ಸಂಪಾದಕೀಯ: ಪ್ರತಿಭಟನೆಯ ಅತಿರೇಕ

ಸ8
Published on

ರಾಜಕೀಯ ಸಂಗ್ರಾಮದ ರಣರಂಗವಾದ ಪಶ್ಚಿಮ ಬಂಗಾಳ

ವಕ್ಛ್ (ತಿದ್ದುಪಡಿ) ಕಾಯ್ದೆಯನ್ನು ವಿರೋಧಿಸಿ ದೇಶದ ಹಲವು ರಾಜ್ಯಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ. ಆದರೆ, ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾತ್ಮಕ ತಿರುವು ಪಡೆದಿದ್ದು, ಮೂವರು ಅಮಾಯಕರ ಜೀವವನ್ನು ಬಲಿ ಪಡೆದಿರುವುದು ದುರದೃಷ್ಟಕರ. ಮುರ್ಷಿದಾಬಾದ್​ನಲ್ಲಿ ಹಿಂಸೆ ತಾರಕಕ್ಕೆ ಏರಿದ್ದು, ಅಂಗಡಿಗಳನ್ನು ಲೂಟಿ ಮಾಡಲಾಗಿದೆ. ‘ಕಳೆದ ಐವತ್ತು ವರ್ಷಗಳಲ್ಲಿ ಇಂಥ ಹಿಂಸಾಚಾರ ಕಂಡಿರಲಿಲ್ಲ’ ಎಂದು ಸ್ಥಳೀಯರು ಪ್ರತಿಕ್ರಿಯಿಸಿರುವುದು ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿ. ಹಿಂಸಾಚಾರಪೀಡಿತ ಪ್ರದೇಶದಲ್ಲಿ ಅರೆಸೇನಾ ಪಡೆಯನ್ನು ನಿಯೋಜಿಸಲಾಗಿದ್ದು, ಪರಿಸ್ಥಿತಿ ಇನ್ನೂ ಪ್ರಕ್ಷುಬ್ಧವಾಗಿದೆ. ‘ಇದು ಸರ್ಕಾರಿ ಪ್ರಾಯೋಜಿತ ಹಿಂಸಾಚಾರ, ತುಷ್ಟೀಕರಣ ರಾಜಕೀಯದ ಅತಿರೇಕ’ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಅಷ್ಟಕ್ಕೂ ವಕ್ಛ್ (ತಿದ್ದುಪಡಿ) ಕಾಯ್ದೆಯನ್ನು ಇದ್ದಕ್ಕಿದ್ದಂತೆ ಹೇರಲಾಗುತ್ತಿಲ್ಲ. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸಂಬಂಧಿತ ಮಸೂದೆ ಬಗ್ಗೆ ದೀರ್ಘ ಚರ್ಚೆ ನಡೆಸಿದ ಬಳಿಕ, ಬಹುಮತದ ಆಧಾರದ ಮೇಲೆ ಅನುಮೊದನೆ ದೊರೆತಿದೆ. ರಾಷ್ಟ್ರಪತಿಗಳ ಅಂಕಿತದ ಬಳಿಕ ಕಾನೂನಾಗಿದೆ. ಈ ಕಾಯ್ದೆಯಿಂದ ಮುಸಲ್ಮಾನರಿಗೆ ಯಾವುದೇ ನಷ್ಟವಿಲ್ಲ, ಬದಲಾಗಿ ಬಡ ಮುಸಲ್ಮಾನರಿಗೆ ನ್ಯಾಯ ದೊರೆಯಲಿದೆ. ವಕ್ಛ್ ಮಂಡಳಿಯ ಆಸ್ತಿ ನಿರ್ವಹಣೆಯಲ್ಲಿ ಪಾರದರ್ಶಕ ಹಾಗೂ ಪರಿಣಾಮಕಾರಿ ವ್ಯವಸ್ಥೆ ರೂಪುಗೊಳ್ಳಲಿದೆ. ಆದರೆ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಈ ಕಾಯ್ದೆ ಬಗ್ಗೆ ಮುಸ್ಲಿಮರಲ್ಲಿ ಅನಗತ್ಯ ಭಯ ಸೃಷ್ಟಿಸುತ್ತಿದ್ದಾರೆ ಮತ್ತು ಈ ಕಾನೂನನ್ನು ರಾಜ್ಯದಲ್ಲಿ ಜಾರಿ ಮಾಡುವುದಿಲ್ಲ ಎಂದಿದ್ದಾರೆ. ಮುಖ್ಯಮಂತ್ರಿಯೇ ಪ್ರಚೋದನೆಭರಿತ ಮಾತುಗಳನ್ನು ಪದೇಪದೆ ಆಡುತ್ತಿರುವುದರಿಂದ ರಾಜ್ಯದ ಕಾನೂನು-ಸುವ್ಯವಸ್ಥೆ ಅಪಾಯಕ್ಕೆ ಸಿಲುಕಿದೆ.

