ವಾರ ಭವಿಷ್ಯ: ಈ ರಾಶಿಯವರಿಗೆ ಸುಖ-ಸಂತಸ ನಿಮ್ಮನ್ನು ಬಂದು ಸೇರುತ್ತದೆ

vara bhavishya
Published on

ಮೇಷ: ಇಂದು (ಜು.6) ಆಷಾಢ ಮಾಸದ ಪ್ರಥಮ ಏಕಾದಶಿ ಆಚರಣೆ ಹಾಗೂ ಪಂಡರಾಪುರದ ಪಂಡರೀನಾಥನ ಉತ್ಸವ ಆರಂಭವಾಗಿ ದಕ್ಷಿಣಾಯಣದಲ್ಲಿ ಮಹಾವಿಷ್ಣುವು ಶಯನದಲ್ಲಿ ಇರುತ್ತಾನೆ ಎಂದು ಶಾಸ್ತ್ರಗಳು ಸಾರುತ್ತವೆ. ಹಾಗಿದ್ದರೂ ವಿಷ್ಣ್ಣುವು ಭಕ್ತರ ಕರೆಗೆ ಓಗೊಟ್ಟು ಅವರ ಕಷ್ಟವನ್ನು ನಿವಾರಣೆ ಮಾಡುತ್ತಾನೆ. ಮೇಷ ರಾಶಿಯವರು 12ರ ಶನಿಯ ಶಾಪವನ್ನು ಕಳೆಯಲು ವಿಷ್ಣುವನ್ನು ಪೂಜಿಸಿ ಹಾಗೂ ವಿಶೇಷ ಪೂಜಾ ಕೈಂಕರ್ಯ, ಪಂಚಾಮೃತ ಅಭಿಷೇಕ ಮಾಡಿ, ಸುಬ್ರಹ್ಮಣ್ಯವನ್ನು ಅರ್ಚಿಸಿ. ನಿಮಗೆ ಬೇಡವಾದದ್ದನ್ನು ಕಳೆದು ಬೇಕಾದ್ದನ್ನು ಕೊಡಿಸುತ್ತಾನೆ.

ವೃಷಭ: ವೃಷಭ ರಾಶಿಯವರಿಗೆ ಲಗ್ನದಲ್ಲಿ ಶುಕ್ರನು ಸ್ವಂತ ಮನೆಯಲ್ಲಿ ಇರುವುದರಿಂದ, ಗುರು ಎರಡನೇ ಮನೆಯಲ್ಲಿ ಇದ್ದು, ಶುಭದಾಯಕವು, ಮಂಗಳಪ್ರದವೂ ಆಗಿರುತ್ತಾರೆ. ನಿಮ್ಮ ಓಟಕ್ಕೆ ಸ್ವಲ್ಪ ಕಾದು ವಿಚಾರವನ್ನು ಅವಲೋಕಿಸಿ ಮುಂದೆ ಸಾಗುವುದು ಒಳ್ಳೆಯದು. ನಿಮ್ಮ ಸಂಯಮ, ಶಿಸ್ತು, ನಿಮ್ಮ ಸುತ್ತ ಇರುವ ಜನರನ್ನು ಸಂಸ್ಕರಿಸಿ, ಆರಿಸಿ ಇಟ್ಟುಕೊಂಡರೆ ಒಳ್ಳೆಯದು. ರಾಮನ ನಾಮಸ್ಮರಣೆ ಒಂದೇ ಸಾಕು ನಿಮ್ಮ ಇಚ್ಚೆಯನ್ನು ಪೂರೈಸಲು.

ಮಿಥುನ: ಮಿಥುನ ರಾಶಿಗೆ ದ್ವಾದಶದಲ್ಲಿ ಶುಕ್ರ ಬಂದಿದ್ದಾನೆ. ದ್ವಾದಶ ಶುಕ್ರನು ವ್ಯಯಕಾರಕನು. ಅನಗತ್ಯ ಖರ್ಚು, ಇಲ್ಲವೇ ಯಾವುದಾದರೂ ವ್ಯವಹಾರದಲ್ಲಿ ಸಿಕ್ಕಿ ಹಾಕಿಕೊಂಡು ಅಥವಾ ಯಾರ ಆರೋಗ್ಯಕ್ಕಾಗಿಯೋ ಖರ್ಚು ಸಂಭವಿಸುತ್ತದೆ. ಆರೋಗ್ಯ ಭಾಗ್ಯವನ್ನು ಕೊಡುವ ಮೃತ್ಯುಂಜಯನನ್ನು ಪ್ರಾರ್ಥಿಸಿ ಶಿವಪೂಜೆಯನ್ನು ಮಾಡಿರಿ. ಸುಖವು ಉಂಟಾಗುತ್ತದೆ.

ಕಟಕ: ಕಟಕ ರಾಶಿಯಲ್ಲಿ ಬುಧನು ಇದ್ದು ನಿಮಗೆ ಏಕಕಾಲದಲ್ಲಿ ಹರಿ-ಹರರನ್ನು ಪೂಜೆ ಮಾಡಲು ಸೂಚನೆ ಕೊಟ್ಟಂತಿದೆ. ದ್ವಿತೀಯದಲ್ಲಿ ಕುಜ-ಕೇತು ಇರುವುದರಿಂದ ಗಣಪತಿಯನ್ನು ಆರಾಧಿಸಿ. ಶಿವಪಾದೋದಕಂ ಪಾವನಂ ಶುಭಂ ಎಂಬಂತೆ ಶಿವಪ್ರಸಾದ ಭಸ್ಮ- ಬಿಲ್ವ- ರುದ್ರಾಭಿಷೇಕದ ತೀರ್ಥವನ್ನು ತಪ್ಪದೇ ತೆಗೆದುಕೊಂಡರೆ ನಿಮ್ಮ ಆಗು ಹೋಗುಗಳನ್ನು ಮಹಾದೇವನೇ ನೊಡುತ್ತಾನೆ.

ಸಿಂಹ: ಸಿಂಹ ರಾಶಿಗೆ ಕೇತು-ಕುಜ ಇಬ್ಬರೂ ಲಗ್ನದಲ್ಲಿ ಇರುವರು ಹಾಗೂ ಅಷ್ಟಮದಲ್ಲಿ ಶನಿ ಇರುವುದರಿಂದ ದೈವ ಪ್ರಾರ್ಥನೆ, ಹಿರಿಯರ ಆಶೀರ್ವಾದದಿಂದ ಏನನ್ನಾದರೂ ನೀವು ಗೆಲ್ಲಬಹುದು. ಸದ್ಯದಲ್ಲಿ ಯಾರಿಗೂ ನಿಮ್ಮ ಸಮಯವನ್ನು ಕೊಡದೆ ಮನಸ್ಸಿಗೆ ನೋವಾಗುವಂತೆ ಮಾತನಾಡದಿರಿ. ಯಾರಾದರೂ ಕೆಣಕಿದರೂ ಸಮಯವು ನಿಮ್ಮದಲ್ಲವಾದ್ದರಿಂದ ಮೌನವಾಗಿರಬೇಕು.

ಕನ್ಯಾ: ಸೂರ್ಯ ಅಷ್ಟೋತ್ತರ ಪಠಿಸಿ, ಗಣಪತಿಯನ್ನು ಪ್ರಾರ್ಥಿಸಿ.ಕನ್ಯಾ ರಾಶಿಯು ಬುಧನ ಮನೆ. ನಾವು ನಾವಾಗಿಯೇ ಎಲ್ಲೂ ಸಿಲುಕಬಾರದು. ನಿಮ್ಮ ನಾಲಿಗೆ ಚೆನ್ನಾಗಿದ್ದರೆ, ಮಾಡಿದ ಅಡಿಗೆಯೂ ರುಚಿಸುತ್ತದೆ. ನಾಲಿಗೆಯು ಮಧುರ ಭಾಷೆಯಲ್ಲಿ ನುಡಿಯುತ್ತಿದ್ದರೆ ಜಗವನ್ನೇ ಗೆಲ್ಲಬಹುದು. ನಿಮ್ಮ ಆತ್ಮಾವಲೋಕನ ಮಾಡಿಕೊಳ್ಳುವ ಕಾಲ. ಕುಲದೇವರನ್ನು ಪ್ರಾರ್ಥಿಸಿ. ತುಳಸಿಯಲ್ಲಿ ಹನುಮಂತನಿಗೆ ಅರ್ಚನೆ ಮಾಡಿ.

ತುಲಾ: ಮನುಷ್ಯನಿಗೆ ಮನೋ ಆನಂದ ,ಆರೋಗ್ಯ, ಆಯುಷ್ಯವಿದ್ದರೆ ಕೆಲಸದಲ್ಲಿ ಜಯವು ನಿಮ್ಮ ದಾರಿಗೆ ಬರುತ್ತದೆ. ನಿಮ್ಮ ಮಾತುಗಳನ್ನು ಅತಿಯಾಗಿ ಪ್ರಯೋಗ ಮಾಡದೆ, ಕೇಳಿದ್ದಕ್ಕಷ್ಟೇ ಉತ್ತರವನ್ನು ಕೊಟ್ಟು ಗೌಪ್ಯತೆಯನ್ನು ಕಾಪಾಡಿಕೊಳ್ಳಬೇಕು. ಸುದರ್ಶನ ಅಷ್ಟೋತ್ತರ ಪಾರಾಯಣ ಮಾಡಿ. ತುಲಾ ರಾಶಿಯವರು ಮಹಾವಿಷ್ಣುವಿನ ಪೂಜೆ ಮಾಡುವುದು ಸಾರ್ಥಕವಾದ ಜೀವನವನ್ನು ನಡೆಸಲು ಸಹಕಾರಿಯಾಗುತ್ತದೆ.

ವೃಶ್ಚಿಕ: ಜನನೀ ಜನ್ಮ ಸೌಖ್ಯಾನಾಂ ವರ್ಧನೀ ಕುಲ ಸಂಪದಾಂ - ಜನ್ಮ ಕೊಟ್ಟ ಜನನಿಯನ್ನು ಸ್ಮರಿಸದೆ ಹೋದರೆ ಮನುಷ್ಯನ ಬಾಳು ವ್ಯರ್ಥ. ಜನ್ಮದಾತರು ಏನನ್ನೂ ಕೊಡಲು ಶಕ್ತಿ, ಸಾಮರ್ಥ್ಯವನ್ನು ಕೊಡುತ್ತಾರೆ. ನಿಮಗೆ ಧನದ ಅವಶ್ಯಕತೆ ಬಹಳ. ಇಟ್ಟ್ಟ ಧನವೂ ಖರ್ಚಾಗಿ ಹೋಗಿದೆ. ಧನಾಗಮನವಾಗಲು ಕುಬೇರ, ಲಕ್ಷ್ಮಿಯನ್ನು ಪೂಜಿಸಿ.

ಧನುಸ್ಸು: ಧನಂ, ಧಾನ್ಯಂ, ಸೌಖ್ಯಂ, ಮನಃಸಂಕಲ್ಪಸಿದ್ಧಿಃ, ಜನಾನುರಾಗ, ಜನವಶೀಕರಣ ಎಲ್ಲವೂ ಮನಷ್ಯನಿಗೆ ಬೇಕಾದ ಸತ್​ಚಿಂತನೆಗಳು. ಇದು ಫಲಿಸಬೇಕಾದರೆ ಗುರುಕೃಪೆ ಇರಬೇಕು. ಗುರುಚರಿತ್ರೆ ಪಾರಾಯಣವನ್ನು ತಪ್ಪದೇ ಮಾಡಿದರೆ ಶಾಶ್ವತವಾದ ಊಟಕ್ಕೆ ದಾರಿಯನ್ನು ದತ್ತದೇವರೇ ತೋರಿಸುತ್ತಾನೆ.

ಮಕರ: ಮಕರ ರಾಶಿಯವರಿಗೆ ಗುರುಬಲ ಇಲ್ಲದಾಗಿದೆ. ಎರಡನೇ ಮನೆಯಲ್ಲಿ ರಾಹುವಿದ್ದಾನೆ. ಆದರೆ ಶನಿಯು ಗುರುವಿನ ಮನೆಯಲ್ಲಿ ಮೂರನೇ ಮನೆಯಲ್ಲಿ ಇರುವುದರಿಂದ ಯೋಗಕಾರಕನಾಗುತ್ತಾನೆ. ಭೋಗ-ಭಾಗ್ಯಗಳನ್ನು ಪಡೆಯಬೇಕಾದರೆ ಮನುಷ್ಯನು ಹುಟ್ಟಿ ಯುಗಗಗಳನ್ನು ಕಳೆದು ದೈವ ಕೃಪೆಯನ್ನು ಪಡೆಯಬೇಕು. ಆನಂದದಿಂದ ಪ್ರಾತಃ ಕಾಲದಲ್ಲಿ ಗಣಪತಿಯನ್ನು, ಇಷ್ಟ ದೇವರನ್ನು ಪೂಜಿಸಿ. ನಿಮ್ಮ ಶಕ್ತಿಯನ್ನು ಬುದ್ಧಿಯನ್ನು ಬಳಸಿಕೊಂಡರೆ ಸುಖ-ಸಂತಸ ನಿಮ್ಮನ್ನು ಬಂದು ಸೇರುತ್ತದೆ.

ಕುಂಭ: ಕುಂಭ ರಾಶಿಯವರು ಪ್ರಚಂಡರು, ಗಟ್ಟಿಯಾದ ವ್ಯಕ್ತಿಗಳು, ಸೋಲನ್ನು ಒಪ್ಪಿಕೊಳ್ಳುವವರು ಅಲ್ಲ. ಸುಮ್ಮನೆ ಕೂರುವವರೂ ಅಲ್ಲ. ಕಳೆದುಕೊಂಡದ್ದನ್ನು ಹುಡುಕಿಕೊಳ್ಳುವ ಪ್ರಬಲವಾದ ರಾಶಿಯಲ್ಲಿ ಜನಿಸಿದವರು. ಈ ವಾರದಲ್ಲಿ ಆಕಸ್ಮಿಕ ಲಾಭ, ಸುಖ ಸಂತೋಷವು ಬರುತ್ತದೆ. ನೀವು ಕಡ್ಡಾಯವಾಗಿ ಕಾಲಬೈರವನನ್ನು ಪೂಜಿಸಿ. ಪ್ರತಿ ತಿಂಗಳ ಅಷ್ಟಮಿಯಂದು ಕಾಲಭೈರವನಿಗೆ ಅಭಿಷೇಕ ಮಾಡಿಸಿ ದರ್ಶನ ಮಾಡಿ ಬನ್ನಿ.

ಮೀನ: ಅತ್ಯಂತ ಪೂಜನೀಯವಾದ ನೆಲವನ್ನು, ಅದರ ಮೇಲಿನ ಮಣ್ಣನ್ನು ಜೀವಿಗಳ ಮೇಲಿರುವ ಕೃಪೆಯಿಂದ ದೇವರು ಅನುಗ್ರಹಿಸಿದ್ದಾನೆ. ಮನುಷ್ಯನು ಪವಿತ್ರವಾದ ಭೂದೇವಿಯನ್ನು ಪೂಜಿಸಿದರೆ ದುಃಖವೂ ದೂರವಾಗಿ, ಗ್ರಹಗಳ ಬಲವೂ ಹೆಚ್ಚಾಗುತ್ತದೆ. ಭೂಪಾಲಕನಾದ ಹರಿಯನ್ನು ಭೂದೇವಿಯ ಸಹಿತ ಪೂಜಿಸಿದರೆ ನಿಮ್ಮ ಸಂಕಟಗಳು ದೂರವಾಗಿ ಸುಖವಾದ ಜೀವನವನ್ನು ನಡೆಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net