ವಾರ ಭವಿಷ್ಯ: ಈ ರಾಶಿಯವರಿಗೆ ಅಪೂರ್ಣವಾದ ಕೆಲಸವು ಪೂರ್ಣವಾಗುತ್ತದೆ

vara bhavishya
Published on

ಮೇಷ: ಪ್ರಪಂಚದಲ್ಲಿ ನಡೆಯುವ ಯುದ್ಧದ ಭೀತಿಗೆ ದೈವತ್ವ ತುಂಬಿದ ವಿಶೇಷ ರಾಷ್ಟ್ರವಾದ ಭಾರತದವರು ಭಯ ಪಡಬೇಕಾಗಿಲ್ಲ. ಕೆಲಸ ನಡೆಯುವುದು ತಡವಾದರೂ ಮೊದಲು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ. ಜು. 1ನೇ ತಾರೀಖು ಸ್ಕಂದ ಷಷ್ಠಿ. ಅಂದು ಸುಬ್ರಹ್ಮಣ್ಯನನ್ನು ಪೂಜಿಸಿದರೆ ನಿಮ್ಮ ಪುಣ್ಯದ ಬಾಗಿಲು ತೆರೆದಂತೆ. ಅಪೂರ್ಣವಾದ ಕೆಲಸವು ಪೂರ್ಣವಾಗುತ್ತದೆ.

ವೃಷಭ: ಶುಕ್ರಾಧಿಪತ್ಯದ ವೃಷಭ ರಾಶಿಯವರಿಗೆ ರವಿ-ಗುರು 2ರಲ್ಲಿದ್ದು, 4ನೇ ಮನೆಯಲ್ಲಿ ಕುಜ- ಕೇತು ಇರುವುದು. ಗುರುಬಲ ವಿಶೇಷವಾಗಿದೆ. ಕುಜ-ಕೇತು ಗ್ರಹ ಅಡ್ಡಿ ಉಂಟುಮಾಡದೆ, ಯಾವುದೇ ವಿಚಾರಗಳಲ್ಲೂ ಕಡೆಯಲ್ಲಿ ಜಯವಾಗುವುದು. ಪಿತೃಗಳ ಆಶೀರ್ವಾದದಿಂದ ಕೆಲಸ ಮಾಡಿಕೊಳ್ಳುವ ಸಮಯವಿದು. ಹನುಮಂತನನ್ನು ಪೂಜಿಸಿ. ಎಲ್ಲಾ ಕಾರ್ಯ ಸಿದ್ಧಿಯಾಗುತ್ತದೆ.

ಮಿಥುನ: ಲಗ್ನಾತ್ ಗುರು-ಸೂರ್ಯನು ಒಳ್ಳೆಯ ಸಂಚಾರ ಪಥದಲ್ಲಿ ಇರುವುದರಿಂದ, ವ್ಯವಹಾರದಲ್ಲಿ ತೊಂದರೆ ಬಾರದಂತೆ ಕಾಪಾಡುತ್ತಾರೆ. ರಾವಣನ ಸಂಹಾರ ಮಾಡಲು ಸಾಕ್ಷಾತ್ ಶ್ರೀರಾಮಚಂದ್ರನಿಗೇ ಹಲವು ತೊಂದರೆ ಬಂದಾಗ, ಅಗಸ್ಱ ಋಷಿಗಳು ಆದಿತ್ಯ ಹೃದಯ ಉಪದೇಶ ಮಾಡಿ ವಿಘ್ನಗಳು ಬಾರದಂತೆ ತಡೆಯುತ್ತಾರೆ. ಸೂರ್ಯನ ಪ್ರಾರ್ಥನೆ ಇರಲಿ. ಆದಿತ್ಯ ಹೃದಯ ಪಾರಾಯಣ ಮಾಡಿರಿ.

ಕಟಕ: ಚಂದ್ರಾಂಶದಲ್ಲಿ ಬುಧನಿದ್ದು ದ್ವಿತೀಯದಲ್ಲಿ ಕುಜ-ಕೇತು ಇರುವುದರಿಂದ ಕುಟುಂಬದಲ್ಲಿ ಗೊಂದಲವಾಗುತ್ತದೆ. ಸಮಯ, ಬುದ್ದಿ ಹಾಳುಮಾಡಿಕೊಳ್ಳಬೇಡಿ. ಶಿವನ ತಲೆಯ ಮೇಲಿರುವ ಚಂದ್ರನೇ ತಲೆಯ ಭಾರವನ್ನು ಹೋಗಿಸಿ ಸಮಯವನ್ನು ಹೇಗೆ ಉಪಯೋಗಿಸಿಕೊಳ್ಳಬೇಕೆಂಬ ಬುದ್ದಿ ಕೊಡುತ್ತಾನೆ. ಭ್ರಮರಾಂಬಾ ಸಹಿತ ಮಲ್ಲಿಕಾರ್ಜುನಸ್ವಾಮಿಯನ್ನು ಪೂಜಿಸಿ.

ಸಿಂಹ: ಕುಜ-ಕೇತು ಸಿಂಹ ರಾಶಿಯಲ್ಲಿ ಇರುವುದು ಮನಸ್ಸಿನ ಒತ್ತಡಕ್ಕೆ ಕಾರಣವಾಗುತ್ತದೆ. ಕೆಲಸವು ತಡವಾಗುತ್ತದೆ. ಅತಿಯಾಗಿ ಆಲೋಚನೆ ಮಾಡಬೇಡಿ. ಬೇಕಾದ್ದನ್ನು ತೆಗೆದುಕೊಂಡು, ಬೇಡದ್ದನ್ನು ಬಿಡಬೇಕು. ನ್ಯಾಯಸಮ್ಮತ ತೀರ್ವನವಿರಲಿ. ಅಷ್ಟಮದಲ್ಲಿ ಶನಿಯಿರುವುದರಿಂದ ಎಲ್ಲ ವಿಚಾರದಲ್ಲ್ಲೂ ತಾಳ್ಮೆ ವಹಿಸಿ. ನಿಮಗೆ ಶುಭವಾಗುವುದು.

ಕನ್ಯಾ: ಏಕಾದಶದಲ್ಲಿ ಬುಧನಿದ್ದಾನೆ. ವ್ಯಾಪಾರ ವಹಿವಾಟುಗಳಲ್ಲಿ ಶುಭವನ್ನು, ಧನವನ್ನು ಕಾಣಬಹುದು. ಆದರೆ ಬಂದ ದುಡ್ಡು ಎಲ್ಲಿ ಹೋಗುವುದೆಂದು ಗೊತ್ತಾಗುವುದಿಲ್ಲ. ಖರ್ಚು- ವೆಚ್ಚಗಳು ಜಾಸ್ತಿಯಾಗಿ ಮನೋಭಾರವಾಗುತ್ತದೆ. ಖರ್ಚು ಮಿತಿಯಲ್ಲಿರಲಿ. ವಿಷ್ಣುಸಹಸ್ರನಾಮ ಪಾರಾಯಣ ಮಾಡಿದಲ್ಲಿ ಮನಸ್ಸಿಗೆ ಉಲ್ಲಾಸ, ಕಾರ್ಯಕ್ಕೆ ಪ್ರಗತಿ ಇರುತ್ತದೆ.

ತುಲಾ: ಶನಿ, ಗುರುವು ಅತ್ಯುತ್ತಮ ಸ್ಥಾನದಲ್ಲಿ ಇದ್ದಾರೆ. ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಂಡು ತಲೆಕೆಡಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ. ಯಾರೇ ಏನು ಹೇಳಿದರೂ, ಯಾವುದರ ಬಗ್ಗೆಯೂ ಚಿಂತೆ ಮಾಡದಿರಿ. ಅವರವರ ಕರ್ವನುಸಾರಕ್ಕೆ ಬಿಟ್ಟರೆ ಅವರೇ ಬುದ್ಧಿ ಕಲಿಯುತ್ತಾರೆ. ನಿಮಗೆ ಒಲಿದು ಬಂದ ದೇವತೆ ಲಲಿತಾ ತ್ರಿಪುರಸುಂದರಿ. ಲಲಿತಾಸಹಸ್ರನಾಮ ಪಾರಾಯಣ ಮಾಡಲೇಬೇಕು. ಜಯವು ನಿಮ್ಮದೇ.

ವೃಶ್ಚಿಕ: ಗುರುವಿನ ಮನೆಯಲ್ಲಿ ಶನಿ, ಅಷ್ಟಮದಲ್ಲಿ ಗುರು, ಒಂಬತ್ತರಲ್ಲಿ ಬುಧನಿದ್ದಾನೆ. ವ್ಯಾಪಾರವನ್ನು ಜಾಗರೂಕತೆಯಿಂದ ಮಾಡಬೇಕು. ಆಲೋಚನೆ ಮಾಡಿ ನಿರ್ಣಯ ತೆಗೆದುಕೊಂಡರೆ ದೃಢವಾದ ಮನಸ್ಸಿನಿಂದ ಆರು ಮುಖವುಳ್ಳವನಾದ ಸುಬ್ರಹ್ಮಣ್ಯನಿಗೆ ಜು.1 ರ ಷಷ್ಠಿಯಂದು ಪೂಜಿಸಿದರೆ ಅತ್ಯಂತ ಅನುಕೂಲವಾಗುವುದು.

ಧನುಸ್ಸು: ಸಪ್ತಮದಲ್ಲಿ ಗುರು-ರವಿ ದಾರಿ ತೋರಿ, ಧೈರ್ಯ ತುಂಬುವನು. ಗುರು ಸಾಕ್ಷಾತ್ ತ್ರಿಮೂರ್ತಿ ಸ್ವರೂಪ ದತ್ತಾತ್ರೇಯ ನಿಮ್ಮನ್ನು ಕಾಯಲು ಏಳನೇ ಮನೆಯಲ್ಲಿ ನಿಂತಿದ್ದಾನೆ. ಯಾವುದೇ ವಿಚಾರದಲ್ಲೂ ನಿರ್ಧಾರ ನಿಮ್ಮದೇ ಆಗಿರಲಿ. ನಿಮ್ಮ ದೈವಬಲವು ಉತ್ತಮವಾಗಿರುವುದರಿಂದ ನೀವೇ ನಿಮ್ಮ ಜೀವನ ರೂಪಿಸಿಕೊಂಡು ಸುಖವಾದ ಜೀವನವನ್ನು ಸಾಗಿಸಿರಿ. ಒಳ್ಳೆಯ ಸಮಯಬಂದಿದೆ. ದತ್ತನ ಪ್ರಾರ್ಥನೆ ತಪ್ಪದೇ ಮಾಡಿರಿ.

ಮಕರ: 6ರಲ್ಲಿ ಗುರುವಿದ್ದಾನೆ. ಮಕರ-ಕುಂಭಾಧಿಪತಿ ಶನಿ 3ನೇ ಮನೆಯಲ್ಲಿ ಇದ್ದಾನೆ. ಅತ್ಯಂತ ಒಳ್ಳೆಯ ಸಮಯ. ಶುಭಗ್ರಹಗಳು ಏನನ್ನು ಕೊಡುತ್ತವೋ ಅದರಲ್ಲಿ ತೃಪ್ತಿ ಪಡೆಯಿರಿ. ಅದುವೇ ಧೈರ್ಯ ತುಂಬಿ ನಿಮ್ಮ ಕೆಲಸ ಆಗಲು ಅನುವು ಮಾಡಿಕೊಡುತ್ತವೆ. ಶನಿಯ ಪ್ರಾರ್ಥನೆ ಇರಲಿ. ಗುರುವಿನ ಕೃಪೆಗಾಗಿ ಬಳೆಪೇಟೆಯ ಶ್ರೀಲಕ್ಷೀ ನರಸಿಂಹನನ್ನು ಪೂಜಿಸಿ. ಗುರುಕಟಾಕ್ಷವು ಒದಗಿಬಂದು ಕೆಲಸ ಮುನ್ನಡೆಯುತ್ತದೆ.

ಕುಂಭ: ದ್ವಿತೀಯದಲ್ಲಿ ಶನಿ, ಲಗ್ನದಲ್ಲಿ ರಾಹು ಇದ್ದಾರೆ. ಸಮಸ್ಯೆ ಸರಿಪಡಿಸಿಕೊಳ್ಳಲು ಶಾಂತವಾಗಿ ಕೇಳಬೇಕು, ಆಲೋಚಿಸಿ ನಿರ್ಧಾರ ತಗೆದುಕೊಳ್ಳಬೇಕು. ಏಕಾಏಕಿ ಉತ್ತರ ಕೊಟ್ಟು ಅವಾಂತರದಿಂದ ನಿರ್ಣಯ ಕೈಗೊಂಡರೆ ಅದಕ್ಕೆ ನೀವೇ ಜವಾಬುದಾರರಾಗಿರುತ್ತೀರಿ. ಯಾವುದೇ ವಿಚಾರಗಳಲ್ಲಿ ಶೀಘ್ರವಾಗಿ ನಿರ್ಧಾರ ತೆಗೆದುಕೊಳ್ಳಲು ಸಮಯ, ಸಂಯಮ ಬೇಕಾಗುತ್ತದೆ. ಕುಲದೇವರ ಪ್ರಾರ್ಥನೆ ಮಾಡಿ.

ಮೀನ: ಶನಿಯು ಲಗ್ನದಲ್ಲಿದ್ದು ಕೆಲಸಗಳು ತಡವಾದರೂ ಪರವಾಗಿಲ್ಲ, ನಿಂತುಬಿಟ್ಟರೆ ನಿಂತಲ್ಲೇ ನಿಂತು ತೊಂದರೆ ಕೊಡುತ್ತದೆ. ಗುರು ಪಂಚಮಕ್ಕೆ ಬಂದಾಗ ಕೆಲಸಗಳು ವೇಗವಾಗಿ ಸಾಗಿ, ಕಾರ್ಯವೂ ಪೂರ್ಣಗೊಳ್ಳುತ್ತದೆ. ನೆನಪಿರಲಿ, ಶನಿಯ ಪ್ರೀತಿಗಾಗಿ ತಿಲಾಹೋಮವನ್ನು ಮಾಡಿ ಪಿತೃಗಳ ಆಶೀರ್ವಾದ ಪಡೆಯಿರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net