ಮಮತಾರ ಇಂಥ ಬೇಜವಾಬ್ದಾರಿ ವರ್ತನೆ ಇದೇ ಮೊದಲೇನಲ್ಲ. ಪಶ್ಚಿಮ ಬಂಗಾಳ ಶಿಕ್ಷಕರ ನೇಮಕಾತಿಯಲ್ಲಿ ಭಾರಿ ಅಕ್ರಮ, ಅವ್ಯವಹಾರಗಳಾಗಿರುವುನ್ನು ಮನಗಂಡು ಸುಪ್ರೀಂ ಕೋರ್ಟ್ ಇತ್ತೀಚೆಗಷ್ಟೇ ಆ ನೇಮಕಾತಿಗಳನ್ನು ರದ್ದುಗೊಳಿಸಿ ಮಹತ್ವದ ತೀರ್ಪು ಪ್ರಕಟಿಸಿತು. ಆದರೆ, ‘ಸುಪ್ರೀಂ ಕೋರ್ಟ್ ತೀರ್ಪನ್ನು ಯಾವುದೇ ಕಾರಣಕ್ಕೂ ಒಪು್ಪವುದಿಲ್ಲ’ ಎಂದು ಮಮತಾ ಬಹಿರಂಗವಾಗಿಯೇ ಹಲವು ಬಾರಿ ಹೇಳಿದ್ದು, ಅವರಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಲಾಗಿದೆ. ಮಹಾವೀರ ಜಯಂತಿಯ ಮುನ್ನಾದಿನ ನಡೆದ ಜೈನ ಸಮುದಾಯದ ಕಾರ್ಯಕ್ರಮದಲ್ಲೂ ಮಮತಾ ವಕ್ಛ್ (ತಿದ್ದುಪಡಿ) ಕಾಯ್ದೆಯ ಬಗ್ಗೆ ಮಾತನಾಡಿರುವುದನ್ನು ನೋಡಿದರೆ, ಅವರ ಈ ಮಾತುಗಳು ಮತಬ್ಯಾಂಕ್ ತಪ್ಪಿಹೋಗುವ ಆತಂಕದಿಂದ ಕೂಡಿವೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

ದೇಶದ ಸಂಸತ್ತು ರೂಪಿಸಿದ ಕಾನೂನನ್ನು ಧಿಕ್ಕರಿಸುವ ಅಧಿಕಾರ ಯಾರಿಗೂ ಇಲ್ಲ. ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದು ಆಯಾ ರಾಜ್ಯಗಳ ಜವಾಬ್ದಾರಿ. ಈ ವಿಷಯದಲ್ಲಿ ಮಮತಾ ಮತ್ತೆಮತ್ತೆ ವಿಫಲವಾಗುತ್ತಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದು ಜನರನ್ನು ತಪು್ಪದಾರಿಗೆ ಎಳೆಯುವ ಕೆಲಸ ಮಾಡಬಾರದು. ಎಲ್ಲ ವಿಷಯಗಳಲ್ಲೂ ರಾಜಕೀಯ ಲಾಭವನ್ನು ನೋಡಬಾರದು. ಪಶ್ಚಿಮ ಬಂಗಾಳದಲ್ಲಿ ಶಾಂತಿ ಸ್ಥಾಪನೆ ಅಲ್ಲಿನ ಸರ್ಕಾರದ ಮೊದಲ ಆದ್ಯತೆಯಾಗಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net