‘ಪರಿಷತ್‌ಗೆ ನೇಮಕ’ ಚರ್ಚೆಗಾಗಿ ಹೆಸರು ತೇಲಿಬಿಟ್ಟರೆ?

KPCC
Published on

ಬೆಂಗಳೂರು: ವಿಧಾನ ಪರಿಷತ್‌ಗೆ ಶಿಫಾರಸು ಆಗಿದ್ದ 4 ಹೆಸರಿಗೆ ಕಾಂಗ್ರೆಸ್ ಹೈಕಮಾಂಡ್ ಕೊನೇ ಕ್ಷಣದಲ್ಲಿ ತಾತ್ಕಾಲಿಕ ತಡೆ ವಿಧಿಸಿದೆಯೇ ಅಥವಾ ಚರ್ಚೆಗಾಗಿ ಹೆಸರು ತೇಲಿಬಿಟ್ಟಿದೆಯೇ? ಎಂದು ಕುತೂಹಲ ಕೆರಳಿಸಿದೆ.

ರಾಜ್ಯ ವಿಧಾನ ಪರಿಷತ್‌ನ ನಾಲ್ಕು ಸ್ಥಾನಗಳಿಗೆ ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಮೇಶ್ ಬಾಬು, ಮುಖ್ಯಮಂತ್ರಿಗಳ ಮಾಜಿ ಮಾಧ್ಯಮ ಸಲಹೆಗಾರ, ಪತ್ರಕರ್ತ ದಿನೇಶ್ ಅಮೀನ್ ಮಟ್ಟು, ದಲಿತ ಮುಖಂಡ ಡಿ.ಜಿ. ಸಾಗರ್ ಮತ್ತು ರಾಜ್ಯ ಸರ್ಕಾರದ ಅನಿವಾಸಿ ಭಾರತೀಯ ಕೋಶದ ಉಪಾಧ್ಯಕ್ಷೆ ಆರತಿ ಕೃಷ್ಣ ಅವರನ್ನು ನಾಮನಿರ್ದೇಶನ ಮಾಡಲು ಪಟ್ಟಿ ಸಿದ್ಧವಾಗಿತ್ತು. ಸಿಎಂ ಕೂಡ ಸಹಿ ಹಾಕಿದ್ದರು. ಈಗ ಹೈಕಮಾಂಡ್ ಮಧ್ಯಪ್ರವೇಶಿಸಿ ರಾಜ್ಯಪಾಲರಿಗೆ ಕಳುಹಿಸದಂತೆ ಸೂಚಿಸಿದೆ. ರಾಜ್ಯದ ಕಾಂಗ್ರೆಸ್ ನಾಯಕರ ತೀವ್ರ ಒತ್ತಡದ ಹಿನ್ನೆಲೆಯಲ್ಲಿ ಕಡೇ ಗಳಿಗೆಯಲ್ಲಿ ಎಐಸಿಸಿಯೇ ತಡೆ ಹಿಡಿಯುವಂತೆ ಸೂಚಿಸಿದೆ ಎನ್ನಲಾಗಿದೆ.

ವಿವಿಧ ಕ್ಷೇತ್ರಗಳ ಸಾಧಕರ ಕೋಟಾದಲ್ಲಿ ನಾಮನಿರ್ದೇಶನಕ್ಕೆ ಹಲವು ಆಕಾಂಕ್ಷಿಗಳಿದ್ದರು. ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಮೂಲಕ ಸಂಭಾವ್ಯರ ಪಟ್ಟಿ ಪಡೆದುಕೊಂಡಿದ್ದ ಎಐಸಿಸಿ ನಾಲ್ವರನ್ನು ಅಂತಿಮಗೊಳಿಸಿತ್ತು. ರಮೇಶ್ ಬಾಬು ಮತ್ತು ದಿನೇಶ್ ಅಮೀನ್‌ಮಟ್ಟು ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದರೆ ಡಿ.ಜಿ.ಸಾಗರ್ ಪರಿಶಿಷ್ಟ ಜಾತಿಗೆ ಸೇರಿದ್ದು, ಆರತಿ ಕೃಷ್ಣ ಒಕ್ಕಲಿಗರಾಗಿದ್ದಾರೆ. ಆದರೆ, ರಾಜ್ಯಭವನಕ್ಕೆ ಪಟ್ಟಿಯೇ ಹೋಗದ ಹಿನ್ನೆಲೆಯಲ್ಲಿ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿದೆ. ಪರಿಷ್ಕೃತ ಆಗುವ ಸಾಧ್ಯತೆಗಳಿವೆ ಎಂಬ ಮಾಹಿತಿ ಕೇಳಿಬರುತ್ತಿವೆ.

ಕೆಪಿಸಿಸಿಯಲ್ಲೂ ಅಸಮಾಧಾನ

ವಿಧಾನ ಪರಿಷತ್‌ಗೆ ಸೂಚಿಸಿರುವ ಹೆಸರುಗಳ ಮೇಲೆ ಕೆಪಿಸಿಸಿಯಲ್ಲಿಯೂ ಅಸಮಾಧಾನ ವ್ಯಕ್ತವಾಗಿದೆ. ಒಬ್ಬರು ಪಕ್ಷಕ್ಕೆ ಬಂದು ಎರಡೂವರೆ ವರ್ಷವಾಗಿಲ್ಲ. ಆಗಲೇ ಅವರಿಗೆ ಸ್ಥಾನಮಾನ ಕೊಡಲಾಗುತ್ತಿದೆ. ಮತ್ತೊಬ್ಬರು ಪಕ್ಷ ಮತ್ತು ನಾಯಕರನ್ನು ಟೀಕೆ ಮಾಡಿಕೊಂಡು ಓಡಾಡುತ್ತಿದ್ದರೂ ಅವರ ಹೆಸರನ್ನು ಪಟ್ಟಿಗೆ ಸೇರಿಸಲಾಗಿದೆ. ಇನ್ನೊಬ್ಬರು ಪಕ್ಷದ ಕಚೇರಿ ಬಾಗಿಲನ್ನೇ ದಾಟಿಲ್ಲ. ಅಂತಹವರ ಹೆಸರನ್ನೂ ಪಟ್ಟಿ ಮಾಡಿರುವುದು ಸರಿಯಲ್ಲ. ಆದ್ದರಿಂದ ಪಕ್ಷನಿಷ್ಠರಿಗೆ ಕೊಡಬೇಕೆಂದು ಒತ್ತಾಯ ಕೇಳಿಬರುತ್ತಿವೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net