ಕರೊನಾಗೆ ಮೊದಲ‌ ಜಿಲ್ಲಾಧಿಕಾರಿ ಬಲಿ: ಪ.ಬಂಗಾಳ ಹೂಗ್ಲಿಯ ದೇಬದತ್ತ ರಾಯ್ ಸಾವು

corona-DC
Published on

ಕೋಲ್ಕತಾ: ಕರೊನಾ ಅಟ್ಟಹಾಸ ಮಿತಿಮೀರಿದ್ದು, ಇದೀಗ ಜಿಲ್ಲಾಧಿಕಾರಿಯೊಬ್ಬರನ್ನು ಬಲಿ ಪಡೆದಿದೆ. ಪಶ್ಚಿಮ ಬಂಗಾಳ ಹೂಗ್ಲಿಯ ಜಿಲ್ಲಾಧಿಕಾರಿಯಾಗಿದ್ದ ದೇಬದತ್ತ ರಾಯ್‌ ಕರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಈ ಮೂಲಕ ಸೋಂಕಿಗೆ ಬಲಿಯಾದ ಮೊದಲ ಜಿಲ್ಲಾಧಿಕಾರಿ ಇವರಾಗಿದ್ದಾರೆ.

ಕರೊನಾ ಸೋಂಕಿನ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಕೋವಿಡ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ. ಇವರಿಗೆ 34 ವರ್ಷ ವಯಸ್ಸಾಗಿತ್ತು. ಕರೊನಾ ವೈರಸ್‌ನ ಈ ಬಿಕ್ಕಟ್ಟಿನ ಸಮಯದಲ್ಲಿ ಅಪಾರ ಕೆಲಸ ಮಾಡಿದ್ದ ಇವರೀಗ ಅದೇ ವೈರಸ್‌ಗೆ  ಬಲಿಯಾಗಿದ್ದಾರೆ.

ಇವರ ಪತಿಗೂ ಕರೊನಾ ಪಾಸಿಟಿವ್‌ ಬಂದಿದೆ. ಗಂಡ- ಹೆಂಡತಿ ಇಬ್ಬರಿಗೂ ಕರೊನಾ ಲಕ್ಷಣಗಳು ಕಾಣಿಸಿಕೊಂಡಾಗ, ಇಬ್ಬರೂ ಮೊದಲು ಹೋಮ್ ಐಸೋಲೇಷನ್‌ನಲ್ಲಿಯೇ ಇರುವ ತೀರ್ಮಾನ ಮಾಡಿದರು. ಆದರೆ ದಿನಗಳೆದಂತೆ ದೇಬದತ್ತ ಅವರ ಪರಿಸ್ಥಿತಿ ಬಿಗಡಾಯಿಸುತ್ತಾ ಹೋಯಿತು. ಆದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು.

ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೇಬದತ್ತಾ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಕರೊನಾ ವಾರಿಯರ್‌ ಆಗಿ ದೇಬದತ್ತಾ ಅವರು ಅಪಾರ ಶ್ರಮ ವಹಿಸಿದ್ದರು. ಅವರ ಕರ್ತವ್ಯ ಶ್ಲಾಘನಾರ್ಹವಾದದ್ದು, ಅವರ ನಿಧನದಿಂದ ತುಂಬಾ ದುಃಖವಾಗಿದೆ ಎಂದು ಹೇಳಿದ್ದಾರೆ.

2011 ರ ಬ್ಯಾಚ್‌ನಲ್ಲಿದ್ದ ದೇಬದತ್ತಾ ಅವರು, ಮೊದಲು ಪುರುಲಿಯಾದಲ್ಲಿ ಬಿಡಿಒ ಆಗಿ ಕೆಲಸ ಮಾಡಿದ್ದರು. ನಂತರ ಅವರನ್ನು ಉಪ ಮ್ಯಾಜಿಸ್ಟ್ರೇಟ್ ಆಗಿ ಚಂದನಗರಕ್ಕೆ ಸ್ಥಳಾಂತರಿಸಲಾಯಿತು. ವಲಸೆ ಕಾರ್ಮಿಕರ ಆಹಾರ ಮತ್ತು ವಸತಿ ವ್ಯವಸ್ಥೆಯನ್ನು ಇವರೇ ನಿರ್ವಹಿಸುತ್ತಿದ್ದರು, ಆ ಸಮಯದಲ್ಲಿ ಸೋಂಕಿಗೆ ಒಳಗಾಗಬಹುದೆಂಬ ಸಂದೇಹವಿದೆ.

ಇವರಿಗೆ ನಾಲ್ಕು ವರ್ಷದ ಮಗು ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net