ಮಾನವರಿಗೆ ಯಾವುದು ಶೃಂಗಾರ?

Antaranga vvani
Published on

ಸದ್ಯ ಜಗತ್ತಿನಲ್ಲಿ ಜನರ ಹೆಚ್ಚು ಒಲವು ಶೃಂಗಾರದ ಕಡೆಗೇ ಇದೆ. ಇಂದಿನ ವಾತಾವರಣದಲ್ಲಿ ಜನ ಶೃಂಗಾರಕ್ಕೆ ಹೆಚ್ಚು ಅಂಟಿಕೊಂಡಿದ್ದಾರೆ. ನವರಸಗಳಲ್ಲಿ ಶೃಂಗಾರರಸ ಮೊದಲನೆಯದು. ಶಿವ ಕೊಟ್ಟ ಈ ರೂಪಕ್ಕಿಂತ ಹೆಚ್ಚು ಸುಂದರವಾಗಿ ಕಾಣಬೇಕೆಂಬ ಹುಚ್ಚಿನಿಂದ ಮಾನವ ಹಾಗೆ ಸಾಗುತ್ತಿದ್ದಾನೆ. ಮಕ್ಕಳಿಂದ ಮುದುಕರವರೆಗೂ ಸುಂದರವಾಗಿ ಕಾಣಬೇಕು ಎಂಬುವವರೇ ಇದ್ದಾರೆ. ಕನ್ನಡಿಯ ಮುಂದೆ ನಿಲ್ಲದವರು ಯಾರೂ ಇಲ್ಲ. ಇಂದಿನ ಜಗತ್ತಿನಲ್ಲಿ ಹೊಟ್ಟೆಗೆ ಇಲ್ಲವೆಂದರೂ ನಡೆಯುವುದು, ಆದರೆ ಸೌಂದರ್ಯಸಾಧನಗಳು ಬೇಕೇ ಬೇಕು ಎನ್ನುತ್ತಾರೆ.

ಒಮ್ಮೆ ದಶರಥ ಮಹಾರಾಜನು ಕನ್ನಡಿ ನೋಡುತ್ತ ಕುಳಿತಿದ್ದ. ತಲೆಯಲ್ಲಿ ಬಿಳಿಕೂದಲು ಕಂಡಿತು. ಮಂತ್ರಿಯನ್ನು ಕರೆದು ರಾಮನ ಪಟ್ಟಾಭಿಷೇಕಕ್ಕೆ ತಯಾರಿ ಮಾಡಿ ಅಂದ. ತಲೆಗೂದಲು ಬೆಳ್ಳಗಾದವು ಎಂದರೆ ಈಗಿನವರು ತಲೆಗೆ ಬಣ್ಣ ಕಪ್ಪು ಮಾಡಿಕೊಂಡು ಎಳೆಯ ವಯಸ್ಸಿನವರಂತೆ ಕಾಣಲು ಪ್ರಯತ್ನಿಸುತ್ತಾರೆ. ಆದರೆ ಹೋದ ಆಯುಷ್ಯವೇನಾದರೂ ಬರಬಹುದೆ? ಇಲ್ಲ. ಉಡುವ ಬಟ್ಟೆಗಳಲ್ಲೂ ಫ್ಯಾಶನ್. ಹೇಳುತ್ತ ಹೋದರೆ ಬಹಳಷ್ಟಿದೆ. ಇವೆಲ್ಲವುಗಳಲ್ಲಿ ಯಾವುದೂ ಮಾನವನಿಗೆ ಶೃಂಗಾರವಲ್ಲ. ಶೃಂಗಾರ ಯಾವುದೆಂದು ಬಸವಣ್ಣನವರು ಹೇಳುತ್ತಾರೆ.

ನೀರಿಂಗೆ ನೈದಿಲೆಯೇ ಶೃಂಗಾರ / ಸಮುದ್ರಕ್ಕೆ ತೆರೆಯೇ ಶೃಂಗಾರ

ನಾರಿಗೆ ಗುಣವೇ ಶೃಂಗಾರ / ಗಗನಕ್ಕೆ ಚಂದ್ರಮನೇ ಶೃಂಗಾರ

ನಮ್ಮ ಕೂಡಲಸಂಗನ ಶರಣರಿಗೆ ನೊಸಲ ವಿಭೂತಿಯೇ ಶೃಂಗಾರ.

ನೀರಿಗೆ ಕಮಲದ ಹೂವು ಶೃಂಗಾರವಾದಂತೆ, ಸಮುದ್ರದಲ್ಲಿ ತೆರೆಗಳು ಬಂದರೆ ಶೃಂಗಾರ ಕಾಣುತ್ತದೆ. ಸ್ತ್ರೀಯರಿಗೆ ಉತ್ತಮ ನಡತೆ ಹಾಗೂ ಗುಣವೇ ಶೃಂಗಾರ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ನೈತಿಕ ಅಧ್ಯಾತ್ಮಕ್ಕೆ ಬೆಲೆ ಇದೆ. ಅದಕ್ಕೆ ಮಹಿಳೆಯರಿಗೆ ಉತ್ತಮ ಗುಣ, ನಡತೆ ಬೇಕು ಎಂದಿದ್ದಾರೆ ಬಸವಣ್ಣನವರು. ಆಕಾಶದಲ್ಲಿ ಚಂದ್ರನಿದ್ದರೆ ಆತನ ಬೆಳದಿಂಗಳು ಮನಸ್ಸಿಗೆ ಶಾಂತಿ ತರುತ್ತದೆ. ಕೊನೆಗೆ ಮುಖ್ಯ ಶೃಂಗಾರ ಏನೆಂದು ಹೇಳುತ್ತಾರೆ, ಹಣೆಯ ಮೇಲೆ ವಿಭೂತಿಯೇ ಮುಖ್ಯವಾದ ಶೃಂಗಾರ. ನಿಜವಾದ ಶೃಂಗಾರ ಯಾವುದು ಎಂದು ಅರಿತುಕೊಂಡು ಅಳವಡಿಸಿಕೊಂಡು ನಡೆದರೆ ನಮ್ಮೆಲ್ಲರ ಬಾಳು ಹಸನಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net