ಈ ರಾಶಿಯವರಿಗೆ ಮೇ ತಿಂಗಳವರೆಗೆ ನಿಮ್ಮ ಮಾತೆಲ್ಲ ಮುತ್ತು, ಮುಟ್ಟಿದ್ದೆಲ್ಲ ಚಿನ್ನವೇ: ವಾರಭವಿಷ್ಯ

Vaara-Bhavishya
Published on

ಮೇಷ: ಮೇಷ ರಾಶಿಯವರಿಗೆ 12ರಲ್ಲಿ ಸೂರ್ಯ, ಬುಧ, ಶುಕ್ರನೊಂದಿಗೆ ಇದ್ದಾರೆ. ದ್ವಾದಶಕ್ಕೆ ಶನಿಯು ಬಂದು ಗುರುವಿನ ಮನೆಯಲ್ಲಿ ಕುಳಿತರೂ ಕೆಲಸ ಕಾರ್ಯಗಳಲ್ಲಿ ಜಯವನ್ನು, ಗುರಿಯನ್ನು, ದಡವನ್ನು ಮುಟ್ಟಬಹುದು. ‘ಕೈಕೆಸರಾದರೆ ಬಾಯಿ ಮೊಸರು’ ಎಂಬ ನಾಣ್ಣುಡಿಯಂತೆ ದೈವಬಲವನ್ನು ಗಳಿಸಿಕೊಂಡು ನಡೆದರೆ ಆಳು ಕೂಡ ಅರಸನಾಗುತ್ತಾನೆ ಎಂಬಂತೆ ಯೋಗವು ಹರಿದುಬರುತ್ತದೆ.

ವೃಷಭ: ವೃಷಭ ರಾಶಿಗೆ ಏಕಾದಶದಲ್ಲಿ ಸೂರ್ಯನಿದ್ದು, ಏಕಾದಶಕ್ಕೆ ಶನಿಯೂ ಬರುವ ಕಾಲ. ಶುಕ್ರ, ಬುಧನು ಅಲ್ಲೇ ಇದ್ದಾರೆ. ತಮಗೆ ಬರಬೇಕಾದ ಹಣವನ್ನು ಸಂಗ್ರಹಿಸಿ ಇಟ್ಟುಕೊಳ್ಳಲು ಒಳ್ಳೆಯ ಕಾಲ. ರಾಜಕೀಯವಾಗಿ ಹನ್ನೊಂದನೇ ಮನೆಯ ಸೂರ್ಯನು ಕೆಲಸ, ಕಾರ್ಯದಲ್ಲಿ ಯಶಸ್ಸನ್ನು ಕೊಡುವುದರಲ್ಲಿ ಸಂದೇಹ ಬೇಡ. ಮಾ.29ರಿಂದ ಶನಿಯು ಏಕಾದಶಕ್ಕೆ ಬಂದಾಗ ಕೈ ಹಿಡಿಯುತ್ತಾನೆ.

ಮಿಥುನ: ಮಿಥುನ ರಾಶಿಯವರು ಇನ್ನು ಸೂರ್ಯನು ಮೇಷ ರಾಶಿಗೆ ಬರುವವರೆಗೂ ಕಾಯಬೇಕು. ಲಗ್ನಕ್ಕೆ ಗುರು ಬಂದಾಗ ಗುರುವಿನ ಪ್ರಾರ್ಥನೆ ಇರಬೇಕು. ದಶಮ ಶನಿ ಇದ್ದರೂ ವಿಶೇಷ ಜಾಗ್ರತೆಯನ್ನು ವಹಿಸಿ ಕೆಲಸಗಳನ್ನು ಹತ್ತು ಸಾರಿ ಯೋಚಿಸಿ ಹನ್ನೊಂದನೆಯ ಬಾರಿ ಮುಂದುವರಿಯಬೇಕು. ತರಾತುರಿಯಲ್ಲಿ ಮಾಡಿದ ಕೆಲಸಗಳು ಕಷ್ಟವನ್ನು ತರುತ್ತವೆ. ಮನಸ್ಸಿನ ನೆಮ್ಮದಿ ಹಾಳು ಮಾಡುತ್ತವೆ. ಪಟ್ಟಾಭಿ ರಾಮನನ್ನು ಪೂಜಿಸಿ. ತುಳಸಿಯಿಂದ ರಾಮ ಅಷ್ಟೋತ್ತರ ಮಾಡಿರಿ.

