ಬಾಹ್ಯಾಕಾಶದಲ್ಲಿ ಮಗು ಜನಿಸಿದರೆ ಏನಾಗುತ್ತೆ? ವಿಜ್ಞಾನಿಯೊಬ್ಬರು ಬಿಚ್ಚಿಟ್ಟ ಅಚ್ಚರಿ ಸಂಗತಿ ಇಲ್ಲಿದೆ... Space

Space
Published on

Space : ನಾಸಾ ಸೇರಿದಂತೆ ಬಾಹ್ಯಾಕಾಶ ಸಂಸ್ಥೆಗಳು ಮಂಗಳ ಗ್ರಹಕ್ಕೆ ಮಾನವನನ್ನು ಕಳುಹಿಸಲು ಯೋಜನೆ ರೂಪಿಸುತ್ತಿವೆ. ಮುಂದಿನ ದಿನಗಳಲ್ಲಿ ಮಾನವ ಕಾರ್ಯಾಚರಣೆಗಳು ಹೆಚ್ಚಾಗುವ ಸಾಧ್ಯತೆ ಇದ್ದು, ಇದರ ನಡುವೆಯೇ ಬಾಹ್ಯಾಕಾಶದಲ್ಲಿ ಮಾನವ ಸಂತಾನೋತ್ಪತ್ತಿಯ ಬಗ್ಗೆಯೂ ಸಾಕಷ್ಟು ಪ್ರಶ್ನೆಗಳು ಹುಟ್ಟಿಕೊಂಡಿವೆ.

ಮಂಗಳ ಗ್ರಹ ಸೂರ್ಯನ ಸುತ್ತ ಒಂದು ಸುತ್ತು ಸುತ್ತಲೂ 687 ದಿನಗಳನ್ನು ತೆಗೆದುಕೊಳ್ಳುತ್ತದೆ. ಮಂಗಳನ ಒಂದು ಸುತ್ತಿನ ಪ್ರವಾಸವೂ ಗರ್ಭಧಾರಣೆಯ ಸಂಪೂರ್ಣ ಅವಧಿಯನ್ನು ವ್ಯಾಪಿಸಬಹುದು. ಹೀಗಾಗಿ ಬಾಹ್ಯಾಕಾಶದಲ್ಲಿ ಗರ್ಭಧಾರಣೆಯ ಕಾರ್ಯಸಾಧ್ಯತೆ ಮತ್ತು ಸುರಕ್ಷಿತ ಹೆರಿಗೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.

ಸೈನ್ಸ್ ಅಲರ್ಟ್ ಪ್ರಕಾರ, ಸೂಕ್ಷ್ಮ ಗುರುತ್ವಾಕರ್ಷಣೆಯಿಂದಾಗಿ ಬಾಹ್ಯಾಕಾಶದಲ್ಲಿ ಗರ್ಭಧಾರಣೆಯು ದೈಹಿಕವಾಗಿ ಸವಾಲಿನದ್ದಾಗಿರಬಹುದು ಆದರೆ, ಭ್ರೂಣವನ್ನು ಅಳವಡಿಸಿದ ನಂತರ, ಗರ್ಭಧಾರಣೆಯು ಎಂದಿನಂತೆ ಸಾಮಾನ್ಯವಾಗಿ ಮುಂದುವರಿಯಬಹುದು. ಆದರೆ, ಶೂನ್ಯ ಗುರುತ್ವಾಕರ್ಷಣೆಯ ಪರಿಸರದಲ್ಲಿ ಹೆರಿಗೆ ಮತ್ತು ನವಜಾತ ಶಿಶುವಿನ ಆರೈಕೆ ಹೆಚ್ಚು ಜಟಿಲವಾಗಿರುತ್ತದೆ ಎಂದು ಅಧ್ಯಯನ ಹೇಳಿದೆ.

ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣೆ ಇಲ್ಲದೇ ಇರುವುದರಿಂದ ದ್ರವಗಳು ಮತ್ತು ಜನರು ಅಲ್ಲಿ ತೇಲುತ್ತಾರೆ. ಹೀಗಾಗಿ ಹೆರಿಗೆ ಮತ್ತು ಶಿಶು ಆರೈಕೆಯು ಬಾಹ್ಯಾಕಾಶದಲ್ಲಿ ಅಸ್ತವ್ಯಸ್ತ ಮತ್ತು ಸಂಕೀರ್ಣವಾಗುತ್ತದೆ ಎಂದು ವಿಜ್ಞಾನಿ ಅರುಣ್ ವಿ. ಹೋಲ್ಡನ್ ತಮ್ಮ ಸಂಶೋಧನೆಯಲ್ಲಿ ವಿವರಿಸಿದ್ದಾರೆ. ಗುರುತ್ವಾಕರ್ಷಣೆಯಿಂದಾಗಿ ಭೂಮಿಯ ಮೇಲೆ ಸುಲಭವಾಗಿ ಸಾಧ್ಯವಾಗುವ ಸ್ಥಾನೀಕರಣ ಮತ್ತು ಆಹಾರ ನೀಡುವಂತಹ ಬಹುಮುಖ್ಯ ಕಾರ್ಯಗಳು ಬಾಹ್ಯಾಕಾಶದಲ್ಲಿ ಹೆಚ್ಚು ಕಷ್ಟಕರವಾಗುತ್ತವೆ ಎಂದು ಹೇಳಿದ್ದಾರೆ.

ಕುತೂಹಲಕಾರಿ ಸಂಗತಿ ಏನೆಂದರೆ, ಹೊಟ್ಟೆಯ ಒಳಗೆ ಅಭಿವೃದ್ಧಿ ಹೊಂದುತ್ತಿರುವ ಭ್ರೂಣವು ಈಗಾಗಲೇ ಗರ್ಭಾಶಯದಲ್ಲಿ ಸೂಕ್ಷ್ಮ ಗುರುತ್ವಾಕರ್ಷಣೆಯಂತಹ ವಾತಾವರಣವನ್ನು ಅನುಭವಿಸುತ್ತಿರುತ್ತದೆ. ಗರ್ಭದ ಒಳಗೆ ತಟಸ್ಥವಾಗಿ ತೇಲುತ್ತಿರುವ ಆಮ್ನಿಯೋಟಿಕ್ ದ್ರವದಲ್ಲಿ ಶಿಶು ತೇಲುತ್ತದೆ. ಈ ಪರಿಸರವು ಬಾಹ್ಯಾಕಾಶದಲ್ಲಿ ತೂಕವಿಲ್ಲದಿರುವಿಕೆಯನ್ನು ಗಗನಯಾತ್ರಿಗಳು ಅನುಭವಿಸುವಂತೆಯೇ ಇರುತ್ತದೆ. ಗಗನಯಾತ್ರಿಗಳು ಸಾಮಾನ್ಯವಾಗಿ ಸೂಕ್ಷ್ಮ ಗುರುತ್ವಾಕರ್ಷಣೆಯನ್ನು ಅನುಕರಿಸಲು ನೀರಿನ ಟ್ಯಾಂಕ್‌ಗಳಲ್ಲಿ ಬಾಹ್ಯಾಕಾಶ ನಡಿಗೆಗಳಿಗೆ ತರಬೇತಿ ನೀಡಲಾಗುತ್ತದೆ. ಇದು ಗರ್ಭಾಶಯದ ತೂಕವಿಲ್ಲದ ಪರಿಸರದ ರೀತಿಯಲ್ಲೇ ಇರುತ್ತದೆ. ಆದಾಗ್ಯೂ, ಇಲ್ಲಿ ಗುರುತ್ವಾಕರ್ಷಣೆ ಒಂದೇ ಸಮಸ್ಯೆಯಲ್ಲ.

