

Skeleton : ಪಶ್ಚಿಮ ಬಂಗಾಳದ ಪೂರ್ವ ಮೇದಿನಿಪುರ ಜಿಲ್ಲೆಯ ಕಾಂಟೈ ಪ್ರದೇಶದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಯುವಕನೊಬ್ಬ, ಮಹಿಳೆಯ ಅಸ್ಥಿಪಂಜರದೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಈ ಘಟನೆ ಸ್ಥಳೀಯ ಪ್ರದೇಶದಲ್ಲಿ ಭಾರಿ ಸಂಚಲನ ಮೂಡಿಸಿದೆ.
ಸ್ಥಳೀಯ ಪ್ರಕಾರ, ಯುವಕನನ್ನು ಪ್ರಭಾಕರ್ ಸಿತ್ ಎಂದು ಗುರುತಿಸಲಾಗಿದೆ. ಏಳು ವರ್ಷಗಳ ಹಿಂದೆ ಕಾಂಟೈ ಪ್ರದೇಶದಲ್ಲಿ ಸ್ಥಳೀಯ ಮಹಿಳೆಯೊಬ್ಬಳನ್ನು ಸಮಾಧಿ ಮಾಡಲಾಗಿತ್ತು. ಇತ್ತೀಚೆಗೆ, ಪ್ರಭಾಕರ್, ಆ ಮಹಿಳೆಯ ಅಸ್ಥಿಪಂಜರವನ್ನು ಸಮಾಧಿಯಿಂದ ಅಗೆದು ಹೊರತೆಗೆದಿದ್ದಾನೆ. ನಂತರ, ಅಸ್ಥಿಪಂಜರದೊಂದಿಗೆ ನಿಂತು ಸೆಲ್ಫಿ ತೆಗೆದುಕೊಂಡಿದ್ದಾನೆ. ಇದನ್ನು ಗಮನಿಸಿದ ಗ್ರಾಮಸ್ಥರು ಒಂದು ಕ್ಷಣ ಆಘಾತಕ್ಕೆ ಒಳಗಾದರು.
ಈ ಅನಿರೀಕ್ಷಿತ ಹಾಗೂ ಆಘಾತಕಾರಿ ಘಟನೆಯ ಬಳಿಕ, ಕೋಪಗೊಂಡ ಗ್ರಾಮಸ್ಥರು ಪ್ರಭಾಕರ್ನನ್ನು ಹಿಡಿದು ಥಳಿಸಿದ್ದಾರೆ. ಮಾಹಿತಿ ಪಡೆದ ನಂತರ ಸ್ಥಳಕ್ಕೆ ಬಂದ ಪೊಲೀಸರು ಪ್ರಭಾಕರ್ನನ್ನು ತಮ್ಮ ವಶಕ್ಕೆ ಪಡೆಯಲು ಯತ್ನಿಸಿದರು. ಆದರೆ, ಗ್ರಾಮಸ್ಥರು ಆತನನ್ನು ಪೊಲೀಸರಿಗೆ ಒಪ್ಪಿಸಲು ನಿರಾಕರಿಸಿದರು. ಇದು ಪೊಲೀಸರು ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಸಲು ಕಾರಣವಾಯಿತು.
ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದಾಗ ಸ್ಥಳೀಯರು ಪೊಲೀಸರ ಮೇಲೆ ಇಟ್ಟಿಗೆಗಳನ್ನು ಎಸೆದಿದ್ದಾರೆ ಎಂದು ತಿಳಿದುಬಂದಿದೆ. ಘರ್ಷಣೆಯಲ್ಲಿ ಮೂವರು ಪೊಲೀಸರು ಗಾಯಗೊಂಡಿದ್ದಾರೆ. ಸುಮಾರು ಎರಡು ಗಂಟೆಗಳ ಕಾಲ ಗ್ರಾಮಸ್ಥರೊಂದಿಗೆ ಮಾತನಾಡಿದ ಪೊಲೀಸರು, ಕೊನೆಗೂ ಗ್ರಾಮಸ್ಥರ ಗುಂಪನ್ನು ನಿಯಂತ್ರಿಸಿ, ಗಂಭೀರವಾಗಿ ಗಾಯಗೊಂಡ ಪ್ರಭಾಕರ್ನನ್ನು ತಮ್ಮ ವಶಕ್ಕೆ ಪಡೆದು, ಕಾಂತಟೈ ಉಪಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪೊಲೀಸರ ಪ್ರಕಾರ, ಪ್ರಭಾಕರ್ ಕುಡಿದ ಅಮಲಿನಲ್ಲಿದ್ದ. ಆತನ ಬಳಿ ಮದ್ಯದ ಬಾಟಲಿಯೂ ಪತ್ತೆಯಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಯುವಕ ಬೇರೆ ರಾಜ್ಯದ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದ. ಅತಿಯಾದ ಮದ್ಯದ ಚಟದಿಂದಾಗಿ ಕೆಲಸ ಕಳೆದುಕೊಂಡಿದ್ದ. ಪ್ರಭಾಕರ್, ಮಹಿಳೆಯ ಅಸ್ಥಿಪಂಜರವನ್ನು ಏಕೆ ಹೊರತೆಗೆದನು ಎಂಬುದು ಸ್ಪಷ್ಟವಾಗಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಘಟನೆಯ ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)