ವಾರ ಭವಿಷ್ಯ: ಈ ರಾಶಿಯವರಿಗೆ ಶನಿ ಆರನೇ ಮನೆ ಫಲವನ್ನು ಕೊಟ್ಟು ಸುಖ ನೀಡುತ್ತಾನೆ

Vara-Bhavishya-2
Published on

ಮೇಷ: ಮೇಷ, ತುಲಾ, ಮಕರ, ಕುಂಭ, ಮೀನ ರಾಶಿಯವರಿಗೆ ನವೆಂಬರ್ 20 ಮಧ್ಯಭಾಗದ ನಂತರ ಸುಸಮಯ ಬಂದು ಎಲ್ಲ ಕೆಲಸ ಕಾರ್ಯಗಳಲ್ಲಿ ಜಯವೂ, ಕೀರ್ತಿಯೂ ಲಭಿಸುತ್ತದೆ. ಇಂದಿನಿಂದಲೇ ಒಳ್ಳೆಯ ತಳಪಾಯ ಹಾಕಿಕೊಂಡರೆ ಮುಂದಿನ ಎರಡು ಸಂವತ್ಸರಗಳು ಸುಖವಾಗಿರಬಹುದು. ನಿಮ್ಮ ಆಸೆಗಳನ್ನು ಈಡೇರಿಸೆಂದು ದೇವರನ್ನು ಪೂಜಿಸಿ. ತಂದೆ-ತಾಯಿ ಆಶೀರ್ವಾದ ಪಡೆಯಿರಿ. ಹತ್ತರಲ್ಲಿ ಗುರುವು ತಾತ್ಕಾಲಿಕವಾಗಿ 11ಕ್ಕೆ ಪುನಃ ಬರಲಿದ್ದಾನೆ. ವಿವೇಕ-ವಿವೇಚನೆಯಿಂದ ಕೆಲಸ ಮಾಡಿ. ಧೈರ್ಯ-ಕೀರ್ತಿಶಾಲಿಗಳಾಗಿ ಬದುಕಿ.

ವೃಷಭ: ಈ ರಾಶಿಯವರಿಗೆ ಲಗ್ನಾತ್ ರಾಹುವಿದ್ದು, ತುಲಾ ರಾಶಿಯಲ್ಲಿ ಸೂರ್ಯನು ಬಂದಿದ್ದಾನೆ. ಶನಿಗೆ ಉಚ್ಚವಾದ ಮನೆ. ಆದರೆ ಸೂರ್ಯನು ಬೆಳಕನ್ನು ಕೊಟ್ಟರೂ ಮೋಡವೂ ಕವಿದಿರುತ್ತದೆ. 9ರ ಗುರು-ಶನಿ ದಾರಿಯನ್ನು ತೋರುತ್ತಾರೆ. ದೈವಮಾರ್ಗದಲ್ಲಿ ಸಾಗಿ ಎಲ್ಲವೂ ಶುಭವಾಗುತ್ತದೆ.

ಮಿಥುನ: ಅಷ್ಟಮದಲ್ಲಿ ಗುರು-ಶನಿ, ಶನಿಯು ಸ್ವಕ್ಷೇತ್ರ ಮಕರದಲ್ಲಿದ್ದು, ನಿಮ್ಮ ಪಾಪಗ್ರಹವು ಗುರು ಸಂಯೋಜನೆಯಲ್ಲಿ ಇರುವುದರಿಂದ, ಆಡುವ ಮಾತಿನಲ್ಲಿ ತೂಕವಿರಬೇಕು. ವಿಷಯದಲ್ಲಿ ನಿಖರವಾಗಿದ್ದು, ವ್ಯವಹಾರ ನಡೆಯಬೇಕು. ಬೇಜವಾಬ್ದಾರಿ ಬೇಡ.

ಕಟಕ: ಸಪ್ತಮದಲ್ಲಿ ಗುರುವು ಅಲ್ಪಕಾಲದಲ್ಲಿದ್ದು, ನಿಮ್ಮನ್ನು ಗೌರವವಾಗಿ ನಡೆಸುವುದರಲ್ಲಿ ಸಹಕರಿಸುತ್ತಾನೆ. ಆದರೆ ಶನಿಯು ಉದ್ವೇಗವನ್ನು ಉಂಟುಮಾಡಿ ಮನಸ್ಸನ್ನು ಅಲ್ಪಮಟ್ಟಿಗೆ ಬೇಜಾರಿನಲ್ಲಿಟ್ಟಿರುತ್ತಾನೆ. ಆದ್ದರಿಂದ ಉಮಾಮಹೇಶ್ವರನನ್ನು ಪೂಜಿಸಿ. ನಿತ್ಯವು ಬಿಲ್ವಾಷ್ಟೋತ್ತರ, ಅಷ್ಟೋತ್ತರ ಪಾರಾಯಣ ಮಾಡಿ.

