ಈ ರಾಶಿಯವರಿಗೆ ಅದೇ ಗುರುವು ಕತ್ತಲೆಯಲ್ಲಿ ಬೆಳಕು ನೀಡಿ ಹರಸುತ್ತಾನೆ: ವಾರಭವಿಷ್ಯ

Vaara-Bhavishya
Published on
ಮೇಷ

ಇಚ್ಛಾ-ಜ್ಞಾನಶಕ್ತಿ ಕೊಟ್ಟು ನಮ್ಮನ್ನು ದೇವರೇ ಭೂಲೋಕಕ್ಕೆ ಕಳಿಸಿದ್ದಾನೆ. ದ್ವಾದಶ ಗುರು, ಏಕಾದಶದಲ್ಲಿ ಶನಿಯಿದ್ದು, ಫಲದಲ್ಲಿ ಸಕಾಲಕ್ಕೆ ಯಾವ ಕೆಲಸವು ಸಾಗದೆ ಶನಿಯ ಲಾಭಸ್ಥಾನವು ಹೆಚ್ಚು ಸತ್ಪಲ ಕೊಡದೆ ಇರುವ ಕಾಲ. ಅಲ್ಲಿಗೆ ಗುರುದತ್ತಾತ್ರೇಯ ಪ್ರಾರ್ಥನೆ ಅತ್ಯಗತ್ಯ. ನಿಧಾನವಾಗಿ ಯೋಚಿಸಿ ಕೆಲಸಗಳಿಗೆ ಕೈಹಾಕಿ. ನಿರಾಶೆ, ದುರಾಸೆ ಬೇಡ. ಷಣ್ಮುಖನನ್ನು ಪ್ರಾರ್ಥಿಸಿ. ದುರ್ಗೆಯನ್ನು ಅರ್ಚಿಸಿ.

ವೃಷಭ

ಏಕಾದಶದಲ್ಲಿ ಇರುವ ಗುರು ಒಬ್ಬನೇ ನಿಮಗೆ ಸಾಕು. ಇಚ್ಛಿಸಿದ ಫಲಕೊಟ್ಟು ಕಾಪಾಡುತ್ತಾನೆ. ದ್ವಾದಶ ರಾಹುವಿನಲ್ಲಿ ಯಾವ ಯಡವಟ್ಟು ಮಾಡಿಕೊಳ್ಳದೆ ನುಡಿದಂತೆ ನಡೆದರೆ ನಿಮ್ಮ ಇಚ್ಛೆಗೆ ಅನುಸಾರ ಫಲ ಸಿಕ್ಕಿ ಸಂತೋಷಪಡುತ್ತೀರಿ. ಕಾರ್ತಿಕೇಯ ಸ್ತೋತ್ರ ಪಾರಾಯಣ ಮಾಡಿರಿ. ನೀಲಾಂಬರಿಯನ್ನು ಅರ್ಚಿಸಿ.

ಮಿಥುನ

ತಾತ್ಕಾಲಿಕವಾಗಿ ಶನಿಯು ಒಂಬತ್ತನೇ ಮನೆಯಲ್ಲಿದ್ದು ಮತ್ತೆ ಅಷ್ಟಮ ಬರುತ್ತಾನೆ. ಗುರುವು ದಶಮದಲ್ಲಿ ಇದ್ದು, ಈ ಸಮಯದಲ್ಲಿ ನೀವು ನಿಮಗೆ ಬೇಕಾದ ಕೆಲಸಗಳನ್ನು ಆಯ್ದುಕೊಂಡು ಆಗುಹೋಗುವ ವಿಚಾರ ಪರೀಕ್ಷಿಸಿ ಮುಂದೆ ಹೋದರೆ ನಿಮಗೆ ನಕಾರಾತ್ಮಕತೆ ನಿಂತು ದೈವಾನುಗ್ರಹ ಬೇಡಿದರೆ ಕಾರ್ಯದಲ್ಲಿ ಯಶಸ್ಸು ಸಿಗುತ್ತದೆ. ಹನುಮಾನ್ ಚಾಲೀಸಾ 11 ಬಾರಿ ಪಾರಾಯಣ ಮಾಡಿರಿ. ವೀರ ಹನುಮಂತನನ್ನು ಪ್ರಾರ್ಥಿಸಿ. ಕಾರ್ಯಾನುಕೂಲವಾಗುವುದು.

ಕಟಕ

ನವಮದಲ್ಲಿ ಗುರುವು ಸ್ವಕ್ಷೇತ್ರದಲ್ಲಿ ಇರುವುದರಿಂದ ನಿಮ್ಮಸುತ್ತಲೂ ಮುಳ್ಳು ತಂತಿಯಿಂದ ಬಿಡಿಸಿ ರಕ್ಷಿಸುತ್ತಾನೆ. ಗುರುವೇ ಸ್ವಕ್ಷೇತ್ರದಲ್ಲಿರುವುದರಿಂದ ನೀವು ಅವನನ್ನು ಆರಾಧಿಸಿದರೆ ಬೇಕಾದ್ದನ್ನು ಕೊಡುತ್ತಾನೆ. ಕುಜ-ರಾಹು ಸಂಧಿಯ ಸಮಯ ನಿಧಾನವಾಗಿ ಸಾಗಿ ಲಕ್ಷ್ಮೀ ನರಸಿಂಹನನ್ನು ಧ್ಯಾನಿಸಿ.

