

ಜೀವನಶೈಲಿಯನ್ನು ಬದಲಿಸುವ ಕಾಲ ಬಂದಿದೆ. 12ರ ಗುರುವು ತನ್ನ ಸ್ಥಾನದ ಬದಲಾವಣೆಯಿಂದ ನೀವು ನಿಮ್ಮ ಸುತ್ತಮುತ್ತಲಿನ ಸಜ್ಜನರ ಸಹವಾಸಕ್ಕೆ ಬಂದರೆ ನಿಮ್ಮ ಕಾರ್ಯವು ಪೂರ್ಣಗೊಳ್ಳುತ್ತದೆ. ದತ್ತಾತ್ರೇಯನ ಪ್ರಾರ್ಥನೆ ಇರಲಿ.
ಗ್ರಹಗಳು ಬದಲಾದಂತೆ ಮನುಷ್ಯನು ಸುಖವಾಗಿ ಬದುಕಬೇಕಾದರೆ ತನ್ನನ್ನು ತಾನೇ ಬದಲಾಯಿಸಿಕೊಳ್ಳಬೇಕು. ನಿಮ್ಮ ವೈರಿಗಳು ಕಷ್ಟ ಕೊಡಬಹುದು. 11ನೇ ಮನೆ ಗುರುವಿನ ಫಲ ಪಡೆಯಬೇಕಾದರೆ ಮಾತಿನ ವೈಖರಿ ಬದಲಿಸಿಕೊಳ್ಳಿ. ರಾಜರಾಜೇಶ್ವರಿಯ ವಿಶೇಷ ಅನುಗ್ರಹ ಪಡೆಯಿರಿ.
ಏಕಾದಶ ರಾಹು ಒಳ್ಳೆಯದನ್ನು ಮಾಡಲೂ ಬಹುದು, ಕೇತುವು ಆಪ್ತರಿಂದಲೇ ಕುಚೇಷ್ಟೆ ಮಾಡಿಸಿ, ಹಿಂಸೆ ನೀಡಬಹುದು. ಆರೋಗ್ಯದ ಬಗ್ಗೆ ಗಮನ ಕೊಡಲು ಮರೆಯಬೇಡಿ. ನಿತ್ಯ ರಾಮನನ್ನು ಸ್ಮರಣೆ ಮಾಡಿದರೆ ಕಷ್ಟಕಾರ್ಪಣ್ಯಗಳು ದೂರವಾಗುತ್ತವೆ.
ಸ್ವಕ್ಷೇತ್ರದಲ್ಲಿ ಗುರುವು 9ರಲ್ಲಿ ಬಂದು ರಕ್ಷಣೆ ನೀಡುತ್ತಾನೆ. ಗುರುವನ್ನು ವಿಶೇಷವಾಗಿ ಪೂಜಿಸಿ, ಆರಾಧಿಸಿ. ಪರಬ್ರಹ್ಮ ಸ್ವರೂಪ ದತ್ತಾತ್ರೇಯನನ್ನು ಪೂಜಿಸಿ. ಸಪ್ತಮ ಶನಿಯ ಒತ್ತಡ ತಡೆದು ದೇಹಾರೋಗ್ಯ ಪಡೆದು ರವಿ-ಬುಧ-ರಾಹು ಒಳ್ಳೆಯ ಫಲ ಕೊಡುತ್ತಾರೆ. ಷಣ್ಮುಖನನ್ನು ಪ್ರಾರ್ಥಿಸಿ.
ಸಿಂಹವು ಶೌರ್ಯವನ್ನು ಕಳೆದುಕೊಂಡರೆ ಮೆರೆಯಲು ಸಾಧ್ಯವೇ? ಸಿಂಹ ರಾಶಿಯವರಿಗೆ ದುರ್ಗೆಯಿಂದ ತೇಜಸ್ಸು ಇದ್ದೇ ಇರುತ್ತದೆ. ಕ್ರಮಬದ್ಧವಾಗಿ ಸೂರ್ಯನನ್ನು ಪೂಜಿಸಿ. ಆದಿತ್ಯಹೃದಯ ಪಾರಾಯಣ ಮಾಡಿ. ನಡೆ-ನುಡಿಯಲ್ಲಿ ಎಚ್ಚರವಿರಲಿ. ಕೀರ್ತಿವಂತರಾಗಿ ಬಾಳುತ್ತೀರಿ.
