

ಮೇಷ: ಏಳೂವರೆ ವರ್ಷದ ಶನಿಸಂಚಾರವು ಆರಂಭವಾಗಿ 4 ತಿಂಗಳಾಗಿದ್ದು, ಜು. 13ರಿಂದ ಶನಿಯು ವಕ್ರನಾಗಿ ಚಲಿಸುತ್ತಾನೆ. ಮಂದಗತಿಯಲ್ಲಿ ಸಾಗುತ್ತಿದ್ದ ಕೆಲಸಗಳು ವೇಗವಾಗಿ ಸಾಗಿ ಪ್ರಗತಿಯನ್ನು ಕಾಣುವಿರಿ. ಗುರುವು ತೃತೀಯದಲ್ಲಿರುವುದರಿಂದ ಯಾವುದೇ ಅಡಚಣೆ ಇಲ್ಲದೆ ಕೆಲಸಗಳಲ್ಲಿ ಮುಂದುವರಿಯಬಹುದು. ಪ್ರತಿನಿತ್ಯ ಸುಬ್ರಹ್ಮಣ್ಯ ಅಷ್ಟೋತ್ತರವನ್ನು ಪಠಿಸಲು ಮರೆಯದಿರಿ.
ವೃಷಭ: ಶನಿಯು ವಕ್ರನಾಗಿ ರಾಹುವಿನ ಜೊತೆಯಲ್ಲಿದ್ದು, ನೀವು ಆತ್ಮಾವಲೋಕನ ಮಾಡಿಕೊಂಡು ತಪ್ಪನ್ನು ತಿದ್ದಿಕೊಂಡು ಮುನ್ನಡೆಯುವ ಕಾಲ. ಏನೇ ಕೆಲಸ ಕೈಗೆತ್ತಿಕೊಂಡರೂ ಮೌನದಿಂದ ಅದನ್ನು ಮುಗಿಸಿದರೆ ಜಯವನ್ನು ಕಾಣುವಿರಿ. ಆಗುವುದೆಲ್ಲ ಒಳ್ಳೆಯದಕ್ಕೆ ಎಂಬಂತೆ ಈ ಮುಂದಿನ 4 ತಿಂಗಳು ದೈವ ಚಿಂತನೆಯಲ್ಲಿ ಕಳೆಯಿರಿ. ಶ್ರೀರಂಗಪಟ್ಟಣದ ರಂಗನಾಥ ಸ್ವಾಮಿಗೆ ಮಹಾಭಿಷೇಕ ಮಾಡಿಸಿ. ನೂತನ ವಸ್ತ್ರದಾನ ಮಾಡಿರಿ.
ಮಿಥುನ: ಲಗ್ನದಲ್ಲೇ ಗುರುವಿದ್ದು, ಜೀವನದಲ್ಲಿ ಒತ್ತಡವನ್ನು ಕಡಿಮೆ ಮಾಡಿ ಸನ್ಮಾರ್ಗವನ್ನು ತೋರುವನು. ಸಹೋದರರೊಂದಿಗೆ ಬೇಡದ ವೈಮನಸ್ಯ ಉಂಟಾಗುವ ಸಾಧ್ಯತೆಗಳಿರುತ್ತದೆ. ಮೌನವಾಗಿದ್ದು, ಪರಿಸ್ಥಿತಿಯನ್ನು ಅರ್ಥೈಸಿಕೊಂಡು ಮುಂದೆ ಸಾಗಿದರೆ ಸುಖ-ಸಂತೋಷಗಳು ನಿಮ್ಮನ್ನು ಅರಸಿ ಬರುತ್ತವೆ. ಯಾರನ್ನೂ ನಿಂದನೆ, ಅವಹೇಳನ ಮಾಡಬಾರದು. ಲಕ್ಷ್ಮೀನರಸಿಂಹ ಸ್ವಾಮಿಯನ್ನು ಧ್ಯಾನಿಸಿ, ಜನಾರ್ದನ ದೇವರನ್ನು ದರ್ಶಿಸಿ.
