

ಕೋಲ್ಕತ್ತ : ಲೋಕಸಭಾ ಚುನಾವಣೆಯ ಅಂತಿಮ ಹಂತದ ಮತದಾನ ಮುಗಿದ ಬೆನ್ನಲ್ಲೇ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬನನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಕೊಲೆಯಲ್ಲಿ ಆಡಳಿತಾರೂಢ ಟಿಎಂಸಿ ಕೈವಾಡವಿದೆ ಎಂದು ಬಿಜಿಪಿ ಆರೋಪಿಸಿದೆ. ಅದೇ ವೇಳೆ ಕೌಟುಂಬಿಕ ಕಲಹದಿಂದ ಕೊಲೆ ನಡೆದಿದೆ ಎಂದು ಟಿಎಂಸಿ ಹೇಳಿಕೊಂಡಿದೆ.
ಮೃತನನ್ನು ಹಫೀಜುರ್ ಶೇಖ್ ಎಂದು ಗುರುತಿಸಲಾಗಿದ್ದು, ಜಿಲ್ಲೆಯ ಉತ್ತರ ಭಾಗದ ಕಾಲಿಗಂಜ್ನಲ್ಲಿ ಶನಿವಾರ (ಜೂನ್ 1) ರಾತ್ರಿ ನೆರೆಹೊರೆಯವರೊಂದಿಗೆ ಹಫೀಜುರ್ ಶೇಖ್ ಕೇರಂ ಆಡುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹಫೀಜುರ್ ಶೇಖ್ ಪರಾರಿಯಾಗಲು ಪ್ರಯತ್ನಿಸಿದಾಗ ಆತನ ಸಾವನ್ನು ಆತನ ಸಾವನ್ನು ಖಚಿತಪಡಿಸಿಕೊಳ್ಳಲು ದುಷ್ಕರ್ಮಿಗಳು ಗುಂಡು ಹಾರಿಸಿ, ಥಳಿಸಿದ್ದಾರೆ. ದಾಳಿಕೋರರಲ್ಲಿ ಕೆಲವರು ಖಾಕಿ ಸಮವಸ್ತ್ರ ಧರಿಸಿ ಪೊಲೀಸ್ ಸಿಬ್ಬಂದಿಯಂತೆ ಕಾಣುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಇತ್ತೀಚೆಗೆ ಬಿಜೆಪಿಗೆ ಸೇರಿದ್ದಕ್ಕಾಗಿ ಅವರನ್ನು ಕೊಲೆ ಮಾಡಲಾಗಿದೆ ಎಂದು ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ. ಕೂಡಲೇ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಟಿಎಂಸಿ ಗೂಂಡಾಗಳು ಪಕ್ಷದ ಕಾರ್ಯಕರ್ತನನ್ನು ಹತ್ಯೆ ಮಾಡಿದ್ದಾರೆ ಎಂದು ಬಿಜೆಪಿಯ ಉತ್ತರ ನಾಡಿಯಾ ಘಟಕದ ಅಧ್ಯಕ್ಷ ಅರ್ಜುನ್ ಬಿಸ್ವಾಸ್ ಆರೋಪಿಸಿದ್ದಾರೆ. ಆದರೆ, ಜಿಲ್ಲಾ ಟಿಎಂಸಿ ನಾಯಕ ರುಕ್ಬಾನೂರ್ ರೆಹಮಾನ್ ಹತ್ಯೆಯ ಹಿಂದೆ ಕೌಟುಂಬಿಕ ಕಲಹವೇ ಕಾರಣವಾಗಿದ್ದು, ಇದರಲ್ಲಿ ತೃಣಮೂಲ ಕಾಂಗ್ರೆಸ್ನ ಪಾತ್ರವಿಲ್ಲ ಎಂದು ಹೇಳಿದ್ದಾರೆ.(ಏಜೆನ್ಸೀಸ್)