

ಉತ್ತರಾಯಣವು ಸೂರ್ಯನಾರಾಯಣ ದೇವರಿಗೆ ಹಾಗೂ ಶಿವಪೂಜೆಗೆ ಶ್ರೇಷ್ಠವಾದ ಮಾಸವೆಂದೆ ಕರೆಯುವ ಮಾಘಾದಿ ಪಂಚಮಾಸಗಳು ಉತ್ತರಾಯಣದಲ್ಲಿ ಮಾನವರಿಗೆ ಶ್ರೇಷ್ಠವಾದ ಮಂಗಳ ಕಾರ್ಯಗಳನ್ನು ನಡೆಸಲು ಅನುವು ಮಾಡಿಕೊಡುತ್ತವೆ. ಪ್ರತಿ ಭಾನುವಾರ ಸೂರ್ಯ ನಮಸ್ಕಾರ ಮಾಡಿದರೆ ಮನುಷ್ಯನು ಶತಾಯುಷ್ಯನಾಗುವುದರಲ್ಲಿ ಸಂದೇಹವಿಲ್ಲ. ನೇರವಾದ ವಿಚಾರಗಳಿಗೆ ಬಂದು ಸತ್ಯತೆಯಿಂದ ಮುಂದೆ ಸಾಗಿರಿ. ಊಹಾಪೋಹಗಳಿಗೆ ಅವಕಾಶಗಳು ಬೇಡ. ಗುರುಬಲವಿಲ್ಲದಿರುವಾಗ ಜಗತ್ತಿನ ಒಡೆಯ ತ್ರಿಮೂರ್ತಿ ಸ್ವರೂಪ ದತ್ತಾತ್ರೇಯನಿರುವ ಏಕೈಕ ಜಾಗ ದೇವಳಗಾಣಗಾಪುರ. ದೇವರು ಕೊಟ್ಟದ್ದನ್ನು ಸ್ವೀಕರಿಸಿದರೆ ಶುಭವಾಗುತ್ತದೆ.
ಏಕಾದಶ ಗುರು ನಿಮಗೆ ಕೊಡುವುದಕ್ಕಾಗಿಯೇ ಬಂದಿದ್ದಾನೆ. ಏಪ್ರಿಲ್ ತಿಂಗಳಲ್ಲಿ ಗುರು ರಾಹು ಒಟ್ಟಿಗೇ ದ್ವಾದಶಕ್ಕೆ ಬರುವ ಮುಂಚೆಯೇ ಚಾಕಚಕ್ಯತೆಯಿಂದ ಕೆಲಸಗಳನ್ನು ಮಾಡಿಕೊಂಡು ಸುಖವನ್ನು ಅನುಭವಿಸಿ. ಶುಕ್ರನು ಶನಿಯೊಂದಿಗೆ ಇದ್ದಾನೆ. ಎರಡು ಪಾಪ ಗ್ರಹಗಳ ಸಂಧಿ ಇರುವುದರಿಂದ ಮಾತು, ನಡೆ ನುಡಿಯಲ್ಲಿ ಜೋಕೆಯಿಂದ ಸಾಗಿರಿ. ಜ್ಞಾನ ದೇವತೆ ಸರಸ್ವತಿಯನ್ನು ಪ್ರಾರ್ಥಿಸಿ ಶುಭವಾಗುತ್ತದೆ.
ದಶಮ ಗುರು ಏಕಾದಶದಲ್ಲಿ; ರಾಹು, ಬುಧನು ಧನಸಿನಲ್ಲಿ. ಅತ್ಯಾಶ್ಚರ್ಯಕರ ಘಟನೆಗಳು ನಡೆದು ಶುಭವನ್ನು ತರುತ್ತದೆ. ಧನವು ಬರಲು ದುರ್ಗೆಯನ್ನು ಪೂಜಿಸಿದರೆ ರಾಹು ಕೊಡಲು ಉದ್ಯುಕ್ತನಾಗುತ್ತಾನೆ. ಜೀವನ ಪರ್ಯಂತ ದುರ್ಗೆಯನ್ನು ಪೂಜಿಸಿದಲ್ಲಿ ನಕಾರಾತ್ಮಕ ಶಕ್ತಿಗಳಾಗಲಿ ಜೀವಿಗಳಾಗಲಿ ನಿಮ್ಮ ಹತ್ತಿರ ಸುಳಿಯುವುದೇ ಇಲ್ಲ. ದಶಮದಲ್ಲಿ ಶನಿ ಇರುವುದರಿಂದ ಯಾವುದೇ ನಿರ್ಣಯ ಮಾಡುವುದಕ್ಕೆ ಮುಂಚೆ ದೀರ್ಘಾಲೋಚನೆ ಮಾಡಿ ಮುಂದುವರಿಯಿರಿ.
