

ಮೇಷ:ಸಪ್ತರಾತ್ರಿಗಳು ಮಾತ್ರವೇ ಬಾಕಿಯಿದ್ದು ಕ್ರೋಧಿನಾಮ ಸಂವತ್ಸರವು ಮುಗಿದು ವಿಶ್ವಾವಸು ಆರಂಭ ಆಗುತ್ತದೆ. ಮೇಷ ರಾಶಿಯವರು ಜೀವನ ಶೈಲಿಯನ್ನು ಬದಲಾಯಿಸಿಕೊಂಡು ಆಲೋಚನೆಯಿಂದ ಕೆಲಸ ಮಾಡಿದರೆ ದೇವರ ಸಹಾಯವಿರುತ್ತದೆ. ತಪ್ಪಾಗಿದ್ದರೆ ಕ್ಷಮೆ ಕೇಳಿ ಸಾಗುವ ಪ್ರವೃತ್ತಿ ನಿಮ್ಮದಾಗಿರಲಿ. ಅಧಿಕಾರವನ್ನು ಸದ್ಯ ಕಳೆದುಕೊಂಡಿದ್ದರೂ ಮತ್ತೆ ಬರುತ್ತದೆ. ಶನಿಯ ಕೃಪೆಗಾಗಿ ಈಶ್ವರನ ಆರಾಧನೆ ಬೇಕೇಬೇಕು.
ವೃಷಭ:ಗೊಂದಲಮಯ ಜೀವನ ಸಾಕು ಮಾಡಿ. ನಡೆದ ಘಟನೆ ಮೆಲುಕು ಹಾಕದೆ ಹೃದಯವೆಂಬ ಮಂದಿರದಲ್ಲಿ ಇಷ್ಟ ದೇವರನ್ನು ಪೂಜಿಸಿ ಹೆಜ್ಜೆಯನ್ನು ಹಾಕಿರಿ. ಏಕಾದಶ ಶನಿಯು ನಿರೀಕ್ಷೆಗೂ ಮೀರಿ ಫಲವನ್ನು ಕೊಡುತ್ತಾನೆ. ತಮಿಳುನಾಡಿನ ತ್ಯಾಗರಾಜ ದೇವರನ್ನು ಮೇಷ ರಾಶಿಗೆ ಸೂರ್ಯನು ಬಂದಾಗ ಹೋಗಿ ಪೂಜಿಸಿ ಬನ್ನಿ.
ಮಿಥುನ:ಇನ್ನು ಗುರುಬಲ ಇಲ್ಲದಿದ್ದರೂ ಹತ್ತನೆ ಮನೆಗೆ ಶನಿ ಬರುತ್ತಾನೆ. ಇಷ್ಟದೇವರನ್ನು ಪೂಜಿಸಿ. ಕಷ್ಟವನ್ನು ಕಳೆಯೆಂದು ಪ್ರಾರ್ಥಿಸುವುದು ನಿಮಗೆ ಈ ಸಮಯದ ಸೂಚನೆಯು. ಕಾಲವನ್ನು ಅರಿತು ಸತ್ಚಿಂತನೆಯಿಂದ ಸಾಗಿದಲ್ಲಿ ಗ್ರಹಗಳ ಚಲನೆ ಹೇಗೇ ಇದ್ದರೂ ತಂದೆ-ತಾಯಿಯ ಆಶೀರ್ವಾದವೇ ರಕ್ಷಣೆ ಮಾಡುತ್ತದೆ.
ಕಟಕ:ಅಷ್ಟಮ ಶನಿಯು ಬಿಡುವ ಕಾಲ. ಇನ್ನೇನು ಏಕಾದಶಕ್ಕೆ ಗುರುವು ಬಂದು ಎಲ್ಲ ಸುಖ-ಲಾಭ ಸಂತೋಷ ಉಂಟು ಮಾಡುತ್ತಾನೆ. ಶಕ್ತಿಮೀರಿ ಕೆಲಸವನ್ನು ಮಾಡುವುದು ಸಾಧ್ಯವಾಗದ ಮಾತು. ಮನೆಯು ಚೊಕ್ಕಟವಾಗಿ ಇದ್ದರೆ ಸಾಕು, ಬಾಳು ಬಂಗಾರವಾದಂತೆ. ಉಮಾ- ಮಹೇಶ್ವರರನ್ನು ಪ್ರಾರ್ಥಿಸಿ, ಸೋಮವಾರ ಈಶ್ವರನ ಪೂಜೆ ನಡೆಸಿಕೊಂಡು ಬನ್ನಿ.
