ವಾರ ಭವಿಷ್ಯ: ಈ ರಾಶಿಯವರಿಗೆ ಶುಕ್ರನಿಂದ ಅಲ್ಪಲಾಭ, ಶನಿಯಿಂದ ವಿತ್ತನಾಶ

Vaara-Bhavishya-1
Published on

ಮೇಷ: ರಾಶ್ಯಾಧಿಪತಿ ಕುಜನು ಸ್ವಕ್ಷೇತ್ರದಲ್ಲಿದ್ದು, ಬಲವನ್ನು ವೃದ್ಧಿಸುತ್ತಾನೆ. ಹಾಗೆಯೇ ಭೀತಿಯನ್ನು, ಶರೀರಕ್ಕೆ ಆಯಾಸವನ್ನು ಉಂಟು ಮಾಡುತ್ತಾನೆ. ಬರಬೇಕಾದ ಧನಲಾಭಕ್ಕಾಗಿ ಕೆಲವೊಂದು ನಿಷ್ಠುರ ಮಾತುಗಳನ್ನು ಕೇಳಬೇಕಾಗಬಹುದು. ನಿಮಗೆ ಗುರುವೇ ಶ್ರೀರಕ್ಷೆ. ಗುರುವನ್ನು, ಗುರುವಿನ ಸಂಪರ್ಕದಲ್ಲಿರುವ ಕೇತುವಿಗಾಗಿ ವರಸಿದ್ಧಿ ವಿನಾಯಕನನ್ನು ಅರ್ಚಿಸಿ, ಶಮಂತಕೋಪಾಖ್ಯಾನವನ್ನು ಪಠಿಸಿ. ಮನಸ್ಸಿಗೆ ನೆಮ್ಮದಿ ಸಿಗುವುದು.

ವೃಷಭ: ಅಂಗಾರಕನ ಹನ್ನೆರಡನೆಯ ಮನೆ ಕ್ಲೇಶವನ್ನು, ಧನನಷ್ಟವನ್ನು ಸೂಚಿಸುತ್ತದೆ. ಗುರು ಅಷ್ಟಮದಲ್ಲಿ ಇರುವುದರಿಂದ ಹರಿದ್ರಾ ಗಣೇಶನನ್ನು, ಗುರು ದಕ್ಷಿಣಾಮೂರ್ತಿಯನ್ನು ಪೂಜಿಸಿ. ಮಧ್ಯಮ ಪ್ರವೃತ್ತಿಯ ಸಂತೋಷವನ್ನು ತಂದುಕೊಳ್ಳಿ.

ಮಿಥುನ: ಹನ್ನೊಂದರ ಅಂಗಾರಕನು ಸುಖವನ್ನು ಕೊಡುತ್ತಾನೆ. ಸಪ್ತಮ ಗುರು ಭೋಗ-ಭಾಗ್ಯಗಳನ್ನು ಕೊಡುತ್ತಾನೆ. ಕೊಟ್ಟ ಸುಖಕ್ಕೆ ದೇವರನ್ನು ಅವಶ್ಯವಾಗಿ ಪ್ರಾರ್ಥಿಸಿ. ವಿಷ್ಣು ಪುರಾಣ ಮತ್ತು ಭಗವದ್ಗೀತೆಯ 14ನೇ ಅಧ್ಯಾಯವನ್ನು ಪಾರಾಯಣ ಮಾಡಿ.

ಕಟಕ: ದ್ವಿತೀಯದಲ್ಲಿ ಸೂರ್ಯನು ವೃಥಾ ಖರ್ಚನ್ನು ತರುತ್ತಾನೆ. ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡುವುದು ಮನುಷ್ಯನ ಲಕ್ಷಣವಲ್ಲ. ಯಾವುದೇ ವೆಚ್ಚಗಳು ಮನಸ್ಸಿಗೆ ಸಂತೋಷ ತರಬೇಕು. ದೇವರು ಕೊಟ್ಟಿದ್ದನ್ನು ಜೋಪಾನ ಮಾಡಿಕೊಳ್ಳಬೇಕು. ಆರನೇ ಮನೆಯ ಗುರು ಶತ್ರುಗಳಿಂದ ಪೀಡೆ ತರಬಹುದು. ಶಂಭುವನ್ನು, ಗೌರಿಯನ್ನು ಆರಾಧಿಸಿ. ನಿಮ್ಮ ನಗುಮುಖವನ್ನು ಕಾಪಾಡಿಕೊಳ್ಳಿ.