ಕಟಕ ರಾಶಿ ಗುರುವಿಗೆ ಉಚ್ಚರಾಶಿ. ಅಂತಹ ಗುರು ನವಮದಲ್ಲಿದ್ದಾನೆ. ನಿಮ್ಮನ್ನು ಸಂರಕ್ಷಿಸುತ್ತಿದ್ದಾನೆ. ಬೇಕಾದ ಸುಖ, ಸಂತೋಷ, ಆರೋಗ್ಯ, ಧನ ಭಾಗ್ಯ ಕೊಡುವುದರಲ್ಲಿ ಸಂದೇಹ ಬೇಡ. 8ರಲ್ಲಿ ಶನಿ ಇರುವುದರಿಂದ ಅಷ್ಟಮ ಶನಿಗೆ ಪ್ರಾರ್ಥನೆ ಬೇಕು. ನಿತ್ಯವೂ ಶನೇಶ್ವರ ಅಷ್ಟೋತ್ತರ ಪಠಿಸಿ. ತ್ರಿದಲಂ ತ್ರಿಗಣಾಕರಂ ಮಂತ್ರದಿಂದ ಈಶ್ವರನಿಗೆ ಬಿಲ್ವ ಪತ್ರೆಯನ್ನು ಅರ್ಪಿಸಿ.
ಸಿಂಹ ರಾಶಿ ಅಧಿಪತಿ ಸೂರ್ಯನು ಮಕರದಲ್ಲಿದ್ದು ಸಪ್ತಮದಲ್ಲಿ ಶನಿಯು ಶುಕ್ರನೊಂದಿಗಿದ್ದಾನೆ . ಗ್ರಹಗಳ ಪರಿಸ್ಥಿತಿಯು ಬಾಧಿಸದೇ ಇರಬೇಕೆಂದರೆ ನಿತ್ಯವೂ ಮನುಷ್ಯನು ಪ್ರಾರ್ಥನೆ, ಪೂಜೆಗೈದು ಸಕಾರಾತ್ಮಕ ದೈವ ಶಕ್ತಿಯನ್ನು ಪಡೆದುಕೊಳ್ಳುವುದು ಅತಿಅವಶ್ಯಕ. ಅಷ್ಟಮದಲ್ಲಿ ಗುರುವಿದ್ದಾನೆ. ಗುರು ನರಸಿಂಹನನ್ನು ಪ್ರಾರ್ಥಿಸಿ. ಆಗದೆ ಇರದ ಕೆಲಸಗಳು ಕೂಡ ಸಲೀಸಾಗಿ ಆಗುವಂತೆ ಮಾಡಿಕೊಳ್ಳುವುದು ನಿಮ್ಮ ಕೈಲಿದೆ.
ರಾಶ್ಯಾಧಿಪತಿ ಬುಧನು ಗುರುವಿನ ಮನೆಯಲ್ಲಿದ್ದು, ಗುರು ಸಪ್ತಮದಲ್ಲಿದ್ದಾನೆ. ಶನಿಯು ಷಷ್ಟದಲ್ಲಿದ್ದಾನೆ. ಆಕಾಶಕ್ಕೆ ಮೂರೇ ಗೇಣು ಸಾಕು ನಿಮಗೆ ಚಂದ್ರನನ್ನು ಮುಟ್ಟಿ ಬೆಳದಿಂಗಳನ್ನು ಕಾಣಲು. ಮನುಷ್ಯನ ಬದುಕಿನಲ್ಲಿ ಧರ್ಮ, ಸತ್ಯ, ನ್ಯಾಯ ಅಚಂಚಲ ಭಗವದ್ಭಕ್ತಿ ಇದ್ದರೆ ಎಲ್ಲವನ್ನೂ ಪಡೆಯಬಹುದು. ಕಳೆದ ಎರಡೂವರೆ ವರ್ಷಗಳಲ್ಲಿ ನೀವು ಅನುಭವಿಸಿದ ಯಾತನೆ ಇನ್ನು ಮುಂದೆ ಬಾರದಿರಲಿ. ತಪ್ಪುಗಳನ್ನು ಮಾಡದೆ ಒಳ್ಳೆಯ ಸಮಯವನ್ನು ಸಾರ್ಥಕಪಡಿಸಿಕೊಳ್ಳಿ. ಮಹಾ ವಿಷ್ಣುವನ್ನು ಪೂಜಿಸಿ ಅರ್ಚಿಸಿ. ಶನಿವಾರದಂದು ಶ್ರೀನಿವಾಸ ದೇವರ ದರ್ಶನ ಪಡೆಯಿರಿ.
