ಪ್ರಜ್ವಲ್ ರೇವಣ್ಣ- ಪ್ರೀತಂ ಗೌಡ ನಡುವೆ ಮಧ್ಯಸ್ಥಿಕೆಗೆ ಅವಶ್ಯಕತೆ ಏನಿದೆ : ರಾಧಾಮೋಹನ್‌ದಾಸ್ ಅಗರ್ವಾಲ್ ಪ್ರಶ್ನೆ

Published on

ಮೈಸೂರು: ಹಾಸನ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ನಡುವೆ ಉತ್ತಮ ಸಂಬಂಧವಿದೆ, ಇಬ್ಬರ ಭೇಟಿಗೆ ನನ್ನ ಮಧ್ಯಸ್ಥಿಕೆ ಅವಶ್ಯಕತೆ ಏನಿದೆ ಎಂದು ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನ್‌ದಾಸ್ ಅಗರ್ವಾಲ್ ಪ್ರಶ್ನಿಸಿದರು.

ನಗರದಲ್ಲಿ ಭಾನುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹಾಸನದಲ್ಲಿ ಮೈತ್ರಿಯಲ್ಲಿ ಯಾವುದೇ ಸಮಸ್ಯೆ ಇಲ್ಲ, ಶನಿವಾರ ಸಹ ಹಾಸನಕ್ಕೆ ಹೋಗಿದ್ದೆ ಅಲ್ಲಿ ಯಾವುದೇ ಸಮಸ್ಯೆ ಕಾಣಲಿಲ್ಲ. ಎಲ್ಲರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಜನ ಏನಾದರೂ ಮಾತನಾಡಿಕೊಳ್ಳಲಿ, ಇಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಶನಿವಾರ ನಾನು ಸಹ ಹಾಸನದಲ್ಲಿದ್ದೆ. ಸುಮಾರು 2 ಗಂಟೆ ಕಾಲ ಪ್ರಜ್ವಲ್ ರೇವಣ್ಣ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ. ಅವರು ನನ್ನೊಂದಿಗೆ ಯಾವುದೇ ದೂರು ಹೇಳಲಿಲ್ಲ. ನನ್ನ ಉಪಸ್ಥಿತಿಯಲ್ಲೇ ಅವರು ಸುದ್ದಿಗೋಷ್ಠಿ ಸಹ ನಡೆಸಿದರು. ಇಬ್ಬರ ನಡುವೆ ಗೊಂದಲ ಇದೆ ಅಂತ ನನಗೆ ಅನ್ನಿಸುತ್ತಿಲ್ಲ. ಯಾಕೆ ಏನೋ ಆಗಿದೆ ಅನ್ನುವ ರೀತಿ ಭಾವಿಸುತ್ತೀರಿ ಎಂದು ಮಾಧ್ಯಮ ಪ್ರತಿನಿಧಿಗಳನ್ನು ಪ್ರಶ್ನಿಸಿದರು.

ಹಾಸನದಲ್ಲಿ ಪ್ರೀತಂಗೌಡ ಸೋಲು ಅನುಭವಿಸಿದರೂ ಅವರು ಪವರ್‌ಫುಲ್ ಲೀಡರ್. ಅವರಿಗೆ ಹಾಸನ ಜನರನ್ನು ಒಗ್ಗೂಡಿಸಲು ಒಂದು ದಿನ ಸಾಕು. ಈಗಾಗಲೇ ಆ ಕೆಲಸವನ್ನು ಮಾಡುತ್ತಿದ್ದಾರೆ. ಹಾಸನದಲ್ಲಿ ಮೈತ್ರಿಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಎಲ್ಲರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಜೆಡಿಎಸ್‌ನವರಿಗಿಂತಲೂ ಬಿಜೆಪಿ ಕಾರ್ಯಕರ್ತರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅದೇ ರೀತಿ ಪ್ರೀತಮ್ ಗೌಡ ಬೆಂಬಲಿಗರು ಸಹ ಕೆಲಸ ಮಾಡುತ್ತಿದ್ದಾರೆ. ಅವಶ್ಯಕತೆ ಬಿದ್ದರೆ ಅವರು ಹಾಸನಕ್ಕೆ ಹೋಗುತ್ತಾರೆ. ನಾನು ಉತ್ತರ ಪ್ರದೇಶದವನು, ಅಲ್ಲಿಯೂ ಚುನಾವಣೆ ನಡೆಯುತ್ತಿದೆ. ಆದರೆ ನನಗೆ ಕರ್ನಾಟಕ ಉಸ್ತುವಾರಿ ವಹಿಸಿದ್ದಾರೆ. ಅದೇ ರೀತಿ ಪ್ರೀತಮ್ ಅವರು ಹಾಸನದವರಾದರೂ ಮೈಸೂರು ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರದ ಉಸ್ತುವಾರಿ ವಹಿಸಿದ್ದಾರೆ. ಹೀಗಾಗಿ ಯಾವಗಲೂ ಅಲ್ಲಿಗೆ ಹೋಗಲು ಸಾಧ್ಯವಿಲ್ಲ ಎಂದರು.

ರಾಜ್ಯದಲ್ಲಿ ಎನ್‌ಡಿಎ ಮೈತ್ರಿಕೂಟ 28ಕ್ಕೆ 28 ಕ್ಷೇತ್ರಗಳಲ್ಲೂ ಗೆಲುವು ಸಾಧಿಸುತ್ತೇವೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲೂ ಬಿಜೆಪಿ ಗೆಲುವು ಸಾಧಿಸಲಿದ್ದು, ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಠೇವಣಿ ಕಳೆದುಕೊಳ್ಳುತ್ತಾರೆ ಎಂದು ಭವಿಷ್ಯ ನುಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net