

ಶ್ರಾವಣ ಮಾಸದ ಕಡೆ ವಾರವು ಆ. 21ರಂದು ಆರಂಭವಾಗಿ 29ನೇ ತಾರೀಖು ಬೆನಕನ ಅಮಾವಾಸ್ಯೆಯು ಬಂದು ನಮ್ಮೆಲ್ಲರನ್ನು ಹರಸಲು, ರಾಷ್ಟ್ರವನ್ನು ಕಾಪಾಡಲು ಪಾರ್ವತಿ ಮಾತೆಯ ಮಗನಾದ ವಿನಾಯಕನು ಬರುತ್ತಿದ್ದಾನೆ. ಅದರಲ್ಲೂ ಮೇಷ, ಮಿಥುನ, ಕನ್ಯಾ, ಮೀನ ಧನುರ್ ರಾಶಿಗಳವರು ಊಟವನ್ನು ಮರೆತರೂ ಪರವಾಗಿಲ್ಲ ಗಣಪತಿ ಆರಾಧನೆ ಮರೆಯಬಾರದು. ನಾಲ್ಕು ತಿಂಗಳು ವಿಘ್ನವಿಲ್ಲದ ಮಾಸವಾಗಿ, ಸೊಂಟಕ್ಕೆ ಕಟ್ಟಿದ ಸರ್ಪವೇ ರಾಹುವಿನಿಂದ ನಿಮಗೆ ಯಾವ ಬಾಧಕವೂ ಬಾರದಂತೆ ನೋಡಿಕೊಳ್ಳುತ್ತದೆ. ಈ ಭಾನುವಾರದಿಂದ 21 ದಿನಗಳ ಪರ್ಯಂತ ಗಣಪತಿಗೆ ಗರಿಕೆಯಿಂದ ಪೂಜಿಸಿ.
ವೃಷಭ ರಾಶಿಯವರಿಗೆ ಏಕಾದಶ ಗುರುವು ಗುರುವಿನ ಅಂತರ್ಗತವೇ ಗಣೇಶ ಎಂದು ತಿಳಿಸಿದ್ದಾನೆ. ರಾಹುವಿನಿಂದ ಬಹಳಷ್ಟು ವಿಘ್ನಗಳು ಬಂದರೂ ಭಯದ ವಾತಾವರಣ ಇದ್ದರೂ ಆರೋಗ್ಯವು ಪರಿಪೂರ್ಣವಾಗಿ ಇಲ್ಲದಿದ್ದರೂ ನಿಮಗೆ ಧೈರ್ಯ ನೀಡಿ ಸಾಧಕರೆಂದು ತೋರಿಸಿದ್ದಾನೆ. ಮುಂಬರುವ ಒಳ್ಳೆಯ ದಿನಗಳಿಗೆ ನಿಮ್ಮ ಖರ್ಚು ವೆಚ್ಚ ತಗ್ಗಿಸಲು ಗಣಪನನ್ನು ಪೂಜಿಸಿ.
ಮಿಥುನ-ಕಟಕ ರಾಶಿಗಳಿಗೆ ಅಧಿಪತಿ ಬುಧನಾದರೂ ನಿಮಗೆ ಮುಂದಿನ 2023ರ ಏಪ್ರಿಲ್ವರೆಗೂ ಏಕಾದಶಕ್ಕೆ ಗುರುವು ಬಂದು ಸೇರುತ್ತಾನೆ. ಆರೋಗ್ಯವು ಕೆಟ್ಟರೆ ಔಷಧವು ಪ್ರತೀಕಾರ ಮಾಡುತ್ತದೆ. ಹಾಗೆಯೇ ಗುರು 11ರ ಫಲ ನೀಡಬೇಕಾದರೆ ದೀರ್ಘವಾದ ತಪಸ್ಸು, ಅನನ್ಯವಾದ ಭಕ್ತಿಯೊಂದಿಗೆ ಮಾಸಪ್ರತಿ ಚೌತಿಯಂದು ಮಹಾಗಣಪತಿಗೆ ಮಹಾಪೂಜೆ ಮಾಡುತ್ತಾ ಬನ್ನಿ. ದತ್ತದೇವರನ್ನು ಬೇಡಿದರೆ ಬೇಕಾದ ಕಾಮನೆಗಳು ಪೂರ್ಣಗೊಳ್ಳುತ್ತದೆ.