ಕಟಕ: ಹನ್ನೊಂದರ ಗುರು ಒಬ್ಬನೇ ಸಾಕು. ಮೇ ತಿಂಗಳವರೆಗೆ ನಿಮ್ಮ ಮಾತೆಲ್ಲ ಮುತ್ತು, ಮುಟ್ಟಿದ್ದೆಲ್ಲ ಚಿನ್ನವೇ- ಏನೇ ಆದರೂ ಆನಂದಕ್ಕೆ ಕೊರತೆ ಇಲ್ಲ. ಭಾಗ್ಯವಿದೆ. ಚಿಂತೆ ಬೇಡ ಸಾಕ್ಷಾತ್ ಗುರುವೇ ತಂದೆಯ ಸ್ವರೂಪದಲ್ಲಿ ನಿಮ್ಮನ್ನು ಕಾಪಾಡುತ್ತಾರೆ. ಸುಖವಾಗಿ ಇರುತ್ತೀರಿ. ಉಮಾಮಹೇಶ್ವರನನ್ನು ಪೂಜಿಸಿ, ಶಿವಾಷ್ಟೋತ್ತರ ಪಠಿಸಿ.

ಸಿಂಹ: ‘ಬುದ್ಧಿಬಲಂ-ಮನೋಧೈರ್ಯಂ-ಗ್ರಹಾನುಕೂಲಂ- ಪೂರ್ವಪುಣ್ಯಂ-ಸದಾ ಪಿತೃಸ್ಮರಣಂ’ ಇಷ್ಟನ್ನು ಒಳಗೊಂಡಂತೆ ಸಿಂಹ ರಾಶಿಯವರಿಗೆ ತಂದೆ-ತಾಯಿಯ ಆಶೀರ್ವಾದ ಇದ್ದರೆ ಸಾಕು, ಗ್ರಹಗಳು ಎಲ್ಲೇ ಇದ್ದರೂ, ಮಾತಾ-ಪಿತರು ಗ್ರಹಗಳ ಜೊತೆ ಹೋರಾಡಿ ತಮ್ಮ ಮಕ್ಕಳನ್ನು ಕಾಪಾಡುತ್ತಾರೆ. ಗುರುವು ಏಕಾದಶಕ್ಕೆ ಮೇ 13ರಂದು ಬಂದು ನೀವು ಬಯಸಿದ ಎಲ್ಲ ಕಾರ್ಯಗಳಲ್ಲಿ ಜಯವನ್ನು ಕೊಡುತ್ತಾನೆ. ದತ್ತಾತ್ರೇಯನ ಕರುಣೆಯನ್ನು ಸಂಪಾದಿಸಿ.

ಕನ್ಯಾ: ಮಾರ್ಚ್ 29ರಿಂದ ಸಪ್ತಮಕ್ಕೆ ಶನಿ ಬಂದು ಸುಖಕ್ಕೆ, ಭೋಗ ಭಾಗ್ಯ ವನ್ನು ಒಂದು ಹಂತಕ್ಕೆ ನಿಲ್ಲಿಸಿ ಪಾಪಪುಣ್ಯವನ್ನು ಅಳೆಯುತ್ತಾನೆ. ನಿಮಗೆ ಸುಪ್ಪತ್ತಿಗೆಯನ್ನು ಕೊಡದಿದ್ದರೂ ಮೇ 13ರವರೆಗೂ ಯಾವುದೇ ನಕಾರಾತ್ಮಕ ವಿಚಾರಗಳು ಬಾರದಂತೆ ರಕ್ಷಿಸುತ್ತಾನೆ. ಏಕಕಾಲದಲ್ಲಿ ಹರಿಹರರನ್ನು ಪೂಜಿಸಿ. ಹರಿಹರದಲ್ಲಿ ನೆಲೆಸಿರುವ ಹರಿಹರೇಶ್ವರನಿಗೆ ಕೈ ಮುಗಿದು ಬನ್ನಿ.

ತುಲಾ: ತುಲಾ ರಾಶಿಯಲ್ಲಿ ಜನಿಸಿದವರು ಹಾಗೂ ಜಲದ ಪಾವಿತ್ರ್ಯ ಗೊತ್ತಿರುವವರು ಪುಣ್ಯನದಿಗಳಲ್ಲಿ ಸ್ನಾನ ಮಾಡಿದರೆ ಮನುಷ್ಯನ ಕೆಟ್ಟಬುದ್ಧಿ, ಶರೀರ ರೋಗಗಳು ನಾಶವಾಗುತ್ತವೆ. ಶುದ್ಧ ನೀರಿನಿಂದ ಆರೋಗ್ಯವೂ, ಇಷ್ಟಾರ್ಥವೂ ಸಿದ್ಧಿಸುತ್ತದೆ. ಒಳ್ಳೆಯ ಕಾಲವು ನಿಮ್ಮ ಮನೆಯ ಬಾಗಿಲು ತೆರೆಯಲಿದೆ. ಪಂಚಮ ಶನಿಯ ಬಾಧೆಗಳು ನಿವಾರಣೆ ಆಗುವ ಕಾಲ. ದಕ್ಷಿಣಾಯಣದ ಕಾಲದಲ್ಲಿ ತುಲಾಸ್ನಾನ ಮಾಡಿ ಕಾವೇರಿಯನ್ನು ಪೂಜಿಸಿ.

ವೃಶ್ಚಿಕ: ಮನುಷ್ಯನಿಗೆ ಬಂದದ್ದೆಲ್ಲ ಬಂದು ಬಿಟ್ಟರೆ ಬಹಳ ಸಂತೋಷ. ಬಾರದೆ ಇದ್ದಾಗ ಕೋಪ, ತುಡಿತ, ಮಿಡಿತಗಳು ಏಕಕಾಲದಲ್ಲಿ ಆರಂಭವಾಗುತ್ತವೆ. ಶರೀರದ ಆರೋಗ್ಯವೂ ಕೆಡುತ್ತದೆ. ಶನಿಯು ಚತುರ್ಥ ದಲ್ಲಿ ಇದ್ದಾನೆ. ನಿಮಗೆ ನೂರು ಕೋಟಿ ಬರಬೇಕಾದಲ್ಲಿ 80 ಭಾಗ ಕೊಟ್ಟು ಉಳಿದ ಇಪ್ಪತ್ತು ಭಾಗ ಹಾಗೆಯೇ ಇಟ್ಟಿರುತ್ತಾನೆ. ಪಂಚಮಕ್ಕೆ ಗುರು ಮನೆಗೆ ಶನಿಯು ಬರುತ್ತಿದ್ದಾನೆ. ನೀವು ದುಡಿದ ದುಡ್ಡು ಕೈ ಸೇರುತ್ತದೆ. ನರಸೋಬವಾಡಿಗೆ ತೆರಳಿ ಗುರುವಿನ ಪ್ರಾರ್ಥನೆ ಮಾಡಿ.

ಧನಸ್ಸು: ‘ಪರೋಪಕಾರಂ ಇದಂ ಶರೀರಂ’. ನದಿಯ ನೀರು ಬಾಯಾರಿಕೆ ನೀಗಿಸುತ್ತದೆ. ಮಾತ್ರವಲ್ಲ, ನೀರು ಶರೀರವನ್ನು, ಮನಸ್ಸನ್ನು ಶುದ್ಧವಾಗಿ ಇಡುತ್ತದೆ. ಅನ್ನವನ್ನು ತಿನ್ನಲೂ ಬೇಕಾಗುವುದೇ ನೀರು. ನಾವೆಲ್ಲರೂ ಆ ನೀರಿನಂತೆ ಶುದ್ಧವಾಗಿ, ಸ್ವಚ್ಛವಾಗಿ, ಸ್ವಾರ್ಥವಿಲ್ಲದೆ ಜೀವನವನ್ನು ನಡೆಸಬೇಕು. ನಿಮ್ಮ ವಿಚಾರದಲ್ಲಿ ಭಾಗ್ಯಚಕ್ರವನ್ನು ಭಗವಂತನಿಗೆ ಬಿಡಿ. ಉಪಕಾರದ ಬುದ್ಧಿ ಇರಲಿ.

ಮಕರ: ರಾಶ್ಯಾಧಿಪತಿಯು ದ್ವಿತೀಯದಲ್ಲಿದ್ದು, ಕುಟುಂಬ ಸ್ಥಾನದಲ್ಲಿ ಶನಿಯು ಅಶಾಂತಿಯನ್ನು ಉಂಟುಮಾಡುತ್ತಾನೆ. ಕೋಪವನ್ನೂ ತರಿಸುತ್ತಾನೆ. ದುಡಿದದ್ದೆಲ್ಲ ನೀರಿನಂತೆ ಖರ್ಚು ಮಾಡಿಸುತ್ತಾನೆ. ಏನಾದರೂ ಆಗಲಿ ದೈವಕೃಪೆ ಇರಲಿ. ಶನಿಯು ಇನ್ನೇನು ಮುಂದಿನ ಮನೆಗೆ ಹೋಗುತ್ತಾನೆ. ಅಂದುಕೊಂಡ ಕೆಲಸಗಳೂ ಆಗುತ್ತವೆ. ಕುಲದೇವರ ದೇವಾಲಯಕ್ಕೆ ತೆರಳಿ ದರ್ಶಿಸಿ ಬನ್ನಿ.

ಕುಂಭ: ಶನಿಯು ಗುರುವಿನ ಮನೆಗೆ ತೆರಳಿದರೂ ಆತಂಕ ಪಡಬೇಕಾಗಿಲ್ಲ. ಮನುಷ್ಯನು ಸಮಸ್ಯೆ, ಸವಾಲುಗಳನ್ನು ಎದುರಿಸಲೇಬೇಕು. ಅದೃಷ್ಟವು ಚೆನ್ನಾಗಿದ್ದರೆ ಕೆಲಸವು ಒಂದೇ ಪ್ರಯತ್ನದಿಂದ ಆಗುತ್ತದೆ. ಆ ಕೆಲಸವು ಆಗದಿದ್ದರೆ ದೈವಬಲ ಇಲ್ಲವೆಂದು ತಿಳಿಯಬೇಕು. ಬುದ್ಧಿವಂತರು ವಿದ್ಯೆಯಿಲ್ಲದಿದ್ದರೂ ಅವರ ಚಾಣಾಕ್ಷತನವನ್ನು ಮುಂದುವರಿಸಿ, ಸಮಸ್ಯೆಗೆ ಪರಿಹಾರ ಹುಡುಕಿ ಜೀವನವನ್ನು ತೃಪ್ತಿಯಿಂದ ಸಾಗಿಸುತ್ತಾರೆ. ಅಯ್ಯಪ್ಪನನ್ನು ಪ್ರಾರ್ಥಿಸಿ.

ಮೀನ: ಕ್ರೋಧಿ ನಾಮ ಸಂವತ್ಸರದ ಶುಕ್ಲ ಪಕ್ಷವು ಅಂತ್ಯ ಭಾಗಕ್ಕೆ ಬಂದು, ಸಂವತ್ಸರವು ಕಳೆದು ನೂತನ ಸಂವತ್ಸರಕ್ಕೆ ನಾವೆಲ್ಲರೂ ಕಾಲಿಡುತ್ತೇವೆ. ಈ ವರ್ಷ ಶನಿ-ಗುರು-ರಾಹು-ಕೇತು- ಶುಕ್ರರು ತಮ್ಮ ಸ್ಥಾನಗಳನ್ನು ಬದಲಾಯಿಸುತ್ತಾರೆ. ರಾಷ್ಟ್ರದ ನಕ್ಷೆಯಲ್ಲಿ ಬದಲಾವಣೆಯಾಗಲಿದೆ. ಮನುಷ್ಯ ಮಾತ್ರರಾದ ನಾವು ನಮ್ಮ ರಾಶಿ ನಕ್ಷತ್ರಗಳು, ಗ್ರಹಗಳನ್ನು ಅರಿತುಕೊಂಡು ನಡೆದರೆ ಸಾರ್ಥಕವಾದ ಜೀವನವನ್ನು ಸುಖವಾಗಿಸಿಕೊಳ್ಳಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net