ತೂಕ ನನಗೆ ಯಾವ ಲೆಕ್ಕ?; 33 ಕೆಜಿ ಇಳಿಸಿಕೊಂಡ ಗೀತಾ ಭಾರತಿ ಭಟ್

Geetha Bhat F
Published on
‘ಬ್ರಹ್ಮಗಂಟು‘ ಧಾರಾವಾಹಿಯಲ್ಲಿ ‘ಗುಂಡಮ್ಮ’ ಪಾತ್ರದ ಮೂಲಕ ಗಮನ ಸೆಳೆದ ನಟಿ ಗೀತಾ ಭಾರತಿ ಭಟ್ ಈಗ ಚಂದನವನಕ್ಕೆ ನಾಯಕಿಯಾಗಿ ಎಂಟ್ರಿ ಕೊಡುತ್ತಿದ್ದಾರೆ. ‘ರವಿಕೆ ಪ್ರಸಂಗ’ ಚಿತ್ರದಲ್ಲಿ ನಾಯಕಿಯಾಗಿ ಮಿಂಚಲು ರೆಡಿಯಾಗಿದ್ದಾರೆ. ಅದರ ಜತೆಗೆ ತೂಕ ಇಳಿಸಿಕೊಳ್ಳುವ ಪ್ರಯತ್ನದಲ್ಲೂ ತೊಡಗಿಸಿಕೊಂಡಿದ್ದ ಗೀತಾ, ಪಾತ್ರ, ಫಿಟ್​ನೆಸ್ ಹಾಗೂ ಡಯೆಟ್ ಬಗ್ಗೆ ವಿಜಯವಾಣಿ ಜತೆ ಮಾತನಾಡಿದ್ದಾರೆ.
  • ತೂಕ ಇಳಿಸಿಕೊಳ್ಳುವ ಜರ್ನಿ ಹೇಗಿದೆ?

ನಮ್ಮ ದೇಹ ದೇವಸ್ಥಾನ ಇದ್ದಂತೆ. ಮೊದಲ ಆದ್ಯತೆ ಆರೋಗ್ಯಕ್ಕೆ ನೀಡಬೇಕು. ಆರೋಗ್ಯವಾಗಿರಬೇಕು ಎನ್ನುವುದು ರೇಸ್​ನಂತಾಗಿದೆ. ಬೇಗ ಸಣ್ಣ ಆಗಬೇಕು ಎಂದು ಅನೇಕರು ಶಾರ್ಟ್​ಕಟ್​ಗಳನ್ನು ಬಳಸುತ್ತಾರೆ. ನೈಸರ್ಗಿಕವಲ್ಲದ ಪದಾರ್ಥಗಳನ್ನು ಸೇವಿಸುತ್ತಾರೆ. ಅಂತಹ ಪದಾರ್ಥಗಳು ಪ್ರಾಣಕ್ಕೆ ಕುತ್ತು ತಂದರೂ ತರಬಹುದು. ಎಷ್ಟೋ ಹೆಣ್ಣುಮಕ್ಕಳಿಗೆ ಸಣ್ಣ ಆಗಬೇಕು ಅಂತ ಆಸೆ ಇರುತ್ತದೆ. ಮೊದಲಿಗೆ ಅವರೆಲ್ಲರೂ ಹೇಗಿದ್ದಾರೋ ಹಾಗೆ ತಮ್ಮನ್ನು ಪ್ರೀತಿಸಬೇಕು. ವ್ಯಾಯಾಮ ಮತ್ತು ಆರೋಗ್ಯಕರ, ಪೌಷ್ಠಿಕಾಂಶ, ಸರಿಯಾದ ನಿದ್ರೆ ಮಾಡುವುದರಿಂದ ತೂಕ ಇಳಿಸಿಕೊಳ್ಳಬೇಕು. ನಾನು ಹಾಲು ಬಿಟ್ಟೆ, ಅನ್ನದ ಬದಲು ಮಿಲೆಟ್ಸ್ ಸೇವಿಸುತ್ತೇನೆ, ಸಕ್ಕರೆ ತಿನ್ನುವುದಿಲ್ಲ.