ಕಟಕ ರಾಶಿಯವರು ಚಂದ್ರನನ್ನು ಜೊತೆ ಜೊತೆಯಾಗಿ ಇಟ್ಟುಕೊಂಡು ಜನ್ಮ ತಾಳಿದ್ದಾರೆ. ಚೌತಿಯಂದು ಚಂದ್ರನನ್ನು ದರ್ಶಿಸಬೇಡಿ ಎಂದು ಶಾಸ್ತ್ರಗಳಲ್ಲಿ ತಿಳಿಸಿದ್ದಾರೆ. ಕಟಕ ರಾಶಿಯವರಿಗೆ ಅಷ್ಟಮ ಶನಿಯಿರುವುದರಿಂದ ಚಂದ್ರಾಷ್ಟೋತ್ತರ ಪಾರಾಯಣ ಮಾಡಿ. ಧೃಢವಾದ ಮನಸ್ಸಿನಿಂದ ಸಿದ್ಧಿ-ಬುದ್ಧಿ ಸಹಿತ ಗಣಪತಿಯನ್ನು ಪೂಜಿಸಿ. ವಿನಾಯಕನಿಗೆ 10 ಮಂಗಳವಾರಗಳು ಬೆಲ್ಲದಿಂದ ಮಾಡಿದ ಎಳ್ಳುಉಂಡೆ ನೈವೇದ್ಯ ಮಾಡಿ. ಜೀವನದಲ್ಲಿ ಇರುಳು ಹರಿದು ಬೆಳಕು ಮೂಡುತ್ತದೆ.
ರಾಶ್ಯಾಧಿಪತಿ ಸೂರ್ಯನು ರಾಶಿಗೆ ಬಂದು ಸೇರಿದ್ದಾನೆ. ಆತ್ಮಕಾರಕನಾದ ಸೂರ್ಯನು ಪ್ರಜ್ವಲಿಸಿ ಸಮಾಧಾನ ಸಂತೃಪ್ತಿ ನೀಡಿ ಆರರ ಶನಿಯಿಂದ ಜಯವನ್ನು ನೀಡುತ್ತಾನೆ. ಯಾರಾದರೂ ದುಡ್ಡು-ಕಾಸು ಮೋಸ ಮಾಡಿದ್ದರೆ ಗಣೇಶನಿಗೆ ನೇವೇದ್ಯ ಮಾಡಿ. ನಿಮ್ಮ ಕಷ್ಟ-ನಷ್ಟಗಳು ಕರಗಿ ಹೋಗಿ ಸಕಲ ಸೌಭಾಗ್ಯ ಸಿಗುತ್ತದೆ. ಸೂರ್ಯ ನಾರಾಯಣ ಅಷ್ಟೋತ್ತರ ಪಠಿಸಿ. ಸೂರ್ಯನಾರಾಯಣ ಅಷ್ಟಕವನ್ನು ಪಾರಾಯಣ ಮಾಡಿ.
ಕನ್ಯಾ ರಾಶಿಯವರಿಗೆ ಸಪ್ತಮದಲ್ಲಿ ಗುರುವು ಪಂಚಮದಲ್ಲಿ ಶನಿಯು ಇದ್ದು, ಕೆಲವೊಂದು ವಿಘ್ನಗಳು, ಅಪಮಾನಗಳು ಆಗುವುದು ಸಹಜ. 7ರ ಗುರುವು ರಕ್ಷಣೆಯನ್ನು ಕೊಡುತ್ತಾನೆ. ಯಾರೊಂದಿಗೂ ದ್ವೇಷ ಮಾಡದೆ ನಿಮ್ಮಲ್ಲಿ ಪರಿವರ್ತನೆ ತಂದುಕೊಂಡರೆ ನಿಮ್ಮ ಅಭಿಷ್ಟಗಳು ಸಿದ್ಧಿಸುತ್ತವೆ. 9 ಗುರುವಾರ ಗುರು-ಗಣೇಶನನ್ನು ಅರ್ಕ ಪುಷ್ಪದಿಂದ ಅರ್ಚಿಸಿ.
