

26-01-2020ರಿಂದ 01-02-2020ರವರೆಗೆ
ಮೇಷ: ನಿಮ್ಮ ಮಾತನ್ನು ತಪ್ಪಾಗಿ ಅರ್ಥೈಸಿ ಮನಃಕ್ಷೋಭೆಗೆ ಕಾರಣರಾಗುವ ಜನ ಇದ್ದಾರೆ. ಧೈರ್ಯದಿಂದ ಎದುರಿಸಿ. ಅವರಿಗಿಂತ ನೀವೇ ಬುದ್ಧಿವಂತರು ನಿಜ. ಆದರೆ ಕೆಲವೊಮ್ಮೆ ಅಸಲಿ ಚಿನ್ನಕ್ಕಿಂತ ನಕಲಿ ಚಿನ್ನವೇ ಆಕರ್ಷಕ ವಾಗಿ ಕಾಣುತ್ತದೆ. ಚಿನ್ನ ಚಿನ್ನವೇ ಎಂಬುದು ಸೂಕ್ತ ಕಾಲ ಬಂದಾಗ ಸಾಬೀತಾಗುತ್ತದೆ. ತಾಳ್ಮೆಯಿಂದಿರಿ. ನಿಮ್ಮ ಆರ್ಥಿಕ ಸ್ಥಿತಿ ಸರಿಪಡಿಸಿಕೊಳ್ಳಲು ಅವಕಾಶಗಳಿವೆ. ಶ್ರಮದ ಕಾರಣದಿಂದ ಸುಸ್ತಿದೆ. ಲಕ್ಷ್ಮೀಯನ್ನು ಆರಾಧಿಸಿ.-ಶುಭದಿಕ್ಕು: ನೈಋತ್ಯ ಶುಭಸಂಖ್ಯೆ: 3
ವೃಷಭ: ಹೊಸ ಕೆಲಸ ದೊರಕಿ ಮನಸ್ಸಿಗೆ ಸಂತೋಷವಾಗುವ ಸಾಧ್ಯತೆ ಇದೆ. ನಿರಾಳವಾಗಿರಿ. ಆಲಸ್ಯ ಬೇಡ. ಹೊಸತನ್ನು ರೂಪಿಸಿ, ಜೀವನವನ್ನು ಸಕಾರಾತ್ಮಕವಾಗಿ ಕಟ್ಟಿಕೊಳ್ಳುವುದಕ್ಕೆ ಬದ್ಧರಾಗಿ. ಸಮಾಜದಲ್ಲಿ ವರ್ಚಸ್ಸಿನಿಂದ ಓಡಾಡುತ್ತೀರಿ. ಶನೈಶ್ಚರ ನಿಮಗೆ ಅನುಕೂಲನಾಗಿದ್ದಾನೆ. ಗುರುವಿನ ಕೃಪೆಯಿಂದ ಕೆಲವು ಲಾಭಗಳು ಒದಗಿ ಬರಲಿವೆ. ಆಹಾರದ ಬಗ್ಗೆ ಎಚ್ಚರವಿರಲಿ. ಅಜೀರ್ಣವಾದೀತು. ವೆಂಕಟೇಶ್ವರನನ್ನು ಸ್ತುತಿಸಿ.- ಶುಭದಿಕ್ಕು: ಪೂರ್ವ ಶುಭಸಂಖ್ಯೆ: 6
ಮಿಥುನ: ತಾಪತ್ರಯಗಳನ್ನು ಧೈರ್ಯದಿಂದ ಎದುರಿಸಿ. ಸವಾಲುಗಳು ಎದುರಾಗುತ್ತವೆ. ಅಧೈರ್ಯ ಆವರಿಸಿಕೊಳ್ಳಬಹುದು. ಕರ್ಮಫಲ ನೀಗಿಕೊಳ್ಳಲು ಇದು ಸೂಕ್ತ ಸಮಯ. ಶಿವನನ್ನು ಸ್ತುತಿಸಿ. ಶ್ರೀಪಂಚಮುಖಿ ಹನುಮಂತ ಕವಚ ಓದಿ. ಗುರುಬಲವು ನಿಮ್ಮನ್ನು ಲವಲವಿಕೆಯಿಂದಿಡುತ್ತದೆ. ಹೊಸ ಯೋಜನೆ ಜಾರಿ ಮಾಡುವಾಗ ಎಚ್ಚರ ಇರಲಿ. ಹನುಮಾನ್ ಚಾಲೀಸಾ ಓದಿ.-ಶುಭದಿಕ್ಕು: ದಕ್ಷಿಣ ಶುಭಸಂಖ್ಯೆ: 5
ಕಟಕ: ಎಲ್ಲವೂ ಸರಿಯಾಗಿದೆ ಎನ್ನುವಾಗಲೇ ಎಡವಟ್ಟುಗಳಾಗುತ್ತವೆ. ದಾಂಪತ್ಯದಲ್ಲಿ ಎಚ್ಚರದಿಂದಿರಿ. ರಾಹುವಿನಿಂದಾಗಿ ‘ಹೊರಗೆ ನೆಮ್ಮದಿ, ಒಳಗೆ ಚೂಪಾದ ಚೂರಿ’ ಎಂಬ ಸ್ಥಿತಿ ಇದೆ. ಎಲ್ಲವನ್ನೂ ನಿಭಾಯಿಸುತ್ತೀರಿ. ಆದರೂ ಸಂದೇಹದಿಂದಾಗಿ ದಣಿಯುತ್ತೀರಿ. ಸ್ಥೈರ್ಯದಿಂದ ಮುನ್ನುಗ್ಗಿ. ಕಾಲಾಗ್ನಿ ರುದ್ರ ಶಿವ ಸ್ತೋತ್ರಗಳನ್ನು ಪಠಿಸಿ.-ಶುಭದಿಕ್ಕು:ನೈಋತ್ಯ ಶುಭಸಂಖ್ಯೆ: 1
ಸಿಂಹ: ಗುರುಬಲವಿದೆ. ಇಚ್ಛಾಶಕ್ತಿಯಿಂದ ತೊಂದರೆಗಳನ್ನು ಪರಿಹರಿಸಿಕೊಳ್ಳಿ. ಸಮಾಜಮುಖಿಯಾಗಿ ಬೆಳೆಯಲು, ಒಳ್ಳೆಯ ಕೆಲಸ ಸಂಪಾದಿಸಲು ಅವಕಾಶವಿದೆ. ನಿಮಗೆ ಸೂರ್ಯನ ಅನುಗ್ರಹವಿದೆ. ಮಕ್ಕಳನ್ನು ಒಂದು ಶಕ್ತಿಯಾಗಿ ರೂಪಿಸುವ ದಿಸೆಯಲ್ಲಿ ಕಾರ್ಯೋನ್ಮುಖವಾಗಲು ಇದು ಸಕಾಲ. ಮಾತಿನ ಚಾಕಚಕ್ಯತೆಯಿಂದ ಗೆಲ್ಲಬಲ್ಲಿರಿ. ಸರಳತೆ ಇರಲಿ. ಸೂರ್ಯನನ್ನು ಆರಾಧಿಸಿ.-ಶುಭದಿಕ್ಕು: ಪೂರ್ವ ಶುಭಸಂಖ್ಯೆ: 6
ಕನ್ಯಾ: ಯಾರು ಅಡೆತಡೆ ತರುವರೋ ಅವರೇ ಉತ್ತಮರೆಂಬ ಭ್ರಾಂತಿ ಆವರಿಸುತ್ತದೆ. ಅದರಿಂದ ದೂರವಾಗಿ. ಇಲ್ಲದಿದ್ದರೆ ಪ್ರಮಾದವಾಗಬಹುದು. ಹಣದ ವಿಷಯದಲ್ಲಿ ಅನಗತ್ಯ ತಡೆಗಳು, ಮುಂದೂಡಿಕೆ ಸಂಭವಿಸಬಹುದು. ಸಿನಿಮಾ, ಮಾಡೆಲಿಂಗ್, ರಫ್ತು, ಆಮದು ವ್ಯವಹಾರಗಳಲ್ಲಿ ಎಚ್ಚರವಿರಲಿ. ಕಪ್ಪುಚುಕ್ಕಿಗಳು ವರ್ಚಸ್ಸಿಗೆ ಧಕ್ಕೆ ತಂದಾವು. ರಾಮರಕ್ಷಾ ಸ್ತೋತ್ರ ಓದಿ.-ಶುಭದಿಕ್ಕು: ಪಶ್ಚಿಮ ಶುಭಸಂಖ್ಯೆ: 3
ತುಲಾ: ಗುರಿಗಳ ಈಡೇರಿಕೆಗೆ ದಾರಿ ಸುಗಮಗೊಳಿಸಿಕೊಳ್ಳಲು ಇದು ಸಕಾಲ. ಶ್ರೀಲಲಿತಾ ಸಹಸ್ರನಾಮಾವಳಿ ಪಠಣದಿಂದ ಒಳಿತು ಸಾಧ್ಯ. ಯಾರನ್ನು ಬೇಕಾದರೂ ಅರೆಕ್ಷಣದಲ್ಲಿ ಗೆಳೆಯರನ್ನಾಗಿ ಮಾಡಿಕೊಳ್ಳುವ ಚೈತನ್ಯ ನಿಮ್ಮಲ್ಲಿದೆ. ಕೆಲವೊಮ್ಮೆ ವಿಚಿತ್ರ ಮಾತುಗಳಿಂದ ಜನರನ್ನು ದೂರ ಮಾಡಿಕೊಳ್ಳುತ್ತೀರಿ. ತಪ್ಪುಗಳಿಗೆ ಕ್ಷಮೆ ಕೇಳಿ ಸರಿಪಡಿಸಿಕೊಳ್ಳಿ. ಆಗ ವಿರೋಧಿಗಳೂ ನಿಮಗೆ ಆಪ್ತರಾಗುತ್ತಾರೆ.-ಶುಭದಿಕ್ಕು: ದಕ್ಷಿಣ ಶುಭಸಂಖ್ಯೆ: 1
ವೃಶ್ಚಿಕ: ಮನಸ್ಸಿನ ಸಂಕಲ್ಪಗಳು ಈಡೇರುವ ಸಮಯ. ಸೂಕ್ತವಾಗಿ ಬಳಸಿಕೊಳ್ಳಿ. ಮಾತಿನ ಕೌಶಲ್ಯ ವೃದ್ಧಿಸಿಕೊಳ್ಳಿ. ಕಬ್ಬಿಣ, ರದ್ದಿ, ತ್ಯಾಜ್ಯ, ಮುರುಕಲು ಪ್ಲಾಸ್ಟಿಕ್, ಫರ್ನಿಚರ್ ವಿಭಾಗಗಳನ್ನು, ಭಾಗಗಳನ್ನು ವರ್ಜಿಸಿ. ದೈನಂದಿನ ವಿಷಯಗಳಿಗೆ ಹೊಸ ರೀತಿಯಲ್ಲಿ ಯೋಚಿಸಿ ಕಾಯಕಲ್ಪ ನೀಡಿ. ದತ್ತಾತ್ರೇಯನನ್ನು ಆರಾಧಿಸಿ.- ಶುಭದಿಕ್ಕು: ಈಶಾನ್ಯ ಶುಭಸಂಖ್ಯೆ: 7
ಧನು: ನಿಮ್ಮ ಬತ್ತಳಿಕೆಯ ಬಾಣಗಳು ಸರಿಯಾದ ಸಮಯದಲ್ಲಿ ಕೈಕೊಡುತ್ತವೆ. ನಿಮ್ಮ ಕೈಯನ್ನೇ ಸುಡುತ್ತವೆ. ದೊಡ್ಡ ದೊಡ್ಡ ಮಾತು ಆಡಬೇಡಿ. ಘಟನಾವಳಿಗಳು ಉಪದ್ರವ ತರದಂತೆ ನಿಗಾ ವಹಿಸಿ. ನಿಮ್ಮೊಂದಿಗೆ ಚೆನ್ನಾಗಿರುವವರೇ ನಿಮ್ಮ ವಿರುದ್ಧ ತಿರುಗಿ ಬೀಳಬಹುದು. ಮಾತು ಮಿತವಾಗಿರಲಿ. ಶನೈಶ್ಚರಸ್ವಾಮಿ ಉದ್ರೇಕದಿಂದ ಮಾತು ಚಿಮ್ಮಿಸಿ ಫಜೀತಿಗೆ ತಳ್ಳಬಹುದು. ರಾಮರಕ್ಷಾ ಸ್ತೋತ್ರ ಓದಿ.-ಶುಭದಿಕ್ಕು: ಆಗ್ನೇಯ ಶುಭಸಂಖ್ಯೆ: 9
ಮಕರ: ಖರ್ಚು ಹೆಚ್ಚಾಗುತ್ತದೆ. ಕೈಗೊಂಡ ಕೆಲಸ ಸರಿಯಾಗಿ ನಿರ್ವಹಿಸುತ್ತೀರಿ. ಆದರೆ ನಂಬಿದ ಜನ ನೆಪ ಹೇಳಿ ಹಿಂದೆ ಸರಿಯುತ್ತಾರೆ. ಬಹುದಿನಗಳ ಕನಸಾದ ಮನೆ ನಿರ್ವಣಕ್ಕೆ ಮುಂದಾಗುತ್ತೀರಿ. ಹಣದ ವ್ಯವಸ್ಥೆ ಇದೆ. ಆದರೆ ಕೆಲಸ ವೇಗವಾಗಿ ಸಾಗುವುದಿಲ್ಲ. ಚಡಪಡಿಕೆಯಾಗುತ್ತದೆ. ವಿದೇಶ ಯಾತ್ರೆಯೂ ಗಂಟುಬೀಳಬಹುದು. ವಾತಪ್ರಕೃತಿ ಅಲಕ್ಷಿಸಬೇಡಿ. ಆರೋಗ್ಯದ ಬಗ್ಗೆ ಎಚ್ಚರ ಇರಲಿ. ರಾಮರಕ್ಷಾ ಸ್ತೋತ್ರ ಪಠಿಸಿ.-ಶುಭದಿಕ್ಕು: ಪಶ್ಚಿಮ ಶುಭಸಂಖ್ಯೆ: 4
ಕುಂಭ: ಸುಗಮವಾಗಿದ್ದ ದಾರಿಯಲ್ಲಿ ಏಕಾಏಕಿ ಅಡೆತಡೆಗಳು ಕಾಣಿಸಿಕೊಳ್ಳುತ್ತವೆ. ಧೈರ್ಯ ಕಳೆದುಕೊಳ್ಳಬೇಡಿ. ಹಾಗೆಂದ ಮಾತ್ರಕ್ಕೆ ಧೈರ್ಯ ಸಂಚಯನ ಸುಲಭವೂ ಅಲ್ಲ. ವಾಸ್ತವಪ್ರಜ್ಞೆ, ತರ್ಕ, ತಾಳ್ಮೆ ಇವೇ ನಿಮ್ಮ ಸತ್ವ. ಆನೆಯ ಎದುರು ಬೊಗಳುವ ನಾಯಿಯನ್ನು ಬೇರೆಯವರು ಸುಮ್ಮನಿರಿಸಬಹುದೇ ವಿನಾ ಬಲಾಢ್ಯ ಆನೆಗೆ ಅದು ಕಠಿಣ ಕೆಲಸ. ದೇವರನ್ನು ನಂಬಿ. ಮಾರುತಿಯ ಆರಾಧನೆಯಿಂದ ಒಳಿತಾಗುತ್ತದೆ.-ಶುಭದಿಕ್ಕು: ವಾಯವ್ಯ ಶುಭಸಂಖ್ಯೆ: 2
ಮೀನ: ನಿಮ್ಮ ಸಲಹೆ, ಮಾರ್ಗದರ್ಶನದಿಂದ ಬುದ್ಧಿವಂತರು ಚೆನ್ನಾಗಿ ಕೆಲಸ ಮಾಡಲು ತಯಾರಿದ್ದಾರೆ. ನಿಮ್ಮ ಅಸಹನೆಯನ್ನು ನಿಯಂತ್ರಿಸಿ. ರಾಹುದೋಷದಿಂದ ಹೊಟ್ಟೆನೋವು ಕಿರಿಕಿರಿ ಸೃಷ್ಟಿಸಬಹುದು. ಗೆಳೆಯರು ಕೊಡುವ ಉತ್ತಮ ಸಲಹೆ ಸ್ವೀಕರಿಸಿ. ವಿಜಯಕ್ಕಾಗಿ ಸಂಕಲ್ಪಗಳನ್ನು ಮಾಡಿ. ಹಲ್ಲುಗಳ ಬಗ್ಗೆ ಜಾಗ್ರತೆ. ಪಾರ್ವತಿಯನ್ನು ಸ್ತುತಿಸಿ.-ಶುಭದಿಕ್ಕು: ಉತ್ತರ ಶುಭಸಂಖ್ಯೆ: 8