ಮೋದಿಯವರು ಯಾವ ಮುಖ ಇಟ್ಕೊಂಡು ಮೈಸೂರಿಗೆ ಬರ್ತಾರೆ? ಸಿಎಂ ಸಿದ್ದರಾಮಯ್ಯ ಪ್ರಶ್ನೆ

cmk
Published on

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆ ಚುನಾವಣಾ ಪ್ರಚಾರಕ್ಕೆ ಭಾನುವಾರ (ಏ.14) ರಂದು ರಾಜ್ಯಕ್ಕೆ ಬರುತ್ತಿದ್ದು ಮೈಸೂರು ಅಭಿವೃದ್ಧಿಗೆ ಅವರ ಕೊಡುಗೆ ಏನು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕೃಷ್ಣರಾಜದಲ್ಲಿ ನಡೆದ ಜನಧ್ವನಿ-2 ಯಾತ್ರೆಯ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾನುವಾರ ಮೈಸೂರಿಗೆ ಬರುತ್ತಿರುವ ಮೋದಿ ಅವರು ಯಾವ ಮುಖ ಇಟ್ಟುಕೊಂಡು ಮತ ಕೇಳ್ತಾರೆ. ಮೋದಿಯವರಾಗಲೀ, ಬಿಜೆಪಿ ಸಂಸದರಾಗಲೀ ಮೈಸೂರಿಗೆ ಏನು ಕೆಲಸ ಮಾಡಿದ್ದಾರೆ ತೋರಿಸಲಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಬರೀ ಸುಳ್ಳುಗಳ ಸವಾರಿ ಮಾಡಿಕೊಂಡು 10 ವರ್ಷ ಮುಗಿಸಿದ್ರು, ಹೀಗಿದ್ದಾಗ ಮೋದಿ ಅವರು ಯಾವ ಮುಖ ಹೊತ್ಕೊಂಡು ರಾಜ್ಯಕ್ಕೆ ಬರ್ತಾರೆ ಯಾವ ಮುಖ ಹೊತ್ತಕೊಂಡು ಮತ ಕೇಳುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಅವಕಾಶ ಸಿಕ್ಕಾಗ ಬಿಜೆಪಿ ಸಂಸದರು ಕೆಲಸ ಮಾಡಲಿಲ್ಲ: ಮೈಸೂರಿನಲ್ಲಿ ಜಯದೇವ ಆಸ್ಪತ್ರೆ ಮಾಡಿದವರು ಯಾರು? ಮಹಿಳೆಯರು-ಮಕ್ಕಳ ಆಸ್ಪತ್ರೆ ಮಾಡಿದವರು ಯಾರು? ಶಾಲೆ-ಹಾಸ್ಟೆಲ್‌ಗಳನ್ನು ಮಾಡಿದವರು ಯಾರು? ಮೈಸೂರಿನ ಅಭಿವೃದ್ಧಿಗೆ ಸಾವಿರಾರು ಕೋಟಿ ಹಣ ಕೊಟ್ಟ ಸರ್ಕಾರ ಯಾವುದು ಎನ್ನುವುದು ಮೈಸೂರಿನ ಪ್ರತಿ ಪ್ರಜ್ಞಾವಂತರಿಗೂ ಗೊತ್ತು. ನಾವು ಮಾಡಿದಷ್ಟು ಕೆಲಸವನ್ನು ಮಾಡಲು ಬಿಜೆಪಿಗೂ ಅವಕಾಶ ಇತ್ತು. ಜನ ಅವಕಾಶ ಕೊಟ್ಟಿದ್ದರು. ಆದರೆ ಈ ಅವಕಾಶ ಸಿಕ್ಕಾಗ ಬಿಜೆಪಿ ಸಂಸದರು ಕೆಲಸ ಮಾಡಲಿಲ್ಲ. ಹೀಗಾಗಿ ನುಡಿದಂತೆ ನಡೆದು ಅಭಿವೃದ್ಧಿಯ ದಿಕ್ಕಲ್ಲಿ ಮುನ್ನುಗ್ಗುತ್ತಿರುವ ನಮಗೆ ಅವಕಾಶ ಕೊಡಿ. ಸಾಮಾನ್ಯ ಕಾರ್ಯಕರ್ತರಾಗಿ ಹೋರಾಟ, ಪ್ರತಿಭಟನೆಗಳಿಂದ ಬೆಳೆದ ಎಂ.ಲಕ್ಷ್ಮಣ್ ಅವರನ್ನು ಈ ಬಾರಿ ಗೆಲ್ಲಿಸಿ ಎಂದು ಮನವಿ ಮಾಡುತ್ತೇನೆ ಎಂದರು.

ಬಿಜೆಪಿಗೆ ಮೈಸೂರು-ಕೊಡಗಿನ ಜನತೆ ಅವಕಾಶ ಕೊಟ್ಟಾಗ ಬಿಜೆಪಿ ಸಂಸದರು, ಶಾಸಕರು, ಮುಖ್ಯಮಂತ್ರಿಗಳು, ಪ್ರಧಾನಮಂತ್ರಿಗಳು ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡಲಿಲ್ಲ. ಈಗ ಕೇವಲ ಅಭ್ಯರ್ಥಿಯನ್ನು ಬದಲಾಯಿಸಿ ಮತ ಕೇಳುತ್ತಿದ್ದಾರೆ. ಇದು ಹೊಣೆಗೇಡಿತನ ಅಲ್ಲವೇ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಬಡವರ, ದುಡಿಯವ ವರ್ಗಗಳ, ಮಹಿಳೆಯರ ಪರವಾಗಿ ಮಾಡಿದ ಒಂದೇ ಒಂದು ಕೆಲಸ ಯಾರಿಗಾದರೂ ಗೊತ್ತಾ? ಕೇವಲ ಸುಳ್ಳುಗಳನ್ನು ಸೃಷ್ಟಿಸಿ, ಭಾವನಾತ್ಮಕವಾಗಿ ಕೆರಳಿಸುವವರಿಗೆ ಮತ ಹಾಕಿದರೆ ನೀವು ಮೋಸಹೋದಂತೆ ಅಲ್ಲವೇ ಎಂದು ಹೇಳಿದ್ದಾರೆ.

ದೇಶದ ಅಭಿವೃದ್ಧಿಗೆ ಅಡಿಪಾಯ ಹಾಕಿದ್ದು ಕಾಂಗ್ರೆಸ್: ಸ್ವಾತಂತ್ರ್ಯ ನಂತರ ದೇಶದ ಅಭಿವೃದ್ಧಿಗೆ ಅಡಿಪಾಯ ಹಾಕಿದ್ದು ಕಾಂಗ್ರೆಸ್. ಬಡತನ ನಿರ್ಮೂಲನೆಗೆ ಇಂದಿರಾಗಾಂಧಿ ಅವರು 20 ಅಂಶಗಳ ಕಾರ್ಯಕ್ರಮಗಳನ್ನು ರೂಪಿಸಿ ಜಾರಿ ಮಾಡಿದರು. ಕೇವಲ ಶ್ರೀಮಂತರಿಗಾಗಿ ಕೆಲಸ ಮಾಡಿದ ಪ್ರಧಾನಿ ಮೋದಿ ಅವರು ಅದೇ ರೀತಿ ಬಡವರಿಗಾಗಿ, ಬಡತನ ಹೋಗಲಾಡಿಸಲು ಒಂದಂಶದ ಕಾರ್ಯಕ್ರಮವನ್ನೂ ಏಕೆ ಕೊಡಲಿಲ್ಲ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net