ವಾರ ಭವಿಷ್ಯ; ಈ ರಾಶಿಯವರಿಗೆ ಆರೋಗ್ಯದ ಸಮಸ್ಯೆ ಬಂದರೂ ಹೆದರುವ ಅಗತ್ಯವಿಲ್ಲ

vara bhavishya
Published on

ಮೇಷ: ಭಾದ್ರಪದ ಪಿತೃ ಪಕ್ಷ ಮುಗಿಯುವ ಹಂತಕ್ಕೆ ಬಂದು ಮಹಾಷ್ಟಮಿ, ನವಮಿ, ಪುಣ್ಯಕಾಲದ ಏಕಾದಶಿಯಂದು ಪಿತೃಗಳ ಪುಣ್ಯಕಾರ್ಯ ಮಾಡಿರಿ. ಈ 3 ದಿನ ಶ್ರೇಷ್ಠ. ಜನ್ಮ ಕೊಟ್ಟವರನ್ನು ಪಿತೃಪಕ್ಷದಲ್ಲಿ ನೆನಸಿಕೊಂಡು ತಿಲತರ್ಪಣ ಮಾಡಿ ಬಂಧುಗಳಿಗೆ ಊಟ ಹಾಕಬೇಕು. ಮಹಾಪಕ್ಷದಲ್ಲಿ ಸೂರ್ಯನೇ ಪಿತೃ ದೇವತೆಗಳ ಸಾಕ್ಷಿ ಎನ್ನುತ್ತಾರೆ. ಉಳಿದ ದಿನಗಳಲ್ಲಿ ಪಿತೃತರ್ಪಣ ಮಾಡಿ ಆರೋಗ್ಯ, ಧನ, ಸಂಪತ್ತು ಪಡೆಯಬಹುದು.

ವೃಷಭ: ವೃಷಭ ರಾಶಿಗೆ ದ್ವಿತೀಯದಲ್ಲಿ ಗುರುವಿದ್ದು, ಗುರು ಶುಭಕಾರಕನು. ಗುರುವಿನ ಕರುಣೆ ಇದ್ದರೆ ಈಶ್ವರನೇ ನಿಮ್ಮನ್ನು ರಕ್ಷಿಸುತ್ತಾನೆ. ಈ ಮಾಸದಲ್ಲಿ ಶಿವ ಪೂಜೆಯನ್ನು ಕಡ್ಡಾಯವಾಗಿ ಮಾಡಿ. ಸಕಲ ಸೌಭಾಗ್ಯ ದೊರೆಯುತ್ತದೆ. ಶ್ರೇಯೋಭಿವೃದ್ಧಿಯಾಗುತ್ತದೆ.

ಮಿಥುನ: ಸೂರ್ಯನು ತೃತೀಯದಲ್ಲಿದ್ದು, ಆತ್ಮಕಾರಕನಾಗಿ ತೇಜಸ್ಸನ್ನು ಬೆಳಕನ್ನು ಕೊಟ್ಟು ಹರಸುತ್ತಾನೆ. ಆರೋಗ್ಯ ಹಿತಕರವಾಗಿದ್ದು, ಮನೋಭೀಷ್ಟವೂ ಪೂರ್ಣವಾಗಬೇಕಾದರೆ ಗುರು ನರಸಿಂಹನನ್ನು ಪ್ರಾರ್ಥಿಸಿರಿ. ಲಕ್ಷ್ಮೀ ನರಸಿಂಹ ಕರಾವಲಂಬನ ಸ್ತೋತ್ರ ಪಠಿಸಿ ಒಳ್ಳೆಯ ಫಲ ಪಡೆದುಕೊಳ್ಳಿ.

ಕಟಕ: ಈ ರಾಶಿಗೆ ಎರಡರಲ್ಲಿ ರವಿ ಬುಧರಿದ್ದು, ಮನೆಯಲ್ಲಿ ಶಾಂತಿಯೂ, ಪಿತೃಕಾರ್ಯಗಳನ್ನು ಮಾಡುವ ಮೂಲಕ ಮನಸ್ಸಿಗೆ ನೆಮ್ಮದಿಯೂ ದೊರಕುತ್ತದೆ. ದ್ವಾದಶ ಗುರುವಿನಿಂದ ಸಣ್ಣಪುಟ್ಟ ಮನಸ್ತಾಪ, ಆರೋಗ್ಯದ ಸಮಸ್ಯೆ ಬಂದರೂ ಹೆದರುವ ಅಗತ್ಯವಿಲ್ಲ. ಉಮಾ ಮಹೇಶ್ವರನನ್ನು ಧ್ಯಾನಿಸಿ, ಪೂಜಿಸಿ.