ಚಿಂತೆಯನ್ನು ಬಿಟ್ಟು ಭಗವದ್ ಚಿಂತನೆ ಮಾಡಿ. ಹೆಣ್ಣು ಅಬಲೆಯಾಗಬಾರದೆಂದೇ ದೇವರು ಸೃಷ್ಟಿಯಲ್ಲಿ ಪುರುಷನನ್ನು ಇರಿಸಿ, ಹೆಣ್ಣನ್ನು ಪೂಜಿಸೆಂದು ಜಗತ್ತಿಗೆ ಸಾರಿದ್ದಾನೆ. ಸೀತೆ ಕಾಳಿಯಾಗಿ ರಾವಣನನ್ನು ಸಂಹರಿಸಿದ್ದು ಗೊತ್ತೇ ಇದೆ. ಆರೋಗ್ಯಕ್ಕಾಗಿ ಧನ್ವಂತರಿ, ಸುಬ್ರಹ್ಮಣ್ಯ ದೇವರನ್ನು ಪೂಜಿಸಿ.
ತೂಕವನ್ನು ಮಾಡುವವನು ತೂಕದಲ್ಲಿ ಮೋಸ ಮಾಡಬಾರದೆಂಬ ನಿಯಮವಿದೆ. ಪಂಚಮಕ್ಕೆ ಶನಿ, ಷಷ್ಠಕ್ಕೆ ಗುರು ಅಲ್ಪಕಾಲವಿದ್ದು, ಚಿತ್ತಶುದ್ಧಿ ಮಾಡಬಹುದು. ಹೆದರುವ ಅಗತ್ಯವಿಲ್ಲ. ಕುಲದೇವರನ್ನು ಪೂಜಿಸಿ. ಮಂಗಳಕಾರ್ಯಗಳನ್ನು ಮಾಡಲು ಉದ್ಯುಕ್ತರಾಗಿ. ಗುರು-ಶನಿಯ ಸ್ಥಾನ ಪಲ್ಲಟ ಕಾಲದಲ್ಲಿ ಕುಲಗುರುಗಳನ್ನು ಆರಾಧಿಸಿ.
ಋಣಬಾಧೆ ತೀರಿಸಲು ಹಣದ ಅವಶ್ಯಕತೆ ಇದ್ದು, ದೇವರೇ ಸಾಕಷ್ಟು ಹಣವನ್ನು ಮಾಡುವ ಉದ್ಯೋಗದಲ್ಲಿ ಯಶಸ್ಸನ್ನು ನೀಡುತ್ತಾನೆ. ಚತುರ್ಥದಲ್ಲಿ ಶನಿ, ಪಂಚಮ ಗುರು ಒಳ್ಳೆಯ ಕಾಲ ಸೂಚಿಸುತ್ತದೆ. ಸ್ವಕ್ಷೇತ್ರ ಶನಿಯು ಕಳೆದದ್ದನ್ನು ಕೂಡಿಸಿ ಕೊಡುವನು. ಗುರುವು ಅನುಗ್ರಹ ನೀಡು ತ್ತಾನೆ. ಮಾರ್ಗ ತಿದ್ದಿದ ಗುರುವಿಗೆ ನಮನವಿರಲಿ.