ಸಿಂಹ: ಸತ್ಯ, ಧರ್ಮದಲ್ಲಿ ನಡೆಯುವುದು ಮನುಷ್ಯನ ಧರ್ಮ. ಶನಿಯೊಬ್ಬನೇ ಸಾಕು ಆರನೇ ಮನೆ ಫಲವನ್ನು ಕೊಟ್ಟು ನಿಮಗೆ ಸುಖ ನೀಡುತ್ತಾನೆ. ಯೋಚಿಸುವ ಅಗತ್ಯವಿಲ್ಲ. ನಿತ್ಯವೂ ಸೂರ್ಯನಾರಾಯಣನನ್ನು, ಸುಬ್ರಹ್ಮಣ್ಯನನ್ನು ಪ್ರಾರ್ಥಿಸಿ ಶುಭವನ್ನು ತಂದುಕೊಳ್ಳಿ.

ಕನ್ಯಾ: ಪಂಚಮ ಗುರು ಕಾರ್ಯಸಿದ್ಧಿಯೇ, ಪಂಚಮದಲ್ಲಿ ಶನಿಯೂ ಇದ್ದಾನೆ. ಶನಿ-ಗುರು ಸಂಯೋಗದಲ್ಲಿ 50 ಭಾಗದಷ್ಟು ಒಳ್ಳೆಯದನ್ನು ಕೊಟ್ಟು, ಉಳಿದ ಅರ್ಧ ಭಾಗದಷ್ಟು ಬಾಧೆಗಳನ್ನು ನೀಡುತ್ತಾನೆ. ಆದ್ದರಿಂದ ಗುರುದತ್ತಾತ್ರೇಯನನ್ನು ಪ್ರಾರ್ಥಿಸಿ. ಲಕ್ಷ್ಮೀನರಸಿಂಹ ಅಷ್ಟೋತ್ತರ ಪಠಿಸಿರಿ. ಜೀವನವು ಪ್ರಗತಿಯತ್ತ ಸಾಗುತ್ತದೆ.

ತುಲಾ: ರಾಶ್ಯಾಧಿಪತಿ ಶುಕ್ರನು ಕೇತುವಿನ ಸಂಪರ್ಕದಲ್ಲಿದ್ದು ದ್ವಿತೀಯದಲ್ಲಿದ್ದಾನೆ. ಅಂದರೆ ನೀವು ನಿಮ್ಮ ಕೈಗೆಟುಕುವ ಕೆಲಸವನ್ನು ಮಾಡಬೇಕು. ವಿಘ್ನಗಳನ್ನು, ಪರಿಣಾಮಗಳನ್ನು ಯೋಚಿಸಿ ಮುಂದಡಿ ಇರಿಸಿ. ದುರ್ಗಾಸಹಸ್ರನಾಮ ಪಾರಾಯಣದಿಂದ ಯಶ ಕಾಣುತ್ತೀರಿ.

ವೃಶ್ಚಿಕ: ರಾಶ್ಯಾಧಿಪತಿ ಅಂಗಾರಕನು ಏಕಾದಶದಲ್ಲಿದ್ದು, ತೃತೀಯದಲ್ಲಿ ಗುರು-ಶನಿ. ಒಳ್ಳೆಯ ಆಲೋಚನೆ, ಉಪಕಾರ, ದೈವಸ್ಮರಣೆ ಮಾಡಿದವನಿಗೆ ಶುಭಫಲ ಉಂಟು. ದತ್ತನೆಂದರೆ ಎಲ್ಲವನ್ನೂ ಕೊಡುವವನು. ದತ್ತನನ್ನು ಪೂಜಿಸಿ ಮುಂದೆ ಸಾಗಿ.

