ಪ್ರಶ್ನೆಯಾದ ಪುನಾರಂಭ; ಬದಲಾದ ಸ್ವರೂಪದಲ್ಲಿ ತೆರೆದುಕೊಳ್ಳಲು ಸಜ್ಜಾಗಿದೆ ಜಗತ್ತು

Spexcial story 25 aprl 20
Published on

| ಶ್ರೀಕಾಂತ್ ಶೇಷಾದ್ರಿ/ಮೃತ್ಯುಂಜಯ ಕಪಗಲ್ ಬೆಂಗಳೂರು

ಹಂತಹಂತವಾಗಿ ಸಡಿಲವಾಗುತ್ತಿರುವ ಲಾಕ್​ಡೌನ್​ನಿಂದ ವ್ಯಾವಹಾರಿಕ ಜಗತ್ತು ನಿರಾಳತೆಯಿಂದ ನಿಟ್ಟುಸಿರು ಬಿಡುವ ಮೊದಲೇ ಬಗೆಹರಿಯದ ಗೊಂದಲಗಳು ಬೆನ್ನತ್ತಿರುವುದರಿಂದಾಗಿ ಸರ್ಕಾರದಿಂದ ಉತ್ತರ ಎದುರು ನೋಡಲಾರಂಭಿಸಿವೆ. ಮೇ3ರ ಬಳಿಕ ಲಾಕ್ ಡೌನ್ ಸಡಿಲಗೊಂಡ ನಂತರವೂ ಸರ್ಕಾರದ ಒಂದಷ್ಟು ಮಾರ್ಗಸೂಚಿ ಪಾಲನೆ ಕಡ್ಡಾಯ ಎಂಬುದು ಸಾಮಾನ್ಯರ ಸ್ಪಷ್ಟ ಅರಿವಿಗೆ ಬಂದೇ ಇದೆ. ಆದರೆ, ತಮ್ಮ ತಮ್ಮ ಕ್ಷೇತ್ರದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹೇಗೆ? ತಮ್ಮ ಜವಾಬ್ದಾರಿ ನಿಭಾಯಿಸಲು ಸಾಧ್ಯವೇ? ಹಿಂದಿನಂತೆಯೇ ಪುನಃ ವ್ಯವಹಾರ- ಚಟುವಟಿಕೆ ಮಾಡಲು ಸಾಧ್ಯವೇ? ಎಂಬ ಗೊಂದಲಗಳು ಉತ್ತರ ಸಿಗದ ಪ್ರಶ್ನೆಗಳಾಗಿ ಕಾಡಲಾರಂಭಿಸಿವೆ. ಲಾಕ್​ಡೌನ್ ಸಡಿಲಗೊಂಡರೂ ಪರಿಸ್ಥಿತಿ ಹಿಂದಿನಂತಿರುವುದಿಲ್ಲ ಎಂಬುದು ಎಲ್ಲ ವ್ಯವಹಾರಸ್ಥರಿಗೂ ಅರಿವಿದೆ. ಸಾರಿಗೆ, ಶಿಕ್ಷಣ, ಚಿತ್ರೋದ್ಯಮ, ಹೀಗೆ ಎಲ್ಲ ಕ್ಷೇತ್ರದಲ್ಲೂ ಮುಂದೇನೋ? ಹೇಗೋ? ಎಂಬ ಆತಂಕ ಕಾಡುತ್ತಿದೆ.

ಸರ್ಕಾರದ ವಿಶ್ವಾಸವೇನು

ಅಮೆರಿಕದ ನ್ಯೂಯಾರ್ಕ್, ಕ್ಯಾಲಿಫೋರ್ನಿ ಯಾದಂಥ ಕಡೆಗಳಲ್ಲಿ ದಿನವೊಂದಕ್ಕೆ ಸಾವಿರಾರು ಹೊಸ ಕರೊನಾ ಪ್ರಕರಣ ಕಂಡುಬರುತ್ತಿದೆ, ನೂರಕ್ಕಿಂತ ಹೆಚ್ಚು ಜನ ಮೃತರಾಗುತ್ತಿದ್ದಾರೆ. ಆದರೆ, ಕರ್ನಾಟಕ ಮತ್ತು ಅದರಲ್ಲೂ ಬೆಂಗಳೂರಲ್ಲಿ ಪರಿಸ್ಥಿತಿ ಕೈಮೀರಿಲ್ಲ, ಸಹಜ ಸ್ಥಿತಿಗೆ ಬರುತ್ತದೆ ಎಂಬುದು ಸರ್ಕಾರದ ಆಶಾಭಾವನೆ. ಕ್ವಾರಂಟೈನ್​ನಲ್ಲಿದ್ದವರೇ ಹೆಚ್ಚು ಸೋಂಕಿತರಾಗಿದ್ದಾರೆ. ಹೊರ ಪ್ರದೇಶದ ಪ್ರಕರಣಗಳು ಕಡಿಮೆ ಇವೆ. ಹೀಗಾಗಿ ವ್ಯಾಪಕವಾಗಿ ವಿಸ್ತರಣೆಯಾಗುವ ಸೂಚನೆ ಕಡಿಮೆ ಇದೆ. ಗುಣಮುಖರಾಗುವ ಪ್ರಮಾಣವೂ ಹೆಚ್ಚಿರುವುದು ಸರ್ಕಾರದ ವಿಶ್ವಾಸ ಹೆಚ್ಚಿಸಿದೆ.