ಸಿಂಹ:ನುಡಿದಂತೆ ನಡೆಯಿರಿ. ಸಿಂಹವು ನಡೆದಾಗ ಹೆಜ್ಜೆಯ ಗುರುತನ್ನು ಬಿಟ್ಟಿರುತ್ತದೆ. ಅದರಂತೆ ನೀವು ಮಾಡಿದ ಒಳ್ಳೆಯ ಕೆಲಸ ನಿಮ್ಮನ್ನು ಕಾಯುತ್ತದೆ ಎಂಬುದರಲ್ಲಿ ಸಂದೇಹ ಬೇಡ. ಪಿತೃಗಳ ಪರಿಪೂರ್ಣ ಆಶೀರ್ವಾದ ನಿಮ್ಮ ಮೇಲಿದೆ. ನೀವು ಮಾತೃಪ್ರಿಯರು. ಪಿತೃಸೇವೆ ಮಾಡಿ ಪುಣ್ಯ ಸಂಪಾದನೆ ಮಾಡಿಕೊಳ್ಳಿ. ನೀವು ಮಾಡಿದ ಪುಣ್ಯವೇ ಕಾಪಾಡುತ್ತದೆ. ಸೂರ್ಯನ ಮತ್ತು ಸುಬ್ರಹ್ಮಣ್ಯನ ಪೂಜೆಯಿರಲಿ.
ಕನ್ಯಾ:ಕನ್ಯೆಯ ಶಾಪವು, ಕೊಟ್ಟ ಮಾತನ್ನು ನಡೆಸದೇ ಇರುವುದು ಇವೆಲ್ಲವೂ ಶನಿಯ ಪ್ರಭಾವವೇ. ನೀವು ಮಾಡಿದ ಕಾರ್ಯಕ್ಕೆ ಪಶ್ಚಾತ್ತಾಪಪಡುವ ಕಾಲ ಹತ್ತಿರದಲ್ಲಿದೆ. ಗುರುವಾಯೂರಿನ ಗುರುವಾಯೂರಪ್ಪನನ್ನು ದರ್ಶಿಸಿ ಬನ್ನಿ. ಸದಾಕಾಲ ಪ್ರಾರ್ಥನೆ ಇರಲಿ. ನಕಾರಾತ್ಮಕ ಚಿಂತನೆ ಬಿಟ್ಟು ಇನ್ನು 2ಕ್ಕೂ ಅಧಿಕ ವರ್ಷಗಳ ಕಾಲ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿರಲಿ.
ತುಲಾ:ಮಕ್ಕಳು ಹಸಿವಾದರೆ ಅಮ್ಮಾ ಎಂದು ಕರೆಯುತ್ತಾರೆ. ಸಹಾಯಕ್ಕೆ ಅಪ್ಪಾ ಎಂದು ಕರೆಯುತ್ತಾರೆ. ತುಲಾ-ವೃಷಭ ರಾಶಿಯವರಿಗೆ ಅಷ್ಟ ಐಶ್ವರ್ಯವನ್ನು ಕೊಡುವ ದುರ್ಗೆಯನ್ನು ಪೂಜಿಸಿ. ಆನಂದಿಸಿ. 6ರ ಶನಿ ಸಕಲ ಸಂಪತ್ತು, ಮುಗಿಲು ಮುಟ್ಟುವ ಕೀರ್ತಿ ಧನ, ಕನಕ, ವಸ್ತು ವಾಹನ ಕೊಟ್ಟು ಕಾಯುತ್ತಾನೆ. ತುಲಾ ರಾಶಿಯವರು ದತ್ತಾತ್ರೇಯನನ್ನು ಆರಾಧಿಸಲೇಬೇಕು.
ವೃಶ್ಚಿಕ:ತಾತ್ಕಾಲಿಕವಾಗಿ 43 ದಿನಗಳ ಕಾಲ ಗುರುಬಲವಿದ್ದು, ಮುಂದಿನ ದೃಷ್ಟಿ ಬಹಳ ಬೇಗನೇ ಮುಂದಿನ ಮನೆಗೆ ಹೋಗುವುದರಿಂದ ಗುರುಬಲ ಕಡಿಮೆಯಾಗುತ್ತದೆ. ವಿವೇಚನೆ ಇರಲಿ, ವಿವೇಕವಿರಲಿ. ಯಾರನ್ನೂ ನಿಷ್ಠುರ ಮಾಡಿಕೊಳ್ಳಬೇಡಿ ಎಂಬ ಎಚ್ಚರವನ್ನು ಗ್ರಹಗಳು ಕೊಡುತ್ತಿವೆೆ. ಸುಬ್ರಹ್ಮಣ್ಯನನ್ನು ಪೂಜಿಸಿ. ನಾಗರಾಜ ಸ್ತೋತ್ರ ಪಾರಾಯಣ ಮಾಡಿ.