ತುಲಾ ರಾಶಿಯವರು ಶ್ರಮ ಜೀವಿಗಳು, ಸಂಕಲ್ಪ ಸಿದ್ಧರು. ಕೊಡುವ ದುಡ್ಡು ಕರಗಬಹುದು. ನಿಮ್ಮನ್ನು ಉಪಯೋಗಿಸಿ ದೂರ ಮಾಡಬಹುದು. ರಾವಣನು ಕೈಲಾಸ ಪರ್ವತ ಎತ್ತಿ ಶಿವನ ಅನುಗ್ರಹದಿಂದ ಆತ್ಮಲಿಂಗವನ್ನು ಪಡೆದದ್ದು ತಿಳಿದಿದೆ. ಲೋಕದ ಉಪಕಾರಾರ್ಥವಾಗಿ ಗಣೇಶನು ಆತ್ಮಲಿಂಗವನ್ನು ತನ್ನ ಕೈಗೆ ಬರುವಂತೆ ಮಾಡಿಕೊಂಡು ಗೋಕರ್ಣದಲ್ಲಿ ಇಟ್ಟು ಪ್ರಜೆಗಳಿಗೆ ಸುಖ- ಸಂತೋಷವನ್ನು ನೀಡಿದ್ದಾನೆ. ಅಂತಹ ಗಣೇಶನನ್ನು ಅರ್ಚಿಸಿ. ನಿಮ್ಮ ಇಷ್ಟವನ್ನು ಪೂರೈಸಲು ಗಣೇಶನಿಗೆ ಕೆಂಪು ಪುಷ್ಪದಿಂದ ಅರ್ಚನೆ ಮಾಡಿ ಸುಖ ತಂದುಕೊಳ್ಳಬಹುದು.
ವೃಶ್ಚಿಕ ರಾಶಿಯವರಿಗೆ ಪಂಚಮದಲ್ಲಿ ಗುರು, ತೃತೀಯದಲ್ಲಿ ಶನಿ ಗ್ರಹಗಳು ಸೇರಿ ಒಮ್ಮೆಲೇ ಎಲ್ಲವನ್ನೂ ಕೊಡುತ್ತಾರೆ. ಒಳ್ಳೆಯ ಸಮಯವು ಬಂದಾಗ ನಮ್ಮನ್ನು ನಾವು ಕಾಪಾಡಿಕೊಂಡು ದೇವರನ್ನು ಅರ್ಚಿಸಿ ಉಪಕಾರಿಗಳಾಗಿ ಬದುಕುವುದು ಒಳಿತು. ಶುಕ್ರನ ಮನೆಯಾದ ತುಲಾ ರಾಶಿಯಲ್ಲಿ ಕೇತುವು ಕುಳಿತಿರುವುದು ನಿಮ್ಮ ಪುಣ್ಯ ಸಂಪಾದನೆಯಿಂದಲೇ ಎಲ್ಲವೂ ಕೈಸೇರಿ ಸಾಲ ಮುಕ್ತರಾಗಿ ಅನ್ಯರ ಶಾಪರಹಿತರಾಗಿರುವುದು ಉದ್ದೇಶವಾಗಿರಬೇಕು. 108 ನೀಲಿ ಪುಷ್ಪದಿಂದ ಪೂಜಿಸಿ ಅರ್ಚಿಸಿ. ಬೇಲದ ಹಣ್ಣನ್ನು ಅರ್ಪಿಸಿ. ನಿಮ್ಮ ಇಚ್ಛೆಯನ್ನು ತ್ವರಿತವಾಗಿ ಪೂರೈಸುತ್ತಾನೆ.
ಹಾಡಿ ಹೊಗಳುವವರೂ ಇದ್ದಾರೆ. ಹಾಗೆಯೇ ತೆರೆಮರೆಯಲ್ಲಿ ನಿಂತು ತೊಂದರೆ ನೀಡುವವರೂ ಇದ್ದಾರೆ. ಮನುಷ್ಯನು ಮುಂದಾಲೋಚನೆಗೆ ಬೆಲೆ ಕೊಟ್ಟು ಶತ್ರುಗಳನ್ನು, ಹೀಯಾಳಿಸುವವರನ್ನು ದೂರವಿಟ್ಟು ಎಚ್ಚರವಾಗಿ ಹೆಜ್ಜೆ ಹಾಕಬೇಕು. ಜಗತ್ತಿನಲ್ಲಿ ಇಡಗುಂಜಿ ಗಣಪನೊಬ್ಬನೇ. ಇಡಗುಂಜಿಗೆ ತೆರಳಿ ಪ್ರಾರ್ಥನೆ ಮಾಡಿ. ಶುಭ ದಿನಗಳು ಜೀವನದಲ್ಲಿ ಆರಂಭವಾಗಿ ಸುಖವಾಗಿ ಇರುತ್ತೀರ. ಭಾನುವಾರದಂದು ಸೂರ್ಯೋದಯಕ್ಕೆ ಎದ್ದು ಗಣಪತಿಗೆ 21 ನಮಸ್ಕಾರಗಳನ್ನು ಹಾಕಿದರೆ ನೆನಸಿದ್ದೆಲ್ಲಾ ನಿಮ್ಮಂತೆ ನಡೆಯುತ್ತದೆ.
