ಈ ರಾಶಿಯವರಿಗೆ ಜೀವನದಲ್ಲಿ ಜಾಗ್ರತೆ ಇದ್ದರೆ ಮಾತ್ರವೇ ಹರ್ಷ: ವಾರಭವಿಷ್ಯ

Vaara-Bhavishya
Published on
ಮೇಷ

ಲಾಭದಲ್ಲಿ ಶನಿಯಿದ್ದು, ಉತ್ತರಾಯಣ ಕಳೆಯಲು ಮಾಸ ಮಾತ್ರವೇ ಬಾಕಿ ಇರುತ್ತದೆ. ಈ ಒಂದು ತಿಂಗಳಲ್ಲಿ ಪುಣ್ಯದ ಕೆಲಸಗಳನ್ನು ಮಾಡಿ 11ರ ಶನಿಯಿಂದ ಧನ, ಕೀರ್ತಿ ಲಾಭ ಯಶೋಧೈರ್ಯ ಪಡೆದು ಇತರರಿಗೆ ಶಕ್ತಿ ಮೀರಿ ಸಹಾಯ ಮಾಡಿ. ಸೂರ್ಯನ ಜತೆ ಸುಬ್ರಹ್ಮಣ್ಯನನ್ನು ಪ್ರಾರ್ಥಿಸಿ.

ವೃಷಭ

ಏಕಾದಶ ಗುರುವು ದಾರಿಯನ್ನು ತೋರುತ್ತಾನೆ. ಪ್ರಜ್ಞೆಯಿಂದ ಕೊಟ್ಟು ಬುದ್ಧಿಯಿಂದ ನಿಮ್ಮ ಕಾರ್ಯಕ್ಷಮತೆಯಿಂದ ಕೆಲಸ ಮಾಡಿದಲ್ಲಿ ಶ್ರೇಯಸ್ಸು ಲಭಿಸುವುದರಲ್ಲಿ ಸಂದೇಹವಿಲ್ಲ. ಕೊಟ್ಟು - ಬಿಟ್ಟು ತೆಗೆದುಕೊಳ್ಳಿ. ಸಮಯವನ್ನು ಹಾಳು ಮಾಡಿಕೊಳ್ಳಬಾರದು.

ಮಿಥುನ

ಗುರುಬಲದ ಕೊರತೆಯು, 9ರ ಶನಿಯು ಕೊಡುವುದನ್ನು ಕೊಟ್ಟು ಮುಂದೆ ಬಿಟ್ಟು ನೋಡುತ್ತಿರುತ್ತಾರೆ. ವಿವೇಚನೆ ಉಪಯೋಗಿಸಿ ನಿಮ್ಮ ಕರ್ತವ್ಯಗಳನ್ನು ಸಾಧಿಸಿಕೊಳ್ಳಬಹುದು. ನಾನು ಎಂಬುದಿದ್ದರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಹಯಗ್ರೀವನನ್ನು ಪೂಜಿಸಿ. ಕತ್ತಲೆ ಸರಿದು ಸೂರ್ಯನೇ ಬೆಳಕನ್ನು ಕೊಡುತ್ತಾನೆ.

ಕಟಕ

ಆಶ್ಲೀಷ, ಪುಷ್ಯ, ಪುನರ್ವಸು 4ನೇ ಪಾದ, ನಕ್ಷತ್ರಗಳಲ್ಲಿ ಜನಿಸಿದವರಿಗೆ ಅಷ್ಟಮದಲ್ಲಿ ಶನಿಯು ಸ್ಥಿತನಾಗಿದ್ದು, ದೇವರು ಆರೋಗ್ಯ ಕರುಣಿಸಿ ಆಯುಷ್ಯವನ್ನು ಕೊಡಲಿ ಎಂಬ ಪ್ರಾರ್ಥನೆ ಇರಲಿ. ಧೈರ್ಯ ಕೀರ್ತಿ ಸರ್ವಮಂಗಳವನ್ನು ಕೊಟ್ಟು ಕಾಪಾಡುತ್ತಾನೆ. ಶನಿ ಅಷ್ಟೋತ್ತರ ಪಠಿಸಿ. ಹೆದರುವ ಅಗತ್ಯವಿಲ್ಲ.