ಸ್ವಕ್ಷೇತ್ರಕ್ಕೆ ಗುರುವು, ತೃತೀಯಕ್ಕೆ ಶನಿಯು ತಾತ್ಕಾಲಿಕವಾಗಿ ಬಂದು ನಗೆಯನ್ನು ಮೂಡಿಸಿ ಹಿಂದಿರುಗುತ್ತಾರೆ. 2023 ಜನವರಿ 23ರಂದು ಶನಿಸಂಚಾರ ಮುಗಿದು, ನಿಮ್ಮನ್ನು ಉತ್ತುಂಗಕ್ಕೆ ಕೊಂಡೊಯ್ಯುವ ಕಾಲ. ಒಳ್ಳೆಯದೆಲ್ಲ ಬಂದು ಸೇರುವ ಕಾಲ. ಗುರು ದತ್ತಾತ್ರೇಯನನ್ನು ಆರಾಧಿಸಿ.
ಶನಿ ಕುಂಭ ಪ್ರವೇಶ ಮಾಡಿದರೂ ಕಡೆಯ ಭಾಗದ ಶನಿಯು ಸಂಚರಿಸಿ ನಿಮ್ಮ ದುಃಖಕಾಲವನ್ನು ಕಳೆದು ನಿಮಗೆ ಅನುಗ್ರಹ ನೀಡುತ್ತಾನೆ. ಪಾರ್ವತಿಸಹಿತ ಸಾಂಬಸದಾಶಿವನನ್ನು ಪೂಜಿಸಿ. ಭವಾನಿಶಂಕರನ ಆರಾಧನೆ ಮಾಡಿ, ಅಂಬಾಭವಾನಿಯನ್ನು ಸಂದರ್ಶಿಸಿ. ಸಾಧ್ಯವಾದಲ್ಲಿ ತುಳಜಾಪುರಕ್ಕೆ ಹೋಗಿಬನ್ನಿ.
ಕುಂಭ ರಾಶಿಯಲ್ಲಿ ಗುರು ಬಂದು ನಿಮ್ಮನ್ನು ತಿದ್ದಿ ದುಶ್ಚಿಂತನೆಯನ್ನು ದೂರ ಮಾಡಬೇಕಾದರೆ ಗುರುವಿನ ಆರಾಧನೆ ಮುಖ್ಯ. ಈ ಸಮಯದಲ್ಲಿ ಸಾಧು-ಸತ್ಪುರುಷರ ಸಂಗ ಮಾಡಿದರೆ ಅಳಿದುಳಿದಿರುವ ದ್ವಾದಶ ಶನಿಯ ದೋಷವೂ ಹೋಗಿ ಜೀವನದಲ್ಲಿ ಉತ್ತೀರ್ಣರಾಗುತ್ತೀರ. ಗುರುವು 2ನೇ ಮನೆಗೆ ಸರಿದು ಉತ್ತಮ ಜೀವನವನ್ನು ನೀಡುತ್ತಾನೆ.
ರಾಶ್ಯಾಧಿಪತಿ ಗುರುವು ಸ್ವಕ್ಷೇತ್ರಕ್ಕೆ ಬಂದು ತಲುಪುವ ಕಾಲದಲ್ಲಿ ಸದ್ಗುಣ ಮೈಗೂಡಿಸಿಕೊಂಡು ಅನ್ಯರನ್ನು ನಿಂದಿಸದೆ ಬಾಳಿದಲ್ಲಿ ಜನ್ಮಗುರು ದಾರಿ ತೋರುತ್ತಾನೆ. 12ರ ಶನಿಯು ಶರೀರಕ್ಕೆ ಅಸ್ವಸ್ಥವನ್ನು, ದುಷ್ಟ ಚಿಂತನೆಯನ್ನು ನೀಡುತ್ತಾನೆ. ಉನ್ಮತ್ತದಿಂದ ವರ್ತಿಸಿ ಎಡವಬೇಡಿ. ಜೀವನ ಸಂಗಾತಿಗೆ ದುಃಖವನ್ನು ನೀಡಬೇಡಿ. ಸುಂದರಕಾಂಡ ಪಾರಾಯಣ ಮಾಡಿ.