ಶನಿಯು ಕುಂಭಕ್ಕೆ ಬಂದಿದ್ದರೂ ತುಲಾ ರಾಶಿಗೆ ಶನಿಯು ಉಚ್ಚನಾಗಿರುವುದರಿಂದ ಇಂದು ಕಂಡರಿಯದ ವಿಶೇಷ ಕೀರ್ತಿ, ಲಾಭ ಮಾಡುವ ಕೆಲಸಗಳು, ಚಟುವಟಿಕೆಗಳಿಗೆ ಉತ್ಸಾಹವನ್ನು ತುಂಬುತ್ತಾನೆ. ಶನಿ ಪ್ರಾರ್ಥನೆ ಇರಲಿ. ಗಣಪತಿಗೆ ಗರಿಕೆಯಿಂದ ಪೂಜಿಸಿ. ರಾಶ್ಯಾಧಿಪತಿ ಶುಕ್ರನನ್ನು ನಿಮ್ಮ ಇಷ್ಟ ದೇವಿಯ ರೂಪದಲ್ಲಿ ಪೂಜಿಸಿ. ಶುಭವು ಸಂಭ್ರಮವು ನಿಮ್ಮದಾಗುತ್ತದೆ.
ಶನಿಯು ಸ್ರಕ್ಷೇತ್ರದಲ್ಲಿ ಇದ್ದು ನಾಲ್ಕನೇ ಮನೆಗೆ ಬಂದು ಆಗದೆ ಇರುವ ಕೆಲಸಗಳು ಆಗುವ ಶುಭ ಸೂಚನೆಯನ್ನು ತೋರಿಸುತ್ತದೆ. ರಾಶ್ಯಾಧಿಪತಿ ಸುಬ್ರಹ್ಮಣ್ಯ ದೇವರು ನಿಮ್ಮನ್ನು ಅನುಗ್ರಹಿಸಿದರೆ ಹಣಕಾಸಿನ ವ್ಯವಹಾರಗಳನ್ನು ಸರಿ ಮಾಡಿಕೊಳ್ಳುವುದರಲ್ಲಿ ಸಂದೇಹ ಬೇಡ. ಗಣಪತಿಯನ್ನು ಸುಬ್ರಮಣ್ಯನನ್ನು ಪೂಜಿಸಿ. ಕುಲದೇವರನ್ನು ಪ್ರಾರ್ಥಿಸಿ. ಏಳಿಗೆಯೂ ಇರುತ್ತದೆ ಬೀಳುವುದು ತಪ್ಪುತ್ತದೆ.
ಧನು ರಾಶ್ಯಾಧಿಪತಿ ಗುರುವು ನಾಲ್ಕರಲ್ಲಿದ್ದು ಶನಿಯು ಮಕರವನ್ನು ಬಿಟ್ಟು ಕುಂಭಕ್ಕೆ ಬಂದಿದ್ದಾನೆ. ಬಾಗಿಲನ್ನು ತೆರೆದು ಸೇವೆಯನ್ನು ಕೊಡು ಹರಿಯೆ ಎಂಬಂತೆ ಈ ಧರಣಿಗೆ ಒಡೆಯನಾದ ಶ್ರೀರಾಮಚಂದ್ರನನ್ನು ಪೂಜಿಸಿ. ಎಡಬಿಡದೆ ನಿಮ್ಮ ಕೆಲಸಗಳಲ್ಲಿ ತೊಡಗಿಸಿಕೊಳ್ಳಿ. ಕಾರ್ಯ ಸಾಧನೆ ಮಾಡಿ, ಕೀರ್ತಿ ಸಂಪಾದಿಸಿ, ಗೌರವ ಧನ ಎಲ್ಲವೂ ನಿಮ್ಮನ್ನು ಹಿಂಬಾಲಿಸಿ ಬರುತ್ತದೆ. ತಾಯಿಗಿಂತ ದೇವರಿಲ್ಲ, ತಂದೆಗಿಂತ ಗುರುವಿಲ್ಲ ಎಂಬ ಮಾತು ನಿಮ್ಮ ಜ್ಞಾನ ಕೋಶದಲ್ಲಿರಿಸಿದರೆ ಯಾವ ಬಾಧೆಯೂ ಬರುವುದಿಲ್ಲ.