ಕಟಕ: ದ್ವಾದಶದಲ್ಲಿ ಗುರು ಸ್ಥಿತನಾಗಿದ್ದು, ಶನಿಯು ತಾತ್ಕಾಲಿಕವಾಗಿ ಅಷ್ಟಮಕ್ಕೆ ಬರುತ್ತಾನೆ. ಯಾರೊಂದಿಗೂ ದ್ವೇಷ, ಕಲಹ ಮಾಡದೆ ನಿಮ್ಮಷ್ಟಕ್ಕೆ ನೀವಿದ್ದರೆ ಗೊಂದಲವು ಆಗುವುದಿಲ್ಲ. ಗುರುವಿನ ಉಚ್ಚ ರಾಶಿಯವರಾದ ನೀವು ಸದಾ ಉಮಾ ಮಹೇಶ್ವರನನ್ನು ಪ್ರಾರ್ಥಿಸಿ. ಪ್ರದೋಷ ಕಾಲದಲ್ಲಿ ಶಿವನಿಗೆ ಬಿಲ್ವಾರ್ಚನೆ ಮಾಡಿಸಿ. ಶಿವನ ಶಿರಸ್ಸಿನಲ್ಲಿ ಇರುವ ಚಂದ್ರನೇ ನಿಮ್ಮ ಮನಸ್ಸಿಗೆ ತಂಪಾದ ಗಾಳಿಯನ್ನು ಬೀಸಿ ಶಾಂತಿಯನ್ನು, ನೆಮ್ಮದಿಯನ್ನು ನೀಡುತ್ತಾನೆ.
ಸಿಂಹ: ಶನಿಯು ವಕ್ರನಾಗಿ ಸಪ್ತಮ ಸ್ಥಾನದಲ್ಲಿ ಸಂಚರಿಸುವವನಿದ್ದಾನೆ. ಆರೋಗ್ಯವೂ ಸುಧಾರಿಸುತ್ತದೆ. ನಿರೀಕ್ಷಿತ ಧನವೂ ನಿಮ್ಮನ್ನು ಬಂದು ಸೇರುತ್ತದೆ. ಗುರು ದತ್ತಾತ್ರೇಯನ ಪ್ರಾರ್ಥನೆ ಇರಲಿ. ಲಗ್ನದಲ್ಲೆ ಕುಜ -ಕೇತುವಿದ್ದು, ವಲ್ಲಿ ದೇವಸೇನಾ ಸಹಿತ ಸುಬ್ರಹ್ಮಣ್ಯನ ಆರಾಧನೆ ಮಾಡಿರಿ. ಗಣೇಶನನ್ನು ಸದಾಕಾಲ ಪೂಜಿಸಿ.
ಕನ್ಯಾ: ವಕ್ರನಾಗಿ ಶನಿಯು ಷಷ್ಟದ ಫಲವನ್ನು ನೀಡಲು ಉತ್ಸುಕನಾಗಿದ್ದಾನೆ. ನೀವು ಕಾರ್ಯೋನ್ಮುಖರಾಗಲು ಒಳ್ಳೆಯ ಸಮಯ. ಬೇಡದ ವಿಚಾರಗಳಿಗೆ ತಲೆ ಕೆಡಿಸಿಕೊಳ್ಳದೆ ಗುರಿಯತ್ತ ಗಮನವಿರಲಿ. ಆರೋಗ್ಯದ ಬಗ್ಗೆ ಎಚ್ಚರವಿರಲಿ. ಬ್ರಹ್ಮ, ಶಿವ, ಶಿವಭಕ್ತರನ್ನು ಅಥವಾ ವೇದಾಧ್ಯಯನ ಮಾಡುವವರ ಮನಸ್ಸಿಗೆ ನೋವುಂಟು ಮಾಡಿದ್ದರೆ, ಬ್ರಹ್ಮಲಿಂಗೇಶ್ವರನಿಗೆ ರುದ್ರಾಭಿಷೇಕವನ್ನುಮಾಡಿಸಿ. ನಿರೀಕ್ಷೆಗೆ ಮೀರಿದ ಧನವು ಬಂದು ಸೇರುತ್ತದೆ.
ತುಲಾ: ತಕ್ಕಡಿಗೆ ನೀವು ಎಷ್ಟೇ ಭಾರ ಹಾಕಿದರೂ ತಡೆದುಕೊಳ್ಳುತ್ತದೆ. ಹಾಗೆಯೇ ಜೀವನದಲ್ಲಿ ಏನೇ ತೊಂದರೆ ಬಂದರೂ ಧೃಡವಾದ ಮನಸ್ಸಿನಿಂದ ಎದುರಿಸುವ ಕಲೆಯೂ ನಿಮ್ಮಲ್ಲಿದೆ. ಈ ರಾಶಿಯ ಹೆಣ್ಣು ಮಕ್ಕಳನ್ನು ಕೆಣಕಿದರೆ ಬಾಧೆ ಅನುಭವಿಸುವುದರಲ್ಲಿ ಸಂದೇಹವಿಲ್ಲ. ನಿಮ್ಮನ್ನು ನಿರಾಕರಿಸುವವರಿಗೆ ಕಾಲವೇ ತಕ್ಕ ಪಾಠವನ್ನು ಕಲಿಸುತ್ತದೆ. ಯಾರೊಂದಿಗೂ ಕಲಹ ಬೇಡ. ಯಾವುದೇ ಹೊಸ ಕೆಲಸಕ್ಕೆ ಕೈ ಹಾಕದಿರಿ. ಮೌನವಾಗಿದ್ದು ನಿಮ್ಮ ಸಮಯಕ್ಕಾಗಿ ಕಾಯಿರಿ.
ವೃಶ್ಚಿಕ: ಶನಿ ಬಲ ಗುರು ಬಲ ಎರಡೂ ಇಲ್ಲವಾಗಿದ್ದು, ಕೆಲಸಗಳು ನಿಂತಲ್ಲೆ ನಿಂತು ಅದರಿಂದ ಬರುವ ಧನವು ಕೈ ಸೇರದ ಪರಿಸ್ಥಿತಿ ಎದುರಿಸುವಂತಾಗಿದೆ. ಗುರುವನ್ನು ಸ್ಮರಿಸಿ ಕೈಲಾದ ಸೇವೆಯನ್ನು ಮಾಡಿದಲ್ಲಿ ಕೆಲಸವೂ ಮುಂದೆ ಸಾಗಿ ಸ್ವಲ್ಪ ಮಟ್ಟಿಗೆ ಧನಾಗಮವಾಗುತ್ತದೆ. ಒಡಹುಟ್ಟಿದವರರನ್ನು ಪ್ರೀತಿಯಿಂದ ಕಾಣಿರಿ. ನಿಮ್ಮ ಹಿತಚಿಂತಕರು, ಹಿರಿಯರ ಜತೆ ಕೋಪ ಬೇಡ. ಪಳನಿ ಸುಬ್ರಹ್ಮಣ್ಯನನ್ನು ಪೂಜಿಸಿ. ಸಾಧ್ಯವಾದಲ್ಲಿ ದರ್ಶಿಸಿ ಬನ್ನಿ.
ಧನುಸ್ಸು: ಸಪ್ತಮದಲ್ಲಿ ಗುರುವಿದ್ದು, ಗುರುವಿನ ರಾಶಿಯಲ್ಲಿ ಜನಿಸಿದ ನಿಮಗೆ ನಿಮ್ಮ ಕುಲಗುರುಗಳ ಸಂಪೂರ್ಣ ಅನುಗ್ರಹವಿರುತ್ತದೆ. ನಿಮ್ಮ ಹೋರಾಟವನ್ನು ನಿಲ್ಲಿಸದಿರಿ. ನ್ಯಾಯಕ್ಕೆ ಜಯ ಸಿಗುವುದು. ಅನ್ಯಾಯವನ್ನು ಖಂಡಿಸಿದರೆ ಕೀರ್ತಿ ಬರುವುದು. ನಿಮ್ಮ ಧೈರ್ಯವನ್ನು ಪರಮಾತ್ಮನೇ ಮೆಚ್ಚುತ್ತಾನೆ. ಶುಕ್ರನು 6 ನೇ ಮನೆಯಲ್ಲಿ ಇದ್ದು, ವ್ಯವಹಾರಗಳು ಸುಸೂತ್ರವಾಗಿ ಸಾಗಲು ಚಂಡಿಕಾ ಮಹಾಲಕ್ಷ್ಮಿಯನ್ನು ಪೂಜಿಸಿ.
ಮಕರ: ಇನ್ನೇನು ಶನಿಯ ಏಳೂವರೆ ವರ್ಷದ ಬಂದನದಿಂದ ಮುಕ್ತರಾದೆವು ಎನ್ನುವಷ್ಟರಲ್ಲಿ ಮತ್ತೆ ವಕ್ರನಾಗಿ ಎರಡನೇ ಮನೆಗೆ ಬಂದಿದ್ದಾನೆ. ಭಯ ಪಡುವ ಅಗತ್ಯವಿಲ್ಲ. ಈಗಾಗಲೇ ಜೀವನದ ಪಾಠವನ್ನು ಶನಿಯು ಕಲಿಸಿದ್ದಾನೆ. ಕುಟುಂಬದವರೊಂದಿಗೆ ಶಾಂತಿಯಿಂದ ವರ್ತಿಸಿ. ಅತಿಯಾದ ಮಾತು ಹಾಗೂ ಸಲಹೆ ಒಳ್ಳೆಯದಲ್ಲ. ಕೇಳಿದ್ದಕ್ಕೆ ಮಾತ್ರವೆ ಉತ್ತರಿಸುವುದು ಮರ್ಯಾದಾ ಪುರುಷೋತ್ತಮನ ಲಕ್ಷಣ ಎಂದು ತಿಳಿದು ಮುಂದುವರಿಯಿರಿ. ಶನಿಗೆ ಪ್ರಾರ್ಥನೆ ಇರಲಿ. ಶನೈಶ್ಚರ ಅಷ್ಟೊತ್ತರ ಪಠಿಸಿ.
ಕುಂಭ: ಯುದ್ಧವನ್ನು ಮಾಡುವವನು ಬೊಜ್ಜನ್ನು ಬೆಳೆಸಬಾರದು. ನಿಮ್ಮ ಸಮಯವನ್ನು ವ್ಯಾಯಾಮ ಮಾಡುವುದರಲ್ಲಿ ಸಾರ್ಥಕ ಪಡಿಸಿಕೊಳ್ಳಿ. ವಿಧಾತನ ಬರಹದ ಮುಂದೆ ಯಾರ ಆಟವೂ ನಡೆಯದು. ಶನಿ, ರಾಹು ಗ್ರಹಗಳು ಸಂಯೋಜನೆಯಲ್ಲಿರುವುದರಿಂದ ಯಾವುದೇ ಹೊಸ ಯೋಜನೆಯನ್ನು ಪ್ರಾರಂಭಿಸುವ ಮುನ್ನ ಯೋಚಿಸಿ, ಹಿರಿಯರೊಂದಿಗೆ ಚರ್ಸಿಚಿ ಮುಂದುವರಿಯಿರಿ. ಶಿವನನ್ನು ಪೂಜಿಸಿ. ಪ್ರತಿ ನಿತ್ಯ ಹನುಮಾನ್ ಚಾಲಿಸಾ ಪಠಿಸಿ. ಕುಲದೇವರ ಸೇವೆಯಲ್ಲಿ ತೊಡಗಿಸಿಕೊಳ್ಳಿ.
ಮೀನ: ಶನಿಯು ಲಗ್ನದಿಂದ ಹಿಂದೆ ಸರಿದು ದ್ವಾದಶಕ್ಕೆ ಬಂದಿದ್ದಾನೆ. ಹತ್ತು ಹಲವಾರು ಸವಾಲುಗಳನ್ನು ಎದುರಿಸಲು ನಿಮ್ಮನ್ನು ತಯಾರು ಮಾಡುತ್ತಾನೆ. ಅತಿಯಾಗಿ ಗಾಳಿ ಬೀಸಿದಾಗ ಚಂಡಮಾರುತ ಬಂದು ಸಮುದ್ರದಲ್ಲಿ ಪ್ರವಾಹವು ಆರಂಭವಾಗುತ್ತದೆ. ಹಾಗೆಯೇ ಯಾವುದೇ ವಿಚಾರಕ್ಕೂ ಅತಿಯಾಗಿ ಚಿಂತೆ ಮಾಡದೆ ಗಾಳಿ ಬಂದಂತೆ ತೂರಿಕೊಳ್ಳುವ ಮನಸ್ಥಿತಿಯಲ್ಲಿ ಇದ್ದರೆ ಮನಸ್ಸಿಗೆ ನೆಮ್ಮದಿ, ಸುಖವನ್ನು ಕಾಣುತ್ತೀರಿ. ಗುರು ದತ್ತಾತ್ರೇಯನ ಆರಾಧನೆ ಇರಲಿ. ಉಮಾ ಮಹೇಶ್ವರನನ್ನು ಪೂಜಿಸಿ.