ಮಕರ -ಕುಂಭ ರಾಶಿಗೆ ಅಧಿಪತಿ ಶನಿ. ಶನಿಯು ತಾಯಿಯನ್ನು ಕಾಪಾಡಿ ತನ್ನ ತೇಜಸ್ಸನ್ನು ವೃದ್ಧಿಸಿಕೊಂಡವನು. ಶನಿಯ ಸಂಚಾರದಲ್ಲಿ ಮಕರ ರಾಶಿಯವರು ಸಾಗಿದ್ದು, ತೊಂದರೆ ಇಲ್ಲದ ಜೀವನವನ್ನು ನಡೆಸಲು ಪ್ರಾತಃಕಾಲದಲ್ಲಿ ಎದ್ದು ಸ್ವರ್ಣಗೌರಿಯನ್ನು ಸ್ಮರಿಸಿ, ಗಣಪತಿಯನ್ನು ಪೂಜಿಸಿ. ನಿಮ್ಮ ಕೆಟ್ಟ ಕಾಲವನ್ನು ಗಣಪನೇ ತೊಳೆದು ಸುಖವನ್ನು ನೀಡುತ್ತಾನೆ.
ದ್ವಿತೀಯದಲ್ಲಿ ಗುರುವಿದ್ದಾನೆ. ಹೆದರದಿರಿ ನಾನಿದ್ದೇನೆ ಎಂದು ಹೇಳುವ ಏಕೈಕ ಗ್ರಹ ಗುರು. ಗುರಿಯನ್ನು ಮುಟ್ಟಿ ಕೆಲಸವನ್ನು ಸಾಧಿಸಬೇಕಾದರೆ ಗುರು-ಗಣೇಶನನ್ನು ಪೂಜಿಸಲೇಬೇಕು. ಹನ್ನೆರಡರ ಶನಿಗೆ ಮಧ್ಯಾಹ್ನದ ಪೂಜೆಯಲ್ಲಿ ಬೆಳ್ಳಿಯ ಗಣಪನನ್ನು ಇರಿಸಿ, ವಿಶೇಷವಾದ ಪೂಜೆಯನ್ನು ಮಾಡಿರಿ. ಕಡುಬು ಪಾಯಸ, ಕಡಲೆಕಾಳು, ಅರಳು ಉಂುಡೆ ನೇವೇದ್ಯ ಮಾಡಿದಲ್ಲಿ ಗಣಪನೇ ಹಣೆಯಲ್ಲಿ ಬರೆದು ದುಷ್ಟಾಕ್ಷರಗಳನ್ನು ಅಳಿಸಿ ಶುಭಾಕ್ಷರಗಳನ್ನು ಬರೆಯುತ್ತಾನೆ.
ಮೀನ ರಾಶಿಯವರು ಕೊರಗಿ-ಕೊರಗಿ ಕರಗಿ ಹೋಗಬಾರದು. ನಿತ್ಯವೂ ನಾವು ದೇವರನ್ನು ಸ್ಮರಿಸಿ, ಹೀಗೆ ಇಟ್ಟಿದ್ದಾನೆ ಎಂದು ಸಂತೋಷಪಡಿ. ಇಲ್ಲದ್ದನ್ನು ಚಿಂತಿಸಿ ಸಂತೋಷ ಹಾಳು ಮಾಡಿಕೊಳ್ಳದಿರಿ. ಮರೆಯಬೇಡಿ. ನಾಲ್ಕು ತಿಂಗಳು ಶನಿಯು ನಿಮಗೆ ಬೇಕಾದ್ದನ್ನು ಕೊಡುತ್ತಾನೆ. ನಿಮ್ಮ ಕೈಗೆ ಎಟಕುವಷ್ಟು 3,7,5,11 ಮೃತ್ತಿಕೆ(ಮಣ್ಣು)ಯಿಂದ ಮಾಡಿದ ಗಣೇಶನನ್ನು ಪೂಜಿಸುವವರಿಗೆ ನೀಡಿ.