ಬಸ್ಸಿನ ನಿರ್ವಹಣೆ ಹೇಗೆ?

ಸಾರಿಗೆ ಕ್ಷೇತ್ರದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹೇಗೆ ಎಂಬ ಪ್ರಶ್ನೆ ಕಾಡುತ್ತಿದೆ. ಒಂದು ಬಸ್​ನಲ್ಲಿ ಶೇ.80 ಸೀಟುಗಳು ಭರ್ತಿಯಾದರಷ್ಟೇ ಬಸ್ ನಿರ್ವಹಣೆಯಾಗಬಹುದು. ಇದು ಸರ್ಕಾರಿ ಬಸ್​ಗಳ ಜತೆಗೆ ಖಾಸಗಿ ಬಸ್​ಗಳಿಗೂ ಅನ್ವಯ. ಹೀಗಿರುವಾಗ ಈಗಿನ ವಾತಾವರಣದಲ್ಲಿ 30 ಪ್ರಯಾಣಿಕರಿಗಿಂತ ಹೆಚ್ಚಿಗೆ ಕರೆದೊಯ್ಯುವಂತಿಲ್ಲ, ರಾಜಹಂಸದಂತಹ ಬಸ್ಸುಗಳಲ್ಲಿ 16 ಮಂದಿಯನ್ನಷ್ಟೇ ಕರೆದೊಯ್ಯಬಹುದು. ಇಷ್ಟು ಅಥವಾ ಇದಕ್ಕಿಂತ ಕೊಂಚ ಹೆಚ್ಚು ಜನರನ್ನು ಕರೆದೊಯ್ದರೂ ಸಂಸ್ಥೆಗೆ ನಷ್ಟವೇ. ಈಗಾಗಲೇ ಲಾಕ್​ಡೌನ್ ಬಳಿಕ ಕೆಎಸ್​ಆರ್​ಟಿಸಿ ನಷ್ಟ 900 ಕೋಟಿ ರೂ. ದಾಟಿದೆ. ಬಸ್ ಓಡಿಸಿಯೂ ನಷ್ಟವಾದರೆ ಹೊರೆ ಹೆಚ್ಚಾಗಲಿದೆ. ಹಾಗೆಂದು ಪ್ರಯಾಣ ದರ ಹೆಚ್ಚಿಸುವ ಸಂದರ್ಭವೂ ಇದಲ್ಲ.

ಕ್ಯಾಬ್ ಓಡಾಟ ಸಾಧ್ಯವೇ?

ಲಾಕ್​ಡೌನ್ ಮುಗಿದ ಕೂಡಲೇ ಮತ್ತೆ ಕ್ಯಾಬ್ ಅನ್ನು ರಸ್ತೆಗಿಳಿಸಬಹುದು, ಪುನಃ ನಮ್ಮ ಜೀವನವನ್ನು ಸರಿದಾರಿಗೆ ತಂದುಕೊಳ್ಳಬಹುದೆಂದು ಕಾಯ್ದಿರುವ ಕ್ಯಾಬ್ ಮಾಲಿಕರು, ಚಾಲಕರಿಗೂ ಆತಂಕ ಮಡುಗಟ್ಟಿದೆ. ಬೆಂಗಳೂರೊಂದರಲ್ಲೇ 1.70 ಲಕ್ಷಕ್ಕಿಂತ ಅಧಿಕ ಟ್ಯಾಕ್ಸಿಗಳಿವೆ. ವಿಮಾನ ನಿಲ್ದಾಣ ಪುನಾರಂಭವಾಗಿ, ಅಂತಾರಾಷ್ಟ್ರೀಯ ವಿಮಾನ ಓಡಾಟ ಆರಂಭವಾಗುವವರೆಗೂ ಏರ್ ಪೋರ್ಟ್ ಟ್ಯಾಕ್ಸಿಗಳಿಗೆ ಗ್ರಾಹಕರು ಸಿಗುವುದು ಅನುಮಾನ. ಇನ್ನು ಉಳಿದ ಟ್ಯಾಕ್ಸಿಗಳಲ್ಲೂ ಹೆಚ್ಚು ಜನರನ್ನು ಹಾಕುವಂತಿಲ್ಲ ಒಬ್ಬರು ಅಥವಾ ಇಬ್ಬರನ್ನೂ ಮಾತ್ರ ಕರೆದೊಯ್ಯಬೇಕು.

