20ಕ್ಕೂ ಹೆಚ್ಚು ಸಚಿವರು, ಶಾಸಕರನ್ನು ಕೈ ಬಿಟ್ಟ ಟಿಎಂಸಿ! ಸ್ವಕ್ಷೇತ್ರದ ಬದಲು ನಂದಿಗ್ರಾಮದಲ್ಲಿ ದೀದಿ ಅಗ್ನಿಪರೀಕ್ಷೆ!

tmc
Published on

ಲಖನೌ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆ ಸನ್ನಿಹಿತವಾಗುತ್ತಿರುವ ಬೆನ್ನಲ್ಲೇ ಟಿಎಂಸಿ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಪಕ್ಷದಿಂದ ಕಣಕ್ಕಿಳಿದು ಗೆದ್ದಿದ್ದ 20ಕ್ಕೂ ಹೆಚ್ಚು ಸಚಿವರು ಮತ್ತು ಶಾಸಕರ ಹೆಸರನ್ನು ಕೈ ಬಿಡಲಾಗಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನಂದಿಗ್ರಾಮದಿಂದ ಕಣಕ್ಕಿಳಿಯುವುದು ದೃಢವಾಗಿದೆ.

294 ಕ್ಷೇತ್ರಗಳ ಪೈಕಿ 291 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇನ್ನುಳಿದ ಮೂರು ಕ್ಷೇತ್ರಗಳನ್ನು ಮೈತ್ರಿಗಳಿಗಾಗಿ ಮೀಸಲಿಟ್ಟಿರುವುದಾಗಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ. ಪಾರ್ಥ ಚಟ್ಟೋಪಾಧ್ಯಾಯ, ಅಮಿತ್ ಮಿತ್ರ ಸೇರಿದಂತೆ 20ಕ್ಕೂ ಹೆಚ್ಚು ಶಾಸಕರು ಮತ್ತು ಸಚಿವರ ಹೆಸರನ್ನು ಈ ಬಾರಿ ಕೈ ಬಿಡಲಾಗಿದೆ. 80 ವರ್ಷಕ್ಕೂ ಹೆಚ್ಚು ವಯಸ್ಸಾದ ನಾಯಕರನ್ನೂ ಪಟ್ಟಿಯಿಂದ ಹೊರಗಿಡಲಾಗಿದೆ.

ಕೋಲ್ಕತಾ ಮಾಜಿ ಮೇಯರ್ ಸೋವನ್ ಚಟರ್ಜಿಯವರ ಕ್ಷೇತ್ರವಾದ ಬೆಹಲಾ ಪುರ್ಬಾದಲ್ಲಿ ಅವರ ಪತ್ನಿ ರತ್ನ ಚಟರ್ಜಿಯನ್ನು ಕಣಕ್ಕಿಳಿಸಲಾಗಿದೆ. ಸೋವನ್ ಚಟರ್ಜಿ ಟಿಎಂಸಿ ತೊರೆದು ಬಿಜೆಪಿ ಸೇರಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಮಮತಾ ಬ್ಯಾನರ್ಜಿ ಅವರು ತಮ್ಮ ಕ್ಷೇತ್ರವಾದ ಭವಾನಿಪುರದಲ್ಲಿ ಸ್ಪರ್ಧೆ ಮಾಡುತ್ತಿಲ್ಲ. ಕೇವಲ ನಂದಿಗ್ರಾಮದಲ್ಲಿ ಮಾತ್ರವೇ ಸ್ಪರ್ಧಿಸಲಿದ್ದಾರೆ. ಭವಾನಿಪುರ ಕ್ಷೇತ್ರಕ್ಕೆ ಸಚಿವ ಸೋವಾಂಡೇಬ್ ಚಟರ್ಜಿ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ.

50 ಮಹಿಳಾ ಅಭ್ಯರ್ಥಿಗಳು, 42 ಮುಸ್ಲಿಂ ಅಭ್ಯರ್ಥಿಗಳು, 79 ಪರಿಶಿಷ್ಟ ಜಾತಿ (ಎಸ್‌ಸಿ) ಅಭ್ಯರ್ಥಿಗಳು ಮತ್ತು 17 ಪರಿಶಿಷ್ಟ ಪಂಗಡ (ಎಸ್‌ಟಿ) ಅಭ್ಯರ್ಥಿಗಳಿದ್ದಾರೆ ಎಂದು ಪಟ್ಟಿಯನ್ನು ಪ್ರಕಟಿಸಿದ ಮಮತಾ ಬ್ಯಾನರ್ಜಿ ಹೇಳಿದರು. (ಏಜೆನ್ಸೀಸ್​)

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net