ಶನಿ ಮನೆಯಲ್ಲಿ ರವಿ, ಕುಂಭದಲ್ಲಿ ಶನಿ, ಗುರು ತೃತೀಯದಲ್ಲಿ ಇದ್ದರೂ ಗುರು ಕೃಪೆಯಿಂದ ನಿಮ್ಮನ್ನು ಕೈಹಿಡಿದು ನಡೆಸುತ್ತಾನೆ. ಸೂರ್ಯನ ತಾಪ ಅಂದರೆ ನೀವು ನಂಬಿದವರು ಶತ್ರುಗಳಾಗಿ ನಿಮ್ಮ ಮನಸ್ಸನ್ನು ಕದಡುವ ಸಮಯ. ಆದರೂ ಈಸಬೇಕು ಇದ್ದು ಜೈಸಬೇಕು ಎಂಬ ಛಲ ನಿಮ್ಮಲ್ಲಿ ಇದ್ದು ಮುಂದೆ ಸಾಗಿದರೆ, ಹಂತ ಹಂತವಾಗಿ ಬೆಳೆಯಬೇಕು ಎಂಬ ಮನಸ್ಸು ಇದ್ದರೆ ಪರಮಾತ್ಮನೇ ನಿಮ್ಮ ಕೈಹಿಡಿದು ನಡೆಸುತ್ತಾನೆ. ಶನಿಶ್ಚರನ ಅಷ್ಟೋತ್ತರ ಪಾರಾಯಣವಿರಲಿ. ಆದಿತ್ಯ ಹೃದಯ ಪಾರಾಯಣ ಮಾಡಲೇಬೇಕು.
ಕುಂಭ ರಾಶಿಗೆ ಜನ್ಮಶನಿ ಸ್ವಕ್ಷೇತ್ರದಲ್ಲಿ ಇದ್ದು, ಗುರು ದ್ವಿತೀಯದಲ್ಲಿ ಇರುವುದರಿಂದ ನಿಮಗೆ ಸಕಲ ವಿಧವಾದ ಅನುಕೂಲಗಳನ್ನು ಮಾಡಿಕೊಟ್ಟು ಅಡ್ಡಿ ಆತಂಕ ಇಲ್ಲದಿರುವಂತೆ ಮುನ್ನಡೆಯುವ ಸಮಯ. ಶನಿ ಶುಕ್ರರು ಒಂದೇ ಮನೆಯಲ್ಲಿ ಇರುವುದರಿಂದ ಖರ್ಚು ವೆಚ್ಚ ಕಡಿಮೆ ಮಾಡಿ. ಬರುವ ಹಣವು ಬಾರದಿರುವಾಗ ಜೀವ ಹಿಂಸೆಯಾಗುತ್ತದೆ. ದತ್ತಾತ್ರೇಯ ಭಗವಂತನನ್ನು ಪೂಜಿಸಿ ಸುಖವನ್ನು ಕಂಡುಕೊಳ್ಳಿ.
ಸ್ವಕ್ಷೇತ್ರದಲ್ಲಿ ಗುರು, ದ್ವಾದಶದಲ್ಲಿ ಶನಿಯು ಸಕ್ಷೇತ್ರದಲ್ಲಿದ್ದರೂ ಅಲ್ಲಿ ಶುಕ್ರನು ಇದ್ದಾನೆ. ಮನುಷ್ಯರು ಆಸೆಗಳಿಗೆ ಕಡಿವಾಣ ಹಾಕಬೇಕು. ದೂರ ದೃಷ್ಟಿಯ ವಿಚಾರವಿರಬೇಕು. ಆಗಷ್ಟೇ ಮುಂದೆ ಹೋಗಲು ಸಾಧ್ಯ. ಗುರುವು ನಿಮ್ಮ ಪೂರ್ವಪುಣ್ಯದಿಂದ ಕೊಟ್ಟದ್ದನ್ನು ಸ್ವೀಕರಿಸಿ ತೃಪ್ತಿಯಿಂದ ಸಾಗಿ. ಚರ್ಚೆಗಳಾಗಲಿ, ವಿಷಯಗಳ ತರ್ಕಗಳಾಗಲಿ ಮಾಡದೆ ದೂರ ಉಳಿದರೆ ಮನಸ್ಸಿನ ಶಾಂತಿಯನ್ನು ಕೈಲಾಸಾಧಿಪತಿ ಈಶ್ವರನೇ ನೀಡಿ ನಿಮ್ಮನ್ನು ಕಾಪಾಡುತ್ತಾನೆ. ಶಿವಧ್ಯಾನವಿರಲಿ. ಸೋಮವಾರ ಶಿವ ಪೂಜೆಯಿರಲಿ. ಎಲ್ಲವೂ ಶುಭವಾಗಿ ಮಂಗಳಕರವಾಗಿ ನಡೆಯುತ್ತದೆ.