

ಮುಂಬೈ: ಬಾಲಿವುಡ್ ಕಿಂಗ್ ಖಾನ್ ಮತ್ತು ನಿರ್ದೇಶಕ ಅಟ್ಲೀ ಕುಮಾರ್ ಕಾಂಬಿನೇಷನ್ನಲ್ಲಿ ತೆರೆಗೆ ಅಪ್ಪಳಿಸಿದ 'ಜವಾನ್', ಜಾಗತಿಕ ಬಾಕ್ಸ್ ಆಫೀಸ್ನಲ್ಲಿ ನಿರೀಕ್ಷಿಸಿದಂತೆ ಉತ್ತಮ ಕಲೆಕ್ಷನ್ ಮಾಡಿದೆ. ಇದರೊಟ್ಟಿಗೆ ಚಿತ್ರಮಂದಿರಗಳಲ್ಲಿ ಹೆಚ್ಚಿನ ಪ್ರದರ್ಶನ ಕಾಣುತ್ತಿದ್ದು, ಸಿನಿಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಈ ಮಧ್ಯೆ ಕೇಳಿಬಂದ 'ಜವಾನ್ 2' ಬಗ್ಗೆ ಚಿತ್ರದ ನಿರ್ದೇಶಕರು ಇದೀಗ ಕುತೂಹಲದ ಸಂಗತಿಯೊಂದನ್ನು ಬಹಿರಂಗಪಡಿಸಿದ್ದಾರೆ.
'ಜವಾನ್' ನಿರ್ದೇಶನದ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟ ನಿರ್ದೇಶಕ ಅಟ್ಲೀ, ಸಿನಿಮಾ ತೆರೆ ಕಂಡ ನಂತರ ಶಾರೂಖ್ ಖಾನ್ ಅಭಿಮಾನಿಗಳ ಭಾರೀ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಜವಾನ್ ಸಿನಿಮಾಗೆ ಸೀಕ್ವೆಲ್ ಇರಲಿದೆಯೇ, 'ಜವಾನ್ 2' ಬರಲಿದೆಯೇ ಎಂಬ ಒಂದಷ್ಟು ಪ್ರಶ್ನೆಗಳನ್ನು ಶಾರೂಖ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದರು. ಇದಕ್ಕೆ ನಿರ್ದೇಶಕರಿಂದ ಇದೀಗ ಉತ್ತರವೊಂದು ಲಭಿಸಿದೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಸಿನಿಮಾದ ಬಗ್ಗೆ ಮಾತನಾಡಿದ ಅಟ್ಲಿ, "ಜವಾನ್ ಸೀಕ್ವೆಲ್ ಮಾಡಲು ಯೋಜಿಸುತ್ತಿದ್ದೇನೆ. ಶಾರುಖ್ ಖಾನ್ ಅಭಿನಯದ ವಿಕ್ರಮ್ ರಾಥೋಡ್ ಪಾತ್ರದ ಮೇಲೆ ಹೆಚ್ಚು ಒತ್ತು ಕೊಡಲಾಗುವುದು" ಎಂದು ಹೇಳಿದರು. ಇದರೊಟ್ಟಿಗೆ ಶಾರೂಖ್ ಮತ್ತು ವಿಜಯ್ ಅವರನ್ನು ಒಳಗೊಂಡ ಸಿನಿಮಾವೊಂದನ್ನು ತೆರೆಯ ಮೇಲೆ ತರಲು ಪ್ಲ್ಯಾನ್ ಮಾಡುತ್ತಿದ್ದೇನೆ" ಎಂದು ಕೂಡ ಹೇಳಿದ್ದಾರೆ,(ಏಜೆನ್ಸೀಸ್).