ಸಿಂಹ

ಸೂರ್ಯನನ್ನು ಧ್ಯಾನಿಸುವುದು ನಮ್ಮ ಏಳಿಗೆಗಾಗಿ. ಬೆಳಗಾಗುತ್ತಲೇ ಅವರವರ ಕಷ್ಟ ಕಾರ್ಪಣ್ಯ ಕಳೆದುಕೊಳ್ಳುವ ಹಂಬಲವಿರುತ್ತದೆ. ಗುರು-ಶನಿ ಅವರ ಸ್ಥಾನವನ್ನು ಲೆಕ್ಕಿಸದೆ ಸೂರ್ಯನಾರಾಯಣನ ಆರಾಧನೆ ಮಾಡಿ ನಂಜನಗೂಡಿನಲ್ಲಿರುವ ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ಸೂರ್ಯನನ್ನು ಅರ್ಚಿಸಿ. ಸೂರ್ಯ ಗ್ರಹಕ್ಕೆ ಪೂಜಿಸಿ - ಪ್ರಾರ್ಥಿಸಿ. ಧೈರ್ಯ ಲಾಭ- ಕೀರ್ತಿ ಗಳಿಸಲು ಆತ್ಮವಿಶ್ವಾಸ ಮುಖ್ಯ.

ಕನ್ಯಾ

ಸಪ್ತಮದಲ್ಲಿ ಗುರು, ಸದ್ಯದಲ್ಲಿ ಷಷ್ಠದಲ್ಲಿ ಶನಿಯಿದ್ದು ಸ್ವಲ್ಪ ಮಟ್ಟಿಗೆ ಕಾರ್ಯಾನುಕೂಲ ಆಗಿ ಒತ್ತಡ ತಪ್ಪಿ ಜೀವನವು ಆಶಾದಾಯಕವಾಗಿದೆ. ಕುಲದೇವರ ಹಾಗೂ ವೆಂಕಟೇಶ್ವರನ ಆರಾಧನೆ ಮಾಡಿ. ನಿಮ್ಮ ಪರಿಸ್ಥಿತಿ ಸುಸ್ಥಿರವಾಗಿ ದೈವಭಕ್ತಿಯಿಂದ ಎಲ್ಲವನ್ನೂ ಜಯಿಸಬಹುದು.

ತುಲಾ

ತುಲಾ ರಾಶಿಯಲ್ಲಿ ಕೇತುವಿದ್ದು, ಪಂಚಮ-ಷಷ್ಠ ಸಂಚಾರದ ಶನಿ ಗುರುವಿರುವುದರಿಂದ ಆತ್ಮಬಲ ದೈವಕೃಪೆ ಬೇಕು. ಗಣಪತಿಯನ್ನು- ಶಿವಾರಾಧನೆಯನ್ನು ಶನಿಯ ಪಂಚಮ ಸಂಚಾರ ಮುಗಿಯುವವರೆಗೂ ಮಾಡಲೇಬೇಕಾಗುತ್ತದೆ. ಷಷ್ಠ ಗುರು ಸ್ವಕ್ಷೇತ್ರದಲ್ಲಿ ಇರುವುದರಿಂದ ನಿಮ್ಮ ಗುರುಗಳ ಆಶೀರ್ವಾದ ಪಡೆದು ಬನ್ನಿ. ಆಗದ ಕಾರ್ಯಗಳು ದೈವಾನುಗ್ರಹದಿಂದ ನಿಮ್ಮಂತೆ ನಡೆಯುತ್ತವೆ.

ವೃಶ್ಚಿಕ

ಮೀನಾಧಿಪತಿ ಗುರುವು ಪಂಚಮದಲ್ಲಿ ಇದ್ದು, ಚತುರ್ಥ ಶನಿ ಸ್ವಕ್ಷೇತ್ರದಲ್ಲಿದ್ದು ಅಡೆ-ತಡೆ ತರಬಹುದು. ಹೆದರುವ ಅಗತ್ಯವಿಲ್ಲ. ದ್ವಾದಶ ಕೇತುವಿಗೆ ವರಸಿದ್ಧಿ ವಿನಾಯಕನ ಪ್ರಾರ್ಥನೆ ಮಾಡಿ. ಗರಿಕೆಯಿಂದ ಪೂಜಿಸಿ ಶರವೇಗದಲ್ಲಿ ಕೆಲಸಗಳಾಗಿ ಗುರುವೇ ಸಂರಕ್ಷಿಸುತ್ತಾನೆ. ಗುರು ಅವತಾರದಲ್ಲಿ ಇರುವ ನರಸಿಂಹನನ್ನು ಪೂಜಿಸಿ. ವಿಶೇಷ ಲಾಭ ಪಡೆಯಬಹುದು.

ಧನು

ಧನುರ್ - ಮೀನ ರಾಶಿಗಳ ಏಕೈಕ ದೇವರು ಗುರುವೇ. ಚತುರ್ಥದಲ್ಲಿ ಇದ್ದರೂ, ಗುರುವು ಯಾರಿಗೂ ಕೇಡನ್ನು ಬಯಸುವುದಿಲ್ಲ. ಸತ್ಕರ್ವಚರಣೆ ಇದ್ದು ನಿಮ್ಮ ಗುರುಗಳ ಮೇಲೆ ವಿಶ್ವಾಸವಿರಲಿ. ಏನನ್ನೂ ಜಯಿಸಬಹುದು. ಮೂರರಲ್ಲಿ ಶನಿಯಿದ್ದು, ಮಕರಕ್ಕೆ ಹಿಂದಿರುಗುತ್ತಾನೆ. ಅಲ್ಲಿ ಎಚ್ಚರಿಕೆಯಿಂದ ಸಾಗಿ ನಡೆದರೆ ಯಾವ ಅಡ್ಡಿ-ಆತಂಕ ಇರುವುದಿಲ್ಲ.

ಮಕರ

ಮಕರಕ್ಕೆ ಜುಲೈ12ರಿಂದ ಶನಿಯ ವಕ್ರತ್ವಕ್ಕೆ ಬಂದು ಕೆಲವು ಸಮಸ್ಯೆಗಳು ಉದ್ಭವಿಸಬಹುದು. ಸಮಸ್ಯೆಗಳನ್ನು ಇಚ್ಛಾ-ಜ್ಞಾನ ಶಕ್ತಿಯಿಂದ ಸರಿಪಡಿಸಿಕೊಳ್ಳಬೇಕೇ ಹೊರತು ಚಿಂತೆಯಿಂದ ಯಾವ ಕಾರ್ಯವೂ ಸಾಗುವುದಿಲ್ಲ. ಗುರು ದತ್ತನನ್ನು ಆರಾಧಿಸಿ. ಗುರುಚರಿತ್ರೆಯ 16ನೇ ಅಧ್ಯಾಯ ಪಾರಾಯಣ ಮಾಡಿ. ಬದುಕಿನ ಮಾರ್ಗ ತೋರಿಸುವ ಗುರು ಸಿಕ್ಕು ನಿಮ್ಮ ಜೀವನದ ಅಭಿಲಾಷೆಯನ್ನು ಪೂರ್ಣಗೊಳಿಸುತ್ತಾನೆ.

ಕುಂಭ

ಶನಿಯು ಸ್ವಕ್ಷೇತ್ರದಲ್ಲಿದ್ದು, ದ್ವಿತೀಯ ಗುರುವು ಮೀನದಲ್ಲಿದ್ದು, ಸ್ವಲ್ಪ ಕಾಲ ನಿಮಗೆ ಶನಿತಾಪವು ತಪ್ಪಿ ಗುರುವಿನ ಅನುಗ್ರಹ ಸಿಕ್ಕಿದೆ. ಶನಿಗೆ ಶಿವಸಹಸ್ರನಾಮ ಪಾರಾಯಣ ಮಾಡಿ. ಗುರುವಿನ ಅಂಶವಿರುವ ಸ್ವಾಮಿಮಲೈ ನೆಲೆಸಿರುವ ಸುಬ್ರಹ್ಮಣ್ಯನ ದರ್ಶನ ಮಾಡಿ. ಸಾಧ್ಯವಾದರೆ ವಿಭೂತಿ ಅಭಿಷೇಕ ಮಾಡಿಸಿ.

ಮೀನ

ದ್ವಾದಶದಲ್ಲಿರುವ ಶನಿಯು 12ರ ಜುಲೈ ಇಂದ ಏಕಾದಶಕ್ಕೆ ಬಂದು ನಿಮ್ಮ ಜೀವನವು ಇನ್ನೂ ವೇಗದಲ್ಲಿ ಸಾಗುತ್ತದೆ. ಲಗ್ನದಲ್ಲಿರುವ ಗುರುವಿಗೆ ಪ್ರಾರ್ಥಿಸಿ. ಸಜ್ಜನ ಸಾಧುಗಳೊಂದಿಗೆ ಬೆರೆತು ಜೀವನಪಾಠ ಕಲಿತರೆ ಕಷ್ಟ ಕಾಣುವುದಿಲ್ಲ. ಅದೇ ಗುರುವು ಕತ್ತಲೆಯಲ್ಲಿ ಬೆಳಕು ನೀಡಿ ಹರಸುತ್ತಾನೆ. ಉಮಾ ಮಹೇಶ್ವರ ಸ್ತೋತ್ರ ಪಠಿಸಿ. ಗುರುವಾರದಲ್ಲಿ ದಕ್ಷಿಣಾಮೂರ್ತಿ ಅರ್ಚಿಸಿ. ಕಡಲೆಕಾಳು ನೈವೇದ್ಯ ಮಾಡಿ. ನೆಮ್ಮದಿ ಪಡೆಯುತ್ತೀರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net