ಸಿಂಹ: ಸಿಂಹ ರಾಶಿಯಲ್ಲೇ ರವಿ, ಬುಧ ಇದ್ದು, ಬುಧಾದಿತ್ಯ ಯೋಗ ಕೈಗೂಡಿ ಬಂದಿದೆ. ಕೇತುವೂ ಅಲ್ಲೇ ಇದ್ದರೂ ಗಣಪತಿ ಪೂಜೆ ಮಾಡಿದರೆ ಸಾಕು, ಕೇತು ಸಂಪ್ರೀತನಾಗುತ್ತಾನೆ. ಬುಧಾದಿತ್ಯ ಯೋಗದಿಂದ ಒಳ್ಳೆಯ ಫಲ ಸಿಗುತ್ತದೆ. ದೇವರನ್ನು ಪ್ರತಿನಿತ್ಯ ನಿಮ್ಮ ಹೃದಯ ಮಂದಿರದಲ್ಲಿ ಪೂಜಿಸಿ. ಬರಬೇಕಾದ ದುಡ್ಡು ನಿಮ್ಮ ಕೈ ಸೇರುತ್ತದೆ.

ಕನ್ಯಾ: ಕನ್ಯಾ ರಾಶಿಯಲ್ಲಿ ಕುಜನಿದ್ದು, ಅವನಿಗೆ ಅದು ಒಳ್ಳೆಯ ಜಾಗವಲ್ಲ. ಆದರೂ ದಶಮ ಗುರು ಸಾಮಾನ್ಯ ಫಲ ಮಾತ್ರವೇ ಕೊಡಬಲ್ಲ. ಏಕಾದಶದಲ್ಲಿ ಶುಕ್ರ ಇರುವುದರಿಂದ ನೀವು ಚಿಂತಿಸಿದ ಕಾರ್ಯ ನೆರವೇರುತ್ತದೆ. ಅಷ್ಟಲಕ್ಷ್ಮಿಯನ್ನು ಪೂಜಿಸಿ. ಅಷ್ಟಲಕ್ಷ್ಮೀಂ ಐಶ್ವರ್ಯಂ ಎಂದು ಹೇಳುತ್ತಾರೆ. ಮಹಾಲಕ್ಷ್ಮಿಯನ್ನು ಧ್ಯಾನಿಸಿ ಪೂಜಿಸಿ.

ತುಲಾ: ತುಲಾ ರಾಶಿಯವರಿಗೆ 12ನೇ ಮನೆಯಲ್ಲಿ ಕುಜನಿದ್ದು, ಏಕಾದಶದಲ್ಲಿ ರವಿ, ಬುಧ ಇದ್ದಾರೆ. ಈ ತಿಂಗಳ 17ರವರೆಗೆ ಬೇಕಾದ ಶುಭ ಫಲ ಪಡೆಯಲು ರವಿ ಬುಧರೇ ಸಾಕು. ಕನ್ಯಾ ಸಂಕ್ರಮಣದಲ್ಲಿ ಸೂರ್ಯನು ರಾಶಿಗೆ 12ರಲ್ಲಿದ್ದು, ಆದಿತ್ಯ ಹೃದಯ ಪಾರಾಯಣ ಮಾಡಿ. ಸೂರ್ಯಾಷ್ಟಕ ಓದಿ. ನಿಮ್ಮ ಆಗುಹೋಗು ಸರಿಪಡಿಸಿಕೊಳ್ಳಿ. ಶುಭವಾಗಲಿ.

ವೃಶ್ಚಿಕ: ಋಣ ಪರಿಹಾರವಾಗುವ ಕಾಲ ಬಂದಿದೆ. ಬಂದ ಹಣವನ್ನು ಮಾಡಿದ ಸಾಲ ತೀರಿಸಲು ಮೀಸಲಿಡಬೇಕು. ದುಡ್ಡು ಬರಲು ನೂರು ದಾರಿ. ಆ ದುಡ್ಡು ಕೈ ಸೇರುವುದು ಒಂದೇ ಮಾರ್ಗದಿಂದ. ಆದ್ದರಿಂದ ಸಾಲ ತೀರಿಸುವ ಸಂಕಲ್ಪ ಮಾಡಿರಿ. ಜೀವನ ಚೆನ್ನಾಗಿರುತ್ತದೆ. ವ್ಯಾಪಾರದಲ್ಲಿ ಅಭಿವೃದ್ಧಿ ಕಾಣುವಿರಿ. ಶ್ರೀರಂಗಪಟ್ಟಣದ ರಂಗನಾಥನನ್ನು ಪೂಜಿಸಿ ಬೇಕಾದ್ದನ್ನು ಪಡೆಯಿರಿ.

ಧನುಸ್ಸು: ಗುರುವು ಸಪ್ತಮದಲ್ಲಿದ್ದು, ಕೀರ್ತಿ, ಲಾಭ ಸಕಲ ಭೋಗಭಾಗ್ಯವನ್ನು ಕೊಡುತ್ತಾನೆ. ಚತುರ್ಥದಲ್ಲಿ ಶನಿ ವಕ್ರನಾಗಿದ್ದು, 3ನೇ ಮನೆಯ ಶುಭ ಫಲವನ್ನು ಕೊಡುತ್ತಾನೆ. ಮಹಾಸಂಕಲ್ಪದಿಂದ ಕಾರ್ಯಗಳಲ್ಲಿ ಸಾಧನೆ ಮಾಡಿರಿ. ಸೂರ್ಯನ ತೇಜಸ್ಸಿನಲ್ಲಿ ದಾಪುಗಾಲಿಡಬಹುದು. ಗುರು ಅಷ್ಟೋತ್ತರ ಪಠಿಸಿ.

ಮಕರ: ಮಕರ ರಾಶಿಗೆ ಶನಿ ವಕ್ರಿಯಾಗಿ ದ್ವಿತೀಯದಲ್ಲಿದ್ದು, ಅಲ್ಪ ಮಟ್ಟಿಗೆ ಶನಿಯ ಬಾಧೆ ಇರುತ್ತದೆ. ಹೆದರುವ ಅಗತ್ಯವಿಲ್ಲ. ಇನ್ನೊಬ್ಬರಿಗೆ ಹರಕೆಯ ಕುರಿಯಾಗದಿರಿ. ಆರರಲ್ಲಿ ಗುರು ಇರುವುದರಿಂದ ಗುರುವೇ ನಿಮ್ಮನ್ನು ಸಂರಕ್ಷಿಸಿ, ಇಚ್ಛಾ ಶಕ್ತಿ, ಜ್ಞಾನ ಶಕ್ತಿ ಕೊಟ್ಟು ಮಾಡುವ ಕಾರ್ಯಗಳಲ್ಲಿ ಶ್ರೇಯಸ್ಸನ್ನು ಕೊಡುತ್ತಾನೆ. ಸಪ್ತಮದಲ್ಲಿ ಶುಕ್ರನಿದ್ದಾನೆ. ದುರ್ಗೆಯನ್ನು ಪ್ರಾರ್ಥಿಸಿ.

ಕುಂಭ:  ಶನಿ-ರಾಹು ಸಂಪರ್ಕವಿದ್ದು, ಪಂಚಮ ಗುರು ವಕ್ರಿಯಾಗಿರುವುದರಿಂದ ಮನುಷ್ಯನಿಗೆ ದೈವಬಲ ಕಡಿಮೆಯಾಗಿದೆ ಎಂದು ಗ್ರಹಗಳೇ ಸೂಚನೆ ನೀಡುತ್ತಿವೆ. ದೈವಬಲ ವೃದ್ಧಿಸಿಕೊಳ್ಳುವುದೇ ಆದ್ಯತೆ ಆಗಲಿ. ಶನಿ, ರಾಹುವಿಗೆ ಶಿವನನ್ನು ಪೂಜಿಸಿ. ಖಂಡಿತವಾಗಿಯೂ ಒಳ್ಳೆಯದಾಗುತ್ತದೆ, ಶುಭವಾಗಲಿ.

ಮೀನ: ಮೀನ ರಾಶಿಯವರಿಗೆ 12ರ ಶನಿ, ರಾಹು ಚತುರ್ಥದಲ್ಲಿದ್ದಾನೆ. ಗುರು ಶುಭ ಸೂಚನೆ ತೋರದಿದ್ದರೂ ರಾಶ್ಯಾಧಿಪತಿ ಗುರುವಾಗಿರುವುದರಿಂದ ಚತುರ್ವಿಧ ಫಲಾಫಲ ಪುರುಷಾರ್ಥ ಪಡೆಯಲು ಅವಶ್ಯ. ನವಗ್ರಹಸಹಿತ ಸತ್ಯನಾರಾಯಣ ದೇವರ ಪೂಜೆ ಮಾಡಿದರೆ ವಿಶ್ವರೂಪಿ ನಾರಾಯಣನೇ ಹರಸಿ ಕಷ್ಟಗಳ ಸಂಕೋಲೆಯಿಂದ ಬಿಡಿಸುತ್ತಾನೆ. ನಿಮಗೆ ಧನ ಭೋಗ ಭಾಗ್ಯಗಳು ದೊರೆಯುತ್ತವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net