ಜೆಡಿಎಸ್ ಜತೆಗೆ ಬಿಜೆಪಿ ಮೈತ್ರಿ ಬಗ್ಗೆ ಮಾಜಿ ಸಿಎಂ ಬೊಮ್ಮಾಯಿ ಹೇಳಿದ್ದೇನು ?

basavaraj bommai
Published on

ಬೆಂಗಳೂರು: ಎನ್ ಡಿಎ ಒಕ್ಕೂಟಕ್ಕೆ ಜೆಡಿಎಸ್ ಸೇರ್ಪಡೆ ಬಗ್ಗೆ ಬಿಜೆಪಿ ವರಿಷ್ಠರಮಟ್ಟದಲ್ಲಿ ಮಾತುಕತೆಯಾಗಿ ಸಹಮತ‌ ಮೂಡಿದೆ. ಆದರೆ, ರಾಜ್ಯದಲ್ಲಿ ಜೆಡಿಎಸ್ ಪಕ್ಷದ ಜತೆ ಮೈತ್ರಿ ಚರ್ಚೆ ಪ್ರಕ್ರಿಯೆ ಇನ್ನಷ್ಟೇ ಆರಂಭವಾಗಬೇಕಾಗಿದೆ. ರಾಜ್ಯದ ಯಾವುದೇ ನಾಯಕರನ್ನು ಕಡೆಗಣಿಸುವ ಪ್ರಶ್ನೆಯೇ ಉದ್ಭವಿಸದು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತಳ್ಳಿ ಹಾಕಿದರು.

ಆರ್ ಟಿ ನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡುವಾಗ ಜೆಡಿಎಸ್ ಪಕ್ಷದ ಜತೆಗೆ ಮೈತ್ರಿ ಬಗ್ಗೆ ಪಕ್ಷದೊಳಗೆ ನಿಧಾನವಾಗಿ ವಿರೋಧ ಹೆಚ್ಚುತ್ತಿರುವ ಬಗ್ಗೆ ಉತ್ತರಿಸಿದ ಅವರು, ಸೀಟುಗಳ ಹೊಂದಾಣಿಕೆ ಹಾಗೂ ಕ್ಷೇತ್ರಗಳ ಹಂಚಿಕೆ ಮಾತುಕತೆ ಸಂದರ್ಭದಲ್ಲಿ ರಾಜ್ಯದ ಎಲ್ಲ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು ಎಂದು ವರಿಷ್ಠರು ಹೇಳಿದ್ದು, ಯಾರೊಬ್ಬರಿಗೂ ಆತಂಕ, ಚಿಂತೆ ಬೇಡವೆಂದು ಅಭಯ ನೀಡಿದರು.

ಕಠಿಣ ಕ್ರಮ ಅಗತ್ಯ

ರಾಜ್ಯದಲ್ಲಿ ಕೇವಲ ಒಂದೂವರೆ ತಿಂಗಳ ಅಂತರದಲ್ಲಿ ಎರಡನೇ ಪಟಾಕಿ ದುರಂತ ಘಟಿಸಿದೆ. ಹಾವೇರಿ ಪಟಾಕಿ ದುರ್ಘಟನೆಯಲ್ಲಿ ನಾಲ್ವರು ಬಲಿಯಾಗಿದ್ದರು. ಇದೀಗ ಆನೇಕಲ್ ನಲ್ಲಿ ಸಂಭವಿಸಿದ ಪಟಾಕಿ ದುರಂತದಲ್ಲಿ 14 ಜನರು ಬಲಿಯಾಗಿದ್ದಾರೆ. ಸರ್ಕಾರ ತುರ್ತಾಗಿ ಸ್ಪಂದಿಸಿ ಪರಿಹಾರವನ್ನು ಘೋಷಿಸಿದೆ. ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ವಿತರಿಸಿ, ಗಾಯಾಳುಗಳಿಗೆ ಅಗತ್ಯ ಚಿಕಿತ್ಸಾ ವ್ಯವಸ್ಥೆ ಮಾಡಬೇಕು ಎಂದು ಬೊಮ್ಮಾಯಿ ಒತ್ತಾಯಿಸಿದರು.

ಕಾನೂನು ಪ್ರಕಾರ ಈ ರೀತಿ ದೊಡ್ಡ ಪ್ರಮಾಣದಲ್ಲಿ ಪಟಾಕಿ ದಾಸ್ತಾನಿಗೆ ಅವಕಾಶವಿಲ್ಲ. ಅಧಿಕಾರಿಗಳ‌ ದಿವ್ಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ದಾಸ್ತಾನುದಾರರ ಜತೆಗೆ ಹೊಂದಾಣಿಕೆ ಮಾಡಿಕೊಂಡು ಪಟಾಕಿ ಶೇಖರಿಸಲು ಅವಕಾಶ ಮಾಡಿಕೊಟ್ಟಂತಿದೆ. ಘಟನೆಗೆ ಸಂಬಂಧಿಸಿದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಿ ಕಠಿಣ ಕ್ರಮವಹಿಸಿದರೆ ಉಳಿದವರಿಗೂ ಎಚ್ಚರಿಕೆ ಸಂದೇಶ ನೀಡಿದಂತಾಗುತ್ತದೆ ಎಂದರು.

ಕಳವಳಕಾರಿ ಬೆಳವಣಿಗೆ

ಜಾಗತಿಕವಾಗಿ ಶಾಂತಿ, ಸೌಹಾರ್ದತೆ ಸ್ಥಾಪಿಸುವ ಪ್ರಯತ್ನ ನಡೆದಿರುವ ಮಧ್ಯೆಯೇ ಇಸ್ರೇಲ್ ಮೇಲೆ ಪ್ಯಾಲಿಸ್ತೇನ್ ನ ಹಮಾಸ್ ಉಗ್ರರು ದಾಳಿ ಮಾಡಿರುವುದು, ಪ್ರತಿಯಾಗಿ ಇಸ್ರೇಲ್ ಕಾರ್ಯಾಚರಣೆಗೆ ಇಳಿದಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ.

ಅಮಾಯಕರ ಮೇಲೆ ಹಮಾಸ್ ಉಗ್ರರು ದಾಳಿ ಮಾಡಿ ವಿಕೃತಿ ಮೆರೆದಿರುವುದು ಖಂಡನೀಯ. ವಿಶ್ವ ನಾಯಕರು ಮಧ್ಯೆಪ್ರವೇಶಿಸಿ ಶಾಂತಿ ನೆಲೆಗೊಳಿಸಬೇಕು. ಆರ್ಥಿಕ, ಉದ್ಯಮ- ವ್ಯವಹಾರ ಚಟುವಟಿಗಳಿಗೆ ಮಧ್ಯೆ ಏಷ್ಯಾ ಕೇಂದ್ರಬಿಂದುವಾಗಿದೆ. ಲಕ್ಷಾಂತರ ಭಾರತೀಯರು ಕೆಲಸ ಮಾಡುತ್ತಿದ್ದಾರೆ. ಜಾಗತಿಕ ಹಿತದೃಷ್ಟಿಯಿಂದ ತ್ವೇಷ ಶಮನ ತುರ್ತು ಅಗತ್ಯವಾಗಿದೆ ಎಂದ ಮಾಜಿ ಸಿಎಂ ಬೊಮ್ಮಾಯಿ ಪ್ರತಿಪಾದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net