ಸಿಂಹ

ಅಷ್ಟಮದಲ್ಲಿ ಗುರುವು ಸ್ವಕ್ಷೇತ್ರದಲ್ಲಿ ಇರುವುದರಿಂದ ಗುರುವಿನ ಪ್ರಾರ್ಥನೆಯ ಅಗತ್ಯವಿರುತ್ತದೆ. ಅದರೊಂದಿಗೆ ಹೆಚ್ಚಿನ ಗುರುಬಲ ಪಡೆದು, ಶನಿಯು ಸಪ್ತಮದಲ್ಲಿ ಇರುವುದರಿಂದ ಶನಿಯ ಪ್ರಾರ್ಥನೆ ಇರಲಿ. ಸಿಂಹ ರಾಶಿಯಲ್ಲಿ ಜನಿಸಿದವರಿಗೆ ಕತ್ತಲೆಂಬುದಿಲ್ಲ. ಶನಿಯು ಷಷ್ಠಕ್ಕೆ ಬಂದು ಸರ್ವಾಭಿಷ್ಟಗಳನ್ನು ನೆರವೇರಿಸಿ ಕೊಡುತ್ತಾನೆ.

ಕನ್ಯಾ

ಸಪ್ತಮದಲ್ಲಿ ಗುರುವಿರುವುದು ಶುಭಗಳನ್ನು ನೀಡಲು. ಆದರೆ, ಜುಲೈವರೆಗೂ 6ರ ಶನಿ ಫಲವಿದ್ದು, ಆನಂತರದಲ್ಲಿ ಪಂಚಮಕ್ಕೆ ಹಿಂದಿರುಗುತ್ತಾನೆ. ದೈವ ಕೃಪೆ ಇರುತ್ತದೆ. ಒಳ್ಳೆಯ ಕೆಲಸಗಳಲ್ಲಿ ಮುಂದೆ ಸಾಗಿ. ಶನಿಯು ಕೊಡಬಹುದಾದ ಕೆಲವು ಕಷ್ಟ-ಕಾರ್ಪಣ್ಯ ನೀಗಲು ವಿಷ್ಣು ಸಹಸ್ರನಾಮ, ಶನಿಯ ಅಷ್ಟೋತ್ತರ ಪಾರಾಯಣ ಮಾಡಿ, ತಿಲಾದಾನ ಮಾಡಿ.

ತುಲಾ

ಸಂಸಾರವೇ ದೊಡ್ಡ ಸಾಗರ. ಸಾಗರವನ್ನು ಸುಖ-ದುಃಖಗಳಿಗೆ ಹೋಲಿಸಬಹುದು. ಪಂಚಮ ಶನಿ, ಷಷ್ಠ ಗುರು ಸಮಯ ದಾಟಬೇಕಾದರೆ ದೈವಸಾಗರದಲ್ಲಿ ಮಿಂದು ದಡ ಸೇರಬೇಕೆಂಬ ಶ್ರದ್ಧೆ, ಭಕ್ತಿ ಉಳ್ಳ ಕಠಿಣ ಪ್ರಾರ್ಥನೆ ಇರಬೇಕು. ಹಸಿದಾಗ ಊಟ ಮಾಡಿದರೆ ಹೊಟ್ಟೆ ತುಂಬುತ್ತದೆ. ದೈವ ಪ್ರಾರ್ಥನೆಯಿಂದ ಸಮಸ್ಯೆಗಳು ಕರಗಿಹೋಗುತ್ತವೆ.

ವೃಶ್ಚಿಕ

ಪಂಚಮ ಗುರುವು ಕೊಟ್ಟಿದ್ದನ್ನು ಸ್ವೀಕರಿಸಿ. ಅತಿಯಾದ ಆಸೆಯಿಂದ ಸಾಲವನ್ನು ವೃದ್ಧಿ ಮಾಡಿಕೊಳ್ಳಬೇಡಿ. . ‘ಕಾಮೇಶ್ವರ ಮುಖಾಲೋಣ ಕಲ್ಪಿತ ಶ್ರೀಗಣೇಶ್ವರಾಯ ನಮಃ’. ಸಾಗರದಲ್ಲಿ ವಿರಾಜಮಾನನಾದ ಗಣೇಶನ ನಾಮವು ಲಲಿತಾಸಹಸ್ರನಾಮದ ಈ ಶ್ಲೋಕದಲ್ಲಿದೆ. ಅನುರಾಧ. ಜ್ಯೇಷ್ಠ, ವಿಶಾಖ-4ನೇ ಪಾದ ನಕ್ಷತ್ರದವರು ಗಣಾಧೀಶ್ವರನನ್ನು ಪೂಜಿಸಿ.

