆ. ಇದಕ್ಕೆ ಭೂ ಪರಿಹಾರವಾಗಿ 64 ಕೋಟಿ ರೂ. ನೀಡುವಂತೆ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಎಕರೆಗೆ 20 ಕೋಟಿ ರೂ. ಬೆಲೆ ಬಾಳುವ ಭೂಮಿ ಮೈಸೂರಿನಲ್ಲಿ ಎಲ್ಲಿದೆ? ನಿಮ್ಮ ಪತ್ನಿ ದೇವನೂರು ಬಡವಾಣೆಯಲ್ಲಿ ಭೂಮಿ ಕಳೆದುಕೊಂಡು ವಿಜಯನಗರದಲ್ಲಿ ನಿವೇಶನ ಪಡೆದಿದ್ದಾರೆ. ಸಿಎಂ ಪತ್ನಿ ಭೂಮಿ ಕಳೆದಕೊಂಡ ಪಕ್ಕದಲ್ಲೇ ಮತ್ತೊಬ್ಬರು 7 ಎಕರೆ ಜಮೀನು ಕಳೆದುಕೊಂಡಿದ್ದಾರೆ. ಹಾಗಾದರೆ ಅವರಿಗೆ 150 ಕೋಟಿ ರೂ.ಪರಿಹಾರ ನೀಡಲು ಸಾಧ್ಯವೇ? ದೇವನೂರು ಬಡವಾಣೆಯಲ್ಲಿರುವ ಪಾರ್ವತಿ ಅವರ ಆಸ್ತಿ 20 ಎಕರೆಗೆ ಕೋಟಿ ಬೆಲೆ ಬಾಳುತ್ತಾ?
ಟಿ.ಎಸ್. ಶ್ರೀವತ್ಸ, ಶಾಸಕ
ಮುಡಾ ನಮಗೆ 3.16 ಎಕರೆಗೆ ಪರಿಹಾರ ರೂಪದಲ್ಲಿ 62 ಕೋಟಿ ರೂ. ನೀಡಲಿ. ನಮಗೆ ಪರಿಹಾರ ರೂಪದಲ್ಲಿ ದೊರೆತ್ತಿರುವ 14 ನಿವೇಶನಗಳ ಬೆಲೆ ಇದಕ್ಕಿಂತ ಕಡಿಮೆ ಇದೆ. ಒಂದು ಎಕರೆಗೆ 44 ಸಾವಿರ ಚದರ ಅಡಿಯಾದರೆ ನಮಗೆ ದೊರೆತ್ತಿರುವುದು ಕೇವಲ 37,190.09 ಚದರ ಅಡಿ ಮಾತ್ರ. ನಾವು ಇಂಥದ್ದೇ ಜಾಗದಲ್ಲಿ ನಿವೇಶನ ಬೇಕೆಂದು ಮುಡಾಗೆ ಕೇಳಿಕೊಂಡಿರಲಿಲ್ಲ.
ಸಿದ್ದರಾಮಯ್ಯ, ಮುಖ್ಯಮಂತ್ರಿ