ಯಾಮಾರಿದರೆ ಮನುಷ್ಯರಿಗೂ ಹಕ್ಕಿಜ್ವರ

Bird flu meeting
ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಕ್ಕಿಜ್ವರದ ನಿಯಂತ್ರಣ ಕುರಿತು ಡಿಸಿ ಗುರುದತ್ತ ಹೆಗಡೆ ಸಭೆ ನಡೆಸಿದರು. ಎನ್.ಹೇಮಂತ್, ಡಾ. ಕೆ.ಎಸ್.ನಟರಾಜ್, ಡಾ. ನಾಗರಾಜ್ ನಾಯ್ಕ, ಡಾ. ಗುಡದಪ್ಪ ಕಸಬಿ, ಡಾ. ಮಲ್ಲಪ್ಪ, ಡಾ. ವಿರೂಪಾಕ್ಷಪ್ಪ, ಡಾ. ತಿಮ್ಮಪ್ಪ ಇದ್ದರು.
Published on

ಶಿವಮೊಗ್ಗ: ಹಕ್ಕಿಜ್ವರ ಸಾಮಾನ್ಯವಾಗಿ ಹಕ್ಕಿಗಳಿಂದ ಹಕ್ಕಿಗಳಿಗೆ ಹರಡುತ್ತದೆ. ಕೆಲವೊಮ್ಮೆ ರೋಗಪೀಡಿತ ಹಕ್ಕಿಗಳ ಸಂಪರ್ಕದಿಂದ ಮನುಷ್ಯರಲ್ಲೂ ಈ ಜ್ವರದ ಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ ಮುಂಜಾಗ್ರತೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.

ಜಿಲ್ಲಾಡಳಿತ ಕಚೇರಿಯಲ್ಲಿ ಗುರುವಾರ ಹಕ್ಕಿಜ್ವರ ಹಾಗೂ ಇತರೆ ಸಾಂಕ್ರಾಮಿಕ ರೋಗ ತಡೆಗಟ್ಟಲು ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆ ನಡೆಸಿದ ಅವರು, ಹಕ್ಕಿಜ್ವರ ಅಥವಾ ಕೋಳಿ ಶೀತಜ್ವರ ಎಚ್5ಎನ್1 ವೈರಸ್‌ನಿಂದ ಹರಡುತ್ತದೆ. ಇದು ಟರ್ಕಿ, ಗಿನಿ ಕೋಳಿ, ಬಾತುಕೋಳಿ, ಗೀಜಗ ಮುಂತಾದ ಹಕ್ಕಿಗಳಲ್ಲಿ ಕಾಣಿಸಿಕೊಳ್ಳುವ ಕಾಯಿಲೆ. ಇದಕ್ಕೆ ಮುನ್ನೆಚ್ಚರಿಕೆಯೇ ಮದ್ದು. ಜಿಲ್ಲೆಯಲ್ಲಿ ಈವರೆಗೆ ಹಕ್ಕಿಜ್ವರ ಪ್ರಕರಣ ವರದಿಯಾಗಿಲ್ಲ ಎಂದು ತಿಳಿಸಿದರು.

ಸಾಮಾನ್ಯ ಜ್ವರದ ಲಕ್ಷಣಗಳಂತೆಯೇ ಇರುತ್ತದೆ. ಜ್ವರ ಮತ್ತು ಕೆಮ್ಮು, ಶೀತ, ತಲೆನೋವು, ಗಂಟಲು ಕೆರೆತ, ನೆಗಡಿ, ಸ್ನಾಯುಗಳಲ್ಲಿ ನೋವು, ಆಯಾಸ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ವಾಂತಿ-ಬೇಧಿಯೂ ಆಗಬಹುದು. ಮುಖ್ಯವಾಗಿ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ಈ ಲಕ್ಷಣಗಳು ಕಂಡು ಬಂದ ತಕ್ಷಣ ಸರ್ಕಾರಿ ಆಸ್ಪತ್ರೆ ಅಥವಾ ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಿದರು.