ಧನುಸ್ಸು: ಗುರುಸಪ್ತಮಕ್ಕೆ ಮೇ ತಿಂಗಳಲ್ಲಿ ಬರುತ್ತಾನೆ. ಶನಿಯು ಚತುರ್ಥಕ್ಕೆ ಬಂದರೂ ಗುರು ಮನೆಯಾಗಿರುವುದರಿಂದ ಕೆಡುಕನ್ನು ಉಂಟುಮಾಡನು. ನಿಮಗೆ ಏನು ಸಿಗಬೇಕೆಂಬ ಅಭಿಲಾಷೆ ಇದೆಯೋ ಅದು ಕೈಗೂಡುತ್ತದೆ. ಮೌನದಿಂದ, ವಿನಮ್ರತೆಯಿಂದ, ಹೆಚ್ಚು ಮಾತನಾಡದೆ, ಜನಾನುರಾಗಿಯಾದರೆ ಜನಾಕರ್ಷಣೆ ಪಡೆಯುತ್ತೀರಿ. ದುಡ್ಡು, ಕೀರ್ತಿ ಅದೃಷ್ಟದ ಬುಟ್ಟಿಯನ್ನು ಸೇರುತ್ತದೆ.
ಮಕರ:ಶನಿಯು ಮಹಾತ್ಮನು. ಆಧ್ಯಾತ್ಮ ಜೀವನವು. ಅವನು ಸನ್ಯಾಸಿಯೂ ಹೌದು. ಸ್ವಾಮಿಯೂ ಹೌದು. ಕಳೆದು ಹೋದ ಘಟನೆಯನ್ನು ಯಾವಾಗಲೂ ಜ್ಞಾಪಕ ಇಟ್ಟುಕೊಳ್ಳಬಾರದು. ಶನಿಯು ಮುಂದೆ ಸಾಗಿ ದಾಗ ಎಲ್ಲವನ್ನೂ ಪಡೆದು ಸುಖವಾಗಿರುತ್ತೀರಿ. ಶನಿಯ ಪ್ರಾರ್ಥನೆಯು ಸದಾ ಇರಲಿ. ನೀಲಾಂಬರಿ ಸ್ತೋತ್ರವನ್ನು ಪಾರಾಯಣ ಮಾಡಿರಿ.
ಕುಂಭ:ಲಗ್ನವನ್ನು ಬಿಟ್ಟು ದ್ವಿತೀಯಕ್ಕೆ ಹೋಗುವ ಶನಿಯಿಂದ ನಿಮಗೆ ಲಾಭಗಳು ಅತಿಯಾಗಿ ಸಿಗದಿದ್ದರೂ ಯಾವ ನಷ್ಟವನ್ನೂ ಉಂಟು ಮಾಡುವುದಿಲ್ಲ. ಗುರು ಚತುರ್ಥದಿಂದ ಪಂಚಮಕ್ಕೆ ಬರುವವರೆಗೂ ನಿಮ್ಮ ಯೋಜನೆಗಳನ್ನು ಮುಂದೂಡಿ. ‘ಪಂಚಮಂ ಕಾರ್ಯ ಸಿದ್ಧಯೇ’ ಎಂಬಂತೆ ನಿಮ್ಮ ಭಾಗ್ಯದ ಬಾಗಿಲು ತೆರೆಯುತ್ತದೆ. ತುಳಸಿ ಯಿಂದ ಆಂಜನೇಯ ಅಷ್ಟೋತ್ತರ ಮಾಡಿದರೆ ಶುಭವಾಗುತ್ತದೆ.
ಮೀನ: ಮೀನ ರಾಶಿಯವರಿಗೆ 12ರ ಶನಿಯು ಜನ್ಮಕ್ಕೆ ಬರುವುದರಿಂದ ನಿಮ್ಮನ್ನು ಹಾಳು ಮಾಡುವ ಕೆಲಸವನ್ನು ಯಾರೂ ಮಾಡಲು ಸಾಧ್ಯವಿಲ್ಲ. ದ್ವಿತೀಯಾರ್ಧದಲ್ಲಿ ಗುರುವಿರುವುದಿಂದ ಯಾವುದಕ್ಕೂ ಚಿಂತೆ ಬೇಡ. ಧೈರ್ಯವನ್ನು ಪಡೆಯಲು ಗುರುವನ್ನು ಪ್ರಾರ್ಥಿಸಿ, ಸಾಲಿಗ್ರಾಮದ ಗುರು ನರಸಿಂಹನನ್ನು ಪ್ರಾರ್ಥಿಸಿ. ದೇವರು ವೈಭವವಾದ ಜೀವನವನ್ನೇ ಕೊಟ್ಟು ಹರಸುತ್ತಾನೆ. ಅಷ್ಟೋತ್ತರವನ್ನು ನರಸಿಂಹನ ಮೂಲಮಂತ್ರ ಉಪದೇಶ ಪಡೆದು ಪ್ರಾರ್ಥಿಸಿ.