ಧನು: ಅತಿಯಾದ ಆಲಸ್ಯ ಅಥವಾ ವಿಶ್ರಾಂತಿ ಪಡೆಯದೆ ದೇಹವನ್ನು ದಂಡಿಸುವುದು, ಮನುಷ್ಯನಿಗೆ ಹಾನಿಕರ. ದ್ವಿತೀಯದಲ್ಲಿ ಗುರುವಿದ್ದಾನೆ. ಶನಿಸಂಚಾರ ಮುಗಿಯುವ ಹಂತಕ್ಕೆ ಬರುತ್ತಿದೆ. ವಿಶೇಷ ವಿಚಾರಗಳನ್ನು, ನಿರ್ಣಯಗಳನ್ನು ತೆಗೆದುಕೊಳ್ಳುವಾಗ ಆತುರಬೇಡ. ದ್ವಾದಶ ಕೇತು ಅಡ್ಡಿ ಉಂಟುಮಾಡುತ್ತಾನೆ. ದ್ವಿತೀಯದಲ್ಲಿ ಗುರುವಿಗೆ-ಶನಿಗೆ ಲಲಿತಾಸಹಸ್ರನಾಮ ಪಾರಾಯಣ ಮಾಡಿ. ಶಿವಾನಂದಲಹರಿ ನಿತ್ಯ ಪಾರಾಯಣ ಮಾಡಿ.

ಮಕರ: ಜನ್ಮದಲ್ಲಿ ಶನಿ-ಗುರು ಇರುವುದರಿಂದ ಕೆಲಸ, ಕಾರ್ಯಗಳಲ್ಲಿ ವಿಳಂಬವಾಗುತ್ತದೆ. ಗುರುವು ನವೆಂಬರ್ 20ರಿಂದ ದ್ವಿತೀಯಕ್ಕೆ ಬರುತ್ತಾನೆ. ಅಲ್ಲಿಂದ ನೀವು ಸೂರ್ಯನ ಬೆಳಕನ್ನು ಕಾಣಬಹುದು. ತಾಳಿದವನು ಬಾಳಿಯಾನು ಎಂಬಂತೆ ಅತಿಮುಖ್ಯವಾದ ನಿರ್ಣಯವನ್ನು ನ. 20ರ ನಂತರ ಮಾಡಿ. ಶನಿಗಾಗಿ ಶನಿ ಅಷ್ಟೋತ್ತರವನ್ನು, ಗುರುವಿಗೆ ಹಯಗ್ರೀವನನ್ನು ಪ್ರಾರ್ಥಿಸಿ.

ಕುಂಭ: ದ್ವಾದಶ ಗುರು ಶನಿಯೊಂದಿಗಿದ್ದು, ಶನಿಯ ಮನೆಯಲ್ಲಿ ಗುರು ಇರುವುದರಿಂದ ದೊಡ್ಡಪ್ರಮಾಣದ ಕೆಲಸ ಕಾರ್ಯಗಳು ಏಕಾಏಕಿ ಮುಂದೆ ಸಾಗುವುದಿಲ್ಲ. ರೈಲು ಮುಂದೆ ಸಾಗಬೇಕಾದರೆ ಹಳಿಯೂ ಚೆನ್ನಾಗಿರಬೇಕು. ರೈಲು ಓಡಿಸುವವನು ಜಾಗರೂಕನಾಗಿರಬೇಕು. ಇದರ ಅಂತರಾರ್ಥ ನಿಮ್ಮನ್ನು ನೀವು ಎಲ್ಲ ವಿಚಾರಗಳಲ್ಲೂ ಕಾಪಾಡಿಕೊಂಡು, ಯಾವ ಕೀರ್ತಿಯನ್ನೂ ಹಾಳುಮಾಡಿಕೊಳ್ಳದೆ ಎಚ್ಚರಿಕೆಯಿಂದ ಬಾಳುವ ಸಮಯವಿದು. ಚಂಡಿಕಾ ಅಷ್ಟೋತ್ತರ ಪಾರಾಯಣ ಮಾಡಿ. ಗೋವಿಂದ ನಾಮವನ್ನು ಪಠಿಸಿ.

ಮೀನ: ಯಾವ ಕೆಲಸಕಾರ್ಯಗಳು ಮುಖ್ಯ-ಅತಿಮುಖ್ಯ ಎಂದು ವಿಂಗಡಿಸಿ ಮುಂದಿನ ಬಾಳನ್ನು ಸರಿಪಡಿಸಿಕೊಳ್ಳಲು ಸುಸ ಮಯ. ದೇವರು ಧನವನ್ನು ಕೊಟ್ಟಿರುತ್ತಾನೆ. ಅದನ್ನು ಹೇಗೆ ಉಪಯೋಗಿಸಬೇಕೆಂದು ಅರಿತರೆ ಶ್ರೇಯೋವಂತರಾಗಿ ಬಾಳುತ್ತೀರ. ಅನಂತ ಪದ್ಮನಾಭನನ್ನು ಪೂಜಿಸಿ. ತೃತೀಯ ರಾಹುವಿಗಾಗಿ ಲಕ್ಷ್ಮೀ ಸಹಿತ ರಂಗನಾಥನನ್ನು ಸಂದರ್ಶಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net