ಕಾಸ್ಮಿಕ್​ ಕಿರಣಗಳು

ಭೂಮಿಯ ರಕ್ಷಣಾತ್ಮಕ ವಾತಾವರಣವನ್ನು ಮೀರಿ, ಬಾಹ್ಯಾಕಾಶದಲ್ಲಿರುವ ಕಾಸ್ಮಿಕ್ ಕಿರಣಗಳು ಗಮನಾರ್ಹ ಅಪಾಯವನ್ನುಂಟುಮಾಡುತ್ತವೆ. ಈ ಹೆಚ್ಚಿನ ಶಕ್ತಿಯ ಕಣಗಳು ಮೂಲಭೂತವಾಗಿ ಬರೀ ಪರಮಾಣು ನ್ಯೂಕ್ಲಿಯರ್ಸ್​ಗಳಾಗಿವೆ. ಇವು ಬೆಳಕಿನ ವೇಗದಲ್ಲಿ ಬಾಹ್ಯಾಕಾಶದಲ್ಲಿ ಓಡುತ್ತವೆ. ಪ್ರೋಟಾನ್‌ಗಳು ಮತ್ತು ನ್ಯೂಟ್ರಾನ್‌ಗಳಿಂದ ಕೂಡಿದ್ದು, ಇವು ನಂಬಲಾಗದಷ್ಟು ದಟ್ಟವಾಗಿರುತ್ತವೆ ಮತ್ತು ಮಾನವ ದೇಹಕ್ಕೆ ಡಿಕ್ಕಿ ಹೊಡೆದರೆ ತೀವ್ರ ಜೀವಕೋಶಗಳಿಗೆ ಹಾನಿಯನ್ನುಂಟುಮಾಡಬಹುದು. ಈ ಅಪಾಯವು ವಿಶೇಷವಾಗಿ ಆಳವಾದ ಬಾಹ್ಯಾಕಾಶ ಯಾತ್ರೆಗಳಿಗೆ ಭಾರೀ ಸವಾಲಾಗಿದೆ. ಬಾಹ್ಯಾಕಾಶದಲ್ಲಿ ಕಾಸ್ಮಿಕ್ ಕಿರಣಗಳಿಗೆ ಒಡ್ಡಿಕೊಳ್ಳುವುದರಿಂದ ತಾಯಿ ಮತ್ತು ಭ್ರೂಣ ಎರಡರ ಮೇಲೂ ಶಾಶ್ವತ ಪರಿಣಾಮ ಬೀರುತ್ತದೆ.

