

ವಾಷಿಂಗ್ಟನ್: ಇರಾನ್ ಸೇನಾ ನಾಯಕ ಜನರಲ್ ಕಾಸಿಂ ಸೊಲೆಮಾನ್ ಹತ್ಯೆಯ ಬಳಿಕ ಅಮೆರಿಕ ಮತ್ತು ಇರಾನ್ ನಡುವಿನ ತಿಕ್ಕಾಟ ಮತ್ತಷ್ಟು ಉಲ್ಬಣಗೊಂಡಿದೆ. ಸೇನಾ ನಾಯಕನ ಹತ್ಯೆಗೈದ ಅಮೆರಿಕಗೆ ಇರಾನ್ ಪ್ರತೀಕಾರದ ಎಚ್ಚರಿಕೆ ನೀಡಿದೆ. ಇತ್ತ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಎದುರಾಳಿಗಳಿಗೆ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ.
ವೈಟ್ಹೌಸ್ ಶೇರ್ ಮಾಡಿರುವ ವಿಡಿಯೋದಲ್ಲಿ ಮಾತನಾಡಿರುವ ಟ್ರಂಪ್, ಜಗತ್ತಿನ ಯಾವುದೇ ದೇಶಗಳಿಗೆ ಹೋಲಿಸಿದರೆ ಅಮೆರಿಕವು ಅತ್ಯುತ್ತಮ ಸೇನೆಯನ್ನು ಹೊಂದಿದೆ. ನಾವು ಉತ್ತಮವಾದ ಗುಪ್ತಚರ ಇಲಾಖೆಯನ್ನು ಹೊಂದಿದ್ದೇವೆ. ಜಗತ್ತಿನ ಯಾವುದೇ ಮೂಲೆಯಲ್ಲಿ ಅಮೆರಿಕನ್ನರಿಗೆ ಯಾರೇ ಬೆದರಿಕೆ ಒಡ್ಡಿದರೂ ಅಗತ್ಯವಾದ ಕ್ರಮವನ್ನು ತೆಗೆದುಕೊಳ್ಳಲು ನಾವು ತಯಾರಿದ್ದೇವೆ ಎಂದು ಎಚ್ಚರಿಸಿದ್ದಾರೆ.
ನನ್ನ ನಾಯಕತ್ವದಲ್ಲಿ ಐಸಿಸ್ ಪ್ರದೇಶವನ್ನು ನಾಶ ಮಾಡಿದ್ದೇವೆ. ಇತ್ತೀಚೆಗೆ ನಡೆದ ಅಮೆರಿಕದ ವಿಶೇಷ ಕಾರ್ಯಾಚರಣೆಯಲ್ಲಿ ಐಸಿಸ್ ನಾಯಕ ಅಲ್ ಬಾಗ್ದಾದಿಯನ್ನು ಹತ್ಯೆ ಮಾಡಲಾಗಿದೆ. ಇಂತಹ ರಾಕ್ಷಸರು ಇಲ್ಲದೇ ವಿಶ್ವವು ಒಂದು ಸುರಕ್ಷಿತ ಸ್ಥಳವಾಗಿದೆ ಎಂದು ಟ್ರಂಪ್ ತಿಳಿಸಿದ್ದಾರೆ.
ಇರಾನ್ನ ಬಾಗ್ದಾದ್ ಏರ್ಪೋರ್ಟ್ನಲ್ಲಿ ಶುಕ್ರವಾರ ಅಮೆರಿಕ ಸೇನಾ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನ್ನ ಪ್ರಮುಖ ಕ್ಯೂಡ್ಸ್ ಪೋರ್ಸ್ನ ಮುಖ್ಯಸ್ಥ ಜನರಲ್ ಕಾಸಿಂ ಸೊಲೆಮಾನ್ ಹತ್ಯೆಯಾಗಿದ್ದಾರೆ. ಇದರ ಬೆನ್ನಲ್ಲೇ ಬೆನ್ನಲ್ಲೇ ಇರಾನ್ ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ ಅಮೆರಿಕಗೆ ಪ್ರತೀಕಾರದ ಎಚ್ಚರಿಕೆ ನೀಡಿದ್ದಾರೆ. ಈ ಬೆಳವಣಿಗೆಯು ಜಗತ್ತನ್ನು ಆತಂಕಕ್ಕೆ ದೂಡಿದ್ದು, ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಕದನ ಭೀತಿ ಶುರುವಾಗಿದೆ. ಅಮೆರಿಕ ಮತ್ತು ಇರಾನ್ ನಡುವಿನ ತಿಕ್ಕಾಟ ಭಾರತದ ಮೇಲೂ ಪರಿಣಾಮ ಬೀರಿದೆ. (ಏಜೆನ್ಸೀಸ್)