ಶಾಲೆಯಲ್ಲಿ ಅಂತರವೆಷ್ಟು?

ಶೈಕ್ಷಣಿಕ ವಲಯ ಅಕ್ಷರಶಃ ಅನಿಶ್ಚಿತತೆಯಲ್ಲೇ ಇದೆ. ಶೈಕ್ಷಣಿಕ ವರ್ಷ ಆರಂಭದ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಆನ್​ಲೈನ್​ನಲ್ಲೇ ಪಾಠ ಪ್ರವಚನ ಮುಂದುವರಿಯಲಿ ಎಂದು ಸರ್ಕಾರವೇನೋ ಹೇಳಿದೆ. ಆದರೆ, ಇದರಿಂದ ಎದುರಾಗುತ್ತಿರುವ ಸಮಸ್ಯೆಗಳು ಒಂದೆರಡಲ್ಲ. ಉದಾಹರಣೆಗೆ ದ್ವಿತೀಯ ಪಿಯುಸಿ ತರಗತಿ ಆನ್​ಲೈನ್​ನಲ್ಲಿ ಆರಂಭವಾಗಿದೆ, ವಿಡಿಯೋಗಳನ್ನು ಮಾಡಿ ಕಾಲೇಜುಗಳು ವಿದ್ಯಾರ್ಥಿಗಳಿಗೆ ರವಾನಿಸಿವೆ. ಅದನ್ನು ಅರ್ಥ ಮಾಡಿಕೊಳ್ಳಲಾರದೇ ಮಕ್ಕಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಚಿತ್ರೋದ್ಯಮದ ಕಳವಳ

ಲಾಕ್​ಡೌನ್ ಕಾರಣದಿಂದ ಅರ್ಧಕ್ಕೆ ನಿಂತ ಚಿತ್ರ ತಯಾರಿಕೆ ಕೆಲಸ ಆರಂಭಿಸಲು ಚಿತ್ರೋದ್ಯಮ ತಯಾರಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಚಿತ್ರದ ಕೆಲಸ ಮುಗಿಸಿದರೂ ಚಿತ್ರಮಂದಿರ ಆರಂಭವಾಗಿ ಅಲ್ಲಿ ಸಾಮಾಜಿಕ ಅಂತರದ ವಿಚಾರ ಬಂದರೆ ಪ್ರದರ್ಶನ ಹೇಗೆ ಸಾಧ್ಯ? ಕಲೆಕ್ಷನ್ ಸಾಧ್ಯವೇ ಎಂಬ ಹುಳು ಚಿತ್ರ ನಿರ್ವಪಕರ ತಲೆ ಹೊಕ್ಕಿದೆ. ಕಿರುತೆರೆ ಧಾರಾವಾಹಿಗಳ ಚಿತ್ರೀಕರಣ ಮೇ 4ರಿಂದಲೇ ಮರು ಚಾಲನೆಗೊಳ್ಳಲಿದೆ, ಸಾಮಾಜಿಕ ಅಂತರ ಕಾಯ್ದುಕೊಂಡು ಚಟುವಟಿಕೆ ತೀವ್ರಗೊಳಿಸಲು ಪೂರ್ವ ತಯಾರಿಯೂ ನಡೆಯುತ್ತಿದೆ. ಆದರೆ, ಚಿತ್ರರಂಗ ಭವಿಷ್ಯ ಮಾತ್ರ ಡೋಲಾಯಮಾನವಾಗಿದೆ.