ಭೂಮಿಯ ಮೇಲೆ, ನಾವು ನಮ್ಮ ವಾತಾವರಣ ಮತ್ತು ಕಾಂತೀಯ ಕ್ಷೇತ್ರದಿಂದ ಅಥವಾ ಮ್ಯಾಗ್ನಟಿಕ್​ ಶಿಲ್ಡ್​ನಿಂದ ಹೆಚ್ಚಿನ ಕಾಸ್ಮಿಕ್ ವಿಕಿರಣಗಳಿಂದ ರಕ್ಷಿಸಲ್ಪಟ್ಟಿದ್ದೇವೆ. ಇದು ದಿನದ ಸಮಯವನ್ನು ಅವಲಂಬಿಸಿ ಹತ್ತಾರು ಸಾವಿರದಿಂದ ಲಕ್ಷಾಂತರ ಮೈಲುಗಳಷ್ಟು ರಕ್ಷಣೆ ನೀಡುತ್ತದೆ. ಆದಾಗ್ಯೂ, ಬಾಹ್ಯಾಕಾಶದಲ್ಲಿ, ಈ ರಕ್ಷಣೆ ಕಣ್ಮರೆಯಾಗುತ್ತದೆ. ಅಲ್ಲಿ ಕಾಸ್ಮಿಕ್​ ಕಿರಣಗಳನ್ನು ತಡೆಯುವ ಯಾವುದೇ ಶಕ್ತಿ ಇಲ್ಲ. ಕಾಸ್ಮಿಕ್ ಕಿರಣಗಳು ಮಾನವ ದೇಹವನ್ನು ಸಂಪರ್ಕಿಸಿದಾಗ ಅವು ಹೆಚ್ಚು ಹಾನಿಯನ್ನುಂಟುಮಾಡಬಹುದು. ಪ್ರತ್ಯೇಕ ಜೀವಕೋಶಗಳು ಅಥವಾ ದೇಹದ ಸೆಲ್ಯುಲಾರ್ ಘಟಕಗಳನ್ನೇ ನಾಶಮಾಡಬಹುದು ಮತ್ತು ಸುತ್ತಮುತ್ತಲಿನ ಅಂಗಾಂಶಗಳನ್ನು ಹಾಗೆಯೇ ಬಿಡಬಹುದು. ಒಂದು ಕಾಸ್ಮಿಕ್​ ಕಿರಣವೇನಾದರೂ ಡಿಎನ್‌ಎಗೆ ತಗುಲಿದರೆ, ಅದು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುವ ರೂಪಾಂತರಗಳಿಗೆ ಕಾರಣವಾಗಬಹುದು. ಜೀವಕೋಶಗಳು ಬದುಕುಳಿದಿದ್ದರೂ ಸಹ, ವಿಕಿರಣವು ಉರಿಯೂತದ ಪ್ರತಿಕ್ರಿಯೆಯನ್ನು ಪ್ರಚೋದಿಸುತ್ತದೆ. ಇದರಿಂದಾಗಿ ಪ್ರತಿರಕ್ಷಣಾ ವ್ಯವಸ್ಥೆ ಅತಿಯಾಗಿ ಪ್ರತಿಕ್ರಿಯಿಸುತ್ತದೆ ಮತ್ತು ಆರೋಗ್ಯಕರ ಅಂಗಾಂಶಗಳನ್ನು ಹಾನಿಗೊಳಿಸುವ ಮತ್ತು ಅಂಗಗಳ ಕಾರ್ಯವನ್ನು ಅಡ್ಡಿಪಡಿಸುವ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತದೆ.

ಗರ್ಭಾವಸ್ಥೆಯ ಆರಂಭಿಕ ವಾರಗಳಲ್ಲಿ, ಭ್ರೂಣದ ಜೀವಕೋಶಗಳು ತ್ವರಿತ ವಿಭಜನೆ, ವಲಸೆ ಮತ್ತು ಅಂಗಾಂಶ ರಚನೆಗೆ ಒಳಗಾಗುತ್ತವೆ. ಇದು ಬೆಳವಣಿಗೆಗೆ ನಿರ್ಣಾಯಕ ಅವಧಿಯಾಗಿದೆ. ಫಲೀಕರಣದ ನಂತರದ ಮೊದಲ ತಿಂಗಳು ವಿಶೇಷವಾಗಿ ದುರ್ಬಲವಾಗಿರುತ್ತದೆ. ಈ ಸಮಯದಲ್ಲಿ ಒಂದೇ ಒಂದು ಹೆಚ್ಚಿನ ಶಕ್ತಿಯ ಕಾಸ್ಮಿಕ್ ಕಿರಣವು ಭ್ರೂಣಕ್ಕೆ ಅಪಾಯಕಾರಿಯಾಗಬಹುದು. ಆದಾಗ್ಯೂ, ಭ್ರೂಣದ ಸಣ್ಣ ಗಾತ್ರವನ್ನು ನೋಡಿದರೆ, ಕಾಸ್ಮಿಕ್​ ಕಿರಣದ ನೇರ ಹೊಡೆತವು ಅಸಂಭವವಾಗಿದೆ. ಒಂದು ವೇಳೆ ಅಂತಹ ಘಟನೆ ಸಂಭವಿಸಿದಲ್ಲಿ, ಅದು ಗಮನಕ್ಕೆ ಬಾರದೇ ಗರ್ಭಪಾತಕ್ಕೆ ಕಾರಣವಾಗಬಹುದು.

ಇನ್ನು ಗರ್ಭಾವಸ್ಥೆ ಮುಂದುವರೆದಂತೆ, ಕಾಸ್ಮಿಕ್ ವಿಕಿರಣಕ್ಕೆ ಸಂಬಂಧಿಸಿದ ಅಪಾಯಗಳು ಕೂಡ ಬದಲಾಗುತ್ತವೆ. ಮೊದಲ ತ್ರೈಮಾಸಿಕ ಅಥವಾ ಮೂರು ತಿಂಗಳ ಅಂತ್ಯದ ವೇಳೆಗೆ ಜರಾಯು ಪರಿಚಲನೆ ಸಂಪೂರ್ಣವಾಗಿ ರೂಪುಗೊಂಡ ನಂತರ, ಭ್ರೂಣ ಮತ್ತು ಗರ್ಭಾಶಯವು ವೇಗವಾಗಿ ಬೆಳೆಯುತ್ತದೆ. ಯಾವಾಗ ಭ್ರೂಣ ದೊಡ್ಡದಾಗುತ್ತದೋ ಆಗ ಕಾಸ್ಮಿಕ್ ಕಿರಣಗಳಿಗೆ ದೊಡ್ಡ ಗುರಿಯನ್ನು ನೀಡುತ್ತದೆ. ಗರ್ಭಾಶಯದ ಸ್ನಾಯುಗಳಿಗೆ ಕಾಸ್ಮಿಕ್​ ಕಿರಣಗಳ ಹೊಡೆತವು ಸಂಕೋಚನಗಳನ್ನು ಪ್ರಚೋದಿಸಬಹುದು ಮತ್ತು ಅಕಾಲಿಕ ಹೆರಿಗೆಗೆ ಕಾರಣವಾಗಬಹುದು.

ಇದಲ್ಲದೆ, ಬಾಹ್ಯಾಕಾಶದಲ್ಲಿ ಜನಿಸಿದ ಮಗು ಸೂಕ್ಷ್ಮ ಗುರುತ್ವಾಕರ್ಷಣೆಯಿಂದಾಗಿ ವಿಶಿಷ್ಟ ಬೆಳವಣಿಗೆಯ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಗುರುತ್ವಾಕರ್ಷಣೆಯ ಅನುಪಸ್ಥಿತಿಯು ಭಂಗಿ ಮತ್ತು ಸಮನ್ವಯದ ಬೆಳವಣಿಗೆಗೆ ಅಡ್ಡಿಪಡಿಸಬಹುದು. ಅಂದರೆ, ತಲೆ ಎತ್ತುವುದು, ಕುಳಿತುಕೊಳ್ಳುವುದು, ತೆವಳುವುದು ಮತ್ತು ನಡೆಯುವಂತಹ ಅಗತ್ಯ ಕೌಶಲ್ಯಗಳನ್ನು ಕಲಿಯುವ ಮಗುವಿನ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಕಾಸ್ಮಿಕ್ ವಿಕಿರಣಕ್ಕೆ ಸಂಬಂಧಿಸಿದ ಅಪಾಯಗಳು ಜನನದ ನಂತರವೂ ಇರುತ್ತವೆ. ಏಕೆಂದರೆ, ಮಗುವಿನ ಮೆದುಳು ಬೆಳವಣಿಗೆಯನ್ನು ಮುಂದುವರಿಸುತ್ತದೆ. ಕಾಸ್ಮಿಕ್ ಕಿರಣಗಳಿಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಶಾಶ್ವತ ಹಾನಿ ಉಂಟಾಗಬಹುದು, ಇದು ಅರಿವು, ಸ್ಮರಣಶಕ್ತಿ, ನಡವಳಿಕೆ ಮತ್ತು ದೀರ್ಘಕಾಲೀನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ, ಮಗು ಬಾಹ್ಯಾಕಾಶದಲ್ಲಿ ಜನಿಸುವುದು ಸೈದ್ಧಾಂತಿಕವಾಗಿ ಸಾಧ್ಯವಾದರೂ, ಜಯಿಸಬೇಕಾದ ಹಲವು ಸವಾಲುಗಳಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net