ಧನು

ಶನಿ ಸಂಚಾರದ ಅಂತ್ಯದಲ್ಲಿರುವ ಮೂಲಾ, ಪೂ.ಷಾ -3 ಅತ್ಯಂತ ಸುಖ ಸಮಯದವು. 2023ನೇ ಇಸವಿಯ ಜನವರಿವರೆಗೆ ಕಾಯಬೇಕು. ದ್ವಿತೀಯ ಶನಿಯು ಹಿಂದಕ್ಕೆ ಬರುವ ಸಮಯ. ಜೀವನದಲ್ಲಿ ಜಾಗ್ರತೆ ಇದ್ದರೆ ಮಾತ್ರವೇ ಹರ್ಷ, ಯಶಸ್ಸು ಕಾಣಬಹುದು. ರಾಶ್ಯಾಧಿಪತಿ ಗುರು. ಧನುರ್-ಮೀನ ರಾಶಿಯವರು ಜೀವನದ ಆರಂಭದಿಂದ ಕಟ್ಟಕಡೆಯವರೆಗೆ ದೇವರನ್ನು ಪೂಜಿಸಬೇಕು.

ಮಕರ

ಶನಿಯು ಮತ್ತೆ ಜನ್ಮಕ್ಕೆ ಬರುವ ಸಮಯ. ಗುರುವು ತೃತೀಯದಲ್ಲಿ ಸ್ವಕ್ಷೇತ್ರದಲ್ಲಿ ಇದ್ದು, ಅವನ ಕೃಪೆ ಇದ್ದರೆ ಯಾವ ಗ್ರಹವೂ ಸರಿಸಾಟಿ ಇಲ್ಲದ ಫಲ ನೀಡಿ ರಕ್ಷಣೆ ಕೊಡುತ್ತಾನೆ. ಆದರೆ, ದೈವಶಕ್ತಿ ಧೈರ್ಯವೆಂಬ ಶಬ್ದ ಮಾತ್ರದಲ್ಲಿ ಕೆಲಸವನ್ನು ಸಾಧನೆ ಮಾಡುತ್ತೇನೆಂಬ ಸಂಕಲ್ಪ ವಿದ್ದರೆ ಶನಿ ಮಹಾರಾಜನೂ ಏನೂ ಮಾಡಲಾಗುವುದಿಲ್ಲ. ನವಗ್ರಹ ಅಷ್ಟೋತ್ತರ ಪಾರಾಯಣ ಮಾಡಿರಿ.

ಕುಂಭ

ಲಗ್ನದ ಶನಿಯು ಹಿಂದಕ್ಕೆ ಸರಿದು ದ್ವಾದಶಕ್ಕೆ ಬಂದು ಮರೆತಿರುವ ಸಮಸ್ಯೆಗಳನ್ನು ನೆನಪಿಸಿ ಪರಿಹಾರವೆಲ್ಲಿದೆ ಎಂಬ ಶಂಕೆಯು ನಿಮ್ಮನ್ನು ಕಾಡುತ್ತದೆ. ಹೆದರಿ ಅಂಜುಬುರುಕರಾಗಿ ಬದುಕಬಾರದು. ನಾವು ಮಾಡಿದ ಪಾಪ ಪುಣ್ಯಗಳೇ ನಮ್ಮ ಸಮಸ್ಯೆಗಳಾಗಿ ನಮ್ಮ ಮುಂದೆ ಬಂದು ಸಾಗುತ್ತದೆ. ದೈವ-ಧರ್ಮದ ರಕ್ಷಣೆ ಇರಲಿ. ಅನಂತವಾದ ಶನಿಯ ಸ್ತೋತ್ರ ಪಾರಾಯಣ ಇರಲಿ.

ಮೀನ

ಲಗ್ನದಲ್ಲಿ ಗುರುವಿದ್ದು, ಆತ್ಮಕಾರಕನೇ ನಿಮ್ಮನ್ನು ಕಾಯುತ್ತಿದ್ದಾನೆ. ಜುಲೈ 12ರಿಂದ ದ್ವಾದಶ ಶನಿಯು ಏಕಾದಶಕ್ಕೆ ಸರಿದು ಶುಭಫಲ ನೀಡಲು ಉದ್ಯುಕ್ತನಾಗುತ್ತಾನೆ. ಅನ್ಯಥಾ ವಿಚಾರಗಳನ್ನು, ಕಳೆದುಹೋದ ಕಷ್ಟ-ನಷ್ಟಗಳನ್ನು ಮರೆತು, ಮಹಾ ಗಣಪತಿ, ಸತ್ಯನಾರಾಯಣನನ್ನು ಪೂಜಿಸಿ. ಮನಸ್ಸು ದೇಹ ಶುದ್ಧವಾಗಿಸುವ ದತ್ತಾತ್ರೇಯನನ್ನು ಪೂಜಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net