

ಮೇಷ: ಈ ರಾಶಿಗೆ ಗುರು ಸಂಚಾರವು 12ರಲ್ಲಿ ಇದ್ದು ಗುರು ಬಲ ಶೂನ್ಯ ಆಗಿರುತ್ತದೆ. ವಿಚಾರ, ವ್ಯವಹಾರ ಜಾಗರೂಕತೆಯಿಂದ ಸಾಗಿದರೆ ಮಾತ್ರವೇ ತಮಗೆ ಆನುಕೂಲ. ಸುಬ್ರಮಣ್ಯ ದೇವರನ್ನು ಪ್ರಾರ್ಥಿಸಿ. ಸೂರ್ಯನ ಆರಾಧನೆ ಇರಲಿ.
ವೃಷಭ: ಶುಕ್ರನು ಶನಿಯೊಂದಿಗೆ ಇರುವುದರಿಂದ ಶುಭ ಫಲ ಕೊಡಲು ಉದ್ಯುಕ್ತ ಆಗಿರುತ್ತಾನೆ. ಅದನ್ನು ಉಪಯೋಗಿಸಿಕೊಂಡು ಹಣದ ಸಮಸ್ಯೆ ಬಗೆಹರಿಸಿಕೊಳ್ಳಿ. ಆಡಿದ ಮಾತು, ಒಡೆದ ಮುತ್ತು ಎಂದೂ ಒಂದುಗೂಡಿಸಲು ಸಾಧ್ಯವಿಲ್ಲ. ಹೆಣ್ಣುಮಕ್ಕಳ ಹತ್ತಿರ ವಾದ ವಿವಾದ ಮಾಡದಿರಿ. ದುರ್ಗೆಯನ್ನು ಪೂಜಿಸಿ.
ಮಿಥುನ: ಏಕದಶಕ್ಕೆ ಗುರು ಇನ್ನೂ ಬಂದಿಲ್ಲದಿದ್ದರೂ ಹತ್ತನೇ ಮನೆ ಫಲವೇ ಕೊಡುವುದರಿಂದ ಯಾವ ಕೆಡಕು ಬಾರದೆ ನಿಮಗೆ ರಕ್ಷಣೆ ಲಭಿಸುತ್ತದೆ. ನವಮ ಶನಿಯು ಕೆಲವೊಂದು ಕೆಲಸ ಕಾರ್ಯ ಮಾಡಿಕೊಟ್ಟು ಸಂತೋಷಪಡಿಸುತ್ತಾನೆ. ಎಡವಿಬಿದ್ದರೆ ಯಾರೂ ರಕ್ಷಿಸಲು ಆಗುವುದಿಲ್ಲ. ತುಚ್ಛ ಮಾತು ಆಡಿ ನೀವು ಜನತೆಯ ಮುಂದೆ ಬೀಳದ ರೀತಿಯಲ್ಲಿ ನಿಮ್ಮ ಪ್ರಯಾಣ ಇರಲಿ. ಅಶ್ವತ್ಥ ವೃಕ್ಷ ಪ್ರದಕ್ಷಿಣೆ ಮಾಡಿ, ಒಳ್ಳೆಯ ಫಲ ಸಿಕ್ಕು ಕಾರ್ಯಾನುಕೂಲ ಆಗುತ್ತದೆ.
ಕಟಕ: 9ನೇ ಮನೆಯಲ್ಲಿ ಗುರು ಇದ್ದು ರಕ್ಷಣೆ ಕೊಟ್ಟವನು ದೇವರ ದೇವ ಮಹಾದೇವ. ಋಷಿ, ತಪಸ್ವಿಗಳಲ್ಲಿ, ಅನುಷ್ಠಾನ ಮಾಡುವವರಲ್ಲಿ ಪ್ರತ್ಯಕ್ಷ ಈಶ್ವರನನ್ನು ಕಾಣಬೇಕು. ಅಷ್ಟಮ ಶನಿಗೆ ಈಶ್ವರ ಪೂಜೆ ಅತಿ ಅವಶ್ಯಕ. ಚಂದ್ರ ಅಷ್ಟೋತ್ತರ ಪಾರಾಯಣ ಮಾಡಿ ಮನಸನ್ನು ಹತೋಟಿಯಲ್ಲಿ ಇಟ್ಟುಕೊಂಡರೆ ಶುಭ ಫಲ ಕಾಣುತ್ತೀರಿ.
ಸಿಂಹ: ಶನಿ ಸಪ್ತಮದಲ್ಲಿ ಇದ್ದು ಗುರು ಅಷ್ಟಮದಲ್ಲಿ ಇದ್ದಾನೆ. ಈ ನಮ್ಮ ಜಗತ್ತು ದೈವಾಧೀನವಾಗಿದೆ. ದೇವರು, ಧರ್ಮ, ಭಕ್ತಿ ಬಿಟ್ಟು ಮನುಷ್ಯನು ಮಾಡುವುದು ಏನು? ಕಷ್ಟ ಕಾರ್ಪಣ್ಯ ಕಳೆದು ಸ್ವತಂತ್ರವಾಗುವ ಸಮಯ. ಒಳ್ಳೆಯ ಬದುಕನ್ನು ನಡೆಸಲು ಸೂರ್ಯನನ್ನು ಪ್ರಾರ್ಥಿಸಿ. ಗಣೇಶನನ್ನು, ಸುಬ್ರಮಣ್ಯನನ್ನು ಆರಾಧಿಸಿ.
ಕನ್ಯಾ: ಶನಿಯ ಸಂಕಟದಿಂದ ಆಚೆ ಬಂದಿದ್ದೀರಿ. ಸುಖ ಜೀವನ ನಡೆಸುವ ಸಮಯ. ಗುರುವು ಸಪ್ತಮದಲ್ಲಿ ಇದ್ದು, ಒಳ್ಳೆ ಫಲ ಕೊಡುತ್ತಾನೆ. ಕನ್ಯಾ ರಾಶಿಯವರು ಆಕಸ್ಮಿಕ ಚಿಂತೆ ಯಿಂದ ಆರೋಗ್ಯ ಹಾಳು ಮಾಡಿಕೊಳ್ಳಬಾರದು. ಅತ್ಯಂತ ಕ್ಷಿಪ್ರ ಫಲ ಕೊಡುವ ಲಕ್ಷ್ಮಿ ನರಸಿಂಹ ದೇವರನ್ನು ಪೂಜಿಸಿ.
ತುಲಾ: ಯಾವುದೇ ವಸ್ತುವನ್ನು ತೂಗದೆ ತೂಕ ಮಾಡಲಾಗುವುದಿಲ್ಲ. ನಿಮ್ಮ ಭಕ್ತಿ, ಶ್ರದ್ಧೆ ನೀವೇ ತೂಗಿಸಿಕೊಂಡು ಹೋಗಬೇಕು. ಶ್ರೀ ಕೃಷ್ಣನನ್ನು ರುಕ್ಮಿಣಿಯು ತುಳಸಿಯ ದಳದಿಂದಲೇ, ಪಾರಿಜಾತ ಪುಷ್ಪದಿಂದಲೇ ಅರ್ಚಿಸಿ ಒಲಿಸಿಕೊಂಡಂತೆ ಅನಂತವಾಗಿ ಕೃಷ್ಣನನ್ನು ಪೂಜಿಸಿ. ಪಂಢರಪುರದ ಪಾಂಡುರಂಗನನ್ನು ದರ್ಶಿಸಿ ಬನ್ನಿ. ಗುರು ಚರಿತ್ರೆಯ 5, 11 ಮತ್ತು 14ನೇ ಅಧ್ಯಾಯ ಪಾರಾಯಣ ಮಾಡಿದರೆ ದೈವ ಸಂತೃಪ್ತಗೊಂಡು ಲಾಭ ತಂದುಕೊಡುತ್ತದೆ.
ವೃಶ್ಚಿಕ: ವಿಚಾರ, ವಿಷಯ, ನಿರ್ಣಯಗಳನ್ನಾಗಲಿ ಚರ್ಚಿಸದೆ, ದೇವರನ್ನು ನಂಬಿ ಸ್ವಚ್ಛ ಮನಸ್ಸಿನಿಂದ ಪ್ರಾರ್ಥನೆ ಮಾಡಿದರೆ ಒಳ್ಳೆಯದಾಗುತ್ತದೆ. ಇನ್ನು 20 ದಿನಗಳು ಮಾತ್ರವೇ ಉಳಿದಿದ್ದು, ಗ್ರಹ ಸ್ಥಿತಿ ಬದಲಾಗಿ ಸುಖ, ಧನ ದೊರೆಯುತ್ತದೆ. ಸುಬ್ರಹ್ಮಣ್ಯನ ಪ್ರಾರ್ಥನೆ ಅತ್ಯಗತ್ಯ. ಕ್ಷಿಪ್ರ ಗಣಪತಿ ಮಂತ್ರವನ್ನು ಪಠಿಸಿ.
ಧನುಸ್ಸು: ಸಮುದ್ರದ ಅಲೆಯಂತೆ ಆಸೆ-ನಿರಾಸೆ ಮನುಷ್ಯನ ಬಾಳಲ್ಲಿ ಹಾಸುಹೊಕ್ಕಾಗಿದೆ. ಯಾವುದಾದರೂ ದೊರೆಯಬೇಕಾದರೆ ಪರಮಾತ್ಮನ ಅನುಗ್ರಹ ಒಂದೇ ಸಾಕು. ಸದೃಢವಾದ ಭಕ್ತಿಯಿಂದ ಗುರು ಪ್ರಾರ್ಥನೆ ಇರಲಿ. ಆಕಾಶ ಮುಟ್ಟಬಹುದು. ಕೆಲವೊಂದು ವಿಚಾರಗಳಲ್ಲಿ ವಿರೋಧ ಇದ್ದರೂ ಮುಂದಿನ ದಿನಗಳಲ್ಲಿ ಎಲ್ಲವೂ ನಿಮ್ಮಂತೆ ಸಾಗುತ್ತದೆ. ರಾಮನನ್ನು ಪ್ರಾರ್ಥಿಸಿ. ಅನಂತಪದ್ಮನಾಭನ ಅಷ್ಟೋತ್ತರ ಪಾರಾಯಣ ಮಾಡಿ.
ಮಕರ: ಶನಿಯು ದ್ವಿತೀಯಕ್ಕೆ ಬಂದಿದ್ದಾನೆ. ಅವನ ತಾಪ ಕಡಿಮೆ ಆದರೂ ಪೂಜಿಸುವುದು ಕಡಿಮೆ ಆಗಬಾರದು. ಸಮಸ್ಯೆಯಿಂದ ಬೆಂದಿರುವ ನಿಮಗೆ ಧೈರ್ಯ ಕೊಟ್ಟು ಕಷ್ಟದಿಂದ ಪಾರು ಮಾಡುತ್ತಾನೆ. ಶನಿ ಅಷ್ಟೋತ್ತರ ಪಾರಾಯಣ ಮಾಡಿ. ಸೋಮವಾರ ಈಶ್ವರನನ್ನು ಪೂಜಿಸಿ. ಒಂದು ಹೊತ್ತು ಊಟ ಮಾಡಿ. ದೇಹಕ್ಕೂ ಸೌಖ್ಯ, ಮನಸ್ಸಿನ ಸಂಕಲ್ಪವೂ ಈಡೇರುತ್ತದೆ.
ಕುಂಭ: ದ್ವಾದಶ ಶನಿ ಜನ್ಮಕ್ಕೆ ಬಂದಿದ್ದಾನೆ. ಗುರು ಕಟಾಕ್ಷ ನಿಮ್ಮ ತಲೆ ಮೇಲೆ ಛತ್ರಿಯಂತೆ ನಿಂತಿದೆ. ಬಿಸಿಲು ಮಳೆ ಬಂದರೂ ಜಗ್ಗುವುದಿಲ್ಲ. ಶನಿ ಇದ್ದರೂ ಸಹ ಗುರು ದತ್ತ ಚರಿತ್ರೆ ಪಾರಾಯಣ ಬಿಡಬೇಡಿ. ದಕ್ಷಿಣ ಮೂರ್ತಿ ಪ್ರಾರ್ಥನೆ ಮಾಡಿ. ದೇವರನ್ನು ಶುದ್ಧ ಭಕ್ತಿಯಿಂದ ಪ್ರಾರ್ಥಿಸಿ.
ಮೀನ: ಜನ್ಮ ಗುರು, ದ್ವಾದಶ ಶನಿ ಇದ್ದರೂ ಗುರು ಸ್ವಕ್ಷೇತ್ರದಲ್ಲಿ ಇರುವುದರಿಂದ ಯಾವ ಆಕಸ್ಮಿಕ ಘಟನೆ ನಡೆಯುವುದಿಲ್ಲ. ಗುರುವಿನಲ್ಲಿ ವಿಶ್ವಾಸ ಇದ್ದರೆ ಒಳ್ಳೆಯ ಕೆಲಸವಾಗುತ್ತದೆ. ಸಂಕಟದಿಂದ ಪಾರಾಗಲು ಪರಮಾತ್ಮನ ದಯೆ ಇರಬೇಕು. ನಂಜನ ಗೂಡಿನ ಪಾರ್ವತಿ ಸಹಿತ ಶ್ರೀಕಂಠೇಶ್ವರ ದರ್ಶನ ಮಾಡಿ. ಸಂಕಲ್ಪ ಮಾಡಿದಂತೆ ನಡೆಯುತ್ತದೆ.