ವಾರ ಭವಿಷ್ಯ: ಈ ರಾಶಿಯವರ ಸಂಕಲ್ಪಗಳು ಕೈಗೂಡುವ ಹಾದಿಯಲ್ಲಿವೆ

Vara Bhavishya
Published on

ಮೇಷ:  ಈ ರಾಶಿಯಲ್ಲಿ ಜನಿಸಿದವರು ರಾಶ್ಯಾಧಿಪತಿ ಕುಜನನ್ನು, ತೃತೀಯ ಸ್ಥಾನದಲ್ಲಿರುವ ರಾಹುವನ್ನು, ಒಂಬತ್ತರ ರಾಹುವನ್ನು ಶ್ರದ್ಧಾಭಕ್ತಿಯಿಂದ ಪೂಜಿಸಬೇಕು. ಅಂದರೆ ಸರ್ಪರಾಜ ಷಣ್ಮುಖ ಹಾಗೂ ಸಾಂಬಸದಾಶಿವನನ್ನು, ಪಾರ್ವತಿಯನ್ನು ಪೂಜಿಸಿದಲ್ಲಿ ನೀವು ಕೈಲಾಸವನ್ನೇ ಮುಟ್ಟಬಹುದು. ಆನಂದ, ವಿಫುಲ ಧನವನ್ನು ಅನುಭವಿಸಿ. ಉಪಕಾರಿಗಳಾಗಿ ಬದುಕಿ.

ವೃಷಭ: ರಾಹುವು ನಿಮ್ಮ ಸಂಕಲ್ಪಗಳನ್ನು ಕೈಗೂಡುವಂತೆ ಮಾಡುವ ಹಾದಿಯಲ್ಲಿದ್ದಾನೆ. ಆದರೆ ಅಷ್ಟಮ ಗುರುವು ಸ್ವಕ್ಷೇತ್ರದಲ್ಲಿದ್ದು, ಸಂಧಾನ, ಸಮಾಧಾನ, ತೃಪ್ತಿಯನ್ನು ಬೆಳೆಸಿಕೊಂಡು ವ್ಯವಹರಿಸಿ. ಉಮಾಮಹೇಶ್ವರ ವ್ರತವನ್ನು ಭಾದ್ರಪದ ಪೌರ್ಣಿಮೆಯಂದು ಮಾಡಿ ಅಥವಾ ಮಾಡುವ ಜಾಗಕ್ಕೆ ಹೋಗಿ ನಿಮ್ಮ ಗುರು-ಗುರುಮಾತೆಯನ್ನು ಪೂಜಿಸಿ.

ಮಿಥುನ: ಅಧಿಪತಿ ಬುಧನು 2-9-2020ರಂದು ತನ್ನ ಸ್ವಂತ ಮನೆಯಾದ ಕನ್ಯಾರಾಶಿಗೆ ಬರುತ್ತಾನೆ. 20.09.2020ರಂದು ರಾಹುವು ವೃಷಭಕ್ಕೆ ಸಂಚರಿಸಿ ನಿಮ್ಮ ಕಷ್ಟ-ಕಾರ್ಪಣ್ಯಗಳನ್ನು ಅಲ್ಪ-ಸ್ವಲ್ಪ ಪರಿಹರಿಸಿ ಶಾಂತಚಿತ್ತವನ್ನು ಕೊಡುತ್ತಾನೆ. ಕುಂಭಕೋಣದ ಹತ್ತಿರವಿರುವ ಸ್ವಾಮಿಮಲೈ ಸುಬ್ರಹ್ಮಣ್ಯನನ್ನು ಆರಾಧಿಸಿ.

ಕಟಕ: 31.08.2020 ರಂದು ರಾಶಿಗೆ ಶುಕ್ರನು ಬಂದು ಸೇರಿ ನಿಮ್ಮ ಆರ್ಥಿಕ ಬಿಕ್ಕಟ್ಟನ್ನು ಸಡಿಲಿಸುತ್ತಾನೆ. ಆದರೆ ದ್ವಾದಶ ರಾಹುವು ಚಿಂತೆ, ಅತೃಪ್ತಿಯನ್ನು ಇಟ್ಟಿರುತ್ತಾನೆ. ಸಪ್ತಮ ಶನಿಯು ದೇಹಕ್ಕೆ ಆಲಸ್ಯವನ್ನು, ಅಧಿಕವಾದ ನಿದ್ರೆಯನ್ನು ತರುತ್ತಾನೆ. ಶರೀರವನ್ನು ಅತಿಯಾಗಿ ಬಳಲಿಸಬೇಡಿ. ಮಹಾಲಕ್ಷ್ಮೀ-ಅನಂತನನ್ನು ಆರಾಧಿಸಿ.

