

ಪಶ್ಚಿಮ ಬಂಗಾಳ: ಚಂದ್ರಯಾನ-3 ಯಶಸ್ವಿಯಾಗಿ ಲ್ಯಾಂಡಿಂಗ್ ಆಗಲಿ ಎಂದು ಪಶ್ಚಿಮ ಬಂಗಾಳದ ಮಿಡ್ನಾಪುರ ಜಿಲ್ಲೆಯ ಬಿಜೆಪಿ ನಾಯಕರು ಬುಧವಾರ (ಆಗಸ್ಟ್ 23) ವಿಶೇಷ ಯಜ್ಞ ನಡೆಸಿದ್ದಾರೆ.
ಬಿಜೆಪಿ ನಾಯಕರು ಒಟ್ಟುಗೂಡಿ ಮೇದಿನಿಪುರ ಪಟ್ಟಣದ ಬತ್ತಲ ಚಾಕ್ ಪ್ರದೇಶದಲ್ಲಿ ಮರದ ಕೆಳಗಿರುವ ಶಿವನ ವಿಗ್ರಹದ ಮುಂದೆ ಯಜ್ಞವನ್ನು ನಡೆಸಿದ್ದಾರೆ. ಪಕ್ಷದ ರಾಜ್ಯ ಸಹ ಅಧ್ಯಕ್ಷ ಸಮಿತ್ ದಾಸ್ ಮತ್ತು ಇತರ ಸದಸ್ಯರು ಪೂಜೆಯಲ್ಲಿ ಭಾಗವಹಿಸಿದ್ದರು.
ಯಜ್ಞ ಸಲ್ಲಿಸಿದ ಬಳಿಕ ಮಾತನಾಡಿದ ಸಮಿತ್ ದಾಸ್, "ಚಂದ್ರಯಾನ-3 ಪರಿಸರದ ಕಾರಣಗಳಿಂದ ಕೆಲವು ಸಮಸ್ಯೆಗಳನ್ನು ಎದುರಿಸಬಹುದು. ಅದಕ್ಕಾಗಿಯೇ ಎಲ್ಲಾ ಪಾಶ್ಚಿಮಾತ್ಯ ಶಕ್ತಿಗಳ ಮೇಲೆ ಮಹಾಶಕ್ತಿಯ ಅವಶ್ಯಕತೆಯಿದೆ. ಹಾಗಾಗಿ ಶಿವ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲು ಎಲ್ಲರೂ ಬಂದಿದ್ದೇವೆ" ಎಂದು ಹೇಳಿದರು.
ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಬಿಜೆಪಿ ಸಚಿವ ದಿಲೀಪ್ ಘೋಷ್, "ಚಂದ್ರಯಾನ-3 ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಲಿದೆ. ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಕಾಲಿಡುವ ಭಾರತದ ವಿಜಯದ ಕ್ಷಣಕ್ಕಾಗಿ ಕೇವಲ 130 ಕೋಟಿ ಜನರು ಮಾತ್ರವಲ್ಲ, ಪಾಕಿಸ್ತಾನ, ಚೀನಾ ಮತ್ತು ಇಡೀ ಜಗತ್ತು ಆಕಾಶದತ್ತ ಎದುರು ನೋಡುತ್ತಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು,(ಏಜೆನ್ಸೀಸ್).