

ಕೋಲ್ಕತ್ತಾ: ಪಶ್ಚಿಮ ಬಂಗಾಳ(West Bengal)ದ ಪುರುಲಿಯಾ ಜಿಲ್ಲೆಯ ಝಲ್ಡಾ ಪುರಸಭೆಯ ಕಾಂಗ್ರೆಸ್ ಕೌನ್ಸಿಲರ್ ಪೂರ್ಣಿಮಾ ಕಂದು ಅವರ ಅಸಹಜ ಸಾವಿನ ನಂತರ, ಅವರ ಮರಣೋತ್ತರ ಪರೀಕ್ಷೆ ವರದಿ ಬಹಿರಂಗಗೊಂಡಿದ್ದು, ಹೊಟ್ಟೆಯಲ್ಲಿ ವಿಷಕಾರಿ ಅಂಶ ಪತ್ತೆಯಾಗಿದೆ.
ಅಕ್ಟೋಬರ್ 11ರಂದು ಪೂರ್ಣಿಮಾ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ, ಪೂರ್ಣಿಮಾ ಅವರ ಸೋದರಳಿಯ ಮತ್ತು ಝಲ್ಡಾ ಪುರಸಭೆಯ ತೃಣಮೂಲ ಕೌನ್ಸಿಲರ್ ಮಿಥುನ್ ಕಂದು, ಇದನ್ನು ಕೊಲೆ ಪ್ರಕರಣವೆಂದು ಪರಿಗಣಿಸಿ ಸಿಐಡಿ ತನಿಖೆಗೆ ಒತ್ತಾಯಿಸಿದರು.
ಮತ್ತೊಂದೆಡೆ, ಪೂರ್ಣಿಮಾ ಪತಿ ತಪನ್ ಕಂದು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ಸಿಬಿಐ ತನಿಖೆಗೆ ಒತ್ತಾಯಿಸಿದೆ. 2023ರ ಮಾರ್ಚ್ 13 ರಂದು ಪೂರ್ಣಿಮಾ ಪತಿ ಕೌನ್ಸಿಲರ್ ತಪನ್ ಕಂದು ಅವರನ್ನು ಗುಂಡಿಕ್ಕಿ ಹತ್ಯೆಮಾಡಲಾಗಿತ್ತು.
ಝಲ್ಡಾ ಮುನ್ಸಿಪಲ್ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್‌ನಲ್ಲಿ ಗೆದ್ದ ಕೆಲವೇ ದಿನಗಳಲ್ಲಿ ತಪನ್ ಕೊಲೆಯಾಗಿದ್ದರು. ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಮೇಲೆ ಕೊಲೆಯ ಆರೋಪವಿತ್ತು.