  • ‘ರವಿಕೆ ಪ್ರಸಂಗ’ದಲ್ಲಿ ನಿಮ್ಮ ಪಾತ್ರ?

ಸಾನ್ವಿ ಎನ್ನುವ ಸರಳ ಹಾಗೂ ಮುಗ್ಧ ಹುಡುಗಿ. ಉಳಿದ ಹುಡುಗಿಯರ ಹಾಗೆ ಗ್ಲಾಮರಸ್ ಆಗಿ ಇಲ್ಲದಿದ್ದರೂ ಅವಳದ್ದೇ ರೀತಿಯಲ್ಲಿ ಸುಂದರವಾಗಿರುತ್ತಾಳೆ. ಅವಳಿಗೆ ಮದುವೆ ಆಗಬೇಕು ಎನ್ನುವಾಸೆ. ಅವಳಿಗಿಂತಲೂ ಹೆಚ್ಚು ಆಸೆ ತಂದೆ, ತಾಯಿಗೆ ಇರುತ್ತದೆ.

  • ಕಿರುತೆರೆಯಿಂದ ಹಿರಿತೆರೆಯ ಪಯಣ ಹೇಗಿತ್ತು?

ನನಗೊಂದು ಪರಿಚಯ ನೀಡಿದ್ದು ಕಿರುತೆರೆ. ದೊಡ್ಡ ಪರದೆ ಹೊಸ ಅನುಭವ. ಶೂಟಿಂಗ್​ನಿಂದ ಹಿಡಿದು ಪರದೆಯ ಮೇಲೆ ನನ್ನನ್ನು ನಾನು ನೋಡುವವರೆಗೂ ಪ್ರತಿಯೊಂದು ಅನುಭವವೂ ಅತ್ಯಮೂಲ್ಯ ಎನಿಸಿತು. ಈ ಸಿನಿಮಾದಲ್ಲಿ ಮನರಂಜನೆಯ ಜತೆಗೆ ಸಂದೇಶವೂ ಇದೆ.

  • ಮುಂದೆ ಗ್ಲಾಮರಸ್ ಪಾತ್ರದಲ್ಲಿ ನೋಡಬಹುದಾ?

ಭಿನ್ನ ವಿಭಿನ್ನ ಪಾತ್ರಗಳನ್ನು ಮಾಡಬೇಕು ಎನ್ನುವ ಆಸೆಯಿದೆ. ಪಾತ್ರ ಯಾವ ರೀತಿ ಡಿಮ್ಯಾಂಡ್ ಮಾಡುತ್ತದೆಯೋ ಆ ರೀತಿ ಇರಬೇಕು. ಆದರೆ, ಗ್ಲಾಮರಸ್ ಎಂದಾಕ್ಷಣ ಬಾಡಿ ಶೋ ಅಂಥದ್ದಲ್ಲ. ನನ್ನ ಕಂಫರ್ಟ್ ಝೋನ್​ನಲ್ಲಿ ಮಾಡುತ್ತೇನೆ.

  • ಎಷ್ಟು ಸಣ್ಣ ಆಗಿದ್ದೀರಿ?

ಹೌದು, ಈ ಸಿನಿಮಾ ಮಾಡುವ ಮುನ್ನ ತೂಕ ಇಳಿಸಿಕೊಳ್ಳುವ ಜರ್ನಿಯಲ್ಲಿದ್ದೆ. ಸುಮಾರು 33 ಕೆ.ಜಿ ಇಳಿಸಿಕೊಂಡಿದ್ದೆ. ಆಗ ಈ ಸಿನಿಮಾದ ಆಫರ್ ಬಂತು. ಪಾತ್ರಕ್ಕಾಗಿ ನಾನು ದಪ್ಪ ಇರಬೇಕಾಯಿತು. ಹೀಗಾಗಿ ತೂಕ ಇಳಿಸಿಕೊಳ್ಳುವ ಕಾರ್ಯಕ್ಕೆ ಸಣ್ಣ ಬ್ರೇಕ್ ನೀಡಿದ್ದೇನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net