ವಾರಭವಿಷ್ಯ: ಮನುಷ್ಯನಿಗೆ ಪ್ರತಿ ನಿಮಿಷವೂ ಮುಖ್ಯ, ದೇವರೇ ನಿಮ್ಮ ಸಮಯವನ್ನು ನಿಗದಿ ಮಾಡಿರುತ್ತಾನೆ

Vara-Bhavishya-2
Published on

ಮೇಷ: 14ನೇ ತಾರೀಖಿನಿಂದ ಶುಭಾರಂಭವಾಗುವ ವಾರವು 15ನೇ ತಾರೀಖು ಮಕರ ಸಂಕ್ರಮಣದಂದು ಸೂರ್ಯನು ಊರ್ಧ್ವುುಖನಾಗಿ ದಕ್ಷಿಣಾಯನ ಪಥ ಉತ್ತರಾಯಣಕ್ಕೆ ಸಾಗಿ ಮಾಘಾದಿ ಪಂಚ ಮಾಸಗಳು ಶುಭ ಕಾರ್ಯ, ಯಜ್ಞ ಯಾಗಾದಿಗಳು ನಡೆಯುವ ಕಾಲವಿದ್ದು ಇದೇ ಸಮಯಕ್ಕೆ ಭಾರತದ ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನನ್ನು ಪ್ರತಿಷ್ಠಾಪಿಸಿ ವೈಭವ ಭಾರತ ನಿರ್ಮಾಣ ಮಾಡಲು ಸರ್ಕಾರಗಳು ಸಜ್ಜಾಗಿವೆ. ರಾಶ್ಯಾಧಿಪತಿ ಕುಜನು ಸ್ಕಂದ ರೂಪದಲ್ಲಿ ಕಾಣುತ್ತಾನೆ. ರಾಮಸ್ಕಂದಂ ಹನುಮಂತಂ ವೈನತೇಯಂ ವೃಕೋಧರಂ. ಮೇಷ ರಾಶಿಯವರು ಸ್ಕಂದನನ್ನು, ಶ್ರೀರಾಮಚಂದ್ರನನ್ನು ಪೂಜಿಸಿ. ವಿಶಾಲವಾದ ಭಾವನೆ, ಧ್ಯೇಯ, ಸಂಕಲ್ಪ ನಡೆಸಿ ಸಂತೋಷಪಡುವ ಕಾಲ. ಆರೋಗ್ಯದಲ್ಲಿ ಎಚ್ಚರ. ತಾವು ತಮ್ಮ ಕಾರ್ಯಗಳಲ್ಲಿ ಮುಂದುವರಿಯಿರಿ.

ವೃಷಭ: ಈ ರಾಶಿಗೆ ದಶಮದಲ್ಲಿ ಶನಿಯಿದ್ದು, ನೂರಾರು ತಡೆಯಿದ್ದರೂ ಕೆಲಸಗಳು ನಿಮ್ಮದೇ ಎಂದು ತತ್ವ ಸಾರುತ್ತದೆ. ದ್ವಾದಶ ಗುರುವಿಗೆ ಕೇರಳದ ಗುರುವಾ ಯೂರಿನಲ್ಲಿ ಇರುವ ಗುರುವಾಯೂರಪ್ಪನನ್ನು ಪೂಜಿಸಿ. ಗುರು ಮಠವೇ ಎಂದು ಪ್ರಸಿದ್ಧವಾಗಿರುವ ಗಾಣಗಾಪುರದ ಗುರುದತ್ತನ ಚರಿತ್ರೆಯನ್ನು ಓದಿರಿ. ಎಲ್ಲ ಕೆಲಸಗಳು ಕೈಗೂಡುತ್ತದೆ. ಖರ್ಚು ವೆಚ್ಚಗಳಿಗೆ ಕಡಿವಾಣವಿರಲಿ. ಶುಕ್ರಾಧಿಪತ್ಯ ಇರುವ ರಾಶಿಯವರು ಹೆಣ್ಣು ಮಕ್ಕಳನ್ನು ಪೂಜಿಸಿ. ದೇವಿಯ ಅನುಗ್ರಹ ಬೇಡಲೇಬೇಕು. ಆರೋಗ್ಯವು ಸುಸ್ಥಿರವಾಗಿರಲು ಶಿಸ್ತುಬದ್ಧ ಜೀವನ ನಡೆಸಿ.

ಮಿಥುನ: ನವಮದಲ್ಲಿ ಶನಿ, ಏಕಾದಶದಲ್ಲಿ ಗುರು ಈ ಎರಡು ಗ್ರಹಗಳು ಸಾಕು ಮನುಷ್ಯನ ಉನ್ನತಿಗೆ. ನಕಾರಾತ್ಮಕ ಚಿಂತನೆ ಬರುವುದು ಸಹಜ. ಅದನ್ನು ಮಾಡದೆ ನಿಮ್ಮ ಕೆಲಸಗಳಲ್ಲಿ ಮುಂದೆ ಸಾಗಿದರೆ ಯಾವುದೂ ಕಷ್ಟ ಅಲ್ಲ. ಸೂರ್ಯ ನಾರಾಯಣನನ್ನು ಮಹಿವಿಷ್ಣುವನ್ನು ಪ್ರಾರ್ಥಿಸಿ, ಪೂಜಿಸಿ. ಶುಭವಾಗಲಿ.

ಕಟಕ: ಈ ರಾಶಿಗೆ ಸೂರ್ಯನು ಸಪ್ತಮಕ್ಕೆ ಬರುವುದು, ದಶಮದಲ್ಲಿ ಗುರು ಇರುವುದರಿಂದ ಯಥಾವಿಧಿಯಾಗಿ ಸಮಾಧಾನ ಚಿತ್ತರಾಗಿ ಯಾವುದೇ ಕೆಲಸ ಕಾರ್ಯಗಳನ್ನು ನಡೆಸಿಕೊಳ್ಳಬಹುದು. ದೇವರೊಬ್ಬ ನಾಮ ಹಲವು ಎಂಬಂತೆ ಯಾವ ಸ್ವರೂಪದಲ್ಲಿ ಪೂಜೆ ಮಾಡಿದರೂ ದೇವರಿಗೆ ಮುಟ್ಟುತ್ತದೆ. ನಿಮ್ಮ ಪೂಜೆಯು ತಲುಪಿ ಸ್ಥಿರವಾದ ಆರೋಗ್ಯ, ಶುದ್ಧವಾದ ಮನಸ್ಸನ್ನು ಇಟ್ಟುಕೊಂಡರೆ ಎಲ್ಲವೂ ನಿಮ್ಮ ಕೈಸೇರಿ ಕೆಲಸಗಳು ಮುನ್ನಡೆಯುತ್ತವೆ. ಗುರು ದತ್ತಾತ್ರೇಯನನ್ನು ಪ್ರಾರ್ಥಿಸಿ.

ಸಿಂಹ: ರಾಶ್ಯಾಧಿಪತಿ ಆರಕ್ಕೆ ಬಂದು ಪ್ರಕಾಶಮಾನನಾದ ಸೂರ್ಯನು ಜಗತ್ತಿಗೆ ಕಾರಕನು, ಕತ್ತಲೆಯನ್ನು ದೂರ ಮಾಡುವ ಸೂರ್ಯ ನಾರಾಯಣನ ಪ್ರಾರ್ಥನೆಯಿಂದ ನಿಮ್ಮ ಕೆಲಸಗಳು ಕೈಗೂಡುತ್ತವೆ. ಬೇಕಾದಷ್ಟು ಶುಭ ಕೆಲಸಗಳು ನಡೆದು ನಿಮ್ಮನ್ನು ಅಭಿವೃದ್ಧಿ ಪಥಕ್ಕೆ ಕೊಂಡೊಯ್ದು ಭಾಗ್ಯದ ಬಾಗಿಲು ತೆರೆದಿದೆ. ಗುರುವಿಗಾಗಿ ದತ್ತ ದೇವರ ಬಾಗಿಲನ್ನು ತಟ್ಟಿ ಅವನನ್ನು ಎಬ್ಬಿಸಿ ಅವನ ಧ್ಯಾನದಲ್ಲಿದ್ದು ಗುರುಸೇವೆ ಮಾಡಿದರೆ ರಾಜಯೋಗವು ನಿಮ್ಮದಾಗುತ್ತದೆ. ಕೇತುವಿನಿಂದ ಖಿನ್ನ ಮನಸ್ಸು. ಯಾರೊಂದಿಗೂ ಜಟಾಪಟಿ ಮಾಡುವುದು ಬೇಡ.

ಕನ್ಯಾ: ಅತಿಯಾಸೆಯು ದುಃಖಕ್ಕೆ ಕಾರಣವಾಗುತ್ತದೆ. ಆರರಲ್ಲಿ ಶನಿ ಇದ್ದು, ದುಡಿಮೆಗೆ ತಕ್ಕ ಫಲವನ್ನು ಕೊಡುತ್ತಾನೆ. ಧರ್ಮದಿಂದ ನಡೆದರೆ ಏನಿದ್ದರೂ ಒಪ್ಪುತ್ತಾನೆ. ಭಗವಂತ ಧರ್ಮದ ಚೌಕಟ್ಟು ಬಿಟ್ಟರೆ ಭೋಗ-ಭಾಗ್ಯ ಕೊಡುವ ವಿಷ್ಣುವು ರುದ್ರನನ್ನು ಮೊರೆ ಹೋಗಿ ನಾವು ಮಾಡುವ ಪಾಪ-ಪುಣ್ಯವನ್ನು ಧರ್ಮನ ಮುಂದೆ ಇಟ್ಟು ಈಶ್ವರನು ನ್ಯಾಯಸಮ್ಮತ ಶಿಕ್ಷೆ ಕೊಡುತ್ತಾನೆ. ಆರೋಗ್ಯದ ಬಗ್ಗೆ ಎಚ್ಚರ ಇರಲಿ. ಶನಿಯಿಂದ ಯಾವ ಧನ ಕೊರತೆಯಾಗಲಿ ಕೆಲಸಕ್ಕೆ ಅಡ್ಡಿ ಆತಂಕವಾಗಲಿ ಬರುವುದಿಲ್ಲ. ಕೊಡಬೇಕಾದವರಿಗೆ ಕೊಟ್ಟು ಉಳಿದದ್ದು ಪ್ರಗತಿ ತರುತ್ತದೆ. ಗೋವಿಂದನ ಅಷ್ಟೋತ್ತರ ಪಾರಾಯಣ, ನಾಮಸ್ಮರಣೆ ಮಾಡಿ.

ತುಲಾ: ಕೆಲಸಗಳು ತಡವಾದರೂ ಕಷ್ಟ. ಮನುಷ್ಯನು ಒತ್ತಡಕ್ಕೆ ಸಿಲುಕಿದರೂ ಕಷ್ಟ. ತುಲಾ ರಾಶಿಯಲ್ಲಿ ಹುಟ್ಟಿದ ನೀವು ನಿಮ್ಮ ಸಮತೋಲನವನ್ನು ಕಾಯ್ದುಕೊಳ್ಳಿ. ಆತುರ ಪಡದೇ ಕೆಲಸ ನಿಭಾಯಿಸಿದರೆ ಯಶಸ್ವಿಯಾಗುತ್ತೀರಿ. ಮನುಷ್ಯನು ತನಗೆ ಉಂಟಾಗುವ ಆನಂದವನ್ನು ಬಿಡಬಾರದು. ಭಗವಂತನ ಕೃಪೆ ಪರಿಪೂರ್ಣವಾಗಿದೆ. ಕೇಳಿದ್ದನ್ನು ಕೊಡಲು ಪರಮಾತ್ಮನು ಗುರುವಾಗಿ ಸಪ್ತಮದಲ್ಲಿ ಇದ್ದಾನೆ. ದತ್ತಾತ್ರೇಯನ ಗುರು ಚರಿತ್ರೆ ಅಧ್ಯಾಯವನ್ನು ಓದಿರಿ.

ವೃಶ್ಚಿಕ: ಮನುಷ್ಯನ ಆಸೆಯನ್ನು ಪ್ರಪಾತಕ್ಕೆ ಹೋಲಿಸಲಾಗುತ್ತದೆ. ಆಸೆ ಇದ್ದರೆ ಸಾಲದು. ಜೀವನದಲ್ಲಿ ಆತ್ಮವಿಶ್ವಾಸ ಇರಲೇಬೇಕು. ಯಾರನ್ನು ಪೂಜಿಸಿದರೂ ಅಂಗಾರಕ ಸ್ವರೂಪಿ ಷಡಾನನನ್ನು ಪೂಜಿಸಿ. ನಿಮ್ಮ ಜೀವನದಲ್ಲಿ ಆಗಿಹೋದ ಘಟನೆಗಳನ್ನು ಸರಿ ಮಾಡಿಕೊಂಡರೆ ಧನ, ಧೈರ್ಯ, ಚತುರತೆಯನ್ನು ದೇವರೇ ನೀಡುತ್ತಾನೆ. ಶುಭಕ್ಕೆ ಷಡಾನನನ್ನು, ಷಷ್ಠ ಗುರುವಿಗೆ ಗುರು ದತ್ತಾತ್ರೇಯನನ್ನು ಪ್ರಾರ್ಥಿಸಬೇಕಾಗುತ್ತದೆ.

ಧನು: ಓದಿದವನು ವಿನಯದಿಂದಲೂ ವಿವೇಕದಿಂದಲೂ ವರ್ತಿಸಿದರೆ ಜನರು ಇಷ್ಟಪಡುತ್ತಾರೆ. ಲೋಕವೂ ಮೆಚ್ಚುತ್ತದೆ. ವಿದ್ಯೆ ಇದ್ದು ಅಹಂಕಾರ ಮೂಡಿದರೆ ಯಾರೂ ಹತ್ತಿರವೂ ಬರುವುದಿಲ್ಲ. ಸಹಕಾರವನ್ನೂ ಕೊಡುವುದಿಲ್ಲ. ಮಾತು ಮೃದುವಾಗಿರಲಿ. ಪಂಚಮದಲ್ಲಿ ಗುರು ನಿಮಗೆ ದೊಡ್ಡ ವ್ಯಕ್ತಿತ್ವವನ್ನು ಕೊಟ್ಟಿರುತ್ತಾನೆ. ಏನು ಬೇಕಾದರೂ ಸಾಧಿಸಬಹುದು. ದಕ್ಷಿಣಾಮೂರ್ತಿಯನ್ನು ಪೂಜಿಸಿ, ಪ್ರಾರ್ಥಿಸಿ.

ಮಕರ: ಶನಿ ಸಂಚಾರವು ಇನ್ನೇನು ಶತಭಿಷ ನಕ್ಷತ್ರಕ್ಕೆ ಬಂದು ಸೇರುತ್ತದೆ. ನಿಮಗೆ ನೀವು ಮಾಡುವ ಕೆಲಸಗಳಲ್ಲಿ ಅಚ್ಚರಿಯಾದ ಜಯವೂ ಧನಲಾಭವೂ ಆಗುತ್ತದೆ. ಮೂಲತೋ ಬ್ರಹ್ಮ ರೂಪಾಯ ಮಧ್ಯತೋ ವಿಷ್ಣು ರೂಪಿಣೇ ಅಗ್ರತೋ ಶಿವ ರೂಪಾಯ ವೃಕ್ಷ ರಾಜಾಯ ತೇ ನಮಃ ಎಂಬಂತೆ ತ್ರಿಮೂರ್ತಿಗಳು ವಾಸವಾಗಿರುವ ಅಶ್ವಥ ವೃಕ್ಷಕ್ಕೆ ಪ್ರದಕ್ಷಿಣೆ ಹಾಕಿರಿ. ನಿಮ್ಮ ಗ್ರಹಚಾರದ ಗಂಟನ್ನು ಅವನೇ ಬಿಚ್ಚಿಸಿ ಸುಖ ನೀಡುತ್ತಾನೆ. ಪ್ರಾತಃ ಕಾಲದಲ್ಲಿ ಎದ್ದು ಸೂರ್ಯನಿಗೆ ನಮಸ್ಕರಿಸಿರಿ.

ಕುಂಭ: ಮನುಷ್ಯನಿಗೆ ಪ್ರತಿ ನಿಮಿಷವೂ ಮುಖ್ಯ. ದೇವರೇ ನಿಮ್ಮ ಸಮಯವನ್ನು ನಿಗದಿ ಮಾಡಿರುತ್ತಾನೆ. ಅವನು ಕೊಟ್ಟಿರುವ ಶುಭ ಸಮಯದಲ್ಲಿ ದೇವರನ್ನು ನಂಬಿ ನಡೆದರೆ ಯಾರಿಗೂ ಅಪಜಯ ಉಂಟಾಗುವುದಿಲ್ಲ. ನಿಧಾನವಾದರೂ ನಿರ್ದಿಷ್ಟವಾದ ಗುರಿ ತಲುಪುತ್ತೀರಿ. ಆದರೂ ಮಹಾಲಕ್ಷ್ಮೀಯನ್ನು ಪೂಜಿಸಿ. ನಿಮಗೆ ದೇವಿಯೇ ಸಾಕಷ್ಟು ಧನವನ್ನು ನೀಡಿ ಎಲ್ಲೂ ಅಪಮಾನಗಳು ಉಂಟಾಗದಂತೆ ನೋಡಿಕೊಳ್ಳುತ್ತಾಳೆ. ಲಕ್ಷ್ಮೀ ಅಷ್ಟಕವನ್ನು ಪಠಿಸಿ.

ಮೀನ: ಶನಿ ಸಂಚಾರವು ಶುರುವಾಗಿದ್ದರೂ ದ್ವಾದಶದಲ್ಲಿರುವ ಶನಿಯನ್ನು ಕಟ್ಟಿ ಹಾಕಿರುವವನು ರಾಶ್ಯಾಧಿಪತಿಯಾದ 2ನೇ ಮನೆ ಗುರುವು. ಗುರುವೆಂದರೆ ಶಿವ-ಬ್ರಹ್ಮ-ವಿಷ್ಣು ಮೂಲವೆಂದು ಎಲ್ಲ ಗ್ರಂಥಗಳು ಸಾರುತ್ತವೆ. 2ನೇ ಮನೆ ಗುರುವು ಶುಭವನ್ನು ಉಂಟು ಮಾಡುತ್ತಾನೆ. 12ರ ಶನಿ ದೇಹಾಲಸ್ಯ ಉಂಟು ಮಾಡುತ್ತಾನೆ. ಅದಕ್ಕಾಗಿ ಶನಿ ಅಷ್ಟೋತ್ತರ ಪಾರಾಯಣ ಮಾಡಿ ಔದುಂಬರ ವೃಕ್ಷಕ್ಕೆ ಪ್ರಾತಃ ಕಾಲದಲ್ಲಿ ಪ್ರದಕ್ಷಿಣೆ ನಮಸ್ಕಾರ ಮಾಡಿರಿ. ಪಾರ್ವತಿ ಸಹಿತ ಸಾಂಬಸದಾಶಿವನ ಅಷ್ಟೋತ್ತರವನ್ನು ಪಾರಾಯಣ ಮಾಡಿ. ಶುಭವಾಗಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net