ಬರದಿಂದ ನೊಂದವರಿಗೆ ರಾಜ್ಯ ಸರ್ಕಾರ ಏನು ಮಾಡಿದೆ?

HD Kumaraswamy
Published on

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಬರದಿಂದ ನೊಂದಿರುವ ಜನರಿಗೆ ಏನು ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಾಸ್ವಾಮಿ ಪ್ರಶ್ನಿಸಿದ್ದಾರೆ.

ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರ ಸರ್ಕಾರ 3,454 ಕೋಟಿ ರೂ. ಪರಿಹಾರ ನೀಡಿದೆ. ಕಡಿಮೆ ಬಂದಿದೆ ಎಂದರೆ ಕೇಳಲಿ, ಅದು ಬಿಟ್ಟು ರಾಜಕೀಯ ಮಾಡಿಕೊಂಡಿದ್ದರೆ ಉಪಯೋಗವೇನು? ಎಂದರು.

ಹಣ ಬಿಡುಗಡೆ ಮಾಡುವಾಗ ಎಲ್ಲ ಅಂಶಗಳನ್ನು ಕೇಂದ್ರ ಸರ್ಕಾರ ಪರಿಗಣನೆಗೆ ತೆಗೆದುಕೊಂಡಿರುತ್ತದೆ. ಹಣ ಸಾಕಾಗಲಿಲ್ಲ ಎಂದರೆ ಇವರು ಕೇಳಿದಷ್ಟು ಹಣ ಕೊಡಲು ಸಾಧ್ಯವೇ? ಒಕ್ಕೂಟ ವ್ಯವಸ್ಥೆ ಎನ್ನುವುದು ಇದೆಯಲ್ಲ. 15ನೇ ಹಣಕಾಸಿನ ಆಯೋಗದ ಶಿಫಾರಸಿನ ಹಿನ್ನೆಲೆಯಲ್ಲಿ ಹಣ ಬರುತ್ತದೆ. ರಾಜ್ಯದಲ್ಲಿ ತೀವ್ರ ಬರವಿದೆ, ಅದಕ್ಕೆ ರಾಜ್ಯ ಸರ್ಕಾರ ಏನು ಮಾಡಿದೆ? 2000 ರೂ. ಯಾರಿಗೆ ಕೊಟ್ಟಿದ್ದಾರೆೆ? ಎಷ್ಟು ಜನಕ್ಕೆ ಹಣ ತಲುಪಿದೆ? ಆ 2000 ರೂ.ನಲ್ಲಿ ಕೇಂದ್ರ ಸರ್ಕಾರದ ಹಣ ಸೇರಿದೆ. ಅದನ್ನು ಈ ಸರ್ಕಾರ ಹೇಳಬೇಕಲ್ಲವೇ? ಎಂದು ಕೇಳಿದರು.

ರಾಜ್ಯ ಬರ ಪರಿಹಾರ ನಿಧಿಯಿಂದ ಎಷ್ಟು ಹಣ ಕೊಟ್ಟಿದ್ದಾರೆ? ರೈತರು 2000ರೂ. ಬಂದಿಲ್ಲ ಎಂದು ಹಿಡಿಶಾಪ ಹಾಕುತ್ತಿದ್ದಾರೆ. ಬರ ನಿರ್ವಹಣೆಯಲ್ಲಿ ಇವರು ಸಂಪೂರ್ಣ ವಿಫಲರಾಗಿದ್ದಾರೆ. ತಮ್ಮ ತಪ್ಪು ಮುಚ್ಚಿಟ್ಟುಕೊಳ್ಳಲು ರಾಜ್ಯ ಸರ್ಕಾರ ಸದಾ ಕೇಂದ್ರ ಸರ್ಕಾರದ ಮೇಲೆ ಮೇಲೆ ಟೀಕೆ ಮಾಡುತ್ತಿದೆ ಎಂದು ಕುಮಾರಸ್ವಾಮಿ ಕಿಡಿಕಾರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net