ಉತ್ಪಾದನಾ ವಲಯಕ್ಕೆ ಚಿಂತೆ

ರಾಜ್ಯದ ಉತ್ಪಾದನಾ ವಲಯ ಮೇ 4 ರಿಂದಲೇ ಚಾಲನೆ ಗೊಳ್ಳಲಿದೆ. ಕಡಿಮೆ ಸಂಖ್ಯೆಯಲ್ಲಿ ಕಾರ್ವಿುಕರನ್ನು ಬಳಸಿ ಚಟುವಟಿಕೆ ಆರಂಭಿಸುವುದರಲ್ಲಿ ಅನುಮಾನವಿಲ್ಲ. ಆದರೆ, ಬೇರೆ ದೇಶ ಅಥವಾ ಬೇರೆ ರಾಜ್ಯಗಳಿಂದ ಕಚ್ಛಾ ವಸ್ತು ಸರಬರಾಜು ಆಗಬೇಕಿದ್ದರೆ ಸಮಸ್ಯೆಯಾಗಲಿದೆ.

ಪ್ರವಾಸೋದ್ಯಮಕ್ಕೆ ಆಪತ್ತು

ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ದಿನ ಇನ್ನಷ್ಟು ವಿಸ್ತರಣೆಯಾಗುವ ಕಾರಣ ಮತ್ತು ವೇತನ ಕಡಿತ, ಕೆಲಸದ ಕಡಿತದಿಂದ ರಾಜ್ಯದ ಪ್ರವಾಸೋದ್ಯಮದ ಮೇಲೆ ಗಂಭೀರ ಪರಿಣಾಮ ಎದುರಾಗುವ ಲಕ್ಷಣವಿದೆ. ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡ ಹೋಂ ಸ್ಟೇಗಳು, ಹೋಟೆಲ್, ಟ್ಯಾಕ್ಸಿಗಳು, ಬೀದಿ ಬದಿ ವ್ಯಾಪಾರಿಗಳು ಆರ್ಥಿಕವಾಗಿ ಪೆಟ್ಟು ತಿನ್ನುವ ಸಾಧ್ಯತೆ ಇದೆ. 3-4 ತಿಂಗಳವರೆಗಂತೂ ಕರೊನಾ ಬಿಸಿ ಇದ್ದೇ ಇರುತ್ತದೆ, ಬಳಿಕ ಮಳೆಗಾಲ. ಹಾಗೂ ಹೀಗೂ ಆಗಸ್ಟ್​ವರೆಗೂ ಪ್ರವಾಸೋದ್ಯಮ ಕ್ಷೇತ್ರಕ್ಕೆ ಗ್ರಹಣವೇ ಸರಿ.

ಟ್ರಾವೆಲ್ ಇಂಡಸ್ಟ್ರಿಗೆ ದೊಡ್ಡ ಹೊಡೆತ ಬೀಳುತ್ತದೆ. ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆ ಜನವರಿವರೆಗೂ ಕಡಿಮೆಯಾಗುತ್ತದೆ, ಕಾರ್ಪೆರೇಟ್ ಕಂಪನಿಗಳು ಹಿಂದಿನಷ್ಟು ಕ್ಯಾಬ್ ಬಳಸಲ್ಲ. ಬೆಂಗಳೂರಲ್ಲಿ 1.70 ಲಕ್ಷ ಟ್ಯಾಕ್ಸಿ, 90 ಸಾವಿರ ಮ್ಯಾಕ್ಸಿ ಕ್ಯಾಬ್ ಇದೆ. ಇದರಲ್ಲಿ 20 ಸಾವಿರದಷ್ಟು ಪ್ರವಾಸೋದ್ಯಮಕ್ಕೆ ಬಳಕೆಯಾಗುತ್ತಿದೆ. - ರಾಧಾಕೃಷ್ಣ ಹೊಳ್ಳ, ಕರ್ನಾಟಕ ಸ್ಟೇಟ್ ಟ್ರಾವೆಲ್ ಆಪರೇಟರ್ ಸಂಘ

ಅಸ್ಪಷ್ಟತೆಗಳು?
  1. ಇನ್ನೆಷ್ಟು ದಿನ ಸಾಮಾಜಿಕ ಅಂತರ ಕಾಯ್ದುಕೊಳ್ಳ ಬೇಕಾಗಬಹುದು
  2. ಹೆಚ್ಚು ಜನಸಾಂದ್ರತೆ ಅನಿವಾರ್ಯ ಇರುವ ಕಡೆ ಪರ್ಯಾಯ ಮಾರ್ಗದ ಬಗ್ಗೆ ಚರ್ಚೆಯಾಗಿಲ್ಲ
  3. ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಉದ್ಯಮಗಳಿಗೆ ಸರ್ಕಾರದ ನೆರವಿನ ಭರವಸೆ ಇನ್ನೂ ಸಿಕ್ಕಿಲ್ಲ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net