ಸಿಂಹ ಅತಿಯಾದ ಪ್ರಯಾಣ, ಅನಗತ್ಯ ಕೆಲಸಗಳು ಶರೀರಕ್ಕೆ ಆಯಾಸ, ಸಂಕಟ ಕೊಡುತ್ತವೆ. ಗುರು ಪಂಚಮದಲ್ಲಿದ್ದು, ನಿಮಗೆ ಜಯ-ಲಾಭ ಎರಡನ್ನೂ ತರುತ್ತಾನೆ. ಆರರ ಶನಿ ಧರ್ಮಮಾರ್ಗ ಸೂಚಿಸುತ್ತಾನೆ ಎಂಬುದನ್ನು ನೆನಪಿಟ್ಟುಕೊಳ್ಳಿ. ದೈವಬಲ ನಿಮ್ಮನ್ನು ಕಾಪಾಡಲಿದೆ. ಸಂಕಟಗಳಿಂದ ಶೀಘ್ರದಲ್ಲೇ ಹೊರಬರುವ ದಾರಿಗಳು ಗೋಚರವಾಗಲಿವೆ.

ಕನ್ಯಾ: ಹನ್ನೆರಡರ ಸೂರ್ಯ ದುಃಖವನ್ನು ಸೂಚಿಸುತ್ತಾನೆ. ಚತುರ್ಥ ಗುರು ಕ್ಲೇಶವನ್ನು ಉಂಟುಮಾಡಿ ಬಂಧುಗಳಿಗೆ ನಿಮ್ಮಿಂದ ನೋವನ್ನು ಉಂಟು ಮಾಡುವ ಕಾಲ. ಕಷ್ಟ ನಿವಾರಣೆಗಾಗಿ ಶ್ರೀರಾಮಚಂದ್ರನನ್ನು ಸ್ಮರಿಸಿ. ಧನ-ಜಲ ಬಲ ಎಷ್ಟು ಮುಖ್ಯವೋ ಅಷ್ಟೇ ದೈವಬಲವೂ ಮುಖ್ಯ. ಹನುಮಾನ್ ಚಾಲೀಸಾ ಪಠಿಸಿ.

ತುಲಾ: ಈ ವಾರದಲ್ಲಿ ಕೆಲಸ-ಕಾರ್ಯಗಳು ನಿಮ್ಮಂತೆ ನಡೆದು ಧನಲಾಭವಾಗುವುದರಲ್ಲಿ ಸಂದೇಹವಿಲ್ಲ. ತೃತೀಯ ಗುರು ನಿಮ್ಮ ದಿಕ್ಕನ್ನು ಬದಲಾಯಿಸಿ ಇದ್ದುದ್ದಕ್ಕಿಂತಲೂ ಇನ್ನೂ ಉತ್ತಮ, ಸ್ವತಂತ್ರವಾದ ಕೆಲಸದಲ್ಲಿ ಕಾರ್ಯಗತಗೊಳಿಸುತ್ತಾನೆ. ಗೌರಿಯನ್ನು ಪೂಜಿಸಿ. ವಿನಾಯಕನು ವಿಘ್ನಗಳನ್ನು ದೂರಮಾಡುತ್ತಾನೆ.

ವೃಶ್ಚಿಕ: ದಶಮ ಸ್ಥಾನಕ್ಕೆ ಆ.17ರಂದು ಬಂದ ಸೂರ್ಯನು ನೀವು ಮಾಡುವ ಕರ್ಮದಲ್ಲಿ ಸಿದ್ಧಿಯನ್ನು ಸೂಚಿಸಿ, ದ್ವಿತೀಯ ಗುರು ದೈವಬಲವನ್ನು ಕೊಟ್ಟು, ನಿಮ್ಮ ಕೆಲಸ-ಕಾರ್ಯಗಳಲ್ಲಿ ಯಶಸ್ಸು-ಶ್ರೇಯಸ್ಸು ಉಂಟು ಮಾಡುತ್ತಾನೆ. ನಿರೀಕ್ಷಿಸಿದ ಧನವು ಭಾದ್ರಪದ ಮಾಸದ ಕೃಷ್ಣಪಕ್ಷದಲ್ಲಿ ಸಿಗುವ ಸೂಚನೆಯನ್ನು ತೋರುತ್ತಾನೆ. ದತ್ತಮಾಲಾಮಂತ್ರ ಕಾರ್ತಿಕೇಯ ಸ್ತೋತ್ರವನ್ನು ಪಠಿಸಿ.

