

ಬೆಂಗಳೂರು: ಆಸ್ತಿ ವಿವಾದವಿದ್ದರೆ ಆ ಸಮಸ್ಯೆ ಬಗೆಹರಿಸಲು ನಾಯಿಗೆ ಏಕೆ ಹೇಳಿದ್ದೀರಿ? ಅಲ್ಲ, ನಾಯಿ ಮೈ ಮೇಲೆ ಬಿಟ್ಟರೆ ವ್ಯಕ್ತಿ ಚಲಿಸಲು ಸಾಧ್ಯವಾಗುವುದಾದರೂ ಹೇಗೆ?
ಪ್ರಕರಣವೊಂದರ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರಿಗೆ ಹೈಕೋರ್ಟ್ ಕೇಳಿದ ಪ್ರಶ್ನೆ ಇದು. ಅಕ್ರಮ ಪ್ರತಿಬಂಧಕ ಹಾಗೂ ಜೀವ ಬೆದರಿಕೆ ಆರೋಪ ಸಂಬಂಧ ತಮ್ಮ ವಿರುದ್ಧದ ಬೆಂಗಳೂರು ಸಿಎಂಎಂ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಹಲಸೂರು ನಿವಾಸಿ ಪುರುಷೋತ್ತಮ್ ಮತ್ತವರ ಪತ್ನಿ ಭಾಗ್ಯ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸುತ್ತಿದ್ದಂತೆ ನ್ಯಾಯಮೂರ್ತಿಗಳು ಪ್ರಶ್ನೆಯ ಸುರಿಮಳೆಗೈದರು. ಇದನ್ನು ಕೇಳಿ ಕೋರ್ಟ್ ಹಾಲ್‌ನಲ್ಲಿ ನೆರೆದವರು ನಗೆಗಡಲಿಲ್ಲ ತೇಲಾಡಿದರು.
ಅರ್ಜಿದಾರ ಪರ ವಕೀಲರು ಹಾಜರಾಗುತ್ತಿದ್ದಂತೆಯೇ ಅವರನ್ನು ಉದ್ದೇಶಿಸಿ ನ್ಯಾಯಪೀಠ, ನಿಮ್ಮ ಕಕ್ಷಿದಾರರು ಏಕೆ ದೂರುದಾರರ ಮೇಲೆ ನಾಯಿ ಛೂ ಬಿಟ್ಟರು? ನಿಮ್ಮ ಸಮಸ್ಯೆ ಏನು ಎಂದು ಪ್ರಶ್ನಿಸಿದರು. ಅರ್ಜಿದಾರರ ಪರ ವಕೀಲರು, ಅದು ಸಾಕಿರುವ ನಾಯಿ. ಅದನ್ನು ಕಟ್ಟಿ ಹಾಕಲಾಗಿತ್ತು ಎಂದು ಉತ್ತರಿಸಿದರು.
ನ್ಯಾಯಮೂರ್ತಿಗಳು, ‘ಏನು ಸಾಕು ನಾಯಿನಾ? ಸಾಕಿದ ನಾಯಿ ಎಂದರೆ ಅದು ಕಚ್ಚುವುದಿಲ್ಲವೇ? ಕಟ್ಟಿರುವ ನಾಯಿಯನ್ನು ದೂರುದಾರರ ಮೇಲೆ ಛೂ ಬಿಟ್ಟರಾ? ಇಲ್ಲಿ ಸಮಸ್ಯೆ ಇರುವುದು ದೂರುದಾರರನ್ನು ಅಕ್ರಮವಾಗಿ ಪ್ರತಿಬಂಧಿಸಿರುವ ವಿಚಾರದಲ್ಲಿ. ಪ್ರಕರಣದಲ್ಲಿ ನಾಯಿ ಛೂ ಬಿಟ್ಟು ದೂರುದಾರರನ್ನು ಎಲ್ಲಿಗೂ ಚಲಿಸಲು ಬಿಟ್ಟಿಲ್ಲ ಎನ್ನುವುದೇ ಮುಖ್ಯ ವಿಚಾರ’ ಎಂದರು. ಇದಕ್ಕುತ್ತರಿಸಿದ ವಕೀಲರು, ಇದೆಲ್ಲ ಸುಳ್ಳು ಅಪಾದನೆಗಳು ಎಂದರು.
ನ್ಯಾಯಮೂರ್ತಿಗಳು ನಗುತ್ತಲೇ ಪ್ರತಿಕ್ರಿಯಿಸಿ, ನಾಯಿ ಸುಳ್ಳೇ ಅಥವಾ ದೂರು ಸುಳ್ಳೇ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸದ ಅರ್ಜಿದಾರರ ಪರ ವಕೀಲರು, ದೂರುದಾರರು ಮೊದಲ ಅರ್ಜಿದಾರರ ಸಹೋದರಿಯಾಗಿದ್ದಾರೆ ಎಂದು ಸಮಜಾಯಿಷಿ ನೀಡಲು ಮುಂದಾದರು. ಅದಕ್ಕೆ ನ್ಯಾಯಮೂರ್ತಿಗಳು, ಅದೆಲ್ಲವೂ ಸರಿ. ಮನೆಗೆ ಬಂದರೆ ನಾಯಿಯನ್ನು ಛೂ ಬಿಟ್ಟರೆ ಹೇಗೆ ಎಂದು ಮತ್ತೆ ಪ್ರಶ್ನಿಸಿದರು.
‘ದೂರುದಾರರು ತಾಯಿ ನೋಡಲು ಅರ್ಜಿದಾರರ ಮನೆಗೆ ಬಂದರು. ಈ ವೇಳೆ ಆಸ್ತಿ ವಿಚಾರವಾಗಿ ಚರ್ಚೆ ನಡೆದಿದೆ. ಇಬ್ಬರ ನಡುವೆ ಪರಸ್ಪರ ಮಾತಿನ ಚಕಮಕಿ ಏರ್ಪಟಿತ್ತು. ದೂರುದಾರರ ಹೇಳಿಕೆ ಹೊರತುಪಡಿಸಿ ತನಿಖೆಯಲ್ಲಿ ಬೇರಾವ ದಾಖಲೆಗಳನ್ನು ಸಂಗ್ರಹಿಸಿಲ್ಲ. ಅರ್ಜಿದಾರರ ಮೇಲಿನ ಆರೋಪಗಳು ಸುಳ್ಳು’ ಎಂದು ವಕೀಲರು ತಿಳಿಸಿದರು. ಇದಕ್ಕೆ ನ್ಯಾಯಮೂರ್ತಿಗಳು, ನಾಯಿ ಛೂ ಬಿಟ್ಟು ಹೆದರಿಸಿದ್ದಾರೆ ಎನ್ನುವುದು ಆರೋಪ. ಪ್ರಕರಣದಲ್ಲಿ ಅಕ್ರಮ ಪ್ರತಿಬಂಧಿಸಿದ ಅಪರಾಧ ಸ್ಪಷ್ಟವಾಗಿ ಅನ್ವಯಿಸುತ್ತದೆ ಎಂದರು. ಅಲ್ಲದೆ, ಪ್ರಕರಣ ಕುರಿತು ಪೊಲೀಸರ ಪರ ಏನು ಹೇಳುತ್ತೀರಿ ಎಂದು ಸರ್ಕಾರಿ ವಕೀಲರನ್ನು ಕೇಳಿದರು.
ಸರ್ಕಾರಿ ವಕೀಲರು ಉತ್ತರಿಸಿ, ಗಾಯದ ಪ್ರಮಾಣಪತ್ರ ಪಡೆಯಲಾಗುತ್ತಿದೆ. ಅರ್ಜಿದಾರರ ಮೇಲೆ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 326 ಅಡಿಯ ಆರೋಪವಿದೆ ಎಂದು ಹೇಳಿದರು. ಇದರಿಂದ ಚಕಿತಗೊಂಡ ನ್ಯಾಯಮೂರ್ತಿಗಳು, ಏನು? ನಾಯಿಯಿಂದ ಗಾಯವಾಗಿದೆಯೇ? ಐಪಿಸಿ ಸೆಕ್ಷನ್ 326ರಡಿ ಪ್ರಕರಣ ಎಂದರೆ ಮಾರಕಾಸ್ತ್ರಗಳಿಂದ ಗಂಭೀರ ಗಾಯಗೊಳಿಸಿರುವ ಅಪರಾಧ ಎಂದರ್ಥ. ನಾಯಿಯನ್ನು ಮೈ ಮೇಲೆ ಬಿಟ್ಟಿದ್ದಾರೆ ಎಂಬುದು ದೂರುದಾರ ಆರೋಪವಾಗಿದೆ ಎಂದರು.
ಸರ್ಕಾರದ ಪರ ವಕೀಲರು, ಪ್ರಕರಣದ ತನಿಖೆಯ ದಾಖಲೆಗಳನ್ನು ಸಲ್ಲಿಸಲಾಗುವುದು. ಅದಕ್ಕೆ ಕಾಲಾವಕಾಶ ಬೇಕು ಎಂದು ಮನವಿ ಮಾಡಿದರು. ಇದಕ್ಕೆ ಒಪ್ಪಿಗೆ ಸೂಚಿಸಿದ ನ್ಯಾಯಮೂರ್ತಿಗಳು, ಪ್ರಕರಣ ಕುರಿತು ತನಿಖಾ ದಾಖಲೆಗಳನ್ನು ಸಲ್ಲಿಸುವಂತೆ ಹಲಸೂರು ಪೊಲೀಸರಿಗೆ ನಿರ್ದೇಶಿಸಿ ವಿಚಾರಣೆ ಮುಂದೂಡಿದರು.