VIDEO| ಗುಂಡಿ ಬಿದ್ದ ರಸ್ತೆಯನ್ನು ಸರಿಪಡಿಸಿದ ಪ.ಬಂಗಾಳದ ಶಾಸಕಿ ಮತ್ತು ಪತಿ ಶ್ರವಣ್

Untitled design - 2023-09-05T154835.547
Published on

ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯ ಬಿಜೆಪಿ ಶಾಸಕಿ ಚಂದನಾ ಬೌರಿ ತಮ್ಮ ಜಿಲ್ಲೆಯಲ್ಲಿ ಬಹುದಿನಗಳಿಂದ ಹದಗೆಟ್ಟಿದ್ದ ರಸ್ತೆಯನ್ನು ತಮ್ಮ ಪತಿಯೊಡನೆ ಸೇರಿಕೊಂಡು ಕಾಮಗಾರಿ ಮಾಡಿದ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದೆ.

ಆಡಳಿತ ಸರ್ಕಾರವು ರಸ್ತೆ ದುರಸ್ತಿ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುವ ಮುಖೇನ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿತ್ತು. ನಿವಾಸಿಗಳ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಬಿಜೆಪಿ ಶಾಸಕಿ ಚಂದನಾ ಬೌರಿ, ತಮ್ಮ ಪತಿಯ ಸಹಾಯದೊಂದಿಗೆ ರಸ್ತೆಗಿಳಿದು ಗುಂಡಿ ಮುಚ್ಚುವ ಕೆಲಸ ಮಾಡಿದ್ದಾರೆ.

ಸಾಮಾನ್ಯವಾಗಿ ಕೆಲಸದ ವೇಳೆ ಕೂಲಿ ಕಾರ್ಮಿಕರು ತೊಡುವ ಬಟ್ಟೆಯಂತೆ ದಂಪತಿಯೂ ತೊಟ್ಟು, ಜಲ್ಲಿ ಚೀಲಗಳನ್ನು ಹೊತ್ತು ಕೆಲಸ ಮಾಡಿದ್ದಾರೆ. ರಸ್ತೆಯ ಗುಂಡಿಗಳು ಮತ್ತು ಬಿರುಕುಗಳನ್ನು ತುಂಬಲು ಪತಿ ಶ್ರವಣ್ ತಮ್ಮ ಪತ್ನಿಗೆ ಸಹಕರಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಬಿಜೆಪಿ ಶಾಸಕರು, "ರಸ್ತೆ ದುರಸ್ತಿ ಮಾಡುವಂತೆ ಸ್ಥಳೀಯ ಅಧಿಕಾರಿಗಳಿಗೆ ಹಲವು ವರ್ಷಗಳಿಂದ ಮನವಿ ಮಾಡಿದ್ದರೂ ಅವರ ಮನವಿಗಳು ನನೆಗುದಿಗೆ ಬಿದ್ದಿವೆ" ಎಂದು ಹೇಳಿದರು.

"ಆಡಳಿತ ಪಕ್ಷ, ತೃಣಮೂಲ ಕಾಂಗ್ರೆಸ್ (TMC), ತಮ್ಮ ಅಭಿವೃದ್ಧಿ ಪ್ರಚಾರಗಳು ಮತ್ತು ತಾವು ಮಾಡಿರುವುದಾಗಿ ಹೇಳಿಕೊಳ್ಳುವ ಕೆಲಸಗಳ ಬಗ್ಗೆ ಹೆಮ್ಮೆಪಡುತ್ತದೆ. ಆದ್ರೆ, ರಂಗಮತಿಯಿಂದ ರಾಜಮೇಳ ಮಾರ್ಗದ ರಸ್ತೆಯ ಹದಗೆಟ್ಟ ಸ್ಥಿತಿಯ ಬಗ್ಗೆ ಈ ಪ್ರದೇಶದ ಹಿರಿಯ ಟಿಎಂಸಿ ನಾಯಕರಿಗೆ ಮುಂಚಿತವಾಗಿಯೇ ತಿಳಿಸಲಾಗಿತ್ತು. ಆದರೂ ಅವರು ಮನವಿಗೆ ಕಿವಿಗೊಡಲಿಲ್ಲ" ಎಂದು ಶಾಲ್ತೋರಾ ವಿಧಾನಸಭೆಯ ಬಿಜೆಪಿ ಶಾಸಕರು ಆರೋಪಿಸಿದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net