ಧನು: ಜನ್ಮ ಗುರುವು ನೀವೇ ಬೇಡದ ಕೆಲಸಗಳನ್ನು ಹಿರಿಯರ ಎಚ್ಚರಿಕೆ ತಳ್ಳಿಹಾಕಿ ದುಃಖವನ್ನು ತಂದುಕೊಳ್ಳುವ ಕಾಲವಿದೆ. ಪೀಡಾಯ ಪರಮಪಾಪಂ ಎಂಬಂತೆ ಅನ್ಯರು ಮಾಡಿದ ತಪ್ಪಿಗೆ ನೀವು ದುಃಖ, ಕಷ್ಟವನ್ನು ಅನುಭವಿಸಬೇಕಾಗುತ್ತದೆ. ಕೇತುವಿಗಾಗಿ ‘ಗ’ಕಾರ ಗಣಪತಿ ಸ್ತೋತ್ರವನ್ನು, ದತ್ತಮಾಲಾ ಸ್ತೋತ್ರವನ್ನು ತಪ್ಪದೇ ಪಠಿಸಿ. ದೇವರು ನಿಮ್ಮನ್ನು ಕೈಹಿಡಿದು ನಡೆಸಿ ಕೀರ್ತಿಯನ್ನು ತಂದು ಕೊಡುತ್ತಾನೆ. ‘ಅನಾಥೋ ದೈವ ರಕ್ಷಕಃ’ ಇದನ್ನು ಮರೆಯಬೇಡಿ.

ಮಕರ: ಶುಕ್ರನು ಅಲ್ಪಲಾಭ ಕೊಡಬಹುದು. ಶನಿ ವಿತ್ತನಾಶವನ್ನು ಮಾಡಿ, ಗುರು ದುಃಖವನ್ನು ಸೂಚಿಸುತ್ತಾನೆ. ಅಷ್ಟಮದ ರವಿ ಮನೋರೋಗವನ್ನು ಕೊಟ್ಟು ಚಿಂತೆಗೀಡು ಮಾಡುತ್ತಾನೆ. ಗಳಿಸುವುದಕ್ಕಿಂತ ಇದ್ದದ್ದನ್ನು ಜೋಪಾನ ಮಾಡಿಕೊಳ್ಳುವುದೇ ಅದ್ಯ ಕರ್ತವ್ಯವಾಗಿರಲಿ. ಅನಂತವಾಗಿ ಕೊಡುವವನು ದೈವನೊಬ್ಬನೇ, ಕಾಲಭೈರವನನ್ನು ಪೂಜಿಸಿ. ಕಾಲಭೈರವಾಷ್ಟೋತ್ತರವನ್ನು ಪಠಿಸಿ. ತಿಲ ದಾನವನ್ನು ಮಾಡಿ. ಶನಿಸ್ತೋತ್ರ ಪಠಿಸಿ.

ಕುಂಭ: ಏಕಾದಶದಲ್ಲಿ ಗುರು ಸುಖ, ಪ್ರಗತಿಯನ್ನು ಕೊಡುತ್ತಾನೆ. ಹನ್ನೆರಡರ ಶನಿ ಬಲಾಢ್ಯನಾಗಿದ್ದು, ನಿಮ್ಮ ಬಗ್ಗೆ ಅನುಮಾನ, ವೈರತ್ವವೂ ಇದ್ದೇ ಇರುತ್ತದೆ. ಒಳ್ಳೆಯ ಬಿಳಿಯ ವಸ್ತ್ರವನ್ನು ದಾನಮಾಡಿ. ಕಮಲಪುಷ್ಪದಿಂದ ಈಶ್ವರನನ್ನು ಅರ್ಚಿಸಿ, ಒಳ್ಳೆಯ ಕಾಲಕ್ಕಾಗಿ ಎದುರು ನೋಡಿ. ಮನುಷ್ಯನು ಧೈರ್ಯವಾಗಿರಬೇಕಾದರೆ ದೈವಬಲ ಅತ್ಯಗತ್ಯ. ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ. ಅನಂತಪದ್ಮನಾಭ ವ್ರತ ಕಥೆಯನ್ನು ಪಠಿಸಿ.

ಮೀನ: ಗುರು ಶನಿಯರ ಸಂಪರ್ಕಗಳು ನಿಮಗೆ ಶುಭವನ್ನು, ಮಂಗಳವನ್ನು ತರುವುದರಲ್ಲಿ ಸಂದೇಹವಿಲ್ಲ. ಸಂಪತ್ತನ್ನು ಗಳಿಸುವುದು ಕಷ್ಟ. ಗಳಿಸಿದ್ದನ್ನು ನಿಮ್ಮ ಸುಖಕ್ಕಾಗಿಯೇ ಅನುಭವಿಸಿ. ಗಣಪತಿಯನ್ನು ತಪ್ಪದೇ ಪೂಜಿಸಿ. ಸತ್ಪಲಗಳು, ಸುಖವು ಬರುವುದರಲ್ಲಿ ಸಂದೇಹವಿಲ್ಲ. ಹಿರಿಯರನ್ನು ಗೌರವಿಸಿ. ಧೈರ್ಯಗುಂದಬೇಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net