

ಕೋಲಾರ: ಶಾಸಕರ ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಜಾಗ ಒತ್ತುವರಿ ತೆರವು ಹಾಗೂ ಶ್ರೀನಿವಾಸಪುರ ರೈತರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ವಿಧಾನಸೌಧ ಚಲೋ ನಡೆಸಲಾಗುವುದು ಎಂದು ಸಂಸದ ಎಸ್.ಮುನಿಸ್ವಾಮಿ ಎಚ್ಚರಿಕೆ ನೀಡಿದರು.
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಸೋಮವಾರ ನಡೆದ ಜನತಾ ದರ್ಶನ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಅವರು ಭೂಗಳ್ಳರನ್ನು ವೇದಿಕೆಯಲ್ಲಿ ಕೂರಿಸಿಕೊಂಡು ನಡೆಸಿದ್ದು ಜನತಾ ದರ್ಶನವಲ್ಲ, ಅದು ಕಾಂಗ್ರೆಸ್ ದರ್ಶನ ಎಂದು ಲೇವಡಿ ಮಾಡಿದರು.
ವೇದಿಕೆ ಮೇಲೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೆಸರು ಪ್ರಸ್ತಾಪಿಸಿಲ್ಲ, ಆದರೆ ಇದ್ದಕ್ಕಿದ್ದಂತೆ ಅವಾಚ್ಯಪದಗಳೊಂದಿಗೆ ವಾಗ್ವಾದಕ್ಕೆ ನಿಂತಿದ್ದು ಕಂಡಾಗ ‘ಕುಂಬಳ ಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಂಡು ನೋಡಿಕೊಂಡರಂತೆ’ ಎಂಬಂತಾಗಿದೆ ಎಂದು ವ್ಯಂಗ್ಯವಾಡಿದರು.
60 ವರ್ಷಗಳಿಂದ ಸಾಗುವಳಿ ಚೀಟಿ, ಪಹಣಿ, ಮ್ಯೂಟೇಷನ್ ಪಡೆದಿದ್ದ ಶ್ರೀನಿವಾಸಪುರ ರೈತರ ಒತ್ತುವರಿ ತೆರವು ಮಾಡಿ ಅನ್ನದಾತರ ಮೇಲೆ ಸರ್ಕಾರ ದಬ್ಬಾಳಿಕೆ ಮಾಡಿದೆ. ಶಾಸಕ ಎಸ್.ಎನ್.ನಾರಾಯಣಸ್ವಾಮಿ ಒತ್ತುವರಿ ಮಾಡಿಕೊಂಡಿರುವ ಗುಂಡುತೋಪು, ಸರ್ಕಾರಿ ಜಮೀನು, ಕೆರೆ ಕಬಳಿಕೆ ಕಾಣಿಸಲಿಲ್ಲವೇ ಎಂದು ಪ್ರಶ್ನಿಸಿದರು.
ಶ್ರೀನಿವಾಸಪುರದಲ್ಲಿ ಅರಣ್ಯ ಭೂಮಿ ಒತ್ತುವರಿ ನೆಪದಲ್ಲಿ ರೈತರ ಮಾವು ಸೇರಿದಂತೆ ವಿವಿಧ ಬೆಳೆಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ನಾಶಪಡಿಸಿ ಒತ್ತುವರಿ ತೆರವುಗೊಳಿಸಿದ್ದಾರೆ. ಈ ರೈತ ವಿರೋಧ ನೀತಿಯ ವಿರುದ್ಧ ನಿರಂತರ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಜನಪ್ರತಿನಿಧಿಗಳಿಗೊಂದು ನೀತಿ ಬಡ ರೈತರಿಗೊಂದು ನೀತಿ ಇರಬಾರದು. ನೂರಾರು ಎಕರೆ ಒತ್ತುವರಿ ಮಾಡಿಕೊಂಡಿರುವ ಭೂಗಳ್ಳರನ್ನು ವೇದಿಕೆಯಲ್ಲಿ ಕೂರಿಸಿಕೊಂಡು ಯಾವ ಪುರುಷಾರ್ಥಕ್ಕಾಗಿ ಜನತಾ ದರ್ಶನ ನಡೆಸಿದ್ದಾರೆ. ಇದರಿಂದಾಗಿ ಯಾರಿಗೆ ಅನುಕೂಲವಾಗಿದೆ, ವೇದಿಕೆಯ ಮುಂಭಾಗ ಕುಳಿತಿದ್ದು ಎಲ್ಲಾ ಅಧಿಕಾರಿಗಳೇ ಎಂದು ಆಕ್ರೋಶವ್ಯಕ್ತಪಡಿಸಿದರು.