ಶಂಕಿತ ಹಕ್ಕಿಜ್ವರ ಪೀಡಿತ ಕೋಳಿಗಳು, ಹಕ್ಕಿಗಳು, ಬಾತುಕೋಳಿಗಳ ಸಂಪರ್ಕಕ್ಕೆ ಬಾರದಂತೆ ಮುನ್ನೆಚ್ಚರಿಕೆ ವಹಿಸಬೇಕು. ಶಂಕಿತ ಹಕ್ಕಿಜ್ವರ ಪೀಡಿತ ಫಾರ್ಮ್‌ಗಳಿಗೆ ಭೇಟಿ ನೀಡಬಾರದು. ಒಂದು ವೇಳೆ ಸಂಪರ್ಕಕ್ಕೆ ಬಂದಲ್ಲಿ ತಮ್ಮ ಕೈಕಾಲು ಮತ್ತು ಮುಖವನ್ನು ಚೆನ್ನಾಗಿ ತೊಳೆದು ಬಟ್ಟೆ ಬದಲಾಯಿಸಬೇಕು. ಮುಂದಿನ ನಾಲ್ಕು ದಿನಗಳವರೆಗೆ ದೇಹದ ಉಷ್ಣಾಂಶದಲ್ಲಾಗುವ ಬದಲಾವಣೆ ಗಮನಿಸಬೇಕು. ಒಂದು ವೇಳೆ ಜ್ವರ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು ಎಂದು ಸಲಹೆ ನೀಡಿದರು.

ಜಿಪಂ ಸಿಇಒ ಎನ್.ಹೇಮಂತ್, ಡಿಎಚ್‌ಒ ಡಾ. ನಟರಾಜ್, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಗುಡದಪ್ಪ ಕಸಬಿ, ಆರ್‌ಸಿಎಚ್ ಅಧಿಕಾರಿ ಡಾ. ಮಲ್ಲಪ್ಪ, ಸಿಮ್ಸ್ ನಿರ್ದೇಶಕ ಡಾ. ವಿರೂಪಾಕ್ಷಪ್ಪ, ಮೆಗ್ಗಾನ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ತಿಮ್ಮಪ್ಪ, ವಿವಿಧ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು, ಟಿಎಚ್‌ಒಗಳು ಹಾಜರಿದ್ದರು.

ನೀರು, ಗಾಳಿ ಮೂಲಕ ಜ್ವರ

ಕಾಯಿಲೆ ಲಕ್ಷಣಗಳು ಕೋಳಿಗಳಲ್ಲಿ ಕಾಣಿಸಿಕೊಂಡ ಕೂಡಲೇ ಹತ್ತಿರದ ಮಾಹಿತಿ ಕೇಂದ್ರ ಅಥವಾ ಪಶುವೈದ್ಯಕೀಯ ಸಂಸ್ಥೆಗೆ ಮಾಹಿತಿ ನೀಡಬೇಕು ಎಂದು ಡಿಎಸ್‌ಒ ಡಾ. ನಾಗರಾಜ ನಾಯ್ಕ ಹೇಳಿದರು. ಕೋಳಿಗಳ ಹಿಕ್ಕೆಗಳು ಮನುಷ್ಯರು ಕುಡಿಯುವ ನೀರಿನೊಂದಿಗೆ ಬೆರೆತು ಕಲುಷಿತಗೊಂಡಾಗ ಈ ಕಾಯಿಲೆ ಹರಡುತ್ತದೆ ಮತ್ತು ಕೆಲವು ಸಂದರ್ಭದಲ್ಲಿ ಗಾಳಿ ಮೂಲಕವೂ ಹರಡುತ್ತದೆ. ಜಿಲ್ಲೆಯಲ್ಲಿ 332 ಪೌಲ್ಟ್ರಿ ಮತ್ತು 2 ಪಕ್ಷಿಧಾಮಗಳಿದ್ದು, ಅಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಹಾಗೂ ಚಲನವಲನ ವೀಕ್ಷಿಸಲು ತಿಳಿಸಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net