ಸಿಂಹ: ರಾಶಿಯ ಒಡೆಯನು ತನ್ನ ಮನೆಯಲ್ಲೇ ಇದ್ದು, ಕೆಲವೊಂದು ಘಟನೆಗಳಿಂದ ಬೇಸರವನ್ನು ತರುತ್ತಾನೆ. ಇನ್ನೊಬ್ಬರು ಮಾಡಿದ ತಪ್ಪಿಗೆ ನೀವು ನಿಂದನೆಗೆ ಒಳಗಾಗುತ್ತೀರಿ. ಎಚ್ಚರವಿರಲಿ. ರವಿಯ ಬೆಳಕನ್ನು ಮುಚ್ಚಿಡಲು ಸಾಧ್ಯವಿಲ್ಲ. ಆರರ ಶನಿ, ಐದರ ಗುರು ಸ್ವಯಂಪ್ರಕಾಶವನ್ನು ಕೊಟ್ಟು ಮುನ್ನಡೆಸುತ್ತಾನೆ. ಧರ್ವಿುಷ್ಟರಾಗಿ ಬದುಕಿ. ಹಣಕ್ಕೆ ಕೊರತೆ ಇಲ್ಲ.

ಕನ್ಯಾ:  ಮಿಥುನ-ಕನ್ಯಾಧಿಪತಿ ಬುಧನು ತನ್ನ ಮನೆಯಲ್ಲಿದ್ದು ಪಂಚಮ ಶನಿಯುಕ್ತನಾಗಿದ್ದಾನೆ. ಈ ಸಂಯೋಗ ಜ್ಞಾನಿಗಳ ಸಂಪರ್ಕವನ್ನು, ಸಲಹೆ ಮಾರ್ಗದರ್ಶನವನ್ನು ಕೊಡುತ್ತದೆೆ. ಅನ್ಯರನ್ನು ಬಾಧಿಸಬೇಡಿ. ವೃಥಾ ನೀವು, ನಿಮ್ಮ ಸಂಗಾತಿ ದೇವರ ಮೇಲೆ ಪ್ರಮಾಣ ಮಾಡಿ ಸುಳ್ಳನ್ನು ಆಡಬೇಡಿ. ಬಿಟ್ಟ ವ್ರತಗಳನ್ನು ಅದರಲ್ಲಿಯೂ ಕೌಂಡಿಣ್ಯ ಋಷಿಯಿಂದ ಹೇಳಲ್ಪಟ್ಟ ಅನಂತನನ್ನು ಮನಸಾ ಭಜಿಸಿ ಪೂಜಿಸಿ.

ತುಲಾ: ಹನ್ನೆರಡರಲ್ಲಿ ಬುಧ, ಮೂರನೇ ಗುರು ಅನಿರೀಕ್ಷಿತ ಸಂಪಾದನೆಯನ್ನು ತರುತ್ತಾರೆ. ಅಂದರೆ ಕಾಲದ ಕೈಗೆ ದೇವರು ಬಯಸಿದ್ದನ್ನು ತರುವನು. ಸುಂದರಕಾಂಡ ಪಾರಾಯಣ ಮಾಡಲು ಮರೆಯದಿರಿ. ಹಗಲಿರುಳು ರಾಮನಾಮವೇ ನಿಮ್ಮ ದೈವಬಲ, ಜಾತಕ ಬಲ. ಎಚ್ಚರಿಕೆಯಿಂದ ಮುನ್ನಡೆಯಿರಿ.

ವೃಶ್ಚಿಕ: ಎರಡರ ಗುರು, ಒಂಬತ್ತರಲ್ಲಿ ಶುಕ್ರನು 31.9.2020 ಬಂದು ನಿಮ್ಮ ಭಾಗ್ಯದ ಬಾಗಿಲು ತಟ್ಟಲಿದ್ದಾನೆ. ಗುರು ಚರಿತ್ರೆಯ 43ನೇ ಅಧ್ಯಾಯ ಅನಂತ ವ್ರತ ಪಾರಾಯಣ ಮಾಡಿ. ಪಾಂಡವರು ಅನಂತನನ್ನು ಪೂಜಿಸಿ ಎಲ್ಲವನ್ನೂ ಹಿಂಪಡೆದುಕೊಂಡರು. ಹಾಗೆಯೇ ನಿಮ್ಮ ಶಕ್ತಿ, ಬುದ್ಧಿವಂತಿಕೆಯಿಂದ ಅಲ್ಪಕಾಲದಲ್ಲೇ ಮನಸ್ಸಿಗೆ ತೃಪ್ತಿಕೊಡುವ ಕೆಲಸವನ್ನು ಮಾಡಿ ಆನಂದಿಸಿ.

ಧನುಸ್ಸು: ರಾಶಿಯಲ್ಲೇ ಗುರುವಿದ್ದು ಕಾಲಾನುಕಾಲಕ್ಕೆ ನಿಮಗೆ ಒಳ್ಳೆಯದು-ಕೆಟ್ಟದ್ದನ್ನು, ಶತ್ರುಗಳನ್ನು-ಮಿತ್ರರನ್ನು ತೋರಿಸುತ್ತಿದ್ದಾನೆ. ಅವಾಂತರ ಬೇಡ. ಆಕಾಶಕ್ಕೆ ಏಣಿಯೂ ಬೇಡ. ನಿತ್ಯವೂ ಗಣಪನಿಗೆ ಗಂಗೆಯಿಂದ ಪೂಜಿಸಿ, ನಿಮಗೆ ಬೇಕಾದ್ದನ್ನು ಕೊಟ್ಟು ನಿಮಗೆ ಏನು ಬೇಡವೋ ಅದೆಲ್ಲವನ್ನೂ ದೇವರೇ ದೂರ ಸರಿಸುತ್ತಾನೆ. ಗುರುಚರಿತ್ರೆಯನ್ನು ನಿತ್ಯ ಪಠಿಸಿ.

ಮಕರ: ಮಕರಾಧಿಪತಿ ಶನಿಯು ಸ್ವಕ್ಷೇತ್ರದಲ್ಲಿದ್ದು, ದ್ವಾದಶ ಗುರುವು ನಿಮ್ಮ ಧರ್ಮ-ಕರ್ಮಗಳನ್ನು, ಪಾಪ ಪುಣ್ಯಗಳನ್ನು ವಿಂಗಡಿಸಿ ಚಿತ್ರಗುಪ್ತನು ಲೆಕ್ಕವಿಡುತ್ತಿದ್ದಾನೆ. ಆದ್ದರಿಂದ ಶನಿಯ ಸಂಚಾರದಲ್ಲಿ ಈಶ್ವರನ ಪೂಜೆಗಿಂತ ಮುಖ್ಯವಾದ ಬೇರೊಂದಿಲ್ಲ. ಉಮಾಮಹೇಶ್ವರರನ್ನು ಆರಾಧಿಸಿ ಇಲ್ಲವೇ ತಿರುವಣ್ಣಾಮಲೈ ಸಂದರ್ಶಿಸಿ.

ಕುಂಭ: ಕುಂಭ ರಾಶಿಗೆ ಗುರುವು ಏಕಾದಶದಲ್ಲಿದ್ದು, ಹನ್ನೆರಡರ ಶನಿಯ ತಾಪದ ಪ್ರಭಾವವನ್ನು ತಟಸ್ಥವಾಗಿ ಮಾಡಿದ್ದಾನೆ. ಗುರುವು ಕೊಟ್ಟ ಧನ, ಸಂತೋಷ ಎಲ್ಲವನ್ನೂ ಹಂಚಿಕೊಳ್ಳಿ. ಅಧಿಪತಿ ಶನಿಯಾಗಿರುವುದರಿಂದ ತಾಳ್ಮೆಯಿರಲಿ. ಅಲ್ಪಸ್ವಲ್ಪವಾದರೂ ಶರೀರಬಾಧೆ, ಅಶಾಂತಿ, ಕೆಲಸಗಳಲ್ಲಿ ಮಂದಗತಿ ಕಾಣುವಿರಿ, ಲಕ್ಷ್ಮೀಸಹಿತ ಸತ್ಯನಾರಾಯಣನನ್ನು ಪೂಜಿಸಿ.

ಮೀನ: ಮೀನ-ಧನಸ್ಸು ರಾಶಿಗೆ ಒಡೆಯನಾದ ಗುರುವು ಧನಸ್ಸಿನಲ್ಲಿ ಇದ್ದು, ಶ್ರೀರಾಮ ಶಿವಧನಸ್ಸನ್ನು ಮುರಿದು ತನ್ನ ಸಾಮರ್ಥ್ಯ ತೋರಿ ಲಕ್ಷ್ಮೀರೂಪವಾದ ಸೀತೆ ಯನ್ನು ವರಿಸಿದನು. ಅಂತಾ ಗುರುವಿರುವಾಗ ಈಶ್ವರಾರ್ಚ ನೆಗಿಂತ ಬೇರೊಂದು ದೈವಮಾರ್ಗವಿಲ್ಲ. ಜನವರಿ 2021ನೇ ಇಸವಿಯವರೆಗೆ ನಿಮಗೆ ಯಾರ ಭಯವೂ ಬೇಡ. ಧರ್ವಸಕ್ತರಾಗಿ, ರಾಷ್ಟ್ರಭಕ್ತರಾಗಿ ಬದುಕಿ. ಶಿವನಿಗೆ ಫಲಪಂಚಾಮೃತ ಪುರಸ್ಸರ ರುದ್ರಾಭಿಷೇಕ ಮಾಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net