ಅಮೆರಿಕನ್ ಎಂದರೇನು? ಎಂದು ಭಾರತೀಯ ಮೂಲದ ವಿವೇಕ್ ರಾಮಸ್ವಾಮಿ & ನಿಕ್ಕಿ ಹ್ಯಾಲೆ ಪುತ್ರನ ನಡುವೆ ಫೈಟ್| American

ವಿಜಯವಾಣಿ (18)
Published on

American: ಅಮೆರಿಕನ್ ಎಂದರೇನು? ಯಾರು ಅಮೆರಿಕನ್ ಎಂಬ ಬಗ್ಗೆ ಭಾರತೀಯ ಮೂಲದ ನಿಕ್ಕಿ ಹ್ಯಾಲೆ ಪುತ್ರ ನಳಿನ್ ಹ್ಯಾಲೆ ಮತ್ತು ಓಹಿಯೋ ಗವರ್ನರ್ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿರುವ ವಿವೇಕ್ ರಾಮಸ್ವಾಮಿ ನಡುವೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಾಗ್ವಾದ ನಡೆದಿದೆ. ಮುಂದುವರೆದು ವಿವೇಕ್ ರಾಮಸ್ವಾಮಿಯ ಮೇಕಪ್​ ಬಗ್ಗೆ ನಳಿನ್ ಹ್ಯಾಲಿ ಟ್ರೋಲ್ ಮಾಡಿದ್ದಾರೆ.

ಮಾಂಟಾನದಲ್ಲಿ ನಡೆದ ಟರ್ನಿಂಗ್ ಪಾಯಿಂಟ್ ಯುಎಸ್​ಎ ಕಾರ್ಯಕ್ರಮದಲ್ಲಿ ಮಾತನಾಡಿರುವ ವಿವೇಕ್ ರಾಮಸ್ವಾಮಿ, 2025ರಲ್ಲಿ ಅಮೆರಿಕನ್ ಆಗುವುದು ಎಂದರೆ 1776ರ ಆದರ್ಶಗಳಲ್ಲಿ ನಂಬಿಕೆ ಇಡುವುದು ಎಂದರ್ಥ. ನಾವು ಮದುವೆಯಲ್ಲಿ ನಂಬಿಕೆ ಇಡುತ್ತೇವೆ, ಯಾವುದೇ ಮೂಲವನ್ನು ನೋಡದೇ ಉತ್ತಮ ವ್ಯಕ್ತಿಗೆ ಕೆಲಸ ಸಿಗುತ್ತದೆ. ನಿಮ್ಮನ್ನು ನಿಮ್ಮ ಚರ್ಮದ ಬಣ್ಣದಿಂದಲ್ಲ, ನಿಮ್ಮ ಪಾತ್ರದ ವಿಷಯ, ಕೊಡುಗೆಗಳ ಮೇಲೆ ಗುರುತಿಸಲಾಗುತ್ತದೆ. ಇದರರ್ಥ ನಾವು ಕಾನೂನಿನ ಆಡಳಿತವನ್ನು ನಂಬುತ್ತೇವೆ. ಮತ್ತು ನಾನು ಇದನ್ನು ಯುನೈಟೆಡ್ ಸ್ಟೇಟ್ಸ್‌ಗೆ ಕಾನೂನುಬದ್ಧ ವಲಸಿಗರ ಹೆಮ್ಮೆಯ ಮಗನಾಗಿ ಹೇಳುತ್ತೇನೆ. ಅಂದರೆ ದೇಶವನ್ನು ಪ್ರವೇಶಿಸುವ ನಿಮ್ಮ ಮೊದಲ ಕ್ರಿಯೆ ಕಾನೂನನ್ನು ಮುರಿಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಈ ಮಾತಿಗೆ ಸಹಮತ ವ್ಯಕ್ತಪಡಿಸದ ನಿಕ್ಕಿ ಹ್ಯಾಲಿ ಅವರ ಪುತ್ರ ನಳಿನ್ ಎಕ್ಸ್​ನಲ್ಲಿ ಪೋಸ್ಟ್ ಹಾಕಿದ್ದು, ಲೈಬೀರಿಯಾ ಕೂಡ ಇದೇ ರೀತಿಯ ಸಂವಿಧಾನವನ್ನು ಹೊಂದಿದೆ. ಆದರೆ ಲೈಬೀರಿಯಾ ಯುಎಸ್ ಅಲ್ಲ. ಇದು ತಪ್ಪು, ಅಮೆರಿಕ ಒಂದು ಕಲ್ಪನೆಯಲ್ಲ, ಅದೇನಾದ್ರೂ ಈ ರೀತಿಯಾಗಿದ್ರೆ, ಇದೇ ರೀತಿಯ ಸಂವಿಧಾನವನ್ನು ಹೊಂದಿರುವ ಲೈಬೀರಿಯಾ ಕೂಡ ಅಮೆರಿಕದಂತೆಯೇ ಇರುತ್ತಿತ್ತು.  ಅಲ್ಲದೇ ಮುಂದುವರೆದು ಮೇಕಪ್ ನಿಮಗೆ ಸರಿಹೊಂದುವುದಿಲ್ಲ ಎಂದು ವಿವೇಕ್ ಅವರನ್ನು ಅಪಹಾಸ್ಯ ಮಾಡಿದ್ದಾರೆ.

ಇನ್ನೂ ನಳಿನ್ ಕಮೆಂಟ್​ಗೆ ನಿರೂಪಕರೊಬ್ಬರು ವಿವೇಕ್​ಗಿಂತ ನಿಕ್ಕಿ ಹ್ಯಾಲಿಯವರ ಮಗ ಬೆಟರ್, ಆಶ್ಚರ್ಯಕರ ಎಂದು ಹೇಳಿದ್ದಾರೆ. ಅದಕ್ಕೆ ಮತ್ತೆ ಪ್ರತಿಕ್ರಿಯಿಸಿರುವ ನಳಿನ್, ಇದು ಆಶ್ಚರ್ಯವೇನಿಲ್ಲ. ನಾನು ಬೇರೆ ತಲೆಮಾರಿನವನು, ಆದ್ದರಿಂದ ಸ್ವಾಭಾವಿಕವಾಗಿಯೇ ನನ್ನ ನಿಲುವುಗಳು ವಿಭಿನ್ನವಾಗಿವೆ. ನೀವು ನಿಮ್ಮ ತಾಯಿಯಂತೆಯೇ ಯೋಚಿಸುತ್ತೀರಾ? ನಾನು ಹಾಗೆ ಯೋಚಿಸಲಿಲ್ಲ. ಒಬ್ಬ ವ್ಯಕ್ತಿಯ ಪೋಷಕರ ದೃಷ್ಟಿಕೋನಗಳನ್ನು ಆಧರಿಸಿದ ದೃಷ್ಟಿಕೋನಗಳನ್ನು ಊಹಿಸುವುದು ನಿಮ್ಮನ್ನು ನಿಕಟ ಮನಸ್ಸಿನವರು ಮತ್ತು ಕಡಿಮೆ ಐಕ್ಯೂ ಆಗಿ ಮಾಡುತ್ತದೆ ಎಂದು ಉತ್ತರಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ನಳಿನ್ ಮತ್ತು ವಿವೇಕ್ ನಡುವಿನ ಚರ್ಚೆ ಬಗ್ಗೆ ಅನೇಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ವಿವೇಕ್ ಅವರು ಹೇಳಿದ್ದು ಸರಿ ಎಂದು ವಾದಿಸಿ, ನಳಿನ್​ನನ್ನು ನೀಪೋ ಬೇಬಿ ಕರೆದಿದ್ದಾರೆ. ಹಾಗೆಯೇ ಹಲವರು ನಳಿನ್ ಅವರದ್ದು ಸರಿ ಎಂದು ವಾದಿಸಿದ್ದಾರೆ. ಇನ್ನೊಬ್ಬರು ನನಗೆ ಇಲ್ಲಿ ಅಮೆರಿಕಕ್ಕಾಗಿ ಇಬ್ಬರು ಭಾರತೀಯ ಹೋರಾಡುತ್ತಿರುವುದು ಕಾಣುತ